ಹೊಂಗೆಮರದ ತುದಿ

ಮೂಲ ಇಂಗ್ಲಿಷ್ ಪದ್ಯ - ಟೆಡ್ ಹ್ಯೂಸ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

ಟೆಡ್ ಹ್ಯೂಸ್ ಬ್ರಿಟನ್ನಿನ "ರಾಷ್ಟ್ರಕವಿ" ಪದವಿ ಪಡೆದವನು (ಪೊಯೆಟ್ ಲಾರೇಟ್).  
ಈ ಕವಿತೆಯಲ್ಲಿ ಟೆಡ್ ಹ್ಯೂಸ್ ತಾನು ನೋಡಿದ ಒಂದು ದೃಶ್ಯವನ್ನು  ವರ್ಣಿಸಿದ್ದಾನೆ. ಹೊಂಗೆಯ ಮರದ ತುದಿಯಲ್ಲಿ ಗೋಲ್ಡ್ ಫ಼್ಲಿಂಚ್ ಹಕ್ಕಿಯೊಂದು ಗೂಡು ಕಟ್ಟಿ ಮರಿ ಮಾಡಿದೆ. ಅದು ತನ್ನ ಮರಿಗಳಿಗೆ ತುತ್ತು ನೀಡಲು ಬಂದಾಗ ಮರದಲ್ಲಿ ಉಂಟಾಗುವ ಸಂಭ್ರಮವನ್ನು ಕವಿ ವರ್ಣಿಸಿದ್ದಾನೆ. ಹೊಂಗೆಯ ಮರದಲ್ಲಿ ಸ್ತಬ್ಧತೆ  ಇದ್ದರೂ ಅಲ್ಲಿ ತುತ್ತಿಗಾಗಿ ಕಾದ ಎಷ್ಟೋ ಜೀವಗಳಿವೆ.  ಹಕ್ಕಿ ಮೆಲ್ಲನೆ ಬಂದು ಕೊಂಬೆಯ ತುದಿಯಲ್ಲಿ ಕುಳಿತು ತನ್ನ ಆಗಮನವನ್ನು ಸೂಚಿಸುತ್ತದೆ. ತನ್ನ ವಿಶಿಷ್ಟ ಕೂಗಿನಿಂದ ತನ್ನ ಇರವನ್ನು ಸಾರುತ್ತದೆ. ಮೆಲ್ಲಗೆ ತನ್ನ ಗೂಡಿನ ಕಡೆಗೆ ಸಾಗುತ್ತದೆ. ಇದುವರೆಗೂ ನಿಶ್ಶಬ್ದವಾಗಿದ್ದ ಹೊಂಗೆಯ ಮರದಲ್ಲಿ ಜೀವಸಂಚಾರವಾಗುತ್ತದೆ. ಹೋದಷ್ಟೇ ಜಾಗರೂಕತೆಯಿಂದ ತಾಯಿಹಕ್ಕಿ ಕೊಂಬೆಯ ತುದಿಗೆ ಮರಳಿ ಅನಂತದ ಕಡೆಗೆ ಹಾರಿಹೋಗುತ್ತದೆ. ಹೊಂಗೆಯ ಮರದಲ್ಲಿ ಮತ್ತೆ ಸ್ತಬ್ಧತೆ ಆವರಿಸಿಕೊಳ್ಳುತ್ತದೆ.  ಈ ಪದ್ಯಕ್ಕೆ ಅನೇಕ ಅರ್ಥಗಳಿರಬಹುದು. ಅವುಗಳನ್ನು ಕುರಿತು ಯೋಚಿಸಿ. 



ಮಧ್ಯಾಹ್ನ ಸೆಪ್ಟೆಂಬರ್ ತಿಂಗಳ ಹಳದಿ ಬೆಳಕಿನಲ್ಲಿ 
ಹೊಂಗೆ ಮರದ ತುದಿಯೊಳಗೆ ಮೌನ ಆವರಿಸಿದೆ
ಒಂದಿಷ್ಟೂ ಮಿಸುಕಾಡದೆ. 
ಕೆಲವು ಎಲೆಗಳು ಹಳದಿಯಾಗುತ್ತಿವೆ,
ಕಾಯಿಗಳೆಲ್ಲಾ ಕೆಳಗುದುರಿವೆ.

