ವಚನ ನ ಜಾಯೇ

ಸಿ ಪಿ ರವಿಕುಮಾರ್

ನಾನು ಸಭಾಗೃಹದ ಸುತ್ತ ಕಣ್ಣು ಹಾಯಿಸಿದೆ. ಸೇರಿದ ಸುಮಾರು ಐವತ್ತು ಮಂದಿ ಜನರಲ್ಲಿ ಬಹುತೇಕರು ವಯಸ್ಸಾದವರೇ. ಇದನ್ನೇ ಮುಂದೆ ಭಾಷಣಕಾರರು ಕೂಡಾ ಬೊಟ್ಟು ಮಾಡಿ ತೋರಿಸಿದರು. ಸಂದರ್ಭ: ಸಂವಾದ ಟ್ರಸ್ಟ್ ನಡೆಸಿದ ಕಾರ್ಯಕ್ರಮದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಅವರ ಉಪನ್ಯಾಸ. ವಿಷಯ: ಇಂದು ವಚನಗಳು ಪ್ರಸ್ತುತವೇ? ಕಾರ್ಯಕ್ರಮದ ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳಲ್ಲಿ ಬಳಕೆಯಾದ ಕನ್ನಡ ಪದಗಳ ನಿಘಂಟನ್ನು ತಯಾರಿಸಿ ಅವುಗಳಿಗೆ ವ್ಯಾಖ್ಯಾನ ಬರೆಯುವ ಕೆಲಸ ಆಗಬೇಕೆಂಬ ಮಾತು ಬಂತು. ಅದನ್ನು ಯಾರು ಮಾಡಬೇಕೆಂಬ ಜಿಜ್ಞಾಸೆಗೆ ಭಾಷಣಕಾರರು ಉತ್ತರಿಸುತ್ತಾ ವಿಷಾದದಿಂದ "ಈ ಕೆಲಸವನ್ನು ಯಾರೂ ಮಾಡಲಾರರು" ಎಂಬ ಅನುಮಾನ ವ್ಯಕ್ತಪಡಿಸಿದರು.  ಕಾರ್ಯಕ್ರಮಕ್ಕೆ ಬಂದವರೆಲ್ಲಾ ಐವತ್ತರ ಗಡಿ ದಾಟಿದವರೆಂಬುದನ್ನು ಆಗಲೇ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದು. ಇದು ಬಹುತೇಕ ಇಂದಿನ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ನಾವು ನೋಡಬಹುದಾದ ವಿಷಯವೇ.

