ಹೇ ಮಾ! ಮಾಲಿನೀ

ಹೇ ಮಾ! ಮಾಲಿನೀ (ಹರಟೆ)

ಸಿ.ಪಿ. ರವಿಕುಮಾರ್ 

(ಈ ಹರಟೆ "ಪ್ರಜಾವಾಣಿ" ಸಾಪ್ತಾಹಿಕ ಪುರವಣಿ, ಅಕ್ಟೋಬರ್ ೨೦, ೨೦೧೩ ರಲ್ಲಿ ಪ್ರಕಟವಾಗಿದೆ. ಹರಟೆಯ ಪೂರ್ಣಪಾಠವನ್ನು ಕೆಳಗೆ ಓದಿ. )
ನಾನು  ಪಿಯೂಸಿ ಎರಡನೇ ವರ್ಷ ಓದುತ್ತಿದ್ದಾಗ ನಮಗೆ ರಬೀಂದ್ರನಾಥ ಟ್ಯಾಗೋರ್ ಬರೆದ "ನೌಕಾಘಾತ" ಎಂಬ ಕಾದಂಬರಿಯ ಇಂಗ್ಲಿಷ್ ಭಾಷಾಂತರವನ್ನು ಪಠ್ಯವಾಗಿ ಓದುವ ಅವಕಾಶ ಒದಗಿತ್ತು.  ಅದೊಂದು ರೊಮ್ಯಾಂಟಿಕ್ ಕಥೆ. ಇಂದಿನ ಸೀರಿಯಲ್  ನಿರ್ಮಾಪಕರ ಕಣ್ಣಿಗೆ ಯಾಕೋ ಈ ಕಥೆ ಬಿದ್ದಿಲ್ಲ.  ಈ ಕಾದಂಬರಿಯಲ್ಲಿ ಬರುವ ಒಂದು ಪಾತ್ರದ ಹೆಸರು ಹೇಮನಳಿನಿ. ಅದನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಾಗ ಗಮನವಿಟ್ಟು ಓದದೇ ಹೋದರೆ ಯಾರಾದರೂ "ಹೇಮಮಾಲಿನಿ" ಎಂದು ಓದುವುದು ಸ್ವಾಭಾವಿಕ. ಅದರಲ್ಲೂ ಆಗ ಹೇಮಮಾಲಿನಿ ಬಾಲಿವುಡ್ ನಲ್ಲಿ ತಮ್ಮ ಅಭಿನೇತ್ರಿ  ವೃತ್ತಿಜೀವನದ ಶಿಖರದಲ್ಲಿದ್ದರು. ಬೇರೊಂದು ಸೆಕ್ಷನ್ ನಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ಅಧ್ಯಾಪಕರು ಸುಮಾರು ಅರ್ಧ ವರ್ಷ "ಹೇಮಮಾಲಿನಿ" ಎಂದೇ ಓದುತ್ತಾ ಪಾಠ ಮಾಡಿದರು. ಒಂದು ದಿನ ಒಬ್ಬ ವಿದ್ಯಾರ್ಥಿ ಅವರಿಗೆ ತಪ್ಪನ್ನು ತೋರಿಸಿಕೊಟ್ಟಾಗ ಐವತ್ತರ ಹರೆಯದ ಅಧ್ಯಾಪಕರು ಕೂಡಾ ನಾಚಿದರು!