ಇದು ಗೋಲ್ಡ್ ಫಿಂಚ್ ಹಕ್ಕಿ ಚಿರಪ್ ಚಿರಪ್ ಎನ್ನುತ್ತಾ  ಬರುವ ತನಕ. 
ಕೊಂಬೆಯ ತುದಿಯಲ್ಲಿ  ಪ್ರಾರಂಭವಾಗುತ್ತದೆ  ಅಲುಗಾಟ 
ನಂತರ ಹಲ್ಲಿಯಷ್ಟೇ ಸಲೀಸಾಗಿ, ಎಚ್ಚರಿಕೆಯಿಂದ, 
ಪ್ರವೇಶಿಸುತ್ತದೆ ಮರದ ದಟ್ಟತೆಯೊಳಗೆ. 
ಈಗೊಂದು ಯಂತ್ರ ಪ್ರಾರಂಭವಾಗುತ್ತದೆ -
ಚೀವ್ ಚೀವ್, ರೆಕ್ಕೆಗಳ ಪಟಪಟ, ಕೂಜನಗಳಿಂದ 
ಮರವಿಡೀ ನಡುಗುತ್ತದೆ, ರೋಮಾಂಚನಗೊಳ್ಳುತ್ತದೆ.
ಇದು ಅವಳ ಸಂಸಾರದ ಯಂತ್ರ. 
ಅದನ್ನು ಪೂರ್ತಿ ಚಾಲೂ ಮಾಡಿ 
ಅವಳು ಕೊಂಬೆಯ ತುದಿಯನ್ನು ಸೇರುತ್ತಾಳೆ.
ತನ್ನ ಮುಖಕ್ಕೆ ಬಿಗಿದ ಮುಖವಾಡವನ್ನು ತೋರುತ್ತಾಳೆ. 

ನಂತರ ಸಿಳ್ಳೆದನಿಯಲ್ಲಿ ನಿಗೂಢ ಚಿರಪ್ ಸದ್ದು ಮಾಡುತ್ತಾ 
ಅವಳು ಮಾಯವಾಗುತ್ತಾಳೆ ಅನಂತದ ಕಡೆಗೆ. 

ಹೊಂಗೆಯ ಮರ ಮತ್ತೆ ಖಾಲೀತನಕ್ಕೆ ಜಾರುತ್ತದೆ. 




(c) ೨೦೧೫, ಸಿ. ಪಿ. ರವಿಕುಮಾರ್ 


ಕಾಮೆಂಟ್‌ಗಳು

  1. ಕೆಲವು ಕವಿತೆಗಳು ಹೇಗೆ ನಮ್ಮನ್ನು ಆವರಿಸಿಕೊಳ್ಳುತ್ತವೆ ಎನ್ನುವುದಕ್ಕೆ ಈ ಕವಿತೆ ಉದಾಹರಣೆ. ಸ್ತಬ್ಧವಾಗಿದ್ದ ನಮ್ಮ ಮನಸ್ಸನ್ನು ಗೋಲ್ಡ್ ಫ್ಲಿಂಚ್ ಹಕ್ಕಿಯ ಹಾಗೇ ಪ್ರವೇಶಿಸಿ ಈ ಕವಿತೆ ಕಲ್ಲೋಲವುಂಟು ಮಾಡುತ್ತದೆ. ಕವಿತೆಯ ಇನ್ನೊಂದು ಅರ್ಥ ನಿಮಗೆ ಹೊಳೆಯಿತೆ?

    ಪ್ರತ್ಯುತ್ತರಅಳಿಸಿ
  2. The Laburnum Top is silent, quite still
    in the afternoon yellow September sunlight,
    A few leaves yellowing, all its seeds fallen

    Till the goldfinch comes, with a twitching chirrup
    A suddeness, a startlement,at a branch end
    Then sleek as a lizard, and alert and abrupt,
    She enters the thickness,and a machine starts up
    Of chitterings, and of tremor of wings,and trillings -

    The whole tree trembles and thrills

    It is the engine of her family.
    She stokes it full, then flirts out to a branch-end
    Showing her barred face identity mask

    Then with eerie delicate whistle-chirrup whisperings
    She launches away, towards the infinite

    And the laburnum subsides to empty

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)