ಬೆಳಕಿನ ಪೆಟ್ಟಿಗೆ

ಸಿ ಪಿ ರವಿಕುಮಾರ್
Rectangular battery box with large round reflector; carrying handle on top of box

(ಮಂಗಲೇಶ್ ಡಬರಾಲ್ ಅವರ ಒಂದು ಕವಿತೆಯನ್ನು ಆಧರಿಸಿದ್ದು.)

ಅಪ್ಪ ಬರುವುದನ್ನೇ ಮಕ್ಕಳು ಕಾಯುತ್ತಿದ್ದರು.  ಚಿಕ್ಕವನಿಗೆ ಆರು ವರ್ಷ, ದೊಡ್ಡವನಿಗೆ ಎಂಟು. ಅಮ್ಮ ಅಡುಗೆಮನೆಯಲ್ಲಿ ಕೆಲಸದಲ್ಲಿರುವಾಗ ಕಣ್ಣುತಪ್ಪಿಸಿ ಅವರು ಬಂದಿದ್ದಾರೆ. ಅವರ ಹಂಚಿನ ಮನೆ ಇದ್ದದ್ದು ಬೆಟ್ಟದ ಮೇಲಿರುವ ಹಳ್ಳಿಯಲ್ಲಿ. ಬೆಟ್ಟವನ್ನು ಹಾವಿನಂತೆ ಸುತ್ತಿಕೊಂಡಿರುವ ರಸ್ತೆಯ ಮೇಲೆ ಧೂಳು ಚಿಮ್ಮಿಸುತ್ತಾ ಬಸ್ ಬರುತ್ತದೆ. ಈ ನಿಲ್ದಾಣದಲ್ಲಿ ಇಳಿದುಕೊಳ್ಳುವವನು ಅಪ್ಪ ಒಬ್ಬನೇ. ಮುಂದಿನ ಹಳ್ಳಿಯಲ್ಲಿ ದೇವಸ್ಥಾನವಿದೆ; ಅಲ್ಲಿ ಬಂದುಹೋಗುವವರ ಸಂಖ್ಯೆ ಹೆಚ್ಚು.

ಅಪ್ಪ ಪ್ರತಿ ಶುಕ್ರವಾರ ರಾತ್ರಿ ಬರುತ್ತಾನೆ.  ಭಾನುವಾರ ರಾತ್ರಿ ಮತ್ತೆ ಹೊರಡುತ್ತಾನೆ. ದೂರದಲ್ಲಿರುವ ನಗರದ ಕಾರ್ಖಾನೆಯಲ್ಲಿ ಅವನಿಗೆ ಕೆಲಸ.  ಪ್ರತಿದಿನದಂತೆ ಇವತ್ತೂ ಬಸ್ ಮೇಲೇರಿ ಬರುವುದು ಕಾಣುತ್ತದೆಯೋ ಎಂದು ಮಕ್ಕಳು ಮೇಲಿನಿಂದ ನೋಡುತ್ತಾ ನಿಂತಿದ್ದಾರೆ. ಚಳಿಗಾಲವಾದ್ದರಿಂದ ಬೇಗ ಕತ್ತಲಾಗಿಬಿಡುತ್ತದೆ; ಬಸ್ ಕಾಣುವುದಿಲ್ಲ. ಆದರೂ ಮಕ್ಕಳು ಆಸೆಯಿಂದ ಕಾಯುತ್ತಾರೆ.  ಬಸ್ ನಿಲ್ದಾಣದಲ್ಲಿ ಇವರನ್ನು ಹೊರತು ಬೇರಾರೂ ಇಲ್ಲ. ಸುತ್ತಲೂ ನಿಶ್ಶಬ್ದ ಆವರಿಸಿಕೊಂಡಿದೆ. ಜೀರ್ ಜೀರ್ ಎಂದು ಜೀರುಂಡೆಯ ಸದ್ದು ಮಾತ್ರ ಹಿನ್ನೆಲೆಯಲ್ಲಿ ಕೇಳುತ್ತಿದೆ.

ಅಪ್ಪ ಪ್ರತಿಸಲ ಬಂದಾಗಲೂ ಏನಾದರೂ ತರುತ್ತಾನೆ.  ಇವರಿಗೆ ಹೆಸರೇ ಗೊತ್ತಿರದ ಮಿಠಾಯಿ. ಶಾಲೆಯ ಪುಸ್ತಕ. ಬಣ್ಣದ ಪೆನ್ಸಿಲ್ ಪೆಟ್ಟಿಗೆ. ಈ ಸಲ ಅಪ್ಪ ಏನು ತರಬಹುದೋ ಎಂದು ಮಕ್ಕಳು ಕುತೂಹಲದಿಂದ ಕಾಯುತ್ತಿದ್ದಾರೆ.

