ಕಾಡಿನ ಭಾಗ್ಯ
ಸಿ ಪಿ ರವಿಕುಮಾರ್
ಒಂದು ಕಾಡು. ಅಲ್ಲೊಂದು ಸಿಂಹ ರಾಜ್ಯವಾಳುತ್ತಿತ್ತು. ಬೇಟೆಯಾಡುವುದು ಕಾಡಿನ ನಿಯಮ ಎಂದು ಸಿಂಹರಾಜನಿಗೆ ಗೊತ್ತಿತ್ತು. ಎಲ್ಲ ಪ್ರಾಣಿಗಳೂ ತಮ್ಮ ಅವಶ್ಯಕತೆ ಇದ್ದಷ್ಟು ಬೇಟೆಯಾಡಲು ಸಿಂಹ ಅವಕಾಶ ಮಾಡಿಕೊಟ್ಟಿತ್ತು. ಈ ಸಿಂಹದ ತಮ್ಮಂದಿರಿಗೆ ತಾವೂ ರಾಜ್ಯವಾಳಬೇಕೆಂಬ ಆಸೆ ಉಂಟಾಯಿತು. ರಾಜನ ಸ್ಥಾನಕ್ಕೆ ಚುನಾವಣೆ ಆಗಬೇಕೆಂದು ಹಠ ಹಿಡಿದವು. ಚುನಾವಣೆಯಲ್ಲಿ ರಾಜಸಿಂಹನ ತಮ್ಮಂದಿರು ಹೀಗೆ ಪ್ರಚಾರ ಮಾಡಿದವು - "ಎಲೈ ಪ್ರಾಣಿಗಳೇ! ನಮಗೆ ಯಾರು ಮತ ಹಾಕುತ್ತಾರೋ ಅವರಿಗೆ ಬೇಟೆಯಾಡುವುದೇ ಬೇಕಾಗಿಲ್ಲ. ನಾವೇ ಆ ಪ್ರಾಣಿಗಳಿಗೆ ಇದ್ದಲ್ಲೇ ಆಹಾರ ಸರಬರಾಜು ಮಾಡುತ್ತೇವೆ"
ಬೇಟೆಯನ್ನೇ ಅರಿಯದ ಕಿರುಬಗಳನ್ನು ಪ್ರಚಾರಕ್ಕಾಗಿ ಇಟ್ಟುಕೊಳ್ಳಲಾಯಿತು. ಕಿರುಬಗಳು ಪ್ರಾಣಿಗಳಿಗೆ ಹೀಗೆ ಹೇಳಿಕೊಟ್ಟವು. "ನಿಮ್ಮ ಪಾಡು ನೋಡಿದರೆ ಕನಿಕರವಾಗುತ್ತಿದೆ. ಈ ಕಾಡಿನಲ್ಲಿ ಆಹಾರ ಸಿಕ್ಕುವುದೇನು ಸುಲಭವೇ? ಎಷ್ಟೋ ಸಲ ವಾರಗಟ್ಟಲೆ ಹಸಿದುಕೊಂಡಿರಬೇಕು! ನಿಮ್ಮ ರಾಜಸಿಂಹನಿಗೆ ಇದು ಕಾಣಿಸುತ್ತದೆಯೇ? ಇಲ್ಲ. ತನ್ನ ಹೊಟ್ಟೆ ತುಂಬಿದರೆ ಸಾಕು. ರಾಜನಾದವನು ತನ್ನ ಪ್ರಜೆಗಳ ಹೊಟ್ಟೆ ತುಂಬಿಸಬೇಕಾದದ್ದು ತನ್ನ ಕರ್ತವ್ಯವೆಂದು ತಿಳಿಯದಿದ್ದರೆ ಅವನು ರಾಜನಾಗಲು ಅನರ್ಹ. ನೀವು ನಮ್ಮ ಪಕ್ಷಕ್ಕೆ ಮತ ಹಾಕಿ. ನಿಮಗೆ ಹಸಿವೆನ್ನುವುದೇ ಇರುವುದಿಲ್ಲ."
ಪ್ರಾಣಿಗಳಿಗೆ ಇದೊಳ್ಳೆಯ ಮೋಜು ಎನ್ನಿಸಿತು. ಒಮ್ಮೆಲೇ ಬೇಟೆಯಾಡುವುದು ತುಂಬಾ ಕಷ್ಟವೆಂದು ತೋರತೊಡಗಿತು. ಅವರಿಗೆ ರಾಜಸಿಂಹನ ಬಗ್ಗೆ ರೋಷವುಂಟಾಯಿತು. "ಇಷ್ಟು ದಿನ ಇವನು ಮಾಡಿದ್ದಾದರೂ ಏನು? ತನ್ನ ಹೊಟ್ಟೆ ತುಂಬಿಸಿಕೊಂಡ, ಅಷ್ಟೇ! ನಮಗಾಗಿ ಏನೂ ಮಾಡಲಿಲ್ಲ" ಎಂದು ಹೊಸಪಕ್ಷಕ್ಕೆ ಮತ ಹಾಕಿದವು.