ವಚನಗಳನ್ನು ಆನ್ ಲೈನ್ ಸಂಗ್ರಹಿಸಿ ಅವುಗಳನ್ನು ಹುಡುಕುವ ಸಾಮರ್ಥ್ಯವನ್ನು ಇಂದು ಸೃಷ್ಟಿಸಲಾಗಿದೆ. ಇದರಿಂದ ಸಂಶೋಧಕರಿಗೆ ಉಪಯೋಗವಾಗಿದೆಯೇ ಎಂಬುದನ್ನು  ಪ್ರೊ| ನಾಗಭೂಷಣಸ್ವಾಮಿ ಪ್ರಶ್ನಿಸುತ್ತಾ "ಒಂದು ಕಾಲದಲ್ಲಿ ವಚನಗಳು ಸಿಕ್ಕುವುದೇ ಕಷ್ಟವಾಗಿತ್ತು. ಒಂದು ಪದವನ್ನು 25,000 ವಚನಗಳಲ್ಲಿ ಹುಡುಕುವುದು ದುಸ್ಸಾಧ್ಯವಾಗಿತ್ತು. ಇಂದು ಅದನ್ನು ಸೆಕೆಂಡುಗಳಲ್ಲಿ ಮಾಡಬಹುದು. ಹಿಂದೆ ವಚನಗಳನ್ನು ಹುಡುಕುವಾಗ ಅವುಗಳನ್ನು ಓದಿ ಮನನ ಮಾಡುವುದು ಅನಿವಾರ್ಯವಾಗಿತ್ತು. ಹುಡುಕುವ ಕೆಲಸವನ್ನು ಕಂಪ್ಯೂಟರ್ ವಹಿಸಿಕೊಂಡಿದೆ. ಆದರೆ ಓದಿ ಆಲೋಚಿಸಬೇಕಾದ ಕೆಲಸವನ್ನು ಮಾಡಬೇಕಾದದ್ದು ಸಂಶೋಧಕರೇ" ಎನ್ನುವಾಗ ಆ ಕೆಲಸ ಅಷ್ಟಾಗಿ ನಡೆಯುತ್ತಿಲ್ಲವೆನ್ನುವುದನ್ನು ಅವರ ಮಾತು ಧ್ವನಿಸುತ್ತಿತ್ತು. ಸಂಶೋಧನೆಗೆ ಪ್ರಶ್ನೆಗಳನ್ನು ಕೇಳುವುದು ಮುಖ್ಯ. "ಇವತ್ತು ನಮಗೆ ಉತ್ತರಗಳು ಸಿಕ್ಕಿವೆ, ಆದರೆ ನಮ್ಮಲ್ಲಿ ಪ್ರಶ್ನೆಗಳೇ ಇಲ್ಲ" ಎಂದು ಅವರು ಮುಂದೆ ಪ್ರಶ್ನೋತ್ತರ ಕಾಲದಲ್ಲಿ ಹೇಳಿದ್ದು ಕೂಡಾ ಮಾರ್ಮಿಕವಾಗಿತ್ತು. ಈ ದೌರ್ಭಾಗ್ಯ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ.  ಬೆಟ್ಟದಷ್ಟು ಸಂಶೋಧನಾ ಲೇಖನಗಳು ಹುಡುಕಿದರೆ ಸಿಕ್ಕುತ್ತವೆ. ಇವುಗಳನ್ನು ಜೀರ್ಣಿಸಿಕೊಂಡು ಮುಂದಿನ ಪ್ರಶ್ನೆ ಕೇಳುವ ತಾಳ್ಮೆ ಮಾಯವಾಗಿದೆ. ಈಗಂತೂ ಹಳೆಯ ಲೇಖನಗಳಿಂದ ಕದ್ದು ಪ್ರಕಟಿಸುವುದು ರೂಢಿಯಾಗಿಬಿಟ್ಟಿದೆ. ಪ್ಲೇಜಿಯರಿಸಂ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ತಂತ್ರಾಂಶಗಳು ಹುಟ್ಟಿಕೊಂಡಿವೆ. ಕನ್ನಡದಲ್ಲಿ ಇಂಥ ತಂತ್ರಾಂಶಗಳೂ ಇಲ್ಲವೆಂದು ತೋರುತ್ತದೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಗಂಭೀರ. ಈಚೆಗೆ ಒಬ್ಬ ಪ್ರೊಫೆಸರ್ ತಮ್ಮ ಪುಸ್ತಕದಲ್ಲಿ ಒಬ್ಬ ವಿದ್ಯಾರ್ಥಿಯ ಪ್ರಬಂಧದಿಂದ ಕದ್ದು ಪ್ರಕಟಿಸಿದರು ಎಂಬುದು ದೊಡ್ಡ ಹಗರಣವಾಯಿತು.  ಇಲ್ಲಿ ಕೃತಿಚೌರ್ಯ  ಬಯಲು ಮಾಡಿದವರ ಬಗ್ಗೆ ನನಗೆ ಗೌರವವಿದೆ!  ಇಂಥವರು ಇರುವುದರಿಂದಲೇ ಸಂಶೋಧನಾರಂಗ ಆರೋಗ್ಯಪೂರ್ಣವಾಗಿರಲು ಸಾಧ್ಯ.