ಬಸ್ ದೀಪ ಮಿಂಚಿದಂತಾಗಿ ಮಕ್ಕಳ ಉತ್ಸಾಹ ಒಮ್ಮೆಲೇ ಏರಿತು.  ಇಷ್ಟು ಹೊತ್ತು ಅವರ ತಾಳ್ಮೆಯನ್ನು ಪರೀಕ್ಷಿಸಿದ ಬಸ್ ಕೊನೆಗೂ ಗರ್ರೆಂದು ಸದ್ದು ಮಾಡುತ್ತಾ ಬಂದು ನಿಂತಿತು. ಅಪ್ಪನ ಮುಖ ನೋಡಿ ಹುಡುಗರು ಓಡಿದರು. "ಅಮ್ಮನಿಗೆ ಗೊತ್ತೇನ್ರೋ ನೀವು ಬಂದಿರೋದು?" ಎಂದು ಅಪ್ಪ ಗದರಿದರೂ ಇವರು ನಿಲ್ದಾಣಕ್ಕೆ ಬಂದು ಸ್ವಾಗತಿಸುವುದು ಅವನಿಗೆ ಆಪ್ಯಾಯವಾದ ವಿಷಯವೇ. ಅವರು ಅಪ್ಪನ ಕೈಹಿಡಿದು ಮನೆ ಸೇರಿದರು.  ಅಮ್ಮ ಬಾಗಿಲಲ್ಲೇ ನಿಂತು ಇವರಿಗಾಗಿ ಕಾಯುತ್ತಿದ್ದಳು. "ನೋಡಿ, ಯಾವ ಮಾಯದಲ್ಲೋ ಓಡಿ ಹೋಗಿದಾರೆ!" ಎಂದು ದೂರಿ ಅಡುಗೆಮನೆಗೆ ನಡೆದಳು. ಇವತ್ತು ಏನೋ ವಿಶೇಷ ಅಡುಗೆ ಇದ್ದಹಾಗಿದೆ. ಮನೆಯೆಲ್ಲಾ ಘಮಘಮ ವಾಸನೆ ತುಂಬಿಕೊಂಡಿದೆ.  ಅಪ್ಪ ಸ್ನಾನ ಮಾಡಿ ಬರುವಷ್ಟರಲ್ಲಿ ಅಮ್ಮ ಎಲೆ ಹಾಕಿ ಊಟಕ್ಕೆ ಕರೆದಳು. ಅಪ್ಪನ ಎರಡೂ ಪಕ್ಕದಲ್ಲಿ ಕುಳಿತು ಮಕ್ಕಳು ಊಟ ಮಾಡಿದರು.

ವಾಡಿಕೆಯಂತೆ ಅಪ್ಪ ಊಟವಾದ ನಂತರ ತನ್ನ ಚೀಲದಿಂದ ತಾನು ತಂದಿದ್ದನ್ನು ಇವರಿಗೆ ತೋರಿಸಿದ.  ಅವನು ತಂದಿದ್ದ ವಸ್ತುವನ್ನು  ಮಕ್ಕಳು ಕುತೂಹಲದಿಂದ  ನೋಡಿದರು. ಗಾಜಿನ ಮುಖವಿದ್ದ ಪೆಟ್ಟಿಗೆಯಾಕಾರದ ವಸ್ತು. "ಇದು ಟಾರ್ಚು, ಇಲ್ಲಿ ನೋಡಿ, ಇದರಲ್ಲಿ ಬ್ಯಾಟರಿ ಹಾಕಬೇಕು. ಈ ಸ್ವಿಚ್ ಒತ್ತಿದರೆ ನೋಡಿ, ಏನಾಗತ್ತೆ!" ಗೋಡೆಯ ಮೇಲೆ ಬಿದ್ದ ಬೆಳಕನ್ನು ನೋಡಿ ಮಕ್ಕಳು ಸ್ತಂಭೀಭೂತರಾದರು.  ಅಪ್ಪ ಸ್ವಿಚ್ ಆರಿಸಿ ಹೊತ್ತಿಸಿ ಬೆಳಕು ನಮಗೆ ಬೇಕಾದಾಗ ಬರುವುದನ್ನು ತೋರಿಸಿದ.  "ಇದರಿಂದ ಏನು ಮಾಡೋದಪ್ಪಾ?' ಎಂದು ಮಕ್ಕಳನ್ನು ಕೇಳಿದ. ಇವರು ಸುಮ್ಮನಿದ್ದರು.

