ಜನುಮ ಜನುಮದ ಅನು"ಬಂದಾ"
ಮದುವೆ ಮಾಡಿಸಲು ಬರಬೇಕಾಗಿದ್ದ ಪುರೋಹಿತರಿಗೆ ಆಟೋ, ಓಲಾ, ಊಬರ್ ಯಾವುದೂ ಸಿಕ್ಕಲಿಲ್ಲ. "ಬೆಳಗ್ಗೆ ಏಳುಗಂಟೆಗೇ ಬಂದ್ ಬಿಡಿ" ಎಂಬ ಆಹ್ವಾನವು ಭವಿಷ್ಯವಾಣಿಯಾಗಿಬಿಟ್ಟಿತ್ತು. ಬೆಳಗ್ಗೆ ಏಳುಗಂಟೆಗೇ ಎಲ್ಲ ಟಿವಿವಾಹಿನಿಗಳೂ ಭಾರತಬಂದ್ ಘೋಷಿಸಿಬಿಟ್ಟವು. ಪುರೋಹಿತರು ಇರಲಿ, ಮದುವೆಯ ಗಂಡು ಕೂಡಾ ರೈಲ್ವೆ ಸ್ಟೇಷನ್ನಲ್ಲಿ ಪೆಚ್ಚಾಗಿ ಕೂತಿದ್ದ. ಅವನ ಪರಿವಾರದವರು ಎಲ್ಲಾದರೂ ಬ್ರೇಕ್ ಫಾಸ್ಟ್ ಸಿಕ್ಕಬಹುದೇ ಎಂದು ಹುಡುಕುತ್ತಾ ಓಡಾಡುತ್ತಿದ್ದರು. ಮದುವೆಯ ಹೆಣ್ಣು ಮತ್ತು ಅವಳ ಪರಿವಾರದವರು ನಿಮಿಷ ನಿಮಿಷಕ್ಕೂ ಕಾಲ್ ಮಾಡಿ ಯಾವಾಗ ಬರುವಿರಿ ಎಂದು ಗಂಡಿನ ಕಡೆಯವರನ್ನು ಕೇಳುತ್ತಿದ್ದಿದ್ದನ್ನು ಕೇಳಿ ಕೇಳಿ 'ಕಾಲ ಪುರುಷ'ನ ಬ್ಯಾನ್ಡ್ ವಿಡ್ತ್ ಕೂಡಾ ಲುಪ್ತವಾಗಿ '"ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಮೆಸೇಜಿನ "ತಾಳಿ ಭಾಗ್ಯ"ವನ್ನೇ ಪಡೆಯಬೇಕಾಯಿತು. ತಾನು ವಧೂಪರೀಕ್ಷೆಯ ದಿನ "ದೇವ ಬಂದಾ," "ಮೆಲ್ಲ ಮೆಲ್ಲನೆ ಬಂದನೇ", "ಯಾರೇ ಬಂದವರು" ಇತ್ಯಾದಿ "ಬಂದ" ಪದಖಚಿತ ಕೀರ್ತನೆಗಳನ್ನು ಹಾಡಿದ್ದರಿಂದಲೇ ಈ ಬಂದ್ ಬಂದು ವಕ್ಕರಿಸಿತೇ ಎಂದು ವಧು ಮರುಗಿದಳು. ಕೊನೆಗೂ ಹೆಣ್ಣಿನ ಅಜ್ಜಿಗೆ ಈ ಸಮಸ್ಯೆಯ ಪರಿಹಾರ ಹೊಳೆದೇ ಬಿಟ್ಟಿತು. ಮದುವೆ ಹೆಣ್ಣನ್ನು ಲ್ಯಾಪ್ ಟಾಪ್ ಮುಂದೆ ಕೂಡಿಸಿ ಐಟಿ ಗೌರಿ ಪೂಜೆ ಮಾಡಮ್ಮಾ ಎಂದು ಬಾಸಿಂಗ ಕಟ್ಟ...