ಹೊಸ ಪಕ್ಷ ಆಡಳಿತಕ್ಕೆ ಬಂತು. ತಾನು ಹೇಳಿದಂತೆ ಹೊಸ ರಾಜ ನಡೆದುಕೊಂಡ. ಪ್ರತಿನಿತ್ಯ ಅಷ್ಟೋ ಇಷ್ಟೋ ಆಹಾರ ಪ್ರಾಣಿಗಳಿಗೆ ಸಿಕ್ಕಿತು. ಕೆಲವೊಮ್ಮೆ ಹೊಟ್ಟೆ ತುಂಬುವಷ್ಟು, ಕೆಲವೊಮ್ಮೆ ಕೊಳೆತದ್ದು, ಕೆಲವೊಮ್ಮೆ ಅರ್ಧ ಹೊಟ್ಟೆ, ಇನ್ನೂ ಕೆಲವು ದಿನ ಖೋತಾ. ಕೆಲವು ಪ್ರಾಣಿಗಳು ಗೊಣಗಿದವು. ಆಗ ಕಿರುಬಗಳು ಅವರಿಗೆ ಬೈದು "ಬೇಟೆಯಾಡುವುದು ಎಷ್ಟು ಕಷ್ಟ, ನಿಮಗೇನು ಗೊತ್ತು?" ಎಂದು ಹೀಯಾಳಿಸಿದವು. ಈಗ ಬೇಟೆಯಾಡುವುದನ್ನೇ ಮರೆತಿದ್ದ ಪ್ರಾಣಿಗಳಿಗೆ "ಅದೂ ನಿಜವೇ" ಎನ್ನಿಸಿ ಸುಮ್ಮನಾದವು.
ಹಿಂದೆ ರಾಜನಾಗಿದ್ದ ಸಿಂಹ ಮತ್ತು ಅವನ ಸಹಚರರು "ಬೇಟೆಯಾಡುವುದು ಪ್ರಾಣಿಗಳ ಧರ್ಮ, ಅದನ್ನು ಬಿಡಕೂಡದು" ಎಂದು ಬೋಧಿಸಲು ಪ್ರಯತ್ನಿಸಿದವು. ಕಿರುಬಗಳು ಇದನ್ನು ಕೇಳಿ ದೊಡ್ಡದನಿಯಲ್ಲಿ ಅರಚಿ "ಹಸಿದಿರುವ ನಿಮಗೆ ಬೇಟೆಯಾಡಲು ಹೇಳುತ್ತಿರುವರಲ್ಲ, ಅವರು ಹೃದಯಶೂನ್ಯರು! ಇಂದಿನಿಂದ ನಿಮಗೆ ಊಟದ ಜೊತೆಗೆ ಸಾರಾಯಿ ಕೂಡಾ ಕೊಡುತ್ತೇವೆ" ಎಂದು ಸಮಾಧಾನ ಪಡಿಸಿದವು. ಪ್ರಾಣಿಗಳಿಗೆ ಏನೂ ತೋಚದೆ ಸುಮ್ಮನಾದವು. ಸಾರಾಯಿ ಎಲ್ಲವನ್ನೂ ಮರೆಸಿತು. ಪ್ರತಿ ಚುನಾವಣೆಯಲ್ಲೂ ಪ್ರಾಣಿಗಳಿಗೆ ಹೊಸಹೊಸ ಆಶ್ವಾಸನೆಗಳು ಸಿಕ್ಕವು. ಈ ಆಶ್ವಾಸನೆಗಳನ್ನು ತುಂಬಿಕೊಡಲು ಕಾಡಿನ ಲೂಟಿ ನಡೆಯಿತು. ಹಲವು ಪ್ರಾಣಿಗಳ ವಂಶವೇ ನಿರ್ಮೂಲವಾಗಿಹೋಯಿತು.
ಹೀಗಿರುವಾಗ ಒಮ್ಮೆ ಬರಗಾಲ ಬಂತು. ಮಳೆ ಆಗಲೇ ಇಲ್ಲವೆಂದರೆ ಆಗಲೇ ಇಲ್ಲ. ಕಾಡು ಒಣಗಿತು. ಸಸ್ಯಾಹಾರಿ ಪ್ರಾಣಿಗಳು ನಾಶವಾದವು. ಬೇಟೆಯಾಡಲು ಪ್ರಾಣಿಗಳೇ ಸಿಕ್ಕದ ಸಂದರ್ಭ ಬಂತು. ಹಿಂದೆ ರಾಜನಾಗಿದ್ದ ಸಿಂಹ "ಈಗಲಾದರೂ ಏನಾಗಿದೆ? ನಮಗೆ ನದಿ ಇರುವ ಸ್ಥಳ ಗೊತ್ತಿಲ್ಲವೇ? ಅಲ್ಲಿ ಹೋದರೆ ಬೇಟೆಯಾಡಿ ಬದುಕಬಹುದು," ಎಂದು ಹುರಿದುಂಬಿಸಿತು. ಆದರೆ ಈಗ ಪ್ರಾಣಿಗಳಿಗೆ ಬೇಟೆ ಎಂದರೆ ಏನೆಂಬುದೇ ಮರೆತುಹೋಗಿತ್ತು. ತಮ್ಮಿಂದ ಅದೆಲ್ಲಾ ಸಾಧ್ಯವಿಲ್ಲ ಎಂದು ಅವುಗಳು ಸುಸ್ತಾಗಿ ನುಡಿದವು. "ನೀನು ನಮಗೆ ಹೊಟ್ಟೆ ತುಂಬಾ ಆಹಾರ ಕೊಟ್ಟರೆ ಮತ್ತೆ ನಿನ್ನನ್ನೇ ರಾಜನಾಗಿ ಮಾಡುತ್ತೇವೆ" ಎಂದವು.
ಹೀಗೆ ಆ ಕಾಡಿನ ಕಥೆ ಮುಗಿಯುತ್ತಾ ಬಂತು. "ಹೇಗೋ ಈ ವರ್ಷ ಮುಗಿದರೆ ಮುಂದೆ ಮಳೆಯಾಗಬಹುದು," "ನಮ್ಮಹಿಂದಿನ ರಾಜರು ತಾವು ಬೇಟೆಯಾಡಿದ ಪ್ರಾಣಿಗಳ ರಾಶಿಯನ್ನೇ ಫ್ರಿಜ್ ನಲ್ಲಿ ಗೌಪ್ಯವಾಗಿ ಇಟ್ಟಿದ್ದಾರಂತೆ - ಅದನ್ನು ಒಡೆದು ತೆಗೆದರೆ ನಮ್ಮ ಮುಂದಿನ ಮೂರು ಪೀಳಿಗೆಗಳು ಹೊಟ್ಟೆಗೆ ಚಿಂತೆಯಿಲ್ಲದೆ ಬದುಕಬಹುದಂತೆ," ಇತ್ಯಾದಿ ಮಾತುಗಳು ಕೇಳಿಬಂದವು. ಕಿರುಬಗಳು ದಿನಕ್ಕೊಂದು ರಂಜನೀಯ ಕತೆಗಳನ್ನು ಹೇಳುತ್ತಾ ಹೊಸ ಆಸೆಗಳನ್ನು ಪ್ರಾಣಿಗಳ ಮನಸ್ಸಿನಲ್ಲಿ ಬಿತ್ತುತ್ತಿದ್ದವು. ಪ್ರಾಣಿಗಳಲ್ಲೇ ಈಗ ಅನೇಕ ಪಂಗಡಗಳು ಆಗಿಹೋಗಿದ್ದವು. "ನಮ್ಮ ಹಸಿವು ತೀರುತ್ತಿಲ್ಲ" ಎಂದು ಯಾರಾದರೂ ದೂರಿದರೆ ಕಿರುಬಗಳು ಪಂಗಡಗಳ ನಡುವೆ ಜಗಳ ಮಾಡಿಸುತ್ತಿದ್ದವು. ಬೇಟೆಯ ಬದಲು ಪ್ರಾಣಿಗಳು ಹರಟೆ ಮತ್ತು ಪರಸ್ಪರ ನಿಂದನೆಯನ್ನು ಕಲಿತವು. ಕೆಲವು ಪ್ರಾಣಿಗಳು "ಹೀಗೆ ಎಷ್ಟು ದಿನ ನಡೆಯಲು ಸಾಧ್ಯ?" ಎಂದು ಕೇಳಿದಾಗ "ತಲ್ಲಣಿಸದಿರು ಕಂಡ್ಯಾ ತಾಳು ಮನವೇ" ಎಂಬ ಹಾಡನ್ನು ಕಿರುಬಗಳು ತಮಗೆ ದೇವರು ಕೊಟ್ಟ ಕಂಠದಲ್ಲಿ ಹಾಡುತ್ತಿದ್ದವು.
ಹೀಗೆ ಕಾಡಿನ ಕಥೆ ಮುಗಿಯುತ್ತಾ ಬಂತು.
(c) 2015, C.P. Ravikumar
ಮನೋಜ್ಞವಾಗಿದೆ ನಿಮ್ಮ ಬರಹ. ಇಂದಿನ ಸಾಕಷ್ಟು ಸರ್ಕಾರಗಳು ಇದೇ ದಾರಿಯಲ್ಲಿ ಸಾಗಿವೆ.
ಪ್ರತ್ಯುತ್ತರಅಳಿಸಿಆನಂದ್, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು!
ಅಳಿಸಿ