"ರಾತ್ರೆ ಹೊತ್ತು ನಿಮಗೆ ಓದಿಕೊಳ್ಳೋದಕ್ಕೆ ಅಂತ ತಂದಿದೀನಿ, ಚೆನ್ನಾಗಿ ಓದಬೇಕು, ಆಯಿತಾ?" ಎಂದು ಅಪ್ಪ ಅವರ ಕಡೆಗೆ ನೋಡಿದ. "ಆಯಿತು" ಎನ್ನುವ ಹಾಗೆ ಅವರು ತಲೆ ಅಲ್ಲಾಡಿಸಿದರು. "ಈಗ ಬನ್ನಿ ನನ್ನ ಜೊತೆ" ಎಂದು ಅವನು ಅವರನ್ನು ಕರೆದುಕೊಂಡು ಹೊರಗೆ ಹೊರಟ. ಅಮ್ಮನಿಗೂ ಬರುವಂತೆ ಸೂಚಿಸಿದ. ಹೀಗೆ ನಾಲ್ಕೂ ಜನರ ಸವಾರಿ ಹೊರಗೆ ಹೊರಟದ್ದು ಅಪರೂಪ.

ಬಸ್ ನಿಲ್ದಾಣಕ್ಕೆ ಬಂದು ಬೆಟ್ಟದ  ಹಾದಿಯ ಮೇಲೆ  ಅಪ್ಪ ಟಾರ್ಚ್  ಬಿಟ್ಟಾಗ  ಪ್ರಖರ ಬೆಳಕಿನಲ್ಲಿ ದಾರಿ ಚೆನ್ನಾಗಿ ಕಾಣಿಸಿತು. ಅಲ್ಲೇ ಇದ್ದ ಅರಳಿಮರದ ಮೇಲೆ ಬೆಳಕು ಬಿಟ್ಟಾಗ ಪಟಪಟ ಏನೋ ಸದ್ದಾಗಿ ಮಕ್ಕಳು ಬೆಚ್ಚಿದರು.

"ಇಲ್ಲಿ ನೋಡಿ, ಇನ್ನುಮೇಲೆ ರಾತ್ರಿ ಹೊರಗೆ ಹೋಗೋವಾಗ ಟಾರ್ಚು ಇಟ್ಟುಕೊಂಡೇ ಹೋಗಬೇಕು. ದಾರಿಯಲ್ಲಿ ಹಾವು-ಚೇಳು ಏನಾದರೂ ಇದ್ದರೆ ಕಾಣಿಸುತ್ತೆ. ಆಯಿತಾ?" ಎಂದು ಅಪ್ಪ ಕೇಳಿದ.  ಕೆಲವೊಮ್ಮೆ ರಾತ್ರಿ ಎದ್ದು "ಒಂದಾ ಮಾಡಲು" ಮಕ್ಕಳು ಹೊರಗೆ ಹೋಗಬೇಕಾದಾಗ ಅಮ್ಮ ದೀಪ ಹಚ್ಚಿಕೊಂಡು ಜೊತೆಗೆ ತರುತ್ತಿದ್ದಳು.  ಹುಳು-ಹುಪ್ಪಟೆ ಇದ್ದೀತು ಎಂದು ಬಹಳ ಜಾಗರೂಕತೆಯಿಂದ ಮಕ್ಕಳು ಆಚೀಚೆ ನೋಡಿಕೊಂಡು ನಡೆಯುತ್ತಿದ್ದರು. ಟಾರ್ಚಿನ ಪ್ರಖರ ಬೆಳಕಿಗೆ ಯಾವ ಪ್ರಾಣಿಯಾದರೂ ಹೆದರಿ ಓಡಿಹೋಗುತ್ತದೆ ಎಂದು ಮಕ್ಕಳಿಗೆ ಅಪ್ಪ ಧೈರ್ಯ ಹೇಳಿದಾಗ ಅವರ ಮುಖ ಅರಳಿತು.

ಅವರು ಬರುವಾಗ ಅಪ್ಪ ಟಾರ್ಚಿನ ಬೆಳಕನ್ನು ಹೊಲದ ಕಡೆಗೆ ಬೀರಿದಾಗ ಹೊಲದಲ್ಲಿ ಏನೋ ಸರಪರ ಸದ್ದಾಯಿತು. ಯಾವುದೋ ಪ್ರಾಣಿ ಇರಬಹುದೆಂದು ಇವರಿಗೆ ದಿಗಿಲಾಗುವಷ್ಟರಲ್ಲಿ ಬಳೆಗಳ ಸದ್ದು ಮತ್ತು "ಶ್! ಶ್!" ಎಂಬ ಮಾತುಗಳು ಕೇಳಿದವು. ಅಪ್ಪ ಕೂಡಲೇ ಟಾರ್ಚ್ ಬೆಳಕನ್ನು ಮುಂದಿನ ದಾರಿಯತ್ತ ಬೀರಿ "ನಡೀರಿ, ನಡೀರಿ, ಮಲಗೋ ಹೊತ್ತಾಯಿತು" ಅಂತ ಅವಸರ ಮಾಡಿದ.

"ಈ ದೀಪಕ್ಕೆ  ಎಣ್ಣೆ ಬೇಡವಾ?" ಎಂದು ಅಮ್ಮ ಕೇಳಿದಾಗ ಅಪ್ಪ ನಕ್ಕು "ಅಯ್ಯೋ! ಎಣ್ಣೆ ಏನಾದರೂ ಹಾಕಿಬಿಟ್ಟೀಯ! ಇದರೊಳಗೆ ನಾನು ಬ್ಯಾಟರಿ ಹಾಕಲಿಲ್ವಾ? ಅದೇ ಟಾರ್ಚಿಗೆ ಎಣ್ಣೆ ಇದ್ದಹಾಗೆ."

"ಎಣ್ಣೆ ತೀರಿಹೋದರೆ?"

"ಇನ್ನೊಂದು ಬ್ಯಾಟರಿ ಹಾಕಬೇಕು.  ಹಳೇ ಬ್ಯಾಟರಿ ಎಸೆದುಬಿಡಬೇಕು, ಅದರಿಂದ ಇನ್ನೇನೂ ಉಪಯೋಗ ಇಲ್ಲ."

ಮಕ್ಕಳು ಇದೆಲ್ಲವನ್ನೂ ಮಂತ್ರಮುಗ್ಧರಂತೆ ಕೇಳಿಸಿಕೊಂಡರು. ನಾಳೆ ಇದೆಲ್ಲವನ್ನೂ ವಾರಗೆಯ ಮಕ್ಕಳ ಮುಂದೆ ಹೇಳಿದರೆ ಅವರೆಷ್ಟು ಕೌತುಕ ಪಡಬಹುದೆಂದು  ಅವರು ಉತ್ಸುಕರಾದರು.  "ಈಗ ಮಾತಾಡಿದ್ದು ಸಾಕು, ಮಲಕ್ಕೊಳ್ಳಿ" ಎಂದು ಅಪ್ಪ ಗದರಿದಾಗ ಹೇಗೋ ಕಣ್ಣುಮುಚ್ಚಿಕೊಂಡು ಅವರು ನಿದ್ದೆಹೋದರು.

ಅಪ್ಪ ತಂದ ಟಾರ್ಚ್ ವಿಷಯ ಮಕ್ಕಳಿಂದ ಇಡೀ ಹಳ್ಳಿಗೆ ಗೊತ್ತಾಗಿಹೋಯಿತು. ಹಳ್ಳಿಯಲ್ಲಿ ಇದ್ದವರೇ ಲೆಕ್ಕಕ್ಕೆ ಒಂದು ನೂರು  ಜನ.  ಅವರಿಗೆ ಅಪ್ಪ ಬಸ್ ಹತ್ತಿ ದೂರದ ನಗರಕ್ಕೆ ಹೋಗುವುದೂ ಪ್ರತಿವಾರವೂ ಹೀಗೆ ಬರುವುದೂ ಸೋಜಿಗದ ವಿಷಯವಾಗಿತ್ತು. ನಗರದಲ್ಲಿರುವ ಕಾರ್ಖಾನೆಯ ವಿಷಯ, ನಗರದ ದೊಡ್ಡದೊಡ್ಡ ರಸ್ತೆಗಳ ವಿಷಯ, ಜನ ಹೇಗೆ ಬೆಳಗಿನಿಂದ ರಾತ್ರಿಯವರೆಗೂ ಏನಾದರೂ ಒಂದು ಕೆಲಸದಲ್ಲಿ ತೊಡಗಿಕೊಂಡೇ ಇರುತ್ತಾರೆಂಬ ವಿಷಯ, ಇವೆಲ್ಲವನ್ನೂ ಅಪ್ಪ ಅವರಿಗೆ ಕತೆಕಟ್ಟಿ ಹೇಳುತ್ತಿದ್ದಾಗ ಅವರು ಬಾಯಿಬಿಟ್ಟುಕೊಂಡು ಕೇಳುತ್ತಿದ್ದರು.  ಇದನ್ನು ನೋಡಿ ಮಕ್ಕಳು ಬೀಗುತ್ತಿದ್ದರು.  ಟಾರ್ಚಿನಿಂದ ಬೆಳಕು ಬರುವುದನ್ನು ನೋಡಿದಾಗ ಜನ ಬೆರಗಾಗಿಹೋದರು. ಎಣ್ಣೆ ಬೇಡ, ಬೆಂಕಿಪೊಟ್ಟಣ ಬೇಡ, ದಿಢೀರ್ ಅಂತ ಹೇಗೆ ಹೊತ್ತಿಕೊಂಡಿತು ದೀಪ!  ಕೈಯಲ್ಲಿ ಹಿಡಕೊಂಡು ಎಲ್ಲೆಂದರಲ್ಲಿ ಹೋಗಬಹುದು.

