ಮಾರ್ಗದರ್ಶಿ

ಸಿ ಪಿ ರವಿಕುಮಾರ್




ಕೆಲವು ವರ್ಷಗಳ ಹಿಂದೆ ನಾನು ಸ್ಯಾಂಟಾ ಕ್ಲಾರಾ (ಕ್ಯಾಲಿಫೋರ್ನಿಯಾ) ದಲ್ಲಿ ಒಂದು ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಆಗ ಸಮ್ಮೇಳನದಲ್ಲಿ ಭಾಗವಹಿಸಿದವರ ಮನರಂಜನೆಗಾಗಿ ಅರ್ಧ ದಿನದ ಕಾರ್ಯಕ್ರಮ ಇತ್ತು. ಮೊದಲು ನಮ್ಮನ್ನು ಅಲ್ಲಿಯ ಒಂದು ಪಾರ್ಕಿಗೆ ಕರೆದುಕೊಂಡು ಹೋದರು; ಅಲ್ಲಿ ಸುತ್ತಾಡಿದ ನಂತರ ಔತಣಕೂಟವಿತ್ತು.

"ಇಗೋ ಪಾರ್ಕಿನಲ್ಲಿ ಸುತ್ತಾಡಿಕೊಂಡು ಬನ್ನಿ" ಎಂದು ಸಮ್ಮೇಳನದಲ್ಲಿ ಭಾಗವಹಿಸಲು ದೂರದಿಂದ ಬಂದವರನ್ನು ಬಿಟ್ಟುಬಿಡುವ ಹಾಗಿಲ್ಲ! ಪಾರ್ಕಿನಲ್ಲಿ ಸುತ್ತಾಟಕ್ಕೆ ಒಂದು ವ್ಯವಸ್ಥೆ ಇತ್ತು. ನಮ್ಮ ಲಾಲ್ ಬಾಗಿಗೆ ಅಥವಾ ಕಬ್ಬನ್ ಪಾರ್ಕಿಗೆ ಹೋಲಿಸಿದರೆ ಈ ಪಾರ್ಕ್  ಏನೇನೂ ಇಲ್ಲ.  ಆದರೆ ಬಂದವರನ್ನು ಪಾರ್ಕಿನಲ್ಲಿ ಸುತ್ತಾಡಿಸಿ ಅವರಿಗೆ ಗಿಡಗಳ ವಿಶೇಷದ ಬಗ್ಗೆ ವಿವರಿಸಲು ಜನರಿದ್ದರು - ಇವರೆಲ್ಲರೂ ಬಹುತೇಕರು ವಯಸ್ಸಾದ ಮಹಿಳೆಯರು, ಹಿಂದೆ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರು.  ಪಾರ್ಕಿನಲ್ಲಿದ್ದ ಮರ-ಗಿಡಗಳನ್ನು ತೋರಿಸಿ ಕೆಲವು ಸ್ವಾರಸ್ಯಗಳನ್ನು ತಿಳಿಸುತ್ತಿದ್ದರು. ಉದಾಹರಣೆಗೆ "ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚು ಮಳೆ ಬೀಳುವುದಿಲ್ಲ. ಇಂಥ ಹವಾಮಾನಕ್ಕೆ ಗಿಡಗಳು ಹೇಗೆ ಹೊಂದಿಕೊಳ್ಳುತ್ತವೆ, ನೋಡಿ. ಈ ಗಿಡದ ಎಲೆಗಳು ಹೇಗೆ ಮುಳ್ಳುಗಳ ರೀತಿ ಬೆಳೆದಿವೆ," ಎಂದು ಅವರು ತೋರಿಸಿದಾಗ ಜನ ಕುತೂಹಲದಿಂದ ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದರು.

ಪಾರ್ಕಿನಲ್ಲಿ ನಮಗೆ ಮಾರ್ಗದರ್ಶಿಗಳಾದವರು  "ಸ್ವಯಂ ಸೇವಕರು" - ಇಂಥವರು ಅಮೆರಿಕಾದ ಮ್ಯೂಸಿಯಂ, ಲೈಬ್ರರಿ, ಆಸ್ಪತ್ರೆ  ಮೊದಲಾದ ತಾಣಗಳಲ್ಲಿ (ಬಹುಶಃ ಯಾವ ಫಲಾಪೇಕ್ಷೆ ಇಲ್ಲದೆ) ಕೆಲಸ ಮಾಡುತ್ತಾರೆ.  ವಾರಕ್ಕೆ ಇಂಥ ದಿನ, ಇಂಥ ವೇಳೆಯಲ್ಲಿ ಮಾತ್ರ ಅವರಿಗೆ ಅವಕಾಶವಿರುತ್ತದೆ. ಅವರ ಆಯ್ಕೆಯಲ್ಲಿ ಸಾಕಷ್ಟು ನಿಗಾ ವಹಿಸಲಾಗುತ್ತದೆ. ನನಗೆ ಗೊತ್ತಿದ್ದ ಅಮೆರಿಕನ್ ಮಿತ್ರರೊಬ್ಬರು ಹೀಗೆ ಕ್ಯಾಲಿಫೋರ್ನಿಯಾದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸ್ವಯಂಸೇವಕರಾಗಿದ್ದರು. ಈ ಮ್ಯೂಸಿಯಂಗಳಿಗೆ ಶಾಲಾಮಕ್ಕಳಿಗೆ ಮುಕ್ತ ಪ್ರವೇಶ. ಹೀಗಾಗಿ ಮ್ಯೂಸಿಯಂಗಳಿಗೆ ಹೆಚ್ಚು ಜನರನ್ನು ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವುದು ಕಷ್ಟ.  ಸ್ವಯಂ ಸೇವಕರಿಗೆ ಕೆಲವು ಕಿಂಚಿತ್ ಸೌಲಭ್ಯಗಳಿರುತ್ತವೆ - ಉದಾಹರಣೆಗೆ ಅವರು ತಮ್ಮ ಮಿತ್ರರನ್ನು ಇಂತಿಷ್ಟು ಸಲ ಮುಕ್ತವಾಗಿ ಮ್ಯೂಸಿಯಂಗೆ ಕರೆತರಬಹುದು, ಇತ್ಯಾದಿ.

ನಮ್ಮ ಪಾರ್ಕ್ ಸುತ್ತಾಟ ಒಂದು ಗಂಟೆಯಲ್ಲಿ ಮುಗಿಯಿತು. ಸಮ್ಮೇಳನದ ಆಯೋಜಕರು ಈ ಕಾರ್ಯಕ್ರಮಕ್ಕೆ ಸಾಕಷ್ಟು ಹಣ ಖರ್ಚು ಮಾಡಿರಬಹುದು. ಇದು ಆ ಪಾರ್ಕಿಗೆ ಹೋಗಲೆಂಬ ಸದುದ್ದೇಶವೂ ಅವರಿಗೆ ಇರಬಹುದು. ಒಟ್ಟಿನಲ್ಲಿ ಇದೊಂದು ಉತ್ತಮ ಆಲೋಚನೆ.  ಬೆಂಗಳೂರಿನಲ್ಲಿ ವರ್ಷಕ್ಕೆ ನೂರಾರು ಸಮ್ಮೇಳನಗಳು ನಡೆಯುತ್ತವೆ. ಬೇರೆ ಊರುಗಳಿಂದ ಲಕ್ಷಾಂತರ ಜನ ಬರುತ್ತಾರೆ. ನನಗೆ ತಿಳಿದಂತೆ ಇವರಿಗೆ ಬೆಂಗಳೂರಿನ ಪರಿಚಯ ಮಾಡಿಕೊಡಲು ಇಂಥ ಯಾವ ವ್ಯವಸ್ಥೆಯೂ ಇಲ್ಲ.  ಬಸವನಗುಡಿಯಂತಹ ಸ್ಥಳಗಳಲ್ಲಿ ಮಾರ್ಗದರ್ಶಿಗಳಿಗೆ ಏನೂ ಗಿಟ್ಟುವುದಿಲ್ಲ.

ಕೆಲವರಿಗೆ ಇದು ಒಳ್ಳೆಯ ಉದ್ಯೋಗಾವಕಾಶವಾಗಬಹುದು. ಆದರೆ ಈ ಕೆಲಸದಲ್ಲಿ ತೊಡಗಿಕೊಳ್ಳುವವರು ನಂಬಿಕೆ ಉಳ್ಳವರಾಗಿರಬೇಕು ಎನ್ನುವುದರ ಮೇಲೆ ಯೋಜನೆಯ ಯಶಸ್ಸು ನಿಂತಿದೆ.

28-6-2015 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)