ಕಲ್ಲು
ಸಣ್ಣಕತೆ - ಸಿ. ಪಿ. ರವಿಕುಮಾರ್ (ಅಮೆರಿಕಾದ ಕೆಂಟಕಿ ರಾಜ್ಯದಲ್ಲಿ ಅಕ್ಟೋಬರ್ 6, 2018 ನಡೆದ ನಿಜಘಟನೆಯನ್ನು ಆಧರಿಸಿದ್ದು. ಪಾತ್ರಗಳು ಕಾಲ್ಪನಿಕ.) ಜಿಮ್ ಬಾಗಿಲು ತೆರೆದು ಒಳಗೆ ಬಂದಾಗ ಸ್ಟೆಲ್ಲಾ ಟೆಲಿವಿಷನ್ ನೋಡುತ್ತಾ ರಾತ್ರಿಯ ಅಡುಗೆಗೆಂದು ಹುರುಳಿಕಾಯಿಯನ್ನು ಕತ್ತರಿಯಿಂದ ಕತ್ತರಿಸುತ್ತಾ ಕೂತಿದ್ದಳು. "ಮಕ್ಕಳು ಇನ್ನೂ ಶಾಲೆಯಿಂದ ಬಂದಿಲ್ಲವಾ?" ಎಂದು ಜಿಮ್ ಕೇಳಿದ. ಅವಳು ತಲೆ ಎತ್ತಿ ನೋಡಿ. "ಓ ಹಾಯ್ ಡಿಯರ್! ಮೆಲ್ ಬಂದು ಅವಳ ರೂಮಿನಲ್ಲಿದ್ದಾಳೆ. ರಯಾನ್ ಇನ್ನೂ ಬಂದಿಲ್ಲ. ಬರೋ ಹೊತ್ತಾಯಿತು. ಅಗೋ, ಬಂದನಲ್ಲ! ಹಾಯ್ ರಯಾನ್ ಮರಿ, ಯಾಕೆ, ಸುಸ್ತಾದ ಹಾಗೆ ಕಾಣುತ್ತಿದೀಯಲ್ಲ!" ಕೈಯಲ್ಲಿದ್ದ ಭಾರದ ಬ್ಯಾಗ್ ಕೆಳಗಿಟ್ಟು ರಯಾನ್ "ಫ್ಯೂ! ಇದನ್ನು ಹೊತ್ತುಕೊಂಡು ಬರುವಷ್ಟು ಹೊತ್ತಿಗೆ ಸಾಕಾಯಿತು. ಡಿನ್ನರ್ ಯಾವಾಗ ಮಾಮ್! ನನಗೆ ಹೊಟ್ಟೆ ತಾಳ ಹಾಕ್ತಿದೆ!" ಎಂದ. "ಸ್ಪೆಗೆಟಿ ರೆಡಿಯಾಗಿದೆ. ಈ ಬೀನ್ಸ್ ಆವಿಯಲ್ಲಿ ಬೇಯಿಸಿದರೆ ಆಯಿತು. ನೀನು ಮುಖ ತೊಳೆದು ಬಾ. ಜಿಮ್ ನೀನೂ ಅಷ್ಟೆ. ಇವತ್ತು ಸಿಹಿಗೆ ಬ್ಲೂಬೆರೀ ಕಾಬ್ಲರ್" ಎಂದು ಸ್ಟೆಲ್ಲಾ ಮೇಲೆದ್ದಳು. ಸಿಹಿಯ ಹೆಸರು ಕೇಳಿ ರಯಾನ್ ಮುಖ ಅರಳಿತು. "ಕಿಮ್! ಇವತ್ತು ಬ್ಲೂಬೆರಿ ಕಾಬ್ಲರ್! ನಿನಗೆ ತುಂಬಾ ಇಷ್ಟ ಅಲ್ಲವಾ!" ಎಂದು ರಯಾನ್ ಹಿರಿಯ ಅಕ್ಕನನ್ನು ಕೂಗಿದ. ಅವಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಂದಾಗ ಮಗು...