ಮರೆಯಲಾಗದಲ್ಲ
ಸಿ ಪಿ ರವಿಕುಮಾರ್ ಮೊಹಮ್ಮದ್ ರಫಿ ಹಾಡಿರುವ "ಯಾದ್ ನ ಜಾಯೇ ಬೀತೇ ದಿನೋಂಕೀ" ನನಗೆ ಇಷ್ಟವಾದ ಹಾಡು. ಇದನ್ನು ಬರೆದವರು ನನ್ನ ಮೆಚ್ಚಿನ ಕವಿಗಳಲ್ಲಿ ಒಬ್ಬರಾದ ಶೈಲೇಂದ್ರ. ಶಂಕರ್-ಜೈಕಿಶನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಶೈಲೇಂದ್ರ ಅವರದ್ದು ಸರಳ-ಸುಂದರ ಶೈಲಿ. ಈ ಗೀತೆಯಲ್ಲಿ ಒಂದಾದರೂ ಕಠಿಣವಾದ ಶಬ್ದವಿಲ್ಲ. ಪಖೇರೂ (ಹಕ್ಕಿ) ಎನ್ನುವ ಪದ ಒಂದೇ ಸ್ವಲ್ಪ ಅಪರೂಪವಾದದ್ದು! ಗೀತೆಯಲ್ಲಿ ಒಬ್ಬ ಪ್ರೇಮಿ ತನ್ನ ಹಳೆಯ ದಿನಗಳನ್ನು ನೆನೆದು ದುಃಖಿಸುತ್ತಿದ್ದಾನೆ. ಯಾವುದೋ ಕಾರಣಕ್ಕಾಗಿ ಅವನು ಪ್ರೇಮಿಕೆಯಿಂದ ಬೇರಾಗಿದ್ದಾನೆ. ಬಹುಶಃ ಕಾರಣಾಂತರದಿಂದ ಅವನ ಪ್ರೇಮಿಕೆ ಬೇರೊಬ್ಬನನ್ನು ವರಿಸಬೇಕಾದ ಸಂದರ್ಭ ಬಂದು "ನನ್ನನ್ನು ಮರೆತುಬಿಡು" ಎಂದಿದ್ದಾಳೆ. ಅವಳ ಸಂದರ್ಭ ಇವನಿಗೆ ತಿಳಿದಿದೆ - ಹೀಗಾಗಿ ಅವಳ ಮೇಲೆ ಸಿಟ್ಟಿಲ್ಲ. ಆದರೆ ಕಳೆದ ದಿನಗಳನ್ನು ಮರೆಯಲು ಅವನು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುತ್ತಿಲ್ಲ. ಈ ಗೀತೆ ಒಬ್ಬ ಪ್ರೇಮಿ-ಪ್ರೇಮಿಕೆಗೇ ಅನ್ವಯಿಸಬೇಕಾಗಿಲ್ಲ. ಒಟ್ಟಿಗೆ ಓದಿದ ಸ್ನೇಹಿತರು ಒಬ್ಬರನ್ನೊಬ್ಬರು ಅಗಲುವ ಕ್ಷಣಗಳೂ ಅಷ್ಟೇ ನೋವುಂಟು ಮಾಡುತ್ತವೆ. ನಿಮ್ಮ ಹೈಸ್ಕೂಲ್ ಅಥವಾ ಕಾಲೇಜು ಬೀಳ್ಕೊಡುಗೆ ಸಮಾರಂಭ ನೆನೆಸಿಕೊಳ್ಳಿ! ವಿದಾಯ ಸಮಾರಂಭಗಳಲ್ಲಿ ಈ ಹಾಡು ಕೇಳಿದಾಗ ಯಾರ ಕಣ್ಣಾದರೂ ತೇವವಾಗುತ್ತದೆ. ಮರೆಯಲಾಗದಲ್ಲ ಕಳೆದು ದಿನಗಳ ನೆನಪು! ಬರಲಾರವು ತಿರುಗಿ, ಕರಗಿಹೋದ ಕ್ಷಣಗಳು -