ತುಂಬಾ ಸಿಂಬಲ್ ಅಲ್ಲವೇ? (ಹರಟೆ)

ಡಾವಿಂಚಿ ಕೋಡ್ ಎಂಬ ಪುಸ್ತಕದ ರಚನೆಯಿಂದ ಯಾರಿಗೆ ಕೋಡು ಮೂಡಿತೋ ಆ ಕಾದಂಬರಿಕಾರ ಡ್ಯಾನ್ ಬ್ರೌನ್; ಇವನು ಒಬ್ಬ ಚಿಹ್ನಾ ಪ್ರಿಯ.  ಅವನು ಸೃಷ್ಟಿಸಿದ ಪಾತ್ರ ರಾಬರ್ಟ್ ಲ್ಯಾಂಗ್ಡನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ; ಅವನ ಪರಿಣತಿ ಇರುವುದು ಸಿಂಬಾಲಜಿ ಎಂಬ ಕ್ಷೇತ್ರದಲ್ಲಿ. ತಾಳಿ! ಡಿಸ್ನಿಯ ಲಯನ್ ಕಿಂಗ್  ಚಿತ್ರದಲ್ಲಿರುವ ಸಿಂಬಾ ಎಂಬ ಪಾತ್ರಕ್ಕೂ ಸಿಂಬಾಲಜಿಗೂ ಅಷ್ಟೇನೂ ಸಂಬಂಧವಿಲ್ಲ.  ಸಿಂಬಲ್ ಎಂದರೆ ಚಿಹ್ನೆ ಅಥವಾ ಲಾಂಛನ. ಚಿಹ್ನೆಗಳಲ್ಲಿ ಗಹನವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದು ಈ ಕಥಾನಾಯಕನ ಕೌಶಲ್ಯ. ಗೊತ್ತಾಯಿತೆ? ತುಂಬಾ ಸಿಂಬಲ್ ಅಲ್ಲವೇ?



ನಮ್ಮ ಡ್ಯಾನ್ ಬ್ರೌನ್ ಈಗ ಭಾರತದೇಶದಲ್ಲಿ ಇರಬೇಕಾಗಿತ್ತು ನೋಡಿ. ಎಲ್ಲಿ ನೋಡಿದರೂ ಚಿಹ್ನೆಗಳೇ ಚಿಹ್ನೆಗಳು! ಪೊರಕೆಯನ್ನು ಕೈಯಲ್ಲಿ ಹಿಡಿದ ರಣಕೇಜರಿ! ಕಮಲವನ್ನು ಕೈಯಲ್ಲಿ ನೇವರಿಸುತ್ತಾ ಕಾಂಮೋದಿ ರಾಗವನ್ನು ಕೇಳುತ್ತಾ ಅರೆನಿಮೀಲಿತ ನಯನನಾಗಿ ಮೇಧಿನೀಪತಿಯಾಗುವ ಕನಸು ಕಾಣುತ್ತಿರುವ ನಮೋ!  ರಾಹು-ಕೇತುಗಳಂತೆ ಬಂದಿರುವ ಈ ಎರಡೂ ಗೃಹಚಾರಗಳ ಕಡೆ ಕರವಸ್ತ್ರವನ್ನು ಬೀಸುತ್ತಾ ಎಡಗೈಯಿಂದ ಪೊರಕೆಯನ್ನೋ ಬಲಗೈಯಿಂದ ಕಮಲವನ್ನೂ ಎದುರಿಸಲು ಸಿದ್ಧತೆ ನಡೆಸುತ್ತಿರುವ ರಾಗಾ.  ಈ ಎಲ್ಲಾ ಚಿಹ್ನೆಗಳನ್ನೂ ಸೇರಿಸಿ ಡ್ಯಾನ್ ಬ್ರೌನ್ ಒಂದು ಅಧ್ಬುತ ಕಾದಂಬರಿಯನ್ನು ಬರೆದು ಬಿಡುತ್ತಿದ್ದ! ನಾನೇ ಯಾಕೆ ಆ ಕೆಲಸ ಮಾಡಿಬಿಡಬಾರದು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದುಕೊಳ್ಳಬೇಡಿ.  ಆದರೇನು ಮಾಡೋಣ! ಇದು ಬ್ರಾಂಡ್ ಯುಗ ಸ್ವಾಮೀ! ನನ್ನ ಮೇಲೆ ಬ್ರಾಂಡ್ ಕಳವು ಮಾಡಿದ ಆರೋಪ ಮಾಡಬಹುದೆಂಬ ಏಕಮಾತ್ರ ಭಯವೇ ನನ್ನನ್ನು ಈ ಸಾಹಸದಿಂದ ತಡೆದಿರಿಸಿದೆ, ಅಷ್ಟೆ!

ಬ್ರಾಂಡ್ ಎಂಬುದರ ನಿಜವಾದ ಅರ್ಥ ಬರೆ ಹಾಕುವುದು ಎಂದು. ಕೆಲವು ಮಠಗಳಲ್ಲಿ ಬ್ರಾಂಡಿಂಗ್ ಎಂಬುದು ಇಂದಿಗೂ ನಡೆಯುತ್ತದೆ. ಅಲ್ಲಿ ನೋಡಿ, ಮಠಾಧೀಶರು ರಭಸದಿಂದ ಬರುತ್ತಿದ್ದಾರೆ. ಅವರ ಮುಂದೆ ನಿಗಿನಿಗಿ ಕೆಂಡಗಳುಳ್ಳ ಒಲೆಯನ್ನು ಹಿಡಿದು ಇಬ್ಬರು ಸಹಾಯಕರು ಅಷ್ಟೇ ರಭಸದಿಂದ ಬರುತ್ತಿದ್ದಾರೆ. ಈ ಕೆಂಡಗಳ ಮೇಲೆ ಹಾರೆಗಳ ಆಕಾರದ ಕಬ್ಬಿಣದ ಸಲಾಕೆಗಳಿವೆ. ಅವುಗಳ ತುದಿಯಲ್ಲಿ ಬೆಳ್ಳಿಯಲ್ಲಿ  ಕೆತ್ತಿದ ಲಾಂಛನಗಳಿವೆ.  ಈ ಲಾಂಛನಗಳ ಮುದ್ರೆ ತಮ್ಮ ಕೈಗಳ ಮೇಲೆ ಬೀಳಲಿ ಎಂದು ತೋಳುಗಳನ್ನು  ಮುಂದೆ ಚಾಚಿ ನಿಂತಿರುವ ಜನಸ್ತೋಮ! ಮಠಾಧೀಶರು ಒನ್-ಟೂ ಎಂಬಂತೆ ಹಾರೆಗಳನ್ನು ಎತ್ತಿ ಎತ್ತಿ ಮುದ್ರೆಗಳನ್ನು ಒತ್ತುತ್ತಿದ್ದಾರೆ. ಕೆಲವರಿಗೆ ಕೈ ಮೇಲಿನ ಚರ್ಮ ಸುಟ್ಟು ಸುಲಿದುಹೋಗಿದೆ! ಕೆಲವರು ತಮ್ಮ ಮಕ್ಕಳ ಕೈಯನ್ನು ಬಲವಂತವಾಗಿ ಮುಂದಕ್ಕೊಡ್ಡಿ ಬ್ರಾಂಡ್ ಹಾಕಿಸಿಬಿಟ್ಟಿದ್ದಾರೆ! ಮಗು ತಾರಕಾಸುರನ ಅವತಾರ ತಾಳಿದೆ!  ಆದರೇನು, ತಾವು ಯಾವ ದೇವರನ್ನು ನಂಬುತ್ತೇವೆ ಎಂಬುದನ್ನು ಭಕ್ತಾದಿಗಳು ಈ ಮೂಲಕ ಸಾರಿಬಿಟ್ಟಿದ್ದಾರೆ. "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದಕ್ಕಿಂತಲೂ ಇದಲ್ಲವೇ ನಿಜವಾದ ಪುರಾವೆ!  ಈ ಬಗೆಯ ಬ್ರಾಂಡಿಂಗ್ ಆಚರಣೆ ಅನೇಕ ಧರ್ಮಗಳಲ್ಲಿದೆ; ಡ್ಯಾನ್ ಬ್ರೌನ್ ಬರೆದ ಏಂಜಲ್ಸ್ ಅಂಡ್ ಡೀಮನ್ಸ್ ಕಾದಂಬರಿಯಲ್ಲಿ ಕೆಲವು ಕ್ರೈಸ್ತ ಪಾದ್ರಿಗಳ ಎದೆಯ ಮೇಲೆ  ಈ ಬಗೆಯ ಬ್ರಾಂಡಿಂಗ್ ನಡೆಯುತ್ತದೆ!

ಚುನಾವಣಾ ಚಿಹ್ನೆಗಳ ಬ್ರಾಂಡ್ ಎಂಥಾ ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಹೇಳುತ್ತೇನೆ ಕೇಳಿ. ಒಬ್ಬ ಕಲಾವಿದ ಕಮಲವನ್ನು ಕೈಯಲ್ಲಿ ಹಿಡಿದ ನಮೋ ಚಿತ್ರವನ್ನು ರಚಿಸಿ ಅದನ್ನು ಲೋಕಾರ್ಪಣೆ ಮಾಡಿದಾಗ ನಮ್ಮ ಮೀಡಿಯಾದವರು "ಕಮಲವನ್ನು ಹಿಡಿದ ಕೈ" ಎಂಬ ಶಿರೋನಾಮೆಯನ್ನು ಕೊಟ್ಟು ಕಲಾವಿದನಿಗೆ ಆಭಾಸ ಉಂಟು ಮಾಡಿಬಿಟ್ಟರು. ಒಬ್ಬ ಕವಿ ರಾಗಾ ಕುರಿತು ಒಂದು ರಾಗಮಾಲಿಕೆಯನ್ನೇ ರಚಿಸಿ ಅದನ್ನು  "ನಿಮ್ಮ ಕರಕಮಲದಿಂದ ಬಿಡುಗಡೆ ಮಾಡಬೇಕು" ಎಂದು ಬರೆದದ್ದು ಅನೇಕ ಅನುಮಾನಗಳಿಗೆ ಹುಟ್ಟುಹಾಕಿತು. ಪಾಪ, ಕವಿಯ ರಾಗಮಾಲಿಕೆ ಪ್ರಾಜೆಕ್ಟ್ ಅಲ್ಲಿಗೇ ನಿಂತುಹೋಯಿತು. ಕಮಲಾಕರ ಎಂಬ ಹೆಸರುಳ್ಳ ಒಬ್ಬ ರಾಜಕಾರಣಿಗೆ ಪಾಪ ಉಭಯ ಪಕ್ಷದವರೂ ಟಿಕೆಟ್ ನಿರಾಕರಿಸಿದರಂತೆ!  ಎರಡೆಲೆ ಗುರುತಿನ ಮಹಿಳಾ ರಾಜಕಾರಣಿಯೊಬ್ಬರ ಸಭೆಯಲ್ಲಿ ಒಬ್ಬ ಉತ್ಸಾಹಿ ಕಾರ್ಯಕರ್ತನು "ಅಮ್ಮಾ! ತೊಟ್ಟಿಲನ್ನು ತೂಗುವ ಕೈ ರಾಜ್ಯವನ್ನು ಆಳದೇ!" ಎಂದು ಉದ್ಗರಿಸಿದ್ದು ಅವನಿಗೆ ಮುಳಿವಾಯಿತು!