ಹೇಮಮಾಲಿನಿ ಅವರ ಹೆಸರನ್ನು ಉತ್ತರ ಭಾರತೀಯರು "ಹೇಮಾ ಮಾಲಿನಿ" ಎಂದು ಸ್ವಲ್ಪ ತಿರುಚಿದ್ದಾರೆ. ಅದನ್ನು ಕೇಳಿದಾಗ "ಹೇ ಮಾ! ಮಾಲಿನಿ!" ಅಥವಾ "ತಾಯೇ ಮಾಲಿನೀ" ಎಂದಂತೆ ಭಾಸವಾಗುತ್ತದೆ.  ತಾಯಿಯ ಪಾತ್ರಗಳಿಗೆ ಸಾಗಿರುವ ಅಭಿನೇತ್ರಿಗೆ ಈಗ ಯಾರಾದರೂ ತಮ್ಮನ್ನು "ಹೇ ಮಾ!" ಎಂದು ಕರೆದರೆ ಬೇಸರವಾಗುವುದಿಲ್ಲ ಎಂದು ನನ್ನ ಭಾವನೆ. ಇಷ್ಟೆಲ್ಲಾ ಪೀಠಿಕೆಯನ್ನು ನಾನು ಯಾಕೆ ಹಾಕಿದೆ ಗೊತ್ತೇ? ಸರಿ, ಕೇಳಿ.
ಇತ್ತೀಚೆಗೆ ನಾನು ನನ್ನ ಕುಟುಂಬದವರೊಂದಿಗೆ ಒಂದು ಮಾಲ್ ಗೆ ಹೋಗಬೇಕಾದ ಪ್ರಸಂಗ ಒದಗಿತು. ಮಾಲ್ ಎಂದರೆ ನನಗೆ ಅಷ್ಟಕ್ಕಷ್ಟೆ.  ಸ್ವಲ್ಪ ಹಳೆಯ ಹಿಂದಿ ಚಿತ್ರಗಳಲ್ಲಿ ಸ್ಮಗ್ಲರ್ ದೊರೆ "ಮಾಲ್ ಆಪ್ ಕೇ ಪಾಸ್ ಪಹುಂಚ್ ಜಾಯೇಗಾ" ಎಂದು ಗಂಭೀರವಾಗಿ ಡೈಲಾಗ್ ಹೇಳುತ್ತಿದ್ದದ್ದು ನಿಮಗೆ ನೆನಪಿದೆಯೇ? "ಮಾಲು ನಿನ್ನನ್ನು ಬಂದು ಸೇರುತ್ತದೆ" ಎಂಬುದು ಈ ಡೈಲಾಗ್ ನ ಅರ್ಥ. ಈ ವಾಕ್ಯವು ಕೆಲವೇ ದಶಕಗಳಲ್ಲಿ ನಿಜವಾಗಿ ಪರಿಣಮಿಸುವ ಭವಿಷ್ಯವಾಣಿಯಾಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ! ಮಾಲ್ ಈಗ ನಮ್ಮ ಮನೆಗಳ ಹತ್ತಿರವೇ ಬಂದುಮುಟ್ಟಿದೆ.  ಜೋಬಿನಲ್ಲಿ ಮಾಲ್ ಇದ್ದರೆ ಸಾಕು. ಹತ್ತಾರು ಮಾಲ್ ನಿಮ್ಮನ್ನು ಕೈ ಬೀಸಿ ಕರೆಯುತ್ತವೆ.  ಮಾಲ್ ನಲ್ಲಿ  ನಾನು ಒಂದು ಸಂಭಾಷಣೆ ಕೇಳಿದೆ.  ಒಬ್ಬ ತರುಣ ತನ್ನ ಸ್ನೇಹಿತೆಯ ಜೊತೆ ಹರಟುತ್ತಿದ್ದ.
"ನಾಳೆ ಫೋರಮ್ ಮಾಲ್ ಗೆ ಹೋಗೋಣವಾ?"
"ಇಲ್ಲ. ನಾಳೆ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕು."
"ಸರಿ, ಮೀನಾಕ್ಷಿ ದೇವಸ್ಥಾನಕ್ಕೆ ಹೋಗಲಿ, ನೀನು ಮಾಲ್ ಗೆ ಬಾ."
"ಏ! ದೇವರ ಜೊತೆ ಹಾಗೆಲ್ಲ ಹುಡುಗಾಟ ಮಾಡಬಾರದು!"
"ಸರಿ, ಎಲ್ಲಿದೆ ಮೀನಾಕ್ಷಿ ದೇವಸ್ಥಾನ?"
"ಬನ್ನೇರುಘಟ್ಟ ರಸ್ತೆ ಮೇಲೆ ಅರಕೆರೆ ದಾಟಿ ಹೋಗಬೇಕು. ಅಪೋಲೋ ಆಸ್ಪತ್ರೆ ಗೊತ್ತಾ?"
"ಅದೇ ಮೀನಾಕ್ಷಿ ಮಾಲ್ ಇದೆಯಲ್ಲ?"
"ಹೌದು ಹೌದು! ಮೀನಾಕ್ಷಿ ಮಾಲ್ ನೋಡಿದೀಯಾ ಅದರ ಎದುರಿಗೇ ಇರೋದು ಮೀನಾಕ್ಷಿ ದೇವಸ್ಥಾನ!"
"ಪರವಾಗಿಲ್ಲ, ಒಳ್ಳೇ ಜಾಗದಲ್ಲೇ ದೇವಸ್ಥಾನ ಕಟ್ಟಿಸಿದ್ದಾರೆ. ಮಾಲ್ ಗೆ ಬರೋರೆಲ್ಲಾ ದೇವಸ್ಥಾನಕ್ಕೂ ಬರ್ತಾರೆ. ಹೇಗಿದ್ದರೂ ನೀನು ಅಷ್ಟು ಹತ್ತಿರ ಹೋಗ್ತಿದೀಯ. ನಾವು ಯಾಕೆ ಮೀನಾಕ್ಷಿಮಾಲ್ ಗೇ  ಹೋಗಬಾರದು?"
ಹೀಗೆ ನಮ್ಮ ಬೆಂಗಳೂರು ಬದಲಾಗುತ್ತಿದೆ.  ಸೆಂಟ್ರಲ್ ಮಾಲ್ ಹತ್ತಿರವೇ ರಾಗಿಗುಡ್ಡದ ಆಂಜನೇಯ ಸ್ವಾಮಿಗೆ  ದೇವಸ್ಥಾನ ಕಟ್ಟಿಸಿದ್ದಾರೆ.  ಗೋಪಾಲನ್ ಮಾಲ್ ಹತ್ತಿರ ರಾಜರಾಜೇಶ್ವರಿ ದೇವಸ್ಥಾನ ಕಟ್ಟಿಸಿದ್ದಾರೆ. ಮಂತ್ರಿ ಸ್ಕ್ವೇರ್ ಹತ್ತಿರ ಕಾಡು ಮಲ್ಲೇಶ್ವರನ ಗುಡಿ ಕಟ್ಟಿಸಿದ್ದಾರೆ. ಮಂತ್ರಿ ಸ್ಕ್ವೇರ್ ಜೊತೆಗೆ ಸ್ಪರ್ಧಿಸಲು ಈಗ ಒರಾಯನ್ ಮಾಲ್ ಕೂಡಾ ಬಂದಿರುವುದರಿಂದ  ಈ ಪ್ರದೇಶಕ್ಕೆ "ಮಾಲೇಶ್ವರಂ" ಎಂಬ ಹೆಸರು ಕೂಡಾ ಬಂದಿದೆ.