 ಪ್ರೊ| ನಾಗಭೂಷಣಸ್ವಾಮಿ ವಚನಗಳು ತಮ್ಮ ಮಟ್ಟಿಗೆ  ಇಂದಿಗೂ ಪ್ರಸ್ತುತವೆಂಬ ನಿರ್ಧಾರಕ್ಕೆ ಬಂದರು. ವಿಶೇಷವೆಂದರೆ ಅವರು ವಚನಗಳಲ್ಲಿ ಜನರು ಸಾಮಾನ್ಯವಾಗಿ ಹುಡುಕುವ ಸಂಗತಿಗಳನ್ನು ದೂರಸರಿಸಿಬಿಟ್ಟರು. ಜಾತಿಯ ವಿರುದ್ಧ ಹೋರಾಟ, ಸ್ತ್ರೀ ಸಮಾನತೆ ಇತ್ಯಾದಿಗಳನ್ನು ದೂರವಿಟ್ಟರೂ ವಚನಗಳು ಹೇಗೆ ಪ್ರಸ್ತುತವಾಗುತ್ತವೆ? ಭಾಷಿಕವಾಗಿ ಮತ್ತು  ಸಾಂಸ್ಕೃತಿಕವಾಗಿ ವಚನಗಳ ಪ್ರಾಮುಖ್ಯತೆಯನ್ನು ಪ್ರೊ| ಸ್ವಾಮಿ ಬಿಡಿಸಿಕೊಟ್ಟರು. ವಚನಗಳಲ್ಲಿ ಬಳಕೆಯಾದ ಹೊಸಬಗೆಯ ಕನ್ನಡ ನುಡಿಗಟ್ಟುಗಳು ಕನ್ನಡಭಾಷೆಯನ್ನು ಹಿಗ್ಗಿಸಿವೆ. ("ಬಿಡುಮುಡಿ" ಎಂಬ ನುಡಿಗಟ್ಟನ್ನು ಪ್ರೊ| ಸ್ವಾಮಿ ಉದಾಹರಣೆ ಕೊಟ್ಟರು. ವಚನಗಳಲ್ಲಿ "ಕೋಡಗ" ಮತ್ತು "ಮರ್ಕಟ" ಪದಗಳು ಬಳಕೆಯಾದರೂ "ಕೋತಿ" ಎಂಬ ಪದ ಎಲ್ಲೂ ಬಳಕೆಯಾಗಿಲ್ಲ ಎಂಬ ಕುತೂಹಲದ ಅಂಶ ತಿಳಿಸಿದರು.) ಕಠಿಣವಾದದ್ದನ್ನೂ ಕನ್ನಡದಲ್ಲೇ  ವಚನಕಾರರು ಹೇಳಿದ್ದು ಒಂದು ಅಪೂರ್ವವಾದ ವಿಷಯ. ಕನ್ನಡದ ಪದಗಳಾದ ನೆನಪು, ಮರೆವು ಇತ್ಯಾದಿಗಳಿಗೆ ವಚನಗಳಲ್ಲಿ ವಿಶೇಷ ಅರ್ಥವಿದೆ. ಇವುಗಳನ್ನು ಸಂದರ್ಭಸಹಿತವಾಗಿ ಅರ್ಥೈಸಿಕೊಳ್ಳಬೇಕೆಂಬ ಕಿವಿಮಾತು ಹೇಳಿದರು. ಕೆಲವು ಕೈಪಿಡಿ ಲೇಖಕರು ಬೆಡಗಿನ ವಚನಗಳಲ್ಲಿ ಪ್ರತಿಯೊಂದು ಪದಕ್ಕೂ ಒಂದು key ಇದೆಯೆಂದು ವಿವರಿಸಿ ಈ ವಚನಕ್ಕೆ ಇದೇ ಅರ್ಥ ಎಂದು ಸೀಮಿತಗೊಳಿಸುವ ಬಗ್ಗೆ ಎಚ್ಚರ ನೀಡಿದರು.  ಸಾಂಸ್ಕೃತಿಕವಾಗಿ ವಚನಗಳು ಹೇಗೆ ಮುಖ್ಯ ಎನ್ನುವುದಕ್ಕೆ ಕುರುಬ ವಚನಕಾರನೊಬ್ಬ ತನ್ನ ವಚನಗಳಲ್ಲಿ ವಿವಿಧ ಜಾತಿಯ ಕುರಿಗಳ ಹೆಸರುಗಳನ್ನು ನೀಡುವುದನ್ನು ಉದಾಹರಣೆ ಕೊಟ್ಟರು. ವಚನಗಳನ್ನು ಬರೆದ ಕಾಲದ ಸಾಂಸ್ಕೃತಿಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ವಚನಗಳಲ್ಲಿ ಸುಳಿವಿದೆ ಎಂಬುದು ಪ್ರೊ| ಸ್ವಾಮಿ ಅವರ ಅನ್ನಿಸಿಕೆ.

