ಅಂಬರದ ಪವಿತ್ರ ಬಿಂದಿಗೆ

ಮೂಲ ಕವಿತೆ - ಅಮೃತಾ ಪ್ರೀತಂ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ಆಶಾ ಭೋಂಸ್ಲೆ ಹಾಡಿರುವ ಈ ಗೀತೆಯ ರಚನೆ ಅಮೃತಾ ಪ್ರೀತಂ ಅವರದ್ದು. "ಕಾದಂಬರಿ" ಎಂಬ ಚಿತ್ರದಲ್ಲಿ ಇದನ್ನು ಬಳಸಲಾಗಿದೆ. ಅಮೃತಾ ಪಂಜಾಬೀ  ಹಾಗೂ ಹಿಂದಿ ಭಾಷೆಗಳ  ಪ್ರಸಿದ್ಧ ಲೇಖಕಿ. ಕಾದಂಬರಿ, ಸಣ್ಣಕಥೆ, ಕವಿತೆ -ಈ ಎಲ್ಲಾ ಪ್ರಕಾರಗಳಲ್ಲೂ ಅವರು ಯಶಸ್ವಿಯಾಗಿ ಪ್ರಯೋಗ ಮಾಡಿದವರು. ಈಚೆಗೆ ಯಶಸ್ವೀ ಪ್ರದರ್ಶನಗಳನ್ನು ಕಂಡ "ತುಮ್ಹಾರೀ ಅಮೃತಾ" ನಾಟಕವು ಅಮೃತಾ ಪ್ರೀತಂ ಮತ್ತು ಕವಿ ಸಾಹಿರ್ ಲುಧಿಯಾನ್ವಿ ಅವರ ಫಲಿಸದ ಪ್ರೇಮವನ್ನು ಕುರಿತದ್ದು.   ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಜೀವನದರ್ಶನವನ್ನು ಸರಳ-ಸುಂದರವಾದ ಭಾಷೆಯಲ್ಲಿ ಹಿಡಿದುಕೊಟ್ಟಿದ್ದಾರೆ.  ದೇವರ ಪ್ರೀತಿಯನ್ನು ಪ್ರತಿನಿತ್ಯ ಅನುಭವಿಸುತ್ತಿರುತ್ತೇವೆ - ಇಷ್ಟಾದರೂ ನಾವು ಪಾಪದ ಮಾತುಗಳನ್ನೇ ಆಡುತ್ತಿರುತ್ತೇವೆ! ನಾವು ಬದುಕಿರುವುದು ಕೂಡಾ ಸಾಲದ ಮೇಲೆ - ಸಾವಿನಿಂದ ಸಾಲವಾಗಿ ಪಡೆದುಕೊಂಡ ಸಮಯವೇ ನಮ್ಮ ಆಯಸ್ಸು. ಇಷ್ಟಾದರೂ ನಮ್ಮ ಅಹಂಕಾರವೆಷ್ಟು!  "ನಮ್ಮದು" ಎಂದು ನಾವು ಹೇಳಿಕೊಳ್ಳುವುದು ಇಲ್ಲಿ ಏನಿದೆ? ಎಲ್ಲವೂ ಭಗವಂತನ ಸ್ವತ್ತು.  ಕೆರೆಯ ನೀರನು ಕೆರೆಗೆ ಚೆಲ್ಲಿದರೂ "ಇದೆಲ್ಲಾ ನಮ್ಮ ಔದಾರ್ಯ" ಎಂಬ ಠೇಂಕಾರದಿಂದ ಮೆರೆಯುವವರು ನಾವು!  ...  ಚಿತ್ರದಲ್ಲಿ ಬಳಸಿದಾಗ ಈ ಕವಿತೆಯಲ್ಲಿ ಒಂದು ದ್ವಂದ್ವಾರ್ಥವೂ ಹೊಮ್ಮುತ್ತದೆ. ಈ ಚಿತ್ರದ ಕಥೆಯಲ್ಲಿ ನಾಯಕಿ  ಮದುವೆಯ ಹೊರಗೆ ಅಕ್ರಮ ಸಂಬಂಧದಲ್ಲಿ  ಸಿಲುಕಿದ್ದಾಳೆ.  ತನ್ನ ಪ್ರಿಯಕರನೊಂದಿಗೆ ಸಂಬಂಧ ಅವಳಿಗೆ ಅಮೃತದ ಗುಟುಕಿನ ಹಾಗೆ ತೋರಿದರೂ ಅದು ಪಾಪವೆಂಬ ಪರಿವೆ ಇದೆ.  ಈ ದೃಷ್ಟಿಯಿಂದ ಕವಿತೆಯನ್ನು ಮತ್ತೊಮ್ಮೆ ಓದಿ. 

ಅಂಬರದ ಪವಿತ್ರ ಬಿಂದಿಗೆಯ ಮೇಲೆತ್ತಿ
ಮೋಡದ  ಬಟ್ಟಲಿಗೆ ಸುರಿದು ಚಪ್ಪರಿಸುತ್ತಾ   

ಬೆಳ್ದಿಂಗಳ ಒಂದೊಂದೇ ಗುಟುಕು ಮದಿರೆಯನು  
ಪಾಪದ ಮಾತನ್ನಾಡುವೆವು ನಾವು

ಎಂದು ತೀರುವುದೋ ಋಣ ಯಾರಿಗೆ ಗೊತ್ತು?
ಸಾವಿನ ಕೈಯಿಂದ ಪಡಕೊಂಡು ಸಾಲ
ಹೊಲಿಸಿ ಹೊದ್ದಿದ್ದರೂ ಆಯಸ್ಸಿನ ಸೆರಗು - 
ಪಾಪದ ಮಾತನ್ನಾಡುವೆವು ನಾವು 

ನಮ್ಮದೆಂಬುದು ಇದರಲ್ಲಿ ಏನೂ ಇಲ್ಲ 
ಅನಾದಿಯಿಂದಲೂ ಅವನದೇ ಸ್ವತ್ತು  
ಅವನಿಗೂ ಅದನ್ನೇ ಕೊಟ್ಟವರು ನಾವು  -
ಪಾಪದ ಮಾತನ್ನಾಡುವೆವು ನಾವು 

(c) ಸಿ ಪಿ ರವಿಕುಮಾರ್ 


ಕಾಮೆಂಟ್‌ಗಳು

  1. अंबर की एक पाक सुराही
    बादल का एक जाम उठाकर
    घूंट चांदनी पी है हमने
    बात कुफ्र की..की है हमने ।

    कैसे इसका क़र्ज़ चुकाएं,
    मांग के अपनी मौत के हाथों
    उम्र की सूली सी है हमने
    बात कुफ्र की..की है हमने ।

    अपना इसमें कुछ भी नहीं है,
    रोज़े-अज़ल से उसकी अमानत
    उसको वही तो दी है हमने
    बात कुफ्र की.. की है हमने

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)