ದ ಮರ್ಡರ್ ಆಫ್ ಮೇರಿ ಫೇಗನ್ - ಒಂದು ರಾಜಕೀಯ ಚಲಚ್ಚಿತ್ರ
ಈಚೆಗೆ ನೋಡಿದ "ದ ಮರ್ಡರ್ ಆಫ್ ಮೇರಿ ಫೇಗನ್" ಎಂಬ ಚಿತ್ರದ ಬಗ್ಗೆ ಬರೆಯಬೇಕು ಎನ್ನಿಸಿತು. ಮೂರು ಗಂಟೆಗೂ ಹೆಚ್ಚು ಅವಧಿಯ ಈ ಚಿತ್ರ ವಾಸ್ತವವಾಗಿ ಟೆಲಿವಿಷನ್ ತೆರೆಗಾಗಿ ತಯಾರಿಸಲಾದ ಮಿನಿ ಸೀರೀಸ್. ನಿಮಗೂ ಇದು ಅಂತರ್ಜಾಲದಲ್ಲಿ ಸಿಕ್ಕುತ್ತದೆ. ಇದೊಂದು ಸತ್ಯ ಘಟನೆಯನ್ನು ಆಧರಿಸಿದ ಚಿತ್ರ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಅಮೆರಿಕಾದ ಜಾರ್ಜಿಯಾ ರಾಜ್ಯದಲ್ಲಿ ಒಂದು ಪೆನ್ಸಿಲ್ ಫ್ಯಾಕ್ಟರಿಯಲ್ಲಿ ಮೇರಿ ಫೇಗನ್ ಎಂಬ ಹದಿಮೂರು ವರ್ಷದ ಒಬ್ಬ ಕಾರ್ಮಿಕ ಬಾಲಕಿಯ ಕೊಲೆಯಾಗುತ್ತದೆ. ಮ್ಯಾನೇಜರ್ ಆಗಿದ್ದ ಲಿಯೋ ಫ್ರಾಂಕ್ ಎಂಬ ವ್ಯಕ್ತಿಯ ಮೇಲೆ ಕೊಲೆಯ ಆರೋಪ ಮಾಡಲಾಗುತ್ತದೆ. ಅವನೊಬ್ಬ ಯಹೂದಿ ಎಂಬ ಕಾರಣಕ್ಕಾಗಿ ಜಾರ್ಜಿಯಾದ ಜನರಿಗೆ ಅವನ ಮೇಲೆ ಅಸಹನೆ. ರಾಜಕಾರಣಿಗಳು, ಪೊಲೀಸರು, ಪ್ರಾಸೆಕ್ಯೂಟರ್ ಎಲ್ಲರೂ ಅವನ ವಿರುದ್ಧ ನಿಲ್ಲುತ್ತಾರೆ. ಪತ್ರಿಕಾ ವರದಿಗಾರರು ಅವನನ್ನು ಒಬ್ಬ ರಾಕ್ಷಸನೆಂಬಂತೆ ಚಿತ್ರಿಸುತ್ತಾರೆ. ಡಿಫೆನ್ಸ್ ಲಾಯರ್ ಸಾಕ್ಷ್ಯಗಳ ನ್ನು ಲೇವಡಿ ಮಾಡಲಾಗುತ್ತದೆ. ಅವರು ಸಾಕ್ಷ್ಯ ಹೇಳಲು ಬಂದಾಗ ಜನ ಎದ್ದು ನಿಂತು ಪ್ರಾರ್ಥನೆ ಹೇಳುತ್ತ ಅವರ ಮಾತು ಕೇಳದಂತೆ ಮಾಡುತ್ತಾರೆ. ಅತ್ಯಂತ ಮೃದು ಸ್ವಭಾವದ ಮ್ಯಾನೇಜರನನ್ನು ಪ್ರೀತಿಸಿ ಮದುವೆಯಾದ ಅವನ ಹೆಂಡತಿಯೂ ತನ್ನ ಪತಿಗೆ ಮತ್ತೊಂದು ಮುಖವಿರಬಹುದೇ ಎಂಬ ಸಂಶಕ್ಕೆ ಒಳಗಾದರೂ ಕೊನೆಗೆ ಅವಳ ಪ್ರೇಮವು ಗೆಲ್ಲುತ್ತದೆ. ಪತಿಯ ಬಗ್ಗೆ ಆರೋಪಗಳನ್ನು...