ಸ್ಥಳೀಯ ಉತ್ಪನ್ನ ಮತ್ತು ಗ್ರಾಮೀಣ ಬದುಕು ಕುರಿತು ಟೈಲರ್ ಬ್ರೂಲೆ

ಸಿ ಪಿ ರವಿಕುಮಾರ್ 


ಟೈಲರ್ ಬ್ರೂಲೆ ಎಂಬ ಕೆನಡಾ ದೇಶದ ಬರಹಗಾರ ಫೈನಾನ್ಷಿಯಲ್ ಟೈಮ್ಸ್ ಎಂಬ ಪತ್ರಿಕೆಗೆ ಅಂಕಣಕಾರ. ಆತನ ಇತ್ತೀಚಿನ ಅಂಕಣವನ್ನು ಓದುವ ಅವಕಾಶ ಪ್ರವಾಸದ ಸಮಯದಲ್ಲಿ ಸಿಕ್ಕಿತು. ಅದರಿಂದ ಕೆಲವು ಭಾಗಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿದ್ದೇನೆ.

ನಿರುದ್ಯೋಗ: ಸ್ವಿಟ್ಜರ್ಲೆಂಡ್ ದೇಶದಲ್ಲಿ ನಿರುದ್ಯೋಗ ಬಹಳ ಕಡಮೆ. ನಿರುದ್ಯೋಗಿಗಳಿಗೆ ಆ ದೇಶದಲ್ಲಿ ಸಿಕ್ಕುವ ಭತ್ಯೆ ಕೂಡಾ ಕಡಿಮೆ. ಈ ಸಮಸ್ಯೆಗಳನ್ನು ಆ ದೇಶದವರು ಸ್ಥಳೀಯ ಮಟ್ಟದಲ್ಲಿ ಪರಿಗಣಿಸಿದ್ದಾರೆ.  ಸ್ಥಳೀಯ ಮಟ್ಟದಲ್ಲಿ ನಮ್ಮ ತೇರನ್ನು ಯಾರು ಎಳೆಯುತ್ತಿದ್ದಾರೆ ಎನ್ನುವುದನ್ನು ಗಮನಿಸುವುದು ಸುಲಭ. 

ಡಿಗ್ರಿ ಬೇಕೆ ಬೇಡವೇ? : ಬೆಟ್ಟಗಳ ಮೇಲೆ ಹೈ-ಸ್ಪೀಡ್ ಕೇಬಲ್ ಎಳೆಯಲು ಅಥವಾ ಒಳ್ಳೆಯ ಹೋಟೆಲ್ ಮ್ಯಾನೇಜರ್ ಆಗಲು ಡಿಗ್ರಿಯೇ ಬೇಕು ಎಂದು ಯಾರು ಹೇಳಿದರು?  ಸ್ವಿಟ್ಜರ್ಲೆಂಡ್ ನಲ್ಲಿ ಅಂತೂ ಬೇಕಾಗಿಲ್ಲ. ಅಲ್ಲಿ ತರಬೇತಿಗೆ ಮಹತ್ವ ಕೊಡಲಾಗುತ್ತದೆ. ಇದರಿಂದ ಕೆಲಸ ಚೆನ್ನಾಗಿ ಗೊತ್ತಿರುವ ಕುಶಲಕರ್ಮಿಗಳ ನಿರ್ಮಾಣವಾಗುತ್ತದೆ. ಕೆಲಸಕ್ಕೆ ಬಾರದ ಡಿಗ್ರಿ ಪಡೆದ ಸಾವಿರಾರು ನಿರುದ್ಯೋಗಿಗಳನ್ನು ಸೃಷ್ಟಿಸುವುದಕ್ಕಿಂತ ಇದು ವಾಸಿ. 

ಸ್ಥಳೀಯರಿಗೆ ಪ್ರೋತ್ಸಾಹ ನೀಡಿ.  ಸ್ಥಳೀಯವಾಗಿ ಬೆಳೆದದ್ದಕ್ಕೆ, ಸ್ಥಳೀಯವಾಗಿ ತಯಾರಾದದ್ದಕ್ಕೆ ಸ್ವಿಟ್ಜರ್ಲೆಂಡ್ ದೇಶದಲ್ಲಿ ಮಹತ್ವ ಕೊಡಲಾಗುತ್ತದೆ. ಇದರಿಂದ ದೇಶದಲ್ಲಿರುವ ಸಣ್ಣ-ಪುಟ್ಟ ಕೈಗಾರಿಕೆಗಳು/ಉದ್ಯಮಗಳನ್ನು ರಕ್ಷಿಸಬಹುದು; ಜಾಗತೀಕರಣದಿಂದ ಉಂಟಾಗುವ ವೃಥಾ ದುಂದುಗಳನ್ನು ತಪ್ಪಿಸಬಹುದು. ಸ್ಥಳೀಯವಾದದ್ದನ್ನು ಕೊಳ್ಳುವುದರಿಂದ ನಮ್ಮ ಸಂಪತ್ತನ್ನು ರಕ್ಷಿಸುವುದು ಮಾತ್ರವಲ್ಲ ಬೆಳೆಸಲೂಬಹುದು. ಜನ ಸ್ಥಳೀಯ ಉತ್ಪನ್ನಗಳನ್ನು ಮೆಚ್ಚಿ ಖರೀದಿಸಿದಾಗ ದೊಡ್ಡ ರೀಟೇಲ್ ಅಂಗಡಿಗಳು ಈ ಉತ್ಪನ್ನಗಳನ್ನು ಕೊಳ್ಳಲೇಬೇಕು. ಆಗ "ಸ್ವಿಟ್ಜರ್ಲೆಂಡ್ ದೇಶದಲ್ಲಿ ಮಾಡಿದ್ದು" ಎಂಬ ಲೇಬಲ್ ಉಳ್ಳ ಅನೇಕ ವಸ್ತುಗಳು ರೀಟೇಲ್ ಅಂಗಡಿಗಳಲ್ಲಿ ಕಾಣುತ್ತವೆ. 