ಈ ಸಂಭಾಷಣೆ ಕೇಳುತ್ತಾ ನನಗೊಂದು ಐಡಿಯಾ ಹೊಳೆಯಿತು.  ದೇವಸ್ಥಾನಗಳು ಮಾಲ್ ಗಳ  ಹತ್ತಿರ ಬರುತ್ತಿವೆಯಾದರೆ  ನಾವೇಕೆ ಮಾಲ್ ಒಳಗೇ ದೇವಸ್ಥಾನ ಕಟ್ಟಿಸಿಬಿಡಬಾರದು! ಹಾಗೇ ಕಣ್ಮುಚ್ಚಿ ಕಲ್ಪಿಸಿಕೊಳ್ಳಿ.  ನೀವು ಮಾಲ್ ನಲ್ಲಿರುವ  ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಲೆಂದು  ಆನ್ ಲೈನ್ ನಿಮ್ಮ  ಟಿಕೆಟ್ ಕಾದಿರಿಸಲು  ವೆಬ್ ತಾಣಕ್ಕೆ ಹೋಗಿದ್ದೀರಿ. ಅಲ್ಲೇ ನಿಮಗೆ ಒಂದು ಮೆನು ಎದುರಾಗುತ್ತದೆ.  "ಮಾಲ್ ದಿವ್ಯ ದರ್ಶನಮ್." ಅಲ್ಲಿ ನಾನಾ ಬಗೆಯ ಆಫರ್ ಗಳಿವೆ.  ಅರ್ಚನೆ, ಅಲಂಕಾರ, ಪಂಚಾಮೃತ, ತೋ-ಮಾಲ್ ಸೇವೆ, ಇತ್ಯಾದಿ.  ತೋಮಾಲ್ ಸೇವೆ ಸೆಲೆಕ್ಟ್ ಮಾಡಿದರೆ ಅರ್ಚನೆ ಫ್ರೀ.  ನೀವು ನಿಮಗೆ ಬೇಕಾದ ಸೇವೆಯನ್ನು ಸೆಲೆಕ್ಟ್ ಮಾಡಿ ಹಣ ಸಂದಾಯ ಮಾಡಿದರೆ ಸಿನಿಮಾ ಟಿಕೆಟ್ ಜೊತೆಗೇ ಸೇವಾವಿವರಗಳುಳ್ಳ ಚೀಟಿಯೂ ನಿಮಗೆ ಲಬ್ಧ!
ಮಾಲ್ ಒಳ ಹೊಕ್ಕಾಗ ಅಲ್ಲಿ ಪರ್ಫ್ಯೂಮ್ ಸುಗಂಧದೊಂದಿಗೆ ಊದುಬತ್ತಿಯ ಪರಿಮಳವೂ ಬರುತ್ತಿದೆ! ಅಲ್ಲಿರುವ ದೇವಸ್ಥಾನವೂ ಪುಟ್ಟದಾಗಿ ಎ.ಟಿ.ಎಂ. ಯಂತ್ರದ ಆಕಾರದಲ್ಲಿದೆ. (ಸ್ಥಳ ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಯ್ಯಾ?) ಅಲ್ಲೊಬ್ಬ ಸಮವಸ್ತ್ರಧಾರಿ ನಿಮಗೆ ತ್ರೀಡಿ ಚಿತ್ರ ನೋಡಲು ಉಪಯೋಗಿಸುವ ಕನ್ನಡಕವನ್ನು ಕೊಡುತ್ತಾನೆ. (ಇದಕ್ಕೆ ನಾನು ತ್ರೀ-ಲೋಚನ ಎಂಬ ಹೆಸರನ್ನು ಹುಡುಕಿದ್ದೇನೆ.) ಇನ್ನೊಬ್ಬನು ನಿಮಗೆ ಕಿವಿಗೆ ಹಾಕಿಕೊಂಡು ಕೇಳಲು ಒಂದು ಹೆಡ್ ಸೆಟ್ಟನ್ನೂ ಕೊಡುತ್ತಾನೆ.  ನೀವು ಪಡೆದ ಚೀಟಿಯನ್ನು ಯಂತ್ರದಲ್ಲಿ  ಸ್ಕ್ಯಾನ್ ಮಾಡಿ.  ಹೆಡ್ಸೆಟ್ ಹಾಕಿಕೊಂದು ಅದರ ಇನ್ನೊಂದು ತುದಿಯನ್ನು ಯಂತ್ರಕ್ಕೆ ಸಿಕ್ಕಿಸಿ. ಕಣ್ಣಿಗೆ ನಿಮ್ಮ ತ್ರಿಲೋಚನವನ್ನು ಹಾಕಿಕೊಂಡು ನೋಡಿ. ಮಾಲ್ ದಿವ್ಯ ದರ್ಶನವು ತ್ರೀಡೀ ವೈಭವದಲ್ಲಿ ಎದುರಾಗುತ್ತದೆ. ಕಿವಿಯಲ್ಲಿ ಮಂತ್ರಘೋಷ ಕೇಳುತ್ತದೆ.  