ನೆನ್ನೆ ಭಾಷಣದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಹೇಳಿದ ಮಾರ್ಮಿಕವಾದ ಮಾತು ಇದು - "ಕಳಬೇಡ, ಕೊಲಬೇಡ ... ಬಸವಣ್ಣನ ವಚನವನ್ನು ನಾವು ಕೇಳುತ್ತಲೇ ಬೆಳೆಯುತ್ತೇವೆ. ಧರ್ಮವನ್ನು ಯಾಕೆ ಇಂತಹದನ್ನು ಮಾಡು ಎನ್ನುವ ಬದಲು ಇಂತಹದನ್ನು ಮಾಡಬೇಡ ಎನ್ನುವುದರ ಮೂಲಕ ಡಿಫೈನ್ ಮಾಡಬೇಕಾಗುತ್ತೆ? ... ಬಸವಣ್ಣ ಹೇಳಿದ 'ಬೇಡ'ಗಳಲ್ಲಿ ಅತ್ಯಂತ ಮುಖ್ಯವಾದದ್ದು 'ಅನ್ಯರಿಗೆ ಅಸಹ್ಯ .ಪಡಬೇಡ' ಎನ್ನುವುದು. ಇವತ್ತು ನಾವು ಮಾಡುತ್ತಿರುವುದು ಅದಕ್ಕೆ ತದ್ವಿರುದ್ಧ. ಒಂದು ರಾಜಕೀಯ ಪಕ್ಷಕ್ಕೆ/ತತ್ವಕ್ಕೆ ಬದ್ಧರಾದವರು ಇನ್ನೊಂದನ್ನು ಅಸಹ್ಯದಿಂದ ನೋಡುವುದನ್ನು ಇವತ್ತು ಕಾಣುತ್ತೇವೆ. ರಾಜಕಾರಣಿಗಳು ಮಾಡುವುದೇನು? ತನ್ನನ್ನು ಬಣ್ಣಿಸುವುದು ಮತ್ತು ಅನ್ಯರನ್ನು ಕಂಡು ಅಸಹ್ಯ ಪಡುವುದು."  ಹೀಗೆ ನಮ್ಮನ್ನು ಎಚ್ಚರಿಸುವ ಮೂಲಕವೂ ವಚನಗಳು ನಮಗೆ ಪ್ರಸ್ತುತವಾಗುತ್ತವೆ.


ವಚನಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಪ್ರೊ| ಸ್ವಾಮಿ ತಮ್ಮ ಮಾತುಗಳನ್ನು ಯಾವ ಮುಚ್ಚುಮರೆಯಿಲ್ಲದೆ ಹೇಳಿದ್ದು ನನಗೆ ವಿಶೇಷವೆನ್ನಿಸಿತು. ಉದಾಹರಣೆಗೆ ಅವರ ತಂದೆ ಕುಮಾರವ್ಯಾಸ ಭಾರತವನ್ನು (ಜಾತಿಯ ಕಾರಣ) ಓದುತ್ತಿರಲಿಲ್ಲವಂತೆ; ಇವರು ಓದಿ ಮೆಚ್ಚಿಕೊಂಡಿದ್ದು ಕೂಡಾ ಅವರಿಗೆ ಇಷ್ಟವಾಗಲಿಲ್ಲವಂತೆ! ಬ್ರಿಟಿಷ್ ಆಳ್ವಿಕೆ ಬರದೇ ಇದ್ದರೆ ನಾವು ಇನ್ನೂ ಅದೇ ರೀತಿ ನಮ್ಮ ನಮ್ಮ ಜಾತಿಗಳ ಸಾಹಿತ್ಯಕ್ಕೆ ನಮ್ಮ ಓದನ್ನು ಸೀಮಿತಗೊಳಿಸಿಕೊಂಡು ಬಿಡುತ್ತಿದ್ದೆವೇನೋ ಎನ್ನುವ ಪ್ರೊ| ಸ್ವಾಮಿಯವರ ಮಾತು ನಿಜ ಎನ್ನಿಸಿತು.  ಚೆನ್ನಪ್ಪ ಉತ್ತಂಗಿ ಅವರು ಸಂಪಾದಿಸಿಕೊಟ್ಟ ವಚನಗಳನ್ನು ಪ್ರಕಟಿಸಲು ಒಬ್ಬ ಕ್ರಿಶ್ಚಿಯನ್ ಫಾದರ್ ನಿರಾಕರಿಸಿದರಂತೆ. "ಇದರಲ್ಲಿ ಕ್ರೈಸ್ತಧರ್ಮ ಹೇಳುವುದೆಲ್ಲಾ ಇದೆ; ಇದನ್ನು ಪ್ರಕಟಿಸಿದರೆ ಕ್ರೈಸ್ತಧರ್ಮ ಪ್ರಚಾರ ಕಷ್ಟವಾಗುತ್ತೆ" ಅನ್ನುವ ಕಾರಣ ಕೊಟ್ಟರಂತೆ! ಇನ್ನೊಂದು ಕಥೆ - ಅಲ್ಲಮಪ್ರಭುವನ್ನು ಶೂನ್ಯ ಸಿಂಹಾಸನದ ಮೇಲೆ ಕೂಡಿಸಿದರೆಂಬ ಮಾತು ಬರುತ್ತದೆ; ಶೂನ್ಯ ಸಿಂಹಾಸನ ಅನ್ನುವುದೊಂದು ಸಂಕೇತ, ಅಷ್ಟೇ.  ಆದರೆ  ಒಂದು ಮಠದವರು "ನೋಡಿ, ಇಂಥ ಸಿಂಹಾಸನ ಒಂದಿತ್ತು, ಅದನ್ನು ಔರಂಗ್ ಜೇಬ್ ಕದ್ದುಕೊಂಡು ಹೋಗಿದ್ದ, ನಮ್ಮ ಸ್ವಾಮಿಗಳು ಅದನ್ನು ವಾಪಸ್ ತಂದರು" ಅಂತ ಪ್ರಚಾರ ಮಾಡಿದರಂತೆ!  ಇಂದು ವಚನಗಳನ್ನು ಎಷ್ಟು ಜನ ಓದುತ್ತಿದ್ದಾರೆ? ಪ್ರೊ| ಸ್ವಾಮಿ ಅವರ ಪ್ರಕಾರ "ಕೇವಲ ಹತ್ತೋ ಇಪ್ಪತ್ತೋ ವಚನಗಳನ್ನು ಓದಿಕೊಂಡು ವಚನಗಳ ಬಗ್ಗೆ ಮಾತಾಡುವವರೇ ಹೆಚ್ಚು."


ಹೀಗೆ ಭಾಷಣಕಾರರು ತಮ್ಮ ಆಳವಾದ ವಿದ್ವತ್ತನ್ನು ನಮ್ಮೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಹಂಚಿಕೊಂಡರು. ಅವರಿಗೂ ಮತ್ತು ಕಾರ್ಯಕ್ರಮ ಆಯೋಜಿಸಿದ ಸಂವಾದ ಬಳಗಕ್ಕೂ ಕೃತಜ್ಞತೆಗಳು.

(http://vachana.sanchaya.net/ - ವಚನಸಾಹಿತ್ಯದ ಆನ್ ಲೈನ್ ಸಂಗ್ರಹ)

28-6-2015

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)