ಕಾಡುಜೀವಿಗಳ ಶಾಂತಿ
ಮೂಲ: ವೆಂಡೆಲ್ ಬೆರಿ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)