ನನ್ನ ಕಂಪ್ಯೂಟರ್ ಮೇಲೆ ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆ?

ಸಿ ಪಿ ರವಿಕುಮಾರ್

1.      ಟ್ರಾನ್ಸ್-ಲಿಟರೇಷನ್ ಎಂದರೇನು?

ನಿಮ್ಮ ಬಳಿ ಇರುವುದು ಇಂಗ್ಲಿಷ್ ಅಕ್ಷರಗಳ ಕೀ ಬೋರ್ಡ್. ನೀವು ಇಂಗ್ಲಿಷ್ ಬೆರಳಚ್ಚು ಬಳಸಿ kamala ಎಂದು ಟೈಪ್ ಮಾಡಿದರೆ ಅದನ್ನು ಟ್ರಾನ್ಸ್-ಲಿಟರೇಷನ್ ಎಂಬ ಪ್ರಕ್ರಿಯೆ ಮೂಲಕ ಕನ್ನಡದ ಕಮಲ ