ನನ್ನ ಪ್ರೀತಿಯ ದೇಶವೇ
ಸಿ. ಪಿ. ರವಿಕುಮಾರ್ ಮನ್ನಾ ಡೇ ಹಾಡಿರುವ ಹಾಡುಗಳಲ್ಲಿ ಕಾಬುಲಿವಾಲಾ ಚಿತ್ರದ "ಐ ಮೇರೆ ಪ್ಯಾರೇ ವತನ್" ಬಹಳ ಜನಪ್ರಿಯವಾಗಿದೆ. ಕಾಬುಲಿವಾಲಾ ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಕೂರರು ಬರೆದ ಪ್ರಸಿದ್ಧ ಕಥೆ. ಅದನ್ನು ಆಧರಿಸಿ ಬಿಮಲ್ ರಾಯ್ ನಿರ್ದೇಶಿಸಿದ ಹಿಂದಿ ಚಿತ್ರದಲ್ಲಿ ಬಲರಾಜ್ ಸಾಹನಿ ಕಾಬುಲಿವಾಲನ ಪಾತ್ರ ವಹಿಸಿದ್ದರು. ಕಾಬುಲಿವಾಲಾ ಒಂದು ಹೃದಯಸ್ಪರ್ಶಿ ಕಥೆ. ಒಬ್ಬ ಕಥಾ ಲೇಖಕನ ಐದು ವರ್ಷದ ಪುಟ್ಟ ಮಗಳು ಮಿನ್ನಿ ಮತ್ತು ಕಾಬುಲ್ ನಗರದಿಂದ ಒಣ ಹಣ್ಣು ವ್ಯಾಪಾರ ಮಾಡಲು ಬಂದಿದ್ದ ಒಬ್ಬ ಕಾಬುಲಿವಾಲಾನ ನಡುವೆ ಒಂದು ಅಪೂರ್ವವಾದ ಪ್ರೇಮಸಂಬಂಧ ಬೆಳೆಯುತ್ತದೆ. ಅವನ ದೈತ್ಯಾಕಾರವನ್ನು ಕಂಡು ಮೊದಲು ಮಿನ್ನಿ ಹೆದರಿಕೊಂಡರೂ ಕ್ರಮೇಣ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಅವಳಿಗೆ ಅವನು ಕಥೆ ಹೇಳುತ್ತಾನೆ, ಸವಾರಿ ಮಾಡಿಸುತ್ತಾನೆ, ದ್ರಾಕ್ಷಿ ಹಣ್ಣು ಕೊಟ್ಟು ಒಲಿಸಿಕೊಳ್ಳುತ್ತಾನೆ. ಅವನ ದೊಡ್ಡ ಮೂಟೆಯಲ್ಲಿ ಏನಿದೆ ಎಂದು ಮಿನ್ನಿಗೆ ಕುತೂಹಲ. ಮಕ್ಕಳನ್ನು ಅವನು ಕೊಂಡೊಯ್ಯುತ್ತಾನೆ ಎಂದು ಅವಳ ತಾಯಿ ಹೆದರಿಸಿದ್ದಾಳೆ. ಕಾಬುಲಿವಾಲಾ ತನ್ನ ಮೂಟೆಯಲ್ಲಿ ಅದಿದೆ, ಇದಿದೆ ಎಂದು ಕತೆ ಕಟ್ಟಿ ನಗಿಸುತ್ತಾನೆ. ಅವನಿಗೆ ತನ್ನ ದೇಶದಲ್ಲಿ ಇದೇ ವಯಸ್ಸಿನ ಮಗಳಿದ್ದಾಳೆ. ತನ್ನ ಮಗಳನ್ನೇ ಅವನು ಮಿನ್ನಿಯಲ್ಲಿ ಕಾಣುತ್ತಾನೆ. ಕಾಬುಲಿವಾಲಾ ತುಂಬಾ ಸರಳ ಸ್ವಭಾವದವನು. ಒಮ್ಮೆ ಯಾರೋ ಅವನ ಬಳಿ ಹಣವನ್ನು ಕೇಳಿ ಪಡೆದು ಮೋಸ ಮಾಡಿ