ತುಂಬಾ ಸಿಂಬಲ್ ಅಲ್ಲವೇ? (ಹರಟೆ)
ದ ಡಾವಿಂಚಿ ಕೋಡ್ ಎಂಬ ಪುಸ್ತಕದ ರಚನೆಯಿಂದ ಯಾರಿಗೆ ಕೋಡು ಮೂಡಿತೋ ಆ ಕಾದಂಬರಿಕಾರ ಡ್ಯಾನ್ ಬ್ರೌನ್; ಇವನು ಒಬ್ಬ ಚಿಹ್ನಾ ಪ್ರಿಯ. ಅವನು ಸೃಷ್ಟಿಸಿದ ಪಾತ್ರ ರಾಬರ್ಟ್ ಲ್ಯಾಂಗ್ಡನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ; ಅವನ ಪರಿಣತಿ ಇರುವುದು ಸಿಂಬಾಲಜಿ ಎಂಬ ಕ್ಷೇತ್ರದಲ್ಲಿ. ತಾಳಿ! ಡಿಸ್ನಿಯ ಲಯನ್ ಕಿಂಗ್ ಚಿತ್ರದಲ್ಲಿರುವ ಸಿಂಬಾ ಎಂಬ ಪಾತ್ರಕ್ಕೂ ಸಿಂಬಾಲಜಿಗೂ ಅಷ್ಟೇನೂ ಸಂಬಂಧವಿಲ್ಲ. ಸಿಂಬಲ್ ಎಂದರೆ ಚಿಹ್ನೆ ಅಥವಾ ಲಾಂಛನ. ಚಿಹ್ನೆಗಳಲ್ಲಿ ಗಹನವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದು ಈ ಕಥಾನಾಯಕನ ಕೌಶಲ್ಯ. ಗೊತ್ತಾಯಿತೆ? ತುಂಬಾ ಸಿಂಬಲ್ ಅಲ್ಲವೇ? ನಮ್ಮ ಡ್ಯಾನ್ ಬ್ರೌನ್ ಈಗ ಭಾರತದೇಶದಲ್ಲಿ ಇರಬೇಕಾಗಿತ್ತು ನೋಡಿ. ಎಲ್ಲಿ ನೋಡಿದರೂ ಚಿಹ್ನೆಗಳೇ ಚಿಹ್ನೆಗಳು! ಪೊರಕೆಯನ್ನು ಕೈಯಲ್ಲಿ ಹಿಡಿದ ರಣಕೇಜರಿ! ಕಮಲವನ್ನು ಕೈಯಲ್ಲಿ ನೇವರಿಸುತ್ತಾ ಕಾಂಮೋದಿ ರಾಗವನ್ನು ಕೇಳುತ್ತಾ ಅರೆನಿಮೀಲಿತ ನಯನನಾಗಿ ಮೇಧಿನೀಪತಿಯಾಗುವ ಕನಸು ಕಾಣುತ್ತಿರುವ ನಮೋ! ರಾಹು-ಕೇತುಗಳಂತೆ ಬಂದಿರುವ ಈ ಎರಡೂ ಗೃಹಚಾರಗಳ ಕಡೆ ಕರವಸ್ತ್ರವನ್ನು ಬೀಸುತ್ತಾ ಎಡಗೈಯಿಂದ ಪೊರಕೆಯನ್ನೋ ಬಲಗೈಯಿಂದ ಕಮಲವನ್ನೂ ಎದುರಿಸಲು ಸಿದ್ಧತೆ ನಡೆಸುತ್ತಿರುವ ರಾಗಾ. ಈ ಎಲ್ಲಾ ಚಿಹ್ನೆಗಳನ್ನೂ ಸೇರಿಸಿ ಡ್ಯಾನ್ ಬ್ರೌನ್ ಒಂದು ಅಧ್ಬುತ ಕಾದಂಬರಿಯನ್ನು ಬರೆದು ಬಿಡುತ್ತಿದ್ದ! ನಾನೇ ಯಾಕೆ ಆ ಕೆಲಸ ಮಾಡಿಬಿಡಬಾರದು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದುಕೊಳ್ಳಬೇ