ಬ್ಯಾಟ್ ಮಾಡಿದ ರಾಯ
ಬ್ಯಾಟ್ ಮಾಡಿದ ರಾಯ : ಒಂದು ಹರಟೆ ಸಿ. ಪಿ. ರವಿಕುಮಾರ್ ಬ್ಯಾಟರಾಯನಪುರ ಎಂಬ ಸ್ಥಳ ಬೆಂಗಳೂರಿನಲ್ಲಿದೆ. ಈ ಹೆಸರನ್ನು ಕೇಳಿದಾಗಲೆಲ್ಲಾ ಅದರ ಬಗ್ಗೆ ನನಗೆ ಕುತೂಹಲ ಉಂಟಾಗುತ್ತದೆ. ಜಯನಗರ, ವಿಜಯನಗರ ಇವೆಲ್ಲಾ ಸರಳವಾದ ಹೆಸರುಗಳು, ಬಿಡಿ! ಇತಿಹಾಸ ಬಲ್ಲವರಿಗೆ ರಾಜಾಜಿನಗರ, ಇಂದಿರಾನಗರ ಮೊದಲಾದವನ್ನು ಅರ್ಥ ಮಾಡಿಕೊಳ್ಳುವುದೂ ಅಷ್ಟು ಕಷ್ಟವಲ್ಲ. ಇಷ್ಟಾದರೂ ಕೆಲವರು ಇಂದಿರಾನಗರಕ್ಕೆ ಇಂದ್ರಾನಗರ ಎಂದು ಕರೆಯುವುದನ್ನು ನೋದಿದ್ದೇನೆ. ಸಾಕ್ಷಾತ್ ದೇವೇಂದ್ರನೇ ಇರಲು ಲಾಯಕ್ಕಾದ ಬಂಗಲೆಗಳು ಅಲ್ಲಿರುವುದರಿಂದ ಅವರಿಗೆ ಹೀಗೆ ಅನ್ನಿಸಿರಬಹುದು. ಇರಲಿ! ಈಗ ನಮಗೆ ಮುಖ್ಯವಾದದ್ದು ಬ್ಯಾಟರಾಯನಪುರವೇ ಹೊರತು ಇಂದಿರಾನಗರವಲ್ಲ. ಈ ಬ್ಯಾಟರಾಯನಪುರ ಎಂಬ ಸ್ಥಳಪುರಾಣವನ್ನು ಯಾರೂ ಬರೆದಂತೆ ಕಾಣೆ. ನಾನು ಮತ್ತು ನನ್ನ ಮಿತ್ರ ವಿಶ್ವ ಇದನ್ನು ಕುರಿತು ಮಾತಾಡಿಕೊಳ್ಳುತ್ತಾ ಬಸ್ ಸ್ಟಾಪಿನಲ್ಲಿ ಕುಳಿತಿದ್ದೆವು. ಗರಂ ಕಡಲೇಕಾಯಿ ತಿನ್ನುತ್ತಾ ನಮ್ಮ ಚರ್ಚೆಗೆ ರಂಗೇರಿತ್ತು. "ಈ ಜಾಗವನ್ನು ಸ್ಥಾಪಿಸಿದ ರಾಜನು ಬ್ಯಾಟ್ ಹಿಡಿದು ಆಡುತ್ತಿದ್ದನೇನೋ," ನಾನು ನನ್ನ ಥಿಯರಿಯನ್ನು ಬಿಚ್ಚಿಟ್ಟೆ. "ಸಾಮಾನ್ಯವಾಗಿ ಗದೆ ಮತ್ತು ಖಡ್ಗಗಳನ್ನು ಕೈಯಲ್ಲಿ ಹಿಡಿದು ಪ್ರತ್ಯಕ್ಷರಾಗುವ ರಾಜಮಹಾರಾಜರು ಕೈಯಲ್ಲಿ ಬ್ಯಾಟ್ ಹಿಡಿದ ಕಾರಣ ಅವರಿಗೆ ಬ್ಯಾಟರಾಯ ಎಂದು ಹೆಸರು ಬಂದಿರಬಹುದು." ತಮ್ಮ ಮೊಬೈಲನ್ನು ಚಾ...