ಚುನಾವಣೆಗೆ  ಮುಂಚೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿರುವ ರಾಜಕಾರಣಿಗಳಿಗಂತೂ ಚಿಹ್ನೆಗಳು ಭಾರೀ ತಲೆನೋವು ಉಂಟು ಮಾಡಬಲ್ಲವು. ಒಬ್ಬ ರಾಜಕಾರಣಿ ತಾನು ಪಕ್ಷಾಂತರ ಮಾಡಿದ್ದನ್ನು ಮರೆತು ತನ್ನ ಪೂರ್ವಪಕ್ಷದ ಲಾಂಛನವುಳ್ಳ ಉಡುಗೆ ಧರಿಸಿ ಸಭೆಗೆ ಹೋಗಿ ಎಲ್ಲರ ಹುಬ್ಬೇರುವಂತೆ ಮಾಡಿದ! ಇವನು ತನ್ನ ಪೂರ್ವ ಪಕ್ಷದ ಗೂಢಚಾರಿ ಇರಬಹುದು ಎಂದು ಅನುಮಾನ ಹುಟ್ಟಿ  ಅವನನ್ನು ಇನ್ನೊಂದು ಪಕ್ಷದವರು ಉಚ್ಚಾಟಿಸಿ ಬಿಟ್ಟರು! ಇತ್ತ ಪೂರ್ವವೂ ಇಲ್ಲ ಅತ್ತ ಪಶ್ಚಿಮವೂ ಇಲ್ಲ ಎಂಬ ತ್ರಿಶಂಕು ಸ್ಥಿತಿಯನ್ನು ನಮ್ಮ ರಾಜಕಾರಣಿ ತಲುಪಿದ.  ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಇರುವವರಿಗೆ ಇರುವುದು ಎರಡೇ ಮಾರ್ಗ - ಒಂದೋ ತನ್ನದೇ ಹೊಸ ಪಕ್ಷ ಸ್ಥಾಪಿಸುವುದು ಅಥವಾ ಮೂರನೇ ಯಾವುದಾದರೂ ಪಕ್ಷಕ್ಕೆ ಅರ್ಜಿ ಹಾಕಿಕೊಳ್ಳುವುದು.  ಈತ ಮೊದಲು ಹೊಸ ಪಕ್ಷ ಸ್ಥಾಪಿಸಿ ಓಟ್ ಬ್ಯಾಂಕ್ ಒಡೆದು ಬಿಡುತ್ತೇನೆಂದು ಗುಡುಗಿದರೂ ನಂತರ ಸರಿಯಾದ ಚುನಾವಣಾ ಚಿಹ್ನೆ ಸಿಗಲಿಲ್ಲ ಎಂಬ ಕಾರಣ ತೋರಿಸಿ ಯಾವುದೋ ಮೂರನೇ ಪಕ್ಷದ ಮಾರ್ಗ ಹಿಡಿದ!

ಬ್ರಾಂಡಿಂಗ್ ಎಂಬುದು ಅತಿರೇಕದ ರಣಶಿಕ್ಷೆಯಂತೆ ತೋರಿದರೆ ಅದಕ್ಕೆ "ಹಚ್ಚೆ" ಎಂಬ ಸುಲಭದ ಹಾದಿಯನ್ನು ನಮ್ಮವರು ಹುಡುಕಿದ್ದಾರೆ. ಇದಂತೂ ಈಗ ಪಾಶ್ಚಿಮಾತ್ಯರಲ್ಲಿ ಬಹಳ ಜನಪ್ರಿಯವಾಗಿಬಿಟ್ಟಿದೆ!  ತನ್ನ ನಲ್ಲೆಗೆ ತನ್ನ ನಿಷ್ಠೆಯನ್ನು ಸಾರಿ ಹೇಳಲು ಅವಳ ಹೆಸರನ್ನು ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡ ನಲ್ಲ!  ತಮ್ಮ ಮೈಯನ್ನೇ ಕ್ಯಾನ್ವಾಸ್ ಮಾಡಿಕೊಂಡು ಅದರ ಮೇಲೆ ಚಿತ್ರವಿಚಿತ್ರ ಟಾಟೂಗಳನ್ನು ಮೆರೆಸುತ್ತಿರುವ ಯುವಪೀಳಿಗೆ! ವೀರಗಚ್ಚೆ ಹಾಕಿಕೊಂಡು ರಣರಂಗಕ್ಕೆ ಧುಮುಕುತ್ತಿದ್ದ ಕಾಲವೊಂದಿತ್ತು! ಇದು ವೀರಹಚ್ಚೆಯನ್ನು ಹಾಕಿಕೊಂಡು ಅಂತರ್ಜಾಲವೆಂಬ ರಣರಂಗದಲ್ಲಿ ತಮ್ಮ ಸಾಹಸವನ್ನು ಮೆರೆಯುವ ಕಾಲ!  ಹನುಮಂತನು ತನ್ನ ಎದೆಯಲ್ಲಿ ರಾಮನಿದ್ದಾನೆ ಎಂದು ತೋರಿದನಂತೆ.  ಅವನು ತನ್ನ ಎದೆಯ ಮೇಲೆ ರಾಮಲಕ್ಷ್ಮಣಸೀತೆಯರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದನೇ ಎಂಬ ಅನುಮಾನ ನನ್ನನ್ನು ಕಾಡುತ್ತದೆ.  