ಸಂತವಾಣಿ
ಸಿ ಪಿ ರವಿಕುಮಾರ್
ಸಂತರೊಬ್ಬರು ಕಥೆ ಹೇಳುತ್ತಿದ್ದರು. ಜನ ಅವರ ಮುಂದೆ ಕುಳಿತು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು.
"ಜೋರಾಗಿ ಗಾಳಿ ಬೀಸುತ್ತಿತ್ತು. ಇಂಥ ಬಿರುಗಾಳಿಯಲ್ಲೇ ಅವನು ಹೊರಟುನಿಂತಿದ್ದ. ಅವನ ಕೈಯಲ್ಲಿ ರಸ್ತೆ ಬೆಳಗಲು ಒಂದು ಚಿಮಣಿದೀಪ. ಅದನ್ನೇ ನಂಬಿಕೊಂಡು ಅವನು ಮುಂದೆ ಹೆಜ್ಜೆ ಇಡುತ್ತಿದ್ದ. ನನ್ನ ಹತ್ತಿರ ದೀಪವಿದೆ, ರಸ್ತೆಯಲ್ಲಿ ತೊಂದರೆ ಆಗುವುದಿಲ್ಲ ಎಂದು ಅವನು ಸಂತೃಪ್ತಿಯಿಂದಲೇ ನಡೆಯುತ್ತಿದ್ದ."
ಜನರ ಕುತೂಹಲ ಈಗ ಹೆಚ್ಚಿತು. ಮುಂದೆ ಏನಾದರೂ ಕೆಟ್ಟದ್ದು ಆಗಲೇಬೇಕು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ.
"ಸ್ವಲ್ಪ ಹೊತ್ತಿನಲ್ಲೇ ಚಿಮಣಿಯ ಒಂದು ಭಾಗ ಕಪ್ಪಾಗತೊಡಗಿತು. ಬತ್ತಿ ಕತ್ತರಿಸುವಾಗ ಅದನ್ನು ಓರೆಯಾಗಿ ಕತ್ತರಿಸಿದ್ದಾರೇನೋ ಎಂದುಕೊಂಡ. ಕ್ರಮೇಣ ಮಸಿ ಹರಡುತ್ತಾ ಸಾಗಿತು. ಚಿಮಣಿದೀಪದ ಬೆಳಕು ಕ್ಷೀಣವಾಗುತ್ತಾ ಹೋಯಿತು. ಅವನು ಬಿರುಗಾಳಿಯಲ್ಲೇ ನಿಂತು ಸಾಹಸ ಪಡುತ್ತಾ ದೀಪದ ಬತ್ತಿಯನ್ನು ಇನ್ನಷ್ಟು ಮೇಲೆ ಮಾಡಿದ. ಆದರೂ ಇದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ದೀಪದಲ್ಲಿ ಎಣ್ಣೆ ತೀರಾ ಕಡಿಮೆಯಾಗಿತ್ತು."
ಜನ ಈಗ ವಿಹ್ವಲರಾದರು. ಅವನು ಈಗ ಏನು ಮಾಡುತ್ತಾನೋ? ಯಾವ ಕಷ್ಟಕ್ಕೆ ಗುರಿಯಾಗುತ್ತಾನೋ?
"ಕುರುಡುಗತ್ತಲಿನಲ್ಲೇ ಅವನು ತಡವರಿಸಿಕೊಂಡು ಹಾಗೇ ಸ್ವಲ್ಪ ಹೊತ್ತು ಮುಂದುವರೆದ. ಆಗಾಗ ಎಣ್ಣೆಯಿಲ್ಲದ ದೀಪದ ಬತ್ತಿಯನ್ನು ದೊಡ್ಡದು ಮಾಡಿದ. ಆದರೆ ಏನು ಮಾಡುವುದು? ಅವನು ನಂಬಿದ್ದ ಕೊನೆಯ ಆಧಾರವೂ ತೀರಿಹೋಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಬೀಸುವ ಗಾಳಿಯಲ್ಲಿ ಯಾವ ದೀಪವಾದರೂ ಎಷ್ಟು ಹೊತ್ತು ಉರಿದೀತು? ನಂದಿಹೋಯಿತು.
ಅವನು ಚಿಮಣಿದೀಪ ಹಿಡಿದು ಅಲ್ಲೇ ನಿಂತಿದ್ದಾನೆ. ಅದೆಷ್ಟು ಹೊತ್ತಾಯಿತೋ. ಇನ್ನೂ ಎಷ್ಟು ಹೊತ್ತು ಹೀಗೇ ನಿಂತಿರುತ್ತಾನೋ!"
ಜನ ಮುಂದೇನಾಗುತ್ತದೋ ಎಂದು ಉಗುರು ಕಚ್ಚುತ್ತಾ ಕಾದರು. ಆದರೆ ಸಂತರು ಅಷ್ಟಕ್ಕೇ ನಿಲ್ಲಿಸಿಬಿಟ್ಟರು. ಅವರು ಕೆಳಗೆ ಕುಳಿತು ಚಿಟಿಕೆ ಹಾಕುತ್ತಾ ಕಣ್ಣು ಮುಚ್ಚಿದರು.
ಒಬ್ಬನಿಗೆ ತಡೆಯಲು ಸಾಧ್ಯವಾಗಲಿಲ್ಲ. "ಆಮೇಲೆ ಏನಾಯಿತು ಬಾಬಾ?" ಎಂದು ಜೋರಾಗಿ ಕೇಳಿಯೇ ಬಿಟ್ಟ. "ನೀವು ಹೀಗೆ ಅರ್ಧಕ್ಕೇ ನಿಲ್ಲಿಸಬಾರದು. ಕಥೆ ಪೂರ್ತಿ ಹೇಳಬೇಕು."
ಸಂತರು ನಿಧಾನವಾಗಿ ಕಣ್ಣು ತೆರೆದರು. "ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ, ಕ್ಷಮಿಸಬೇಕು! ನಾನು ಕಥೆಯನ್ನು ಮುಂದೆ ಏನು ಅಂತ ಹೇಳಲಿ? ಅವನ ಹೊರಗೆ ಎಷ್ಟು ಕತ್ತಲಿತ್ತು ಅನ್ನೋದನ್ನ ವರ್ಣಿಸಲೇ? ಅವನ ಒಳಗೆ ಎಷ್ಟು ಕತ್ತಲಿತ್ತು ಅನ್ನೋದನ್ನ ವರ್ಣಿಸಲೇ? ಅವನು ಮುಂದೆ ಹೋಗಬೇಕಾದ ದಾರಿಯ ವರ್ಣನೆ ಮಾಡಲೇ? ಅಥವಾ ಅವನು ಹಿಂದಿರುಗಿ ಹೋಗಲಾರದ ರಸ್ತೆಯ ವರ್ಣನೆ ಮಾಡಲೇ? ನೀವೇ ನಿರ್ಧರಿಸಿ ಹೇಳಬೇಕು."
ಯಾರೂ ಬಾಯಿ ಬಿಡಲಿಲ್ಲ. ಎಲ್ಲರೂ ಅಲ್ಲೇ ಅನಿಶ್ಚಿತತೆಯ ಸ್ಥಿತಿಯಲ್ಲಿ ಕುಳಿತೇ ಇದ್ದರು.
(ಸರ್ವೇಶ್ವರ ದಯಾಲ್ ಸಕ್ಸೇನಾ ಅವರ ಒಂದು ಕವಿತೆಯನ್ನು ಆಧರಿಸಿ)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