ಉತ್ತಮ ಇಂಜಿನಿಯರಿಂಗ್.  ದೊಡ್ಡ ದೊಡ್ಡ ಕಟ್ಟಡ/ಕಾರ್ಖಾನೆ ಮೊದಲಾದವುಗಳನ್ನು ಕಟ್ಟುವಾಗ ಉತ್ತಮ ಇಂಜಿನಿಯರಿಂಗ್ ಬಳಸಿ ಮೊದಲ ಸಲವೇ ಸರಿಯಾಗಿ ಕಟ್ಟುವುದರ ಬದಲು ಸಂತೆಗೆ ಮೂರು ಮೊಳ ನೇದಂತೆ ಕಟ್ಟಿದರೆ ಅದನ್ನು ಪದೇಪದೇ ದುರಸ್ತಿ ಮಾಡುವುದು/ಬದಲಾಯಿಸುವುದು ನಡೆಯುತ್ತದೆ. ಇಂಥ ಸನ್ನಿವೇಶದಲ್ಲಿ ಜನರಲ್ಲಿ "ಇಷ್ಟು ಸಾಕು" ಎನ್ನುವ ಮನೋಭಾವ ಹೋಗಿ  "ನಮಗೆ ಹೀಗೇ ಇರುವ ಪದಾರ್ಥ ಬೇಕು" ಎನ್ನುವ ಮನೋಭಾವ ಬೆಳೆಯುತ್ತದೆ. 

ಮಾತು-ಕತೆ.  ಇಂದು "ಸಾಮಾಜಿಕ ತಾಣ" ಎನ್ನುವ ಕಲ್ಪನೆ ಇರುವುದು ಯಾಕೆ ಗೊತ್ತೇ? ಜನ ತಮ್ಮ ಆತ್ಮೀಯ ಭಾವನೆಗಳನ್ನೆಲ್ಲಾ ಎಲ್ಲರೆದುರಿಗೆ ತೋಡಿಕೊಳ್ಳಲು ಸಾಯುತ್ತಿದ್ದಾರೆ ಎಂಬುದು ಇದಕ್ಕೆ ಖಂಡಿತ ಕಾರಣವಲ್ಲ. ನಮ್ಮ ನಗರಗಳನ್ನು ಬಹಳ ಕೆಟ್ಟದಾಗಿ ಯೋಜಿಸಲಾಗಿದೆ ಎಂಬುದು ಈ ಪರಿಸ್ಥಿತಿಗೆ ಕಾರಣ. ಅಮೆರಿಕದ ಪಶ್ಚಿಮದ ನಗರಗಳಲ್ಲಿ ಸಾಮಾಜಿಕ ತಾಣ ಪ್ರಬಲವಾಗಿರಲು ಆ ನಗರಗಳ ಹೊರಗಣ 'ಸಬರ್ಬ್' ಪ್ರದೇಶಗಳಲ್ಲಿ ಕಾಣಸಿಕ್ಕುವ ಏಕಾಂಗಿತನವೇ ಕಾರಣ.  ಇಡೀ ಯೂರೋಪಿನಲ್ಲಿ ಸ್ವಿಸ್ ಜನ ಸಾಮಾಜಿಕ ತಾಣಗಳ ಬಳಕೆಯಲ್ಲಿ ಅತ್ಯಂತ ಹಿಂದಿದ್ದಾರೆ. ಇದಕ್ಕೆ ನನಗೆ ಹೊಳೆಯುವ ಕಾರಣಗಳು ಮೂರು - ಸ್ವಿಟ್ಜರ್ಲೆಂಡ್ ನಲ್ಲಿರುವ ಗ್ರಾಮೀಣ ಬದುಕು, ಉತ್ತಮ ಸಾರ್ವಜನಿಕ ಸಾರಿಗೆ ಮತ್ತು ಜನರಲ್ಲಿ ಬೇರೂರಿರುವ ಸಾಮಾಜಿಕ ಬದ್ಧತೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)