ಯಾರಾದರೂ ಇದನ್ನು ಕುರಿತು ಸಂಶೋಧನೆ ಮಾಡುವುದು ಉಚಿತ.  ಇರಲಿ, ಈ ಬಗೆಯ ಬಾಡಿ-ಬ್ರಾಂಡಿಂಗ್ ನಿಂದ  ಪ್ರಭಾವಿತನಾದ   ಒಬ್ಬ ರಾಜಕಾರಣಿ ತನ್ನ ಕೈಮೇಲೆ ತನ್ನ  ಪಕ್ಷದ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡು ಪಕ್ಷಕ್ಕೆ ತನ್ನ ನಿಷ್ಠೆಯನ್ನು ಪ್ರದರ್ಶಿಸಿದ್ದ.  ಆದರೆ ದುರಾದೃಷ್ಟವಶಾತ್ ಇವನ ನಿಷ್ಠೆಗೆ ಚುನಾವಣಾ ಟಿಕೆಟ್  ಸಿಕ್ಕದೇ ಹೋದಾಗ ಪಕ್ಷಾಂತರ ಮಾಡದೆ ಬೇರೇನೂ ಮಾರ್ಗವಿರಲಿಲ್ಲ. ಆದರೆ ಕೈಮೇಲಿನ ಹಚ್ಚೆ ಗುರುತನ್ನು ಹೇಗೆ ಅಳಿಸುವುದೋ ಗೊತ್ತಾಗದೆ ಈತ ಕಂಗಾಲಾದ. ಕೊನೆಗೆ ಅರ್ಧ ತೋಳಿನ ಶರ್ಟ್ ಬಿಟ್ಟು ತುಂಬುತೋಳಿನ ಶರ್ಟ್ ಹಾಕಿಕೊಂಡು ತನ್ನ ಗುಟ್ಟನ್ನು ಮುಚ್ಚಿಟ್ಟುಕೊಂಡ!



ಮ್ಮ ಚುನಾವಣಾ ಚಿಹ್ನೆಗಳನ್ನು ತಿಳಿದುಕೊಳ್ಳಲು ಗೂಗಲಿಸಿದಾಗ ನನಗೆ ದಿಗ್ಭ್ರಮೆ ಉಂಟಾಯಿತು! ಆಹಾ, ಅದೆಷ್ಟು ಪಕ್ಷಗಳು, ಅದೆಷ್ಟು ಚಿಹ್ನೆಗಳು! ಪ್ರಾಣಿಗಳು, ಪಕ್ಷಿಗಳು, ವಾಹನಗಳು, ದಿನಬಳಕೆಯ ವಸ್ತುಗಳು, ಸಂಗೀತ  ವಾದ್ಯಗಳು,  ಯಾವುದನ್ನೂ ನಾವು ಬಿಟ್ಟಿಲ್ಲ! ದಿನೇ ದಿನೇ ಹೆಚ್ಚುತ್ತಿರುವ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ಹುಡುಕುವ ಕೆಲಸವೇ ಒಂದು ಹರಸಾಹಸ! ಚುನಾವಣೆಯ ಸಮಯದಲ್ಲಿ ಮತಗಟ್ಟೆಗಳಲ್ಲಿ ಈ ಚಿಹ್ನೆಗಳನ್ನು ಜನರಿಗೆ ತೋರಿಸಿ ಅವರನ್ನು ವಿಚಲಿತಗೊಳಿಸುವ ಸಾಧ್ಯತೆ ಇರಬಾರದಲ್ಲ!  ಈಗ ಬರುವ ಚುನಾವಣೆಯಲ್ಲಿ ಇರುವ ಅನೇಕ ತೊಡಕುಗಳನ್ನು ಗಮನಿಸಿ. ಮತ ಹಾಕಲು ಬಂದ ಶ್ರೀವೈಷ್ಣವ ಪಂಥದ ಭಕ್ತರೊಬ್ಬರು "ಓಂ ನಮೋ ನಾರಾಯಣ" ಎಂದು ಹೇಳುವಂತಿಲ್ಲ. ಮತಗಟ್ಟೆಯ ಹತ್ತಿರ ಒಂದು ವೈಷ್ಣವ ದೇವಾಲಯವಿದೆ ಎಂದುಕೊಳ್ಳಿ. ಅಲ್ಲಿ ಅಂದು ಪ್ರಾರ್ಥನೆಗಳೂ ನಡೆಯುವಂತಿಲ್ಲ! ಅದು ಹಾಗಿರಲಿ, ಈ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಕಸ ಗುಡಿಸುವ ಹಾಗಿಲ್ಲ! ಪೊರಕೆಯನ್ನೇ ಒಳಗೆ ತರುವಂತಿಲ್ಲ!   ಡರ್ಟಿ ಪಾಲಿಟಿಕ್ಸ್, ರಾಜಕೀಯ ಹೊಲಸೆದ್ದು ಹೋಗಿದೆ ಎಂದೆಲ್ಲಾ ಗೊಣಗಾಡುವವರು ಮೂಗು ಮುಚ್ಚಿಕೊಂಡೇ ಓಡಾಡಬೇಕು!

