ಪತ್ರಿಕೋದ್ಯಮವನ್ನು ಕುರಿತು ಗಾಂಧಿ



ಅನುವಾದ: ಸಿ.ಪಿ. ರವಿಕುಮಾರ್

ಗಾಂಧಿ ಪ್ರೆಸ್ ಬಗ್ಗೆ ಹೀಗೆ ಬರೆಯುತ್ತಾರೆ:
(೧)

ಸೇವೆಯೇ ಪತ್ರಿಕೋದ್ಯಮದ ಏಕಮಾತ್ರ ಗುರಿಯಾಗಿರಬೇಕು ಎಂಬುದು ನನ್ನ ಭಾವನೆ. ಪತ್ರಿಕೆಗಳು ಒಂದು ಮಹಾನ್ ಶಕ್ತಿಯೇನೋ ನಿಜ, ಆದರೆ ನಿಗ್ರಹವಿಲ್ಲದ ನೀರಿನ ತೊರೆಯು ಹೇಗೆ  ಇಡೀ ಹಳ್ಳಿಗಳನ್ನು ಮುಳುಗಿಸಿ ಬೆಳೆಯನ್ನು ನಾಶ ಮಾಡುತ್ತದೋ, ನಿಗ್ರಹವಿಲ್ಲದ ಲೇಖನಿಯೂ ನಾಶಕ್ಕೆ ಕಾರಣವಾಗುತ್ತದೆ. ಆದರೆ ಬರವಣಿಗೆಗೆ ನಿಗ್ರಹವು ಹೊರಗಡೆಯಿಂದ ಬಂದರೆ ಅದು ನಿಗ್ರಹವಿಲ್ಲದೇ ಇರುವ ಬರವಣಿಗೆಗಿಂಗಲೂ ಹೆಚ್ಚು ವಿಷಮಯವಾಗಬಲ್ಲದು. ಬರವಣಿಗೆಗೆ ಸ್ವಯಂನಿಗ್ರಹವಿದ್ದಾಗ ಮಾತ್ರ ಅದು ಪ್ರಯೋಜನಕಾರಿ. ನನ್ನ ಈ ವಿಚಾರಧಾರೆ ಸರಿಯಾಗಿದ್ದರೆ ಜಗತ್ತಿನ ಎಷ್ಟು ನಿಯತಕಾಲಿಕೆಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತವೆಯೋ? ನಿಷ್ಪ್ರಯೋಜಕವಾದ ಪತ್ರಿಕೆಗಳನ್ನು ತಡೆಯುವವರು ಯಾರು? ಯಾವುದು ನಿಷ್ಪ್ರಯೋಜಕ ಎಂಬುದನ್ನು ನಿರ್ಧರಿಸುವುದು ಯಾರು? ಜಗತ್ತಿನಲ್ಲಿ ಹೇಗೆ ಒಳ್ಳೆಯದೂ ಮತ್ತು ಕೆಟ್ಟದ್ದೂ ಒಟ್ಟಿಗೆ ಬಾಳುತ್ತವೆಯೋ ಹಾಗೇ ಪ್ರಯೋಜನವುಳ್ಳದ್ದೂ ಮತ್ತು ನಿಷ್ಪ್ರಯೋಜಕವಾದದ್ದೂ ಜೊತೆಜೊತೆಗೇ ಬಾಳಬೇಕಾಗುತ್ತದೆ; ಯಾವುದನ್ನು ಸ್ವೀಕರಿಸಬೇಕು ಎಂಬುದು  ಮನುಷ್ಯನಿಗೆ  ಬಿಟ್ಟದ್ದು.
(ಆತ್ಮ ಚರಿತ್ರೆ) 

(೨)

ಬರಿಯ ತೋರಿಕೆ,  ಏಕಪಕ್ಷೀಯತೆ, ಅನಿಖರತೆ, ಮತ್ತು ಸ್ವಲ್ಪ ಮಟ್ಟಿಗೆ ಅಪ್ರಾಮಾಣಿಕತೆ, ಇವೆಲ್ಲಾ ಆಧುನಿಕ ಪತ್ರಿಕೋದ್ಯಮದಲ್ಲಿ ನುಸುಳಿವೆ. ಯಾರಿಗೆ ನ್ಯಾಯದ ಹೊರತು ಇನ್ನೇನೂ ಬೇಡವೋ ಅಂಥವರನ್ನು ಈ ಬಗೆಯ ಪತ್ರಿಕೋದ್ಯಮ ತಪ್ಪು ಹಾದಿಗೆ ಎಳೆಯುತ್ತದೆ.
ಯಂಗ್ ಇಂಡಿಯಾ, ೧೨-೫-೨೦ 

(೩)

ನನ್ನ ಮುಂದೆ ಭಯಾನಕವಾದ ವಿಷಯಗಳಿಂದ ಕೂಡಿದ ಕೆಲವು ಪತ್ರಿಕೆಗಳ ತುಣುಕುಗಳಿವೆ.  ಕೆಲವು ಧರ್ಮದ ಹೆಸರಿನಲ್ಲಿ ಬರೆದ ಪ್ರಚೋದಕ ಬರಹಗಳು. ಕೆಲವು ರಾಜಕೀಯ ಬೆಳವಣಿಗೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಕೊಲೆಯಂಥ  ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸುವ ಬರವಣಿಗೆಗಳು. ಸರಕಾರವು ಇಂಥ ಪತ್ರಿಕೆಗಳ ವಿರುದ್ಧ ಏನಾದರೂ ಕಾನೂನು  ಕಾಯಿದೆ ತರಬಹುದು, ಅದೇನೂ ದೊಡ್ಡ ವಿಷಯವಲ್ಲ. ಆದರೆ ಇಂಥ ಕ್ರಮಗಳಿಂದ ಏನು ಪ್ರಯೋಜನ? ಸ್ವಲ್ಪ ದಿವಸದ ಮಟ್ಟಿಗೆ ಅವು ಫಲಕಾರಿ ಎನ್ನಿಸಬಹುದು. ಆದರೆ ಲೇಖಕರನ್ನು ಮೂಲಭೂತವಾಗಿ ಬದಲಾಯಿಸದೆ ಇದ್ದರೆ ಅವರು ತಮ್ಮ ಮೇಲೆ ಹೇರಲಾದ ನಿಗ್ರಹದಿಂದ ಹೇಗೋ ನುಣುಚಿಕೊಂಡು ರಹಸ್ಯವಾಗಿ ಬರೆಯಲು ತೊಡಗುತ್ತಾರೆ, ಅಷ್ಟೆ.

ಇದಕ್ಕೆ ನಿಜವಾದ ಔಷಧವೆಂದರೆ ಸಾರ್ವಜನಿಕರು ಆರೋಗ್ಯಪೂರ್ಣ ದೃಷ್ಟಿಕೋನವಿಟ್ಟುಕೊಂಡು ಇಂಥ ವಿಷಕಾರೀ ಪತ್ರಿಕೆಗಳನ್ನು ಪ್ರೋತ್ಸಾಹಿಸದಿರುವುದೇ.  ನಮ್ಮಲ್ಲಿ ಪತ್ರಿಕೋದ್ಯಮಿಗಳ ಸಂಘವಿದೆಯಲ್ಲ, ಅವರೇಕೆ ಒಂದು ವಿಭಾಗವನ್ನು ಸ್ಥಾಪಿಸಬಾರದು? ಈ ವಿಭಾಗದ ಕೆಲಸವೆಂದರೆ ಎಲ್ಲಾ ಪತ್ರಿಕೆಗಳನ್ನೂ ಓದಿ ಆಕ್ಷೇಪಣಾರ್ಹ ಬರವಣಿಗೆಗಳನ್ನು ಆಯಾ ಸಂಪಾದಕರ ಅವಗಾಹನೆಗೆ ತರುವುದು. ತೋರಿಸಿಕೊಟ್ಟ ತಪ್ಪುಗಳನ್ನು ತಿದ್ದಿಕೊಳ್ಳದೆ ಮುಂದುವರೆದರೆ ಸಾರ್ವಜನಿಕವಾಗಿ ಈ ಬರವಣಿಗೆಗಳನ್ನು ಖಂಡಿಸುವ ಕೆಲಸವನ್ನೂ ಈ ವಿಭಾಗ ಮಾಡಬೇಕಾಗುತ್ತದೆ.  ಪತ್ರಿಕೋದ್ಯಮದ ಸ್ವಾತಂತ್ರ್ಯವು ಅತ್ಯಮೂಲ್ಯವಾದ ಕೊಡುಗೆ; ಅದಿಲ್ಲದೆ ಯಾವ ದೇಶವೂ ಇರಕೂಡದು. ಆದರೆ ನ್ಯಾಯ-ಕಾಯಿದೆಗಳ ಮೂಲಕ ಹೆಚ್ಚೇನೂ ನಿಗ್ರಹವನ್ನು ಪತ್ರಿಕೋದ್ಯಮದ ಮೇಲೆ ಸಾಧಿಸಲಾಗದಾದಾಗ ಇಂಥ ಸ್ವಯಂನಿಗ್ರಹವನ್ನು ತರುವುದರಲ್ಲಿ ತಪ್ಪಿಲ್ಲವೆಂದು ನನ್ನ ಭಾವನೆ. 
ಯಂಗ್ ಇಂಡಿಯಾ, ೨೮-೫-೧೯೩೧ 
(೪) 

