ಕೊಟ್ಟ ಭಾಷೆ, ಪ್ರೀತಿ, ಪ್ರೇಮ
ಮನ್ನಾ ಡೇ ಅವರ ಗೀತೆಗಳನ್ನು ಕೇಳುತ್ತಾ ಬೆಳೆದವನು ನಾನು. ಅವರ ಭಾವಪೂರ್ಣ ಗಾಯನ ಮತ್ತು ಅರ್ಥಪೂರ್ಣ ಗೀತೆಗಳು ಯಾರ ಹೃದಯವನ್ನಾದರೂ ಕಲಕುತ್ತವೆ. ಅವರು ನಿಧನರಾದರೆಂಬ ಸುದ್ದಿ ಬಂದಿದೆ; ಆದರೆ ಅಂಥವರಿಗೆ ಸಾವಿಲ್ಲ. ಅವರು ಹಾಡಿರುವ ಒಂದು ಗೀತೆಯ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.
ಚಲನಚಿತ್ರ: ಉಪಕಾರ್
ಗೀತೆ: ಕಸ್ಮೇ ವಾದೇ ಪ್ಯಾರ್ ವಫಾ
ಕವಿ: ಇಂದೀವರ್
ಗಾಯಕ: ಮನ್ನಾ ಡೇ
ಅನುವಾದ: ಸಿ.ಪಿ. ರವಿಕುಮಾರ್
ಕೊಟ್ಟ ಭಾಷೆ, ಪ್ರೀತಿ, ಪ್ರೇಮ
ಮಾತುಗಳು, ಮಾತಿಗೆ ಬೆಲೆಯೇ?
ಯಾರಿಗೆ ಯಾರೂ ಆಗರು ನೆರವು
ನಂಟುಗಳು, ನಂಟಿಗೆ ಬೆಲೆಯೇ?
ದೇವನ ದೂತ ಎದುರಿಗೆ ಬಂದರೂ
ಸಾವಿನಿಂದ ಸಿಗುವುದೇ ಮುಕ್ತಿ?
ನಿನ್ನ ಹೊಟ್ಟೆಯಲಿ ಹುಟ್ಟಿದ ಮಗನೇ
ಸುಡಲು ಕೊಡುವುದಿಲ್ಲವೆ ಬೆಂಕಿ?
ಮುಗಿಲಿನಲ್ಲಿ ತೇಲಾಡುವ ನೀನು
ಮಣ್ಣನು ಸೇರುವೆ ಮಣ್ಣಾಗಿ
ಸುಖದಲಿ ಎಲ್ಲಾ ಹಿಂಬಾಲಿಸುವರು
ದುಃಖದಲ್ಲಿ ಬೇರಾಗುವರು
ನಿನ್ನವರೇ ಬೆನ್ನೊಳಗಿರಿಯುವರು
ನಿನ್ನೆದೆ ವಿಛಿದ್ರಗೊಳಿಸುವರು
ದೇವರಿಗೇ ದ್ರೋಹವ ಮಾಡುವರು
ಮನುಜರನ್ನು ಗಣಿಸುವರೇನು?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