ನನ್ನ ಪ್ರೀತಿಯ ದೇಶವೇ



ಸಿ. ಪಿ. ರವಿಕುಮಾರ್ 

ಮನ್ನಾ ಡೇ ಹಾಡಿರುವ ಹಾಡುಗಳಲ್ಲಿ ಕಾಬುಲಿವಾಲಾ ಚಿತ್ರದ "ಐ ಮೇರೆ ಪ್ಯಾರೇ ವತನ್" ಬಹಳ ಜನಪ್ರಿಯವಾಗಿದೆ.

ಕಾಬುಲಿವಾಲಾ ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಕೂರರು ಬರೆದ ಪ್ರಸಿದ್ಧ ಕಥೆ. ಅದನ್ನು ಆಧರಿಸಿ ಬಿಮಲ್ ರಾಯ್ ನಿರ್ದೇಶಿಸಿದ  ಹಿಂದಿ ಚಿತ್ರದಲ್ಲಿ ಬಲರಾಜ್ ಸಾಹನಿ ಕಾಬುಲಿವಾಲನ ಪಾತ್ರ ವಹಿಸಿದ್ದರು.

ಕಾಬುಲಿವಾಲಾ ಒಂದು ಹೃದಯಸ್ಪರ್ಶಿ ಕಥೆ. ಒಬ್ಬ ಕಥಾ ಲೇಖಕನ ಐದು ವರ್ಷದ ಪುಟ್ಟ ಮಗಳು ಮಿನ್ನಿ ಮತ್ತು ಕಾಬುಲ್ ನಗರದಿಂದ ಒಣ ಹಣ್ಣು ವ್ಯಾಪಾರ ಮಾಡಲು ಬಂದಿದ್ದ ಒಬ್ಬ ಕಾಬುಲಿವಾಲಾನ  ನಡುವೆ ಒಂದು ಅಪೂರ್ವವಾದ ಪ್ರೇಮಸಂಬಂಧ ಬೆಳೆಯುತ್ತದೆ. ಅವನ ದೈತ್ಯಾಕಾರವನ್ನು ಕಂಡು ಮೊದಲು ಮಿನ್ನಿ ಹೆದರಿಕೊಂಡರೂ ಕ್ರಮೇಣ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಅವಳಿಗೆ ಅವನು ಕಥೆ ಹೇಳುತ್ತಾನೆ, ಸವಾರಿ ಮಾಡಿಸುತ್ತಾನೆ, ದ್ರಾಕ್ಷಿ ಹಣ್ಣು ಕೊಟ್ಟು ಒಲಿಸಿಕೊಳ್ಳುತ್ತಾನೆ. ಅವನ ದೊಡ್ಡ ಮೂಟೆಯಲ್ಲಿ ಏನಿದೆ ಎಂದು ಮಿನ್ನಿಗೆ ಕುತೂಹಲ. ಮಕ್ಕಳನ್ನು ಅವನು ಕೊಂಡೊಯ್ಯುತ್ತಾನೆ ಎಂದು ಅವಳ ತಾಯಿ ಹೆದರಿಸಿದ್ದಾಳೆ. ಕಾಬುಲಿವಾಲಾ ತನ್ನ ಮೂಟೆಯಲ್ಲಿ ಅದಿದೆ, ಇದಿದೆ ಎಂದು ಕತೆ ಕಟ್ಟಿ ನಗಿಸುತ್ತಾನೆ. ಅವನಿಗೆ ತನ್ನ ದೇಶದಲ್ಲಿ ಇದೇ ವಯಸ್ಸಿನ ಮಗಳಿದ್ದಾಳೆ. ತನ್ನ ಮಗಳನ್ನೇ ಅವನು ಮಿನ್ನಿಯಲ್ಲಿ ಕಾಣುತ್ತಾನೆ.