ಅಂತೂ ಸಿಂಬಲ್ ಎಂಬುದು ತುಂಬಾ ಕಾಂಪ್ಲಿಕೇಟೆಡ್ ಆಗುತ್ತಿದೆ!  ಭಾರತದ ಬೆಳವಣಿಗೆಯನ್ನು ಈ ಸಿಂಬಲ್ ಗಳಲ್ಲಿ ಹುಡುಕಿದರೆ ನಿಮಗೆ ಸ್ವಲ್ಪ ಮಟ್ಟಿಗೆ ನಿರಾಶೆಯಾಗುವುದು ಖಂಡಿತ. ಹಿಂದೆ ಚರಖಾ, ದೀಪ, ಹಸು-ಕರು ಮೊದಲಾದ ಚಿಹ್ನೆಗಳಿದ್ದವು - ಇವು ನಮ್ಮ ಗ್ರಾಮೀಣ ಸಂಸೃತಿಗೆ ಒಪ್ಪುವ ಚಿಹ್ನೆಗಳು. ರೈತರಿಗೆ ಈ ಎಲ್ಲಾ ಚಿಹ್ನೆಗಳೂ ಆಪ್ಯಾಯಮಾನವಾದವು. ನಂತರ ಬಂದ ಚಿಹ್ನೆಗಳನ್ನು ನೋಡಿ - ಕಮಲ, ಆಶೀರ್ವಾದಿಸುವ ಕೈ, ಆನೆ, ಕುಡುಗೋಲು, ಹುಲ್ಲನ್ನು ಹೊತ್ತ ಮಹಿಳೆ, ... ಇವು ಭಾರತದಲ್ಲಿ ಹೆಚ್ಚೇನೂ ಬೆಳವಣಿಗೆ ಆಗಲಿಲ್ಲ ಎಂಬುದನ್ನೇ ತೋರಿಸುತ್ತಿವೆ. ವಾಹನಗಳನ್ನು ಲಾಂಛನಗಳಲ್ಲಿ ಬಳಸಿದವರೂ ಸೈಕಲ್ ಆರಿಸಿಕೊಂಡರೇ ವಿನಃ ಜಂಬೋ ಜೆಟ್ ವಿಮಾನವನ್ನಲ್ಲ! ಆಕಾಶನೌಕೆಯನ್ನಲ್ಲ! ಹೋಗಲಿ ಕನಿಷ್ಠ ವೋಲ್ವೋ ಬಸ್ಸನ್ನಾದರೂ ಯಾರೂ ಆರಿಸಿದ ಹಾಗೆ ಕಾಣೆ!