ನಿಮ್ಮ ಗೋತ್ರಾದಿ ವಿವರಗಳನ್ನು ನಿಮ್ಮ ಮೊಬೈಲ್ ನಂಬರಿನಿಂದಲೇ ಪಡೆದುಕೊಂಡ ಸ್ಮಾರ್ಟ್ ದೇವಸ್ಥಾನ ಅರ್ಚನಾ ಮಂತ್ರಗಳನ್ನು ನಿಮಗಾಗಿ ಕಸ್ಟಮೈಸ್ ಮಾಡಿದೆ. ಅನಿಮೇಶ ನಯನನಾ(ಳಾ)ದ ದೇವತೆಗೆ ಅನಿಮೇಷನ್ ಪೂಜೆ ನಡೆಯುತ್ತದೆ - ಹೂವು, ಕುಂಕುಮ, ಆರತಿ, ಎಲ್ಲವೂ ಇಲ್ಲಿ "ಈ" ಆಗಿದೆ. ಅದಕ್ಕಲ್ಲವೇ ದೇವರಿಗೆ ಈ-ಶ್ವರ ಅನ್ನುವುದು!  ಅರ್ಚನೆ ಮುಗಿದಾಗ ಎ.ಟಿ.ಎಂ. ಯಂತ್ರದ ಮೂಲಕ  ದಕ್ಷಿಣೆಯನ್ನು ಸಲ್ಲಿಸಬಹುದು. ಸಲ್ಲಿಸಿದ ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಆಶೀರ್ವಾದವೂ ಪ್ರಾಪ್ತವಾಗುತ್ತದೆ.  ರಸೀತಿಯ ಸ್ವರೂಪದಲ್ಲಿ  ನಿಮಗೆ ಪ್ರಸಾದದ ಚೀಟಿ ಸಿಕ್ಕುತ್ತದೆ. ಅದನ್ನು ತೋರಿಸಿದರೆ ಮಾಲ್ ನಲ್ಲಿ ಇರುವ ಯಾವುದೇ ಖಾದ್ಯಾಗಾರದಲ್ಲಾದರೂ ನಿಮಗೆ ಇಷ್ಟವಾದ ಪ್ರಸಾದವನ್ನು ನೀವು ಪಡೆಯಬಹುದು!
ಇಂಥ  ಮಾಲ್ ದೇವಸ್ಥಾನಗಳಿಗೆ "ಮಾಲ್ ಗುಡಿ" ಎಂಬ ಹೆಸರನ್ನು ಆರ್.ಕೆ. ನಾರಾಯಣ್ ಬಹಳ ಹಿಂದೆಯೇ ಯೋಚಿಸಿದ್ದರು. ಅವರ ದೂರದರ್ಶನಕ್ಕೆ ನಮ್ಮ ನಮನ. ಅವರಿಗೆ ನಾನೂ ಏನೂ  ಕಡಿಮೆಯಲ್ಲ. ಮಾಲ್ ಗುಡಿಯ ದೇವತೆಗಳಿಗೆ ನಾನು ಒಂದೆರಡು ಹೆಸರುಗಳನ್ನು ಯೋಚಿಸಿದ್ದೇನೆ. ಹೇಗೆ ದರ್ಶಿನಿ ಎಂಬುದನ್ನು ಹೆಸರುಗಳಿಗೆ ಸೇರಿಸಿ   ಹೋಟೆಲ್ ಗಳಿಗೆ ನಾಮಕರಣ ಮಾಡುತ್ತಾರೋ ಹಾಗೇ "ಮಾಲಿನಿ" ಎಂಬ ಪದವನ್ನು ಸೇರಿಸಿ ಮಾಲ್ಗುಡಿಗಳಿಗೆ ಹೆಸರುಗಳನ್ನು ಸೃಷ್ಟಿಸಬಹುದು ಎಂದು ಕಂಡು ಹಿಡಿದಿದ್ದೇನೆ. ಉದಾ. ಉಮಾ ಮಾಲಿನಿ, ಹೇಮ ಮಾಲಿನಿ, ಇತ್ಯಾದಿ. ಹಾಗೇ ಮಾಲಾಂಜನೇಯ ಸ್ವಾಮಿ, ವನಮಾಲಿ ಮೊದಲಾದ ಹೆಸರುಗಳನ್ನು ಗಂಡು ದೇವತೆಗಳ ಸ್ಥಾನಗಳಿಗೆ ಇಡಬಹುದು.