ಕಾಬುಲಿವಾಲಾ ತುಂಬಾ ಸರಳ ಸ್ವಭಾವದವನು. ಒಮ್ಮೆ ಯಾರೋ ಅವನ ಬಳಿ ಹಣವನ್ನು ಕೇಳಿ ಪಡೆದು ಮೋಸ ಮಾಡಿದಾಗ ಕೋಪದಲ್ಲಿ ಕತ್ತಿಯಿಂದ ತಿವಿದುಬಿಡುತ್ತಾನೆ. ಕೊಲೆಯ ಆರೋಪದ ಮೇಲೆ ಅವನಿಗೆ ಜೈಲಾಗುತ್ತದೆ. ಜೈಲಿನಲ್ಲಿ ಹಲವಾರು ವರ್ಷ ಕಳೆದು ಬಿಡುಗಡೆಯಾಗಿ ಬಂದ ದಿವಸವೇ ಅವನು ಮಿನಿಯನ್ನು ಹುಡುಕಿಕೊಂಡು ಬರುತ್ತಾನೆ. ಅವತ್ತು ಲೇಖಕನ ಮನೆಯಲ್ಲಿ ಮದುವೆಯ ಸಮಾರಂಭವಿದೆ. ಮಿನ್ನಿಯದೇ ಮದುವೆ! ಲೇಖಕ ಇವನ ಸಂಕಟ ನೋಡಲಾರದೆ ವಧುವನ್ನು ಹೊರಗೆ ಕರೆದು ಅವಳೊಂದಿಗೆ ಭೇಟಿಯ ಏರ್ಪಾಟು ಮಾಡುತ್ತಾನೆ. ಆದರೆ ಮಿನ್ನಿ ಅವನನ್ನು ಮರೆತುಬಿಟ್ಟಿದ್ದಾಳೆ! ತನ್ನ ಸ್ನೇಹಿತೆ ಮಿನ್ನಿ ಇನ್ನೂ ಮಗುವೇ ಆಗಿರಬಹುದೆಂಬ ಭ್ರಮೆ ದೂರವಾದಾಗ ಅವನ ಹೃದಯ ಭಗ್ನವಾಗುತ್ತದೆ. ತನ್ನ ಮಗಳೂ ಈಗ ಮದುವೆಯ ವಯಸ್ಸಿಗೆ ಬಂದಿರಬಹುದು ಎಂಬ ಯೋಚನೆ ಅವನನ್ನು ದಿಗ್ಭ್ರಮೆಗೊಳಿಸುತ್ತದೆ. ಲೇಖಕ ಅವನಿಗೆ ಮದುವೆಯ ಖರ್ಚಿನಿಂದಲೇ ಒಂದಷ್ಟು ಹಣ ಕೊಟ್ಟು ನಿನ್ನ ದೇಶಕ್ಕೆ ಹೋಗಿ ನಿನ್ನ ಮಿನ್ನಿಯ ಮದುವೆಯ ಏರ್ಪಾಟು ಮಾಡೆಂದು ಸೂಚಿಸುತ್ತಾನೆ.

ಚಿತ್ರದಲ್ಲಿ ಕಾಬುಲಿವಾಲಾ ಜೈಲು ಸೇರಿದಾಗ ತನ್ನ ದೇಶವನ್ನು ನೆನೆದು ದುಃಖಿಸುವ ದೃಶ್ಯದಲ್ಲಿ ಮನ್ನಾ ಡೇ ಹಾಡಿರುವ ಗೀತೆಯನ್ನು ಬಳಸಿಕೊಳ್ಳಲಾಗಿದೆ. ಅದರ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.

ಚಿತ್ರ: ಕಾಬೂಲಿವಾಲಾ
ಕವಿ: ಪ್ರೇಮ್ ಧವನ್
ಅನುವಾದ: ಸಿ. ಪಿ. ರವಿಕುಮಾರ್ 
ಗಾಯಕ: ಮನ್ನಾ ಡೇ
ಸಂಗೀತ: ಸಲಿಲ್ ಚೌಧರಿ

ನನ್ನ ಪ್ರೀತಿಯ ದೇಶವೇ, ಅಗಲಿರುವ ನನ್ನಯ ಮಮತೆಯೇ,
ಅರ್ಪಿಸುವೆ ನಮನ!
ನೀನೇ ನನ್ನ ಕಾಮನೆ, ಗೌರವವು ನಿನ್ನಿಂದಲೇ,
ನೀನಲ್ಲವೇ ಪ್ರಾಣ?

ನಿನ್ನ ಸೆರಗನು ಹಾದು ಬಂದ ಗಾಳಿ ಪಾವನವಾಗಿದೆ
ನಿನ್ನ ಹೆಸರನು ಉಚ್ಚರಿಸಿ ನಾಲಿಗೆಯು ಪಾವನವಾಗಿದೆ
ಅನುಪಮಾನವು ನಿನ್ನ ಬೆಳಗು, ಸಂಜೆ ವರ್ಣನೆ ಮೀರಿದೆ
ಅರ್ಪಿಸುವೆ ನಮನ!

ಮಮತೆ ಸುರಿಸಿದ ತಾಯ ಹಾಗೆ ಒಮ್ಮೆಲೇ ನೆನಪಾಗುವೆ
ಪುಟ್ಟ ಕೈಗಳ ಚಾಚಿರುವ ಮಗಳಂತೆ ಕನಸಲಿ ಕಾಡುವೆ
ನಿನ್ನ ಸ್ಮರಣೆಯು ಕಲಕಿ ಹೃದಯವ ಕಣ್ಣಿನಲಿ ಹನಿ ಚಿಮ್ಮಿದೆ
ಅರ್ಪಿಸುವೆ ನಮನ!

ನಿನ್ನ ಮಣ್ಣನು ತೊರೆದು ಬಂದು ದೂರದಲಿ ನೆಲಸಿರುವೆನು
ಆದರೇನು, ನಿನ್ನ ಆಣೆ, ಮನದೊಳೀ ಕೊರಗಿರುವುದು
ಎಲ್ಲಿ ಉಸಿರಾಡಿದೆನೋ ಮೊದಲು ಅಲ್ಲಿ ಕೊನೆಯುಸಿರೆಳೆವೆನು
ಅರ್ಪಿಸುವೆ ನಮನ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)