ಪತ್ರಿಕೆಗಳನ್ನು ಅನೀತಿಯುತವಾದ ಜಾಹೀರಾತುಗಳ ಆಧಾರದ ಮೇಲೆ ನಡೆಸುವುದು ತಪ್ಪೆಂದು ನನ್ನ ಅಭಿಮತ. ಜಾಹೀರಾತುಗಳನ್ನು ತೆಗೆದುಕೊಳ್ಳಲೇಬೇಕು ಎಂಬುದಾದರೆ ಅವುಗಳನ್ನು ಕುರಿತು ಪತ್ರಿಕೆಯ ಒಡೆಯರು ಮತ್ತು ಸಂಪಾದಕರು ತೀಕ್ಷ್ಣದಾದ ವಿಮರ್ಶಾನೀತಿಯನ್ನು ಅನುಸರಿಸಬೇಕು. ಬೇಕಾದಾಗ ಕತ್ತರಿ ಪ್ರಯೋಗಕ್ಕೂ ಅವರು ಸಿದ್ಧರಾಗಿರಬೇಕು. ಕೇವಲ ಆರೋಗ್ಯಪೂರ್ಣ ಜಾಹೀರಾತುಗಳನ್ನು ಮಾತ್ರ ಸ್ವೀಕರಿಸಬೇಕು. ಇಂದು ಅನೀತಿವಂತ ಜಾಹೀರಾತುಗಳ ಪಿಡುಗು ನಮ್ಮ ದೇಶದ ಅತ್ಯಂತ ಸಂಭಾವಿತ ಪತ್ರಿಕೆಗಳಿಗೂ ತಗುಲಿದೆ. ಈ ಪಿಡುಗನ್ನು ಹೊಡೆದೋಡಿಸಲು ಪತ್ರಿಕೆಗಳ ಸಂಪಾದಕರ ಮತ್ತು ಒಡೆಯರ ಆತ್ಮಸಾಕ್ಷಿಯನ್ನು ಪ್ರಶ್ನಿಸಬೇಕಾದ ಅಗತ್ಯವಿದೆ. ನನ್ನಂಥ ಅನನುಭವಿ ಸಂಪಾದಕರು  ಅವರ ಆತ್ಮಶುದ್ಧಿಯನ್ನು ಸಾಧಿಸಲಾರರು. ತಮ್ಮ ತಪ್ಪಿನ ಅನುಭವ ಅವರಿಗೆ ಸ್ವಯಂ ವೇದ್ಯವಾಗಬೇಕು. ಅಥವಾ ಸಾರ್ವಜನಿಕರ ಒಳಿತಿಗಾಗಿ ಜನರನ್ನು ಪ್ರತಿನಿಧಿಸುವ ಸರಕಾರವು ಅವರನ್ನು ಎಚ್ಚರಿಸಬೇಕು. 
ಯಂಗ್ ಇಂಡಿಯಾ ೨೫-೩-೨೬ 

ಜಾಹೀರಾತುಗಳಲ್ಲಿ ಸತ್ಯಾಂಶದ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ನನ್ನ ಕಳಕಳಿ. ಜನರು ಪತ್ರಿಕೆಗಳಲ್ಲಿ ಅಚ್ಚಾಗಿದ್ದನ್ನು ದೈವವಾಕ್ಯದಂತೆ ನಂಬುತ್ತಾರೆ. ಆದ್ದರಿಂದ ನಾವು ಎಂಥ ಜಾಹೀರಾತುಗಳನ್ನು ಅಚ್ಚು ಮಾಡುತ್ತೇವೆ ಎಂಬುದು ಮಹತ್ತ್ವದ ವಿಷಯ. ಅಸತ್ಯವು ಅತ್ಯಂತ ಅಪಾಯಕಾರಿಯಾದುದು. 

ಹರಿಜನ, ೨೪-೮-೩೫ 

(ಆಕರ: ಇಂಡಿಯಾ ಆಫ್ ಮೈ ಡ್ರೀಮ್ಸ್, ನವಜೀವನ ಪಬ್ಲಿಷಿಂಗ್ ಹೌಸ್, ಅಹಮದಾಬಾದ್, ೧೯೪೭)

Translation of writings on the topic of journalism by Mahatma Gandhi. Read books related to Gandhi at http://www.mkgandhi.org/main.htm 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)