ಇಂಥ "ಮಾಲ್-ಗುಡಿ"ಯ ಉಪಯುಕ್ತತೆಗಳನ್ನು ನಾನು ಬೇರೆ ಹೇಳಬೇಕೆ? ಆದರೂ ಹೇಳುತ್ತೇನೆ, ಕೇಳಿ.
೧.  ನಿಮ್ಮ ಮಕ್ಕಳು ಮಾಲ್ ಗೆ ಹೋದಾಗ ಅವರು ನಮ್ಮ  ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ ಎಂಬ ಚಿಂತೆ ಇನ್ನು ನಿಮ್ಮನ್ನು ಕಾಡುವುದಿಲ್ಲ.
೨. ದೇವಸ್ಥಾನಕ್ಕೆ ಬೇಕಾದ ವಿಶಾಲ ಸ್ಥಳವನ್ನು ಈಗ ಮಾಲ್ ನಲ್ಲಿ ಬೇರೆ ಅಂಗಡಿಗಳಿಗಾಗಿ ವ್ಯಯಿಸಬಹುದು.
೩. ಎ.ಟಿ.ಎಂ. ಯಂತ್ರದಲ್ಲಿ ಈ ಮಾಲ್ಗುಡಿಯನ್ನು ಅಡಕಗೊಳಿಸಿದರೆ ಯಂತ್ರವನ್ನು ಸಾರಾ ಸಗಟಾಗಿ ಎತ್ತಿಕೊಂಡು ಹೋಗಿಬಿಡುವ ಕಳ್ಳಕಾಕರಿಗೂ ಭಯ ಹುಟ್ಟಬಹುದು.
೪. ಮಾಲ್ ದೇವಸ್ಥಾನಗಳಿಗೆ ಧರ್ಮ, ಜಾತಿ, ಮತಗಳ ಗೋಡೆಗಳಿಲ್ಲ.
ಯೋಚಿಸಿದರೆ ನಿಮಗೆ ಇನ್ನಷ್ಟು ಉಪಯುಕ್ತತೆಗಳು ಹೊಳೆಯುತ್ತವೆ, ಇದಕ್ಕೆ ಸಂಶಯವಿಲ್ಲ.
ಕ-ಮಾಲ್ ಕಾ ಐಡಿಯಾ, ಅಲ್ಲವೇ ಸರ್ ಜೀ!
(ವಿ.ಸೂ: ಈ ಎಲ್ಲಾ ಐಡಿಯಾಗಳನ್ನೂ ನಾನು ಕಾಪಿರೈಟ್ ಮತ್ತು ಪೇಟೆಂಟ್ ಗಳ ಮೂಲಕ ಸುರಕ್ಷಿತಗೊಳಿಸಿದ್ದೇನೆ. ಹೇ ಮಾ ಮಾಲಿನೀ ಪಾಹಿಮಾಮ್.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)