ಮಧ್ಯಾಹ್ನ ಅಪ್ಪ ಎಲ್ಲರನ್ನೂ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ಬೆಲ್ಲ, ಕಾಯಿ-ಚೂರು, ಬಾಳೆಹಣ್ಣು ಎಲ್ಲರಿಗೂ ಪ್ರಸಾದ ಸಿಕ್ಕಿತು.  ಮನೆಗೆ ಬಂದು ಸೇರಿದಾಗ ಟಾರ್ಚ್ ಮಾಯವಾಗಿತ್ತು. "ಇಲ್ಲೇ ಇಟ್ಟಿದ್ದೆ," ಎಂದು ಅಮ್ಮ ಅವಲತ್ತುಕೊಂಡಳು. "ಇದು ಪದ್ಮನಾಭನದೇ ಕೆಲಸ. ನೀವು ಟಾರ್ಚ್ ತೋರಿಸುತ್ತಿದ್ದಾಗ ಅವನು ನಿಮ್ಮ ಕಡೆ ನೋಡುತ್ತಿದ್ದ ರೀತಿಯೇ ನನಗೆ ಸರಿ ಕಾಣಲಿಲ್ಲ," ಎಂದು ದೂರಿದಳು.

ಅಪ್ಪ ಪೆಚ್ಚಾದ. ಪದ್ಮನಾಭನ ಮನೆಗೆ ಕಾಲೆಳೆದುಕೊಂಡು  ಹೋದ. "ಪದ್ದಣ್ಣ, ನನ್ನ ಟಾರ್ಚ್ ಎಲ್ಲಾದರೂ ಕಂಡೆಯಾ?" ಎಂದು ಜೀವ ಹಿಡಿ ಮಾಡಿಕೊಂಡು ಕೇಳಿದ. ಪದ್ಮನಾಭ ಇಲ್ಲವೆಂದು ಕೈಯಾಡಿಸಿದ.

"ಅದನ್ನು ಮನೆಯಲ್ಲೇ ಇಟ್ಟು ದೇವರ ಗುಡಿಗೆ ಹೋಗಿ ಬಂದೆವು - ವಾಪಸ್ ಬಂದು ನೋಡಿದರೆ ಟಾರ್ಚ್ ಇರಲಿಲ್ಲ. ನೀನೇನಾದರೂ ಅಕಸ್ಮಾತ್ ನೋಡಿದರೆ ತಂದುಕೊಡ್ತೀಯಲ್ಲ" ಎಂದು ಅಪ್ಪ ನಿಧಾನವಾಗಿ ಹೇಳಿದ.

"ನಿನ್ನ ಮಾತಿನ ಅರ್ಥ ಏನು? ನಾನು ಅದನ್ನ ಕದ್ದೆ ಅಂತಲೋ!" ಎಂದು ಪದ್ಮನಾಭ ಕೇಳಿದ. ಅವನ ಧ್ವನಿ ಹರಿತವಾಗಿತ್ತು.

"ಇಲ್ಲ, ಇಲ್ಲ, ಹಾಗೇನಿಲ್ಲ. ತಪ್ಪು ತಿಳೀಬೇಡ."

"ಪಟ್ಟಣದಲ್ಲಿ ನೀನು ಏನೇನು ನೋಡ್ತೀಯೋ ನನಗೆ ಗೊತ್ತಿಲ್ಲ. ಇಲ್ಲಿ ನಿನ್ನ ಟಾರ್ಚ್ ಹಾಕೋದಕ್ಕೆ ಬರಬೇಡ." ಎಂದು ಖಾರವಾಗಿ ಹೇಳಿ ಪದ್ಮನಾಭ ಒಳಗೆ ಹೊರಟುಹೋದ.

ಅಪ್ಪ ಭಾರವಾದ ಹೆಜ್ಜೆ ಹಾಕುತ್ತಾ ಮನೆಗೆ ಬಂದ. ಅವನು ಒಳಗೆ ಬರುವುದಕ್ಕೂ ಕಮಲಕ್ಕ ಎದುರಿಗೆ ಬರುವುದಕ್ಕೂ ಸರಿ ಹೋಯಿತು. ಹಳ್ಳಿಯಲ್ಲಿ ಹಿರಿಯಳೆನ್ನಿಸಿಕೊಂಡ ಕಮಲಕ್ಕನಿಗೆ ಎಷ್ಟು ವಯಸ್ಸೋ ಯಾರಿಗೂ ತಿಳಿಯದು. ಯಾವುದೋ ಕಾರಣಕ್ಕೆ ಎಲ್ಲರೂ ಆಕೆಯನ್ನು ಅಕ್ಕ ಎನ್ನುತ್ತಿದ್ದರೇ ವಿನಾ ಅಜ್ಜಿ ಎನ್ನುತ್ತಿರಲಿಲ್ಲ. ಮಕ್ಕಳು ಕೂಡಾ ಅವರನ್ನು ಕಮಲಕ್ಕ ಎಂದೇ ಕರೆಯುವುದು ರೂಢಿಯಾಗಿದೆ.  ಅಜ್ಜಿಯ ಕೈಯಲ್ಲಿ ತನ್ನ ಟಾರ್ಚ್ ಇರುವುದು ಕಂಡು ಅಪ್ಪ ಹೌಹಾರಿದ.

