ಒಡೆದ ಕಟ್ಟು - ಒಂದು ಅತಿಸಣ್ಣಕತೆ ಸಿ. ಪಿ. ರವಿಕುಮಾರ್ ನೆನ್ನೆ ರಾಮ್ ಸಿಕ್ಕಿದಾಗ ಸ್ವಲ್ಪ ಖಿನ್ನನಾಗಿದ್ದು ಕಂಡು ಏನೆಂದು ವಿಚಾರಿಸಿದೆ. “ಸರ್, ಅಪಾರ್ಟ್ಮೆಂಟ್ ಖರೀದಿಸಲು ಮುಂಗಡ ಹಣ ಕೊಟ್ಟು ಎರಡು ವರ್ಷಗಳಾಗಿವೆ. ಆರು ತಿಂಗಳ ಹಿಂದೆಯೇ ಮುಗಿಯಬೇಕಾಗಿದ್ದ ಕಟ್ಟಡದ ಕೆಲಸ ಇನ್ನೂ ಮುಗಿದಿಲ್ಲ. ನನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ನಾನು ಕೊಡುತ್ತಿದ್ದ ಬಾಡಿಗೆ ಹೆಚ್ಚಾಗುತ್ತಿದೆ. ಈ ಕಡೆ ಸಾಲದ ಬಡ್ಡಿ ಕೂಡಾ ಹೆಚ್ಚಾಗಿದೆ ಅಂತ ಬ್ಯಾಂಕಿನಿಂದ ಪತ್ರ ಬಂದಿದೆ,” ಎಂದ. “ತಡ ಯಾಕಾಗುತ್ತಿದೆಯಂತೆ? ಬಿಲ್ಡರ್ಸ್ ಏನು ಹೇಳುತ್ತಾರೆ?” ಎಂದೆ. “ಈಗ ಜನ ಕೆಲಸಕ್ಕೆ ಸಿಕ್ಕುವುದಿಲ್ಲ ಅಂತಾರೆ. ಎಲ್ಲರಿಗೂ ಫ್ರೀ ಅಕ್ಕಿ ಸಿಕ್ಕುತ್ತಿದೆಯಂತೆ.” “ಅದಕ್ಕೇ ಅಲ್ವಾ ಬೇರೆ ರಾಜ್ಯಗಳಿಂದ ಕೆಲಸಗಾರರು ಬರ್ತಿರೋದು?” “ಈಗ ಅದಕ್ಕೂ ಸಂಚಕಾರ ಬಂದಿದೆ. ಕಟ್ಟಡ ಕೆಡವೋ ಕೆಲಸಕ್ಕೆ ಹೆಚ್ಚು ಹಣ ಕೊಡ್ತಿದಾರೆ ಅಂತ ಎಲ್ರೂ ಕೆಡವೋ ಕೆಲಸಕ್ಕೆ ಹೋಗ್ತಿದಾರಂತೆ.” ನನಗೆ ಕ್ರಮೇಣ ಸತ್ಯದ ಅರಿವಾಯಿತು. ಕಟ್ಟಡ ಕೆಡವೋದು ಸುಲಭ. ಅದಕ್ಕೆ ಹೆಚ್ಚು ಹಣ ಕೂಡಾ. ಇದನ್ನೇ ಯೋಚಿಸುತ್ತಾ ನಾನು ಲೈಬ್ರರಿಯ ಕಡೆ ಸಾಗಿದೆ. ಅಲ್ಲಿ ಏನೋ ಕೆಲಸ ನಡೆಯುತ್ತಿದ್ದಂತೆ ಕಂಡಿತು. ಏನೆಂದು ವಿಚಾರಿಸಿದೆ. “ಸರ್, ಕ್ಸಾಸಿಕ್ಸ್ ಎಲ್ಲಾ ಯಾರೂ ಓದೋಲ್ಲ ಅಂತ ಅದನ್ನೆಲ್ಲಾ ತೆಗೆದು ಈಗ ಡಿಮ್ಯಾಂಡ್ ಇರೋ ಹೊಸಾ ಶೈಲಿಯ ಪುಸ್ತಕ ತರಿಸುತ್ತಿದ್ದೇವೆ,” ಎಂದ.”