ಚುನಾವಣಾ ಪ್ರಣಾಳಿಕೆಗಳಲ್ಲಿ "ನಾವು ನಿಮಗೆ ಟೆಲಿವಿಷನ್ ಕೊಡುತ್ತೇವೆ," "ಮಲಗಲು ಮಂಚ ಕೊಡುತ್ತೇವೆ," "ಕುಳಿತುಕೊಳ್ಳಲು ಕುರ್ಚಿ ಕೊಡುತ್ತೇವೆ,"  "ಅಡುಗೆ ಮಾಡಲು ಪಾತ್ರೆ ಕೊಡುತ್ತೇವೆ," "ಲ್ಯಾಪ್ ಟಾಪ್ ಕೊಡುತ್ತೇವೆ," ಇತ್ಯಾದಿ ಭರವಸೆಗಳನ್ನು ಕೊಡುವ ಪಾರ್ಟಿಗಳು ಇವು ಯಾವುದನ್ನೂ ಲಾಂಛನವನ್ನಾಗಿ ಸ್ವೀಕರಿಸಿದಂತೆ ತೋರುವುದಿಲ್ಲ. ಜನರು ಲಾಂಛನವನ್ನು ನೋಡಿದಾಗ ತಮ್ಮ ಭರವಸೆಗಳು ನೆನಪಾಗಿ ಡಿಮ್ಯಾಂಡ್ ಶುರುವಾದರೆ ಗ್ರಹಚಾರಕ್ಕೆ ಇಟ್ಟುಕೊಂಡೀತು ಎಂಬ ಭಯ ಈ ಪಕ್ಷಗಳ ವರಿಷ್ಠರನ್ನು ಕಾಡುತ್ತಿರಬಹುದು! ಕಂಪ್ಯೂಟರ್ ಮತ್ತು ಇಂಟರ್-ನೆಟ್ ಮೇಲೆ ರಭಸದ ಪ್ರಚಾರ ನಡೆಸುತ್ತಿರುವ ಆಪ್ ಪಕ್ಷವೂ ಅವೆಲ್ಲವನ್ನೂ ಬಿಟ್ಟು ಪೊರಕೆಗೆ ಮೊರೆ ಹೋಗಿದೆ! ಕನಿಷ್ಠಪಕ್ಷ ಅವರು ರೀಸೈಕಲ್ ಬಿನ್-ಅನ್ನಾದರೂ ತಮ್ಮ ಲಾಂಛನವಾಗಿ ಸ್ವೀಕರಿಸಬಹುದಾಗಿತ್ತು!

ಬಹಳ ಹಿಂದೆ ಸೀತೆಯನ್ನು ಆಕರ್ಷಿಸಿದ್ದು ಕಾಂಚನಮೃಗ. ಈ ಕಾಂಚನಮೃಗದ ಆಸೆಗೆ ಸಿಲುಕಿ ಅವಳು ಪಟ್ಟ ಕಷ್ಟಗಳು ಒಂದೇ ಎರಡೇ! ನಾವೂ ಲಾಂಛನಮೃಗದ ಆಕರ್ಷಣೆಗೆ ಬಿದ್ದು ಐದುವರ್ಷಗಳ ವನವಾಸಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ! ಮಾಯಾಮೃಗ ಎಂಬ ಪದವನ್ನು ನಾನು ಇಲ್ಲಿ ಉದ್ದೇಶಪೂರ್ವಕವಾಗಿ ಬಳಸುತ್ತಿಲ್ಲ - ಮಾಯಾ ಎಂಬ ಹೆಸರಿನ ರಾಜಕಾರಣಿಯೊಬ್ಬರು ಒಂದು ಮೃಗವನ್ನೇ ಲಾಂಛನವನ್ನಾಗಿ ತಮ್ಮ ಪಕ್ಷಕ್ಕೆ ಇಟ್ಟುಕೊಂಡಿದ್ದಾರೆ!  ಈ ಚುನಾವಣೆಯಲ್ಲಿ ಭಾರತದ ಪ್ರಜೆಗಳು ಯಾವ ಲಾಂಛನವನ್ನು ಕೇಂದ್ರದಲ್ಲಿ ಲಾಂಚ್ ಮಾಡುತ್ತಾರೋ? ತಾಳಿ, ಈ ಕಷ್ಟವಾದ ಪ್ರಶ್ನೆಗೆ ಕಾಲವೇ ಉತ್ತರ ಹೇಳುತ್ತದೆ!  ತುಂಬಾ ಸಿಂಬಲ್ ಅಲ್ಲವೇ?


(c) 2014, C.P. Ravikumar

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)