ಚಿನ್ನದ ಕಟ್ಟು - ಸಣ್ಣಕಥೆ - ಭಾಗ - 1
ಮೂಲ ಕಥೆ: ಆರ್. ಕೆ. ಲಕ್ಷ್ಮಣ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭಾಗ - 1 “ ಮಾಡರ್ನ್ ಫ್ರೇಮ್ ವರ್ಕ್ಸ್” ಎಂಬ ಬರಹವುಳ್ಳ ಬೋರ್ಡು ನಿಜಕ್ಕೂ ಒಂದು ದೊಡ್ಡ ಮರದ ಪೆಟ್ಟಿಗೆ ; ಅದರ ಮೇಲೆ ಹೆಸರನ್ನು ಬರೆದು ಔಷಧಾಲಯ ಮತ್ತು ರೇಡಿಯೋ ರಿಪೇರಿ ಅಂಗಡಿಗಳ ನಡುವಿನ ಸಣ್ಣ ಜಾಗದ ಮುಂದೆ ಲಡಕಲಡಕ ಅಲ್ಲಾಡುತ್ತಿದ್ದ ಕಾಲುಗಳ ಮೇಲೆ ನಿಲ್ಲಿಸಲಾಗಿತ್ತು. ಅಂಗಡಿಯ ಮಾಲೀಕ ದತ್ತ ಈ ಅಂಗಡಿಯಲ್ಲಿ ಹೇಳಿ ಮಾಡಿಸಿದ ಬಿಡಿ ಭಾಗದ ಹಾಗೆ ಕೂತಿದ್ದ. ಅವನ ಹೊಟ್ಟೆ ಮುಂದೆ ಬಂದಿತ್ತು. ಕಣ್ಣುಗಳ ಮುಂದೆ ಬೆಳ್ಳಿಯ ಕಟ್ಟಿನ ಕನ್ನಡಕ ಕೂತಿತ್ತು. ಮೈಕಾಂತಿಯೋ ಒಳ್ಳೆ ಚೆನ್ನಾಗಿ ಎಣ್ಣೆ ಹಾಕಿ ಪಾಲಿಷ್ ಮಾಡಿದ ಮರದ ಹಾಗಿತ್ತು. ಅವನು ಮೌನಿ. ಕಷ್ಟ ಪಟ್ಟು ದುಡಿಯುವ ವ್ಯಕ್ತಿ. ಗಿರಾಕಿಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾದ ಉತ್ತರ ಕೊಡುತ್ತಾನೆ. ತನ್ನ ಮೌನವೃತಕ್ಕೆ ಭಂಗ ಉಂಟುಮಾಡಬಲ್ಲ ಕಾಡುಹರಟೆ ಕೊಚ್ಚುವ ಗೆಳೆಯರನ್ನು ಅವನು ಆದಷ್ಟೂ ದೂರವಿಡುತ್ತಾನೆ. ಅವನನ್ನು ನೋಡಿದಾಗಲೆಲ್ಲ ಸುತ್ತಲೂ ಕಾರ್ಡ್ ಬೋರ್ಡ್ ಚೂರುಗಳು , ಮರದ ಪಟ್ಟಿಗಳು , ಮೊಳೆಗಳಿದ್ದ ಪೆಟ್ಟಿಗೆ , ಗೋಂದಿನ ಬಾಟಲಿ , ಪೈಂಟ್ ಡಬ್ಬಗಳು ಮೊದಲಾದವುಗಳನ್ನು ಸುತ್ತಲೂ ಹರಡಿಕೊಂಡು ಬೆನ್ನು ಬಾಗಿಸಿಕೊಂಡು ಕೂತಿರುತ್ತಾನೆ. ಈ ಅವ್ಯವಸ್ಥೆಯಲ್ಲಿ ಒಮ್ಮೊಮ್ಮೆ ಅವನ ಮೋಟುದ್ದದ ಪೆನ್ಸಿಲ್ಲೋ ಅಥವಾ ಗಾಜನ್ನು ಕತ್ತರಿಸುವ ಸಾಧನವೋ ಕಳೆದುಹೋಗುತ್ತದೆ . ಆಗ ಮಾತ್ರ ಅವನ...