"ಕಮಲಕ್ಕ ..." ಎಂದು ಅವನು ಟಾರ್ಚ್ ಕಡೆಗೆ ನೋಡುತ್ತಾ ತೊದಲಿದ.

"ನೀನು ತಂದಿರೋ ಬೆಂಕಿ ಪೆಟ್ಟಿಗೆ ಏನೂ ಪ್ರಯೋಜನ ಇಲ್ಲ ಬಿಡಪ್ಪ!"

"..."

"ಮನೇಲಿ ಬೆಂಕಿ ಪೆಟ್ಟಿಗೆ ತೀರಿಹೋಗಿತ್ತು. ಇವತ್ತು ರಾಮಣ್ಣನ ಅಂಗಡಿ ಕೂಡಾ ಮುಚ್ಚಿದೆ. ಏನೋ ಪಟ್ಟಣದಿಂದ ಬೆಂಕಿ ಪೆಟ್ಟಿಗೆ ತಂದಿದೀಯ ಅಂತ ಯಾರೋ ಹೇಳಿದರು. ನೋಡೋಣ ಅಂತ ಬಂದೆ. ನೀನು ಗುಡಿಗೆ ಹೋಗಿದ್ದೀ ಅಂತ ಗೊತ್ತಾಯಿತು. ಬರೋವರೆಗೂ ಒಲೆ ಹಚ್ಚದೇ ಇರೋದು ಹೇಗೆ ಅಂತ ತೊಗೊಂಡು ಹೋದೆ. ಎಂಥಾ ದೊಡ್ಡ ಪೆಟ್ಟಿಗೆ, ಆದರೆ ಏನೂ ಪ್ರಯೋಜನ ಇಲ್ಲ."

ಅಪ್ಪನಿಗೆ ಒಂದು ಕ್ಷಣ ಏನೂ ಹೇಳಲು ತೋರಲಿಲ್ಲ. ಅವನು ನಗುತ್ತಾ "ಅಕ್ಕ, ಅದು ಬೆಂಕಿ ಪೆಟ್ಟಿಗೆ ಅಲ್ಲ, ಬೆಳಕಿನ ಪೆಟ್ಟಿಗೆ ಅಷ್ಟೇ" ಎಂದ.

"ಬೆಂಕಿ ಇಲ್ಲದ ಬೆಳಕು ತೊಗೊಂಡು ಏನು ಮಾಡೋದಪ್ಪಾ?" ಎಂದು ಕಮಲಕ್ಕ ಕೇಳಿದರು.

"ಒಳಗೆ ಬನ್ನಿ ಕಮಲಕ್ಕ. ಇಲ್ಲಿ ನೋಡಿ, ಈ ಸ್ವಿಚ್ ಒತ್ತಿದರೆ ಹೇಗೆ ಬೆಳಕು ಬರತ್ತೆ!"

"ಅದರಿಂದ ಏನು ಬಂದಹಾಗಾಯ್ತೋ?"

"ರಾತ್ರಿ ಹೊರಗೆ ಹೋದರೆ ಎಲ್ಲಾ ಚೆನ್ನಾಗಿ ಕಾಣತ್ತೆ ಕಮಲಕ್ಕ.  ಎಷ್ಟು ದೂರದವರೆಗೂ ನೋಡಬಹುದು ಗೊತ್ತಾ?"

"ರಾತ್ರಿ ಹೊರಗೆ ಯಾಕೆ ಹೋಗಬೇಕೋ? ಏನಿರತ್ತೆ ನೋಡೋದಕ್ಕೆ? ಇದೆಲ್ಲಾ ನಮ್ಮಂಥವರಿಗೆ ಹೇಳಿ ಮಾಡಿಸಿದ್ದಲ್ಲ ಕಣೋ. ಇದೆಲ್ಲಾ ಶ್ರೀಮಂತರಿಗೆ. ತೊಗೋ, ನಿನ್ನ ಬೆಳಕಿನ ಪೆಟ್ಟಿಗೆ ನೀನೇ ಇಟ್ಟುಕೋ! ಬೆಂಕಿ ಪೆಟ್ಟಿಗೆ ಇದ್ದರೆ ಕೊಡು,"

ಹೀಗೆನ್ನುತ್ತಾ ಕಮಲಕ್ಕ ಅಡುಗೆಮನೆಯೊಳಗೆ ಹೊರಟುಹೋದರು. ಅಪ್ಪ ಪೆಚ್ಚಾಗಿ ಮಕ್ಕಳ ಕಡೆಗೆ ನೋಡಿದ. ಅವರು "ಕಮಲಕ್ಕನಿಗೆ ಏನೂ ಗೊತ್ತಾಗಲ್ಲ ಅಲ್ವೇನಪ್ಪಾ?" ಎಂದರು.

* * *

ಈ ಘಟನೆಗಳು ಆಗಿ ಈಗ ನಲವತ್ತು ವರ್ಷಗಳೇ ಆಗಿಹೋಗಿವೆ. ಮಕ್ಕಳು ಇಬ್ಬರೂ ಈಗ ಪಟ್ಟಣದಲ್ಲಿ ಉದ್ಯೋಗ ಹಿಡಿದು ನೆಲೆಸಿದ್ದಾರೆ. ಅಪ್ಪನಿಗೆ ಈಗ ತುಂಬಾ ವಯಸ್ಸಾಗಿದೆ. ಆದರೂ ತನ್ನ ಮನೆಯನ್ನು ಬಿಟ್ಟು ಪಟ್ಟಣಕ್ಕೆ ಬರಲು ಅವನು ಒಪ್ಪುತ್ತಿಲ್ಲ. ಮಕ್ಕಳಲ್ಲಿ ಕಿರಿಯವನು ಕಾದಂಬರಿಕಾರ.  ವರ್ಷಕ್ಕೊಮ್ಮೆ ಅವನ ಕಾದಂಬರಿಗಳು ಪ್ರಕಟವಾಗುತ್ತವೆ. ಅವನೊಬ್ಬ ಜನಪ್ರಿಯ ಲೇಖಕ. ಪತ್ರಿಕೆಗಳಿಗೆ ತಿಂಗಳಿಗೊಮ್ಮೆಯಾದರೂ ಲೇಖನಗಳನ್ನು ಬರೆಯುತ್ತಾನೆ.  ಆಗಾಗ ತನ್ನ ಅಭಿಪ್ರಾಯಗಳನ್ನು ಪತ್ರಗಳ ರೂಪದಲ್ಲೂ ತೋಡಿಕೊಳ್ಳುತ್ತಾನೆ. ಅವನ ಎಲ್ಲಾ ಬರವಣಿಗೆಗಳಿಗೂ ಅದ್ಭುತ ಸ್ವಾಗತ ದೊರೆಯುತ್ತದೆ. ಚರ್ಚೆಗಳು ನಡೆಯುತ್ತವೆ.

ಇವತ್ತು ಅವನಿಗೆ ಒಂದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭಕ್ಕೆ ನೂರಾರು ಜನ ಬಂದಿದ್ದರು. ಪತ್ರಕರ್ತರು ಅವನ ಸಂದರ್ಶನ ಮಾಡಿದರು. ಏನೇ ಆದರೂ ಅಪ್ಪ ಮತ್ತು ಅಮ್ಮ ಇಬ್ಬರೂ ಬರಲಾಗಲಿಲ್ಲವಲ್ಲ ಎಂಬ ಕೊರಗು ಅವನನ್ನು ಕಾಡುತ್ತಿದೆ. ಅಣ್ಣ ಕೂಡಾ "ನಾನು ತುಂಬಾ ಕೆಲಸಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ, ಬರಲಾಗುವುದಿಲ್ಲ" ಎಂದು ಫೋನ್ ಮಾಡಿ ತಿಳಿಸಿದ್ದ. ತನ್ನ ಸಂತೋಷವನ್ನು ಹಂಚಿಕೊಳ್ಳಲು ಒಬ್ಬರೂ ಇಲ್ಲದಿರುವುದು ಅವನಿಗೆ ಪಿಚ್ ಎನ್ನಿಸಿತು. ಹೆಂಡತಿಯಿಂದ ಅವನು ಬೇರಾಗಿ ಈಗ ಹತ್ತು ವರ್ಷಗಳಾಗಿವೆ. ಅವಳು ಈ-ಮೇಲ್ ಮೂಲಕ "ಅಭಿನಂದನೆಗಳು" ಎಂಬ ಕ್ಲುಪ್ತವಾದ ಸಂದೇಶ ಕಳಿಸಿದ್ದಾಳೆ.  ಕೊನೆಗೆ "ಸಮಾಜಕ್ಕೆ ಬೆಳಕು ನೀಡುವ ದೀಪ ತನ್ನ ಕೆಳಗಿನ ಕತ್ತಲನ್ನು ಬೆಳಗಿಸದೇ ಹೋಯಿತು" ಎಂದು ಸೇರಿಸಿದ್ದಾಳೆ.

ಒಂಟಿತನ ಅವನನ್ನು ಕಾಡಿದರೂ ಅಂದು ಅವನು ನೀಡಿದ ಭಾಷಣ ಮಾತ್ರ ಭರ್ಜರಿಯಾಗಿತ್ತು.  "ಸಮಾಜ ಮತ್ತು ಸಾಹಿತ್ಯ" ಎಂಬ ವಿಷಯವನ್ನು ಕುರಿತು ಅವನ ಭಾಷಣ ಕೇಳಲು ಹಿರಿಯ ವಿದ್ವಾಂಸರು ಬಂದಿದ್ದರು. ಚರ್ಚೆಗಳು ನಡೆದವು.

ಎಲ್ಲಾ ಮುಗಿದ ಮೇಲೆ ಅವನು ತನಗೆ ನೀಡಿದ ಪ್ರಶಸ್ತಿ, ನೆನಪಿನ ಕಾಣಿಕೆ ಮತ್ತು ಹೂವಿನ ಗುಚ್ಛಗಳನ್ನು ಹಿಡಿದುಕೊಂಡು ಕಾರಿನ ಬಳಿಗೆ ಬಂದ. ಡ್ರೈವರ್ ಇವನನ್ನು ನೋಡಿದ ಕೂಡಲೇ ಓಡಿ ಬಂದು ಬಾಗಿಲು ತೆರೆದು  ಎಂಜಿನ್ ಚಾಲೂ ಮಾಡಿದ.  ಹಿಂಭಾಗದ ಸೀಟಿನಲ್ಲಿ ಕುಳಿತು "ಹಳ್ಳಿಗೆ ಹೋಗೋಣ" ಎಂದು ಸೂಚಿಸಿದ.

"ಇಷ್ಟು ಹೊತ್ತಿನಲ್ಲಾ ಸಾರ್?" ಎಂದು ಡ್ರೈವರ್ ಅಚ್ಚರಿಯಿಂದ ಕೇಳಿದ. ಅವನು ಹಳ್ಳಿಗೆ ಬೆಳಗ್ಗೆ ಹೊರತು ಸಂಜೆ ವಾಪಸಾಗುವುದು ರೂಢಿ.

"ಹೂಂ, ಇವತ್ತು ಯಾಕೋ ಅಪ್ಪನನ್ನು ನೋಡೋಣ ಅನ್ನಿಸಿದೆ," ಎಂದು ಅವನು ಕಣ್ಣು ಮುಚ್ಚಿದ.  ಗಾಡಿ ಹೈವೇ ಮೇಲೆ ವೇಗವಾಗಿ ಓಡಿತು. ಆದರೆ ಘಾಟ್ ಸೆಕ್ಷನ್ ಬಂದಾಗ ಡ್ರೈವರ್ ಜಾಗರೂಕತೆಯಿಂದ ಗಾಡಿ ಓಡಿಸತೊಡಗಿದ.  ಕತ್ತಲಾಗಿತ್ತು. ಎದುರಿನಿಂದ ವಾಹನ ಬಂದಾಗ ಅದರ ಹೆಡ್ ಲೈಟ್ ಗಳು ಕಣ್ಣಿಗೆ ಕೋರೈಸುವಂತೆ ಹೊಳೆಯುತ್ತಿದ್ದವು.

"ಡಿಪ್ ಮಾಡುವುದಿಲ್ಲ ಸಾರ್!" ಎಂದು ಡ್ರೈವರ್ ಗೊಣಗಿದ. ತನ್ನ ಕಾರಿನ ಹೆಡ್ ಲೈಟನ್ನು ಎರಡು ಸಲ ಡಿಪ್ ಮಾಡಿ ಸೂಚನೆ ನೀಡಿದ. ಇಷ್ಟಾದರೂ ಮುಂದೆ ಬರುತ್ತಿದ್ದ ಕಾರಿನ ಬೆಳಕು ತಗ್ಗಲಿಲ್ಲ.  ಪ್ರಖರವಾದ ಬೆಳಕಿನ ಕಡೆಗೆ ನೋಡುತ್ತಾ ಇವನಿಗೆ ಅಪ್ಪ ತಂದ ಟಾರ್ಚಿನ ನೆನಪಾಯಿತು. ಕಮಲಕ್ಕ ನೆನಪಾದಳು. ಬೇರಾದ ಹೆಂಡತಿ ಕಳಿಸಿದ ಸಂದೇಶ ನೆನಪಾಯಿತು. ತಾನು ನೀಡಿದ ಭಾಷಣ ನೆನಪಾಯಿತು.

ಅವನು ಮತ್ತೊಮ್ಮೆ ಆಯಾಸದಿಂದ ಕಣ್ಣು ಮುಚ್ಚಿದ.

(c) ಸಿ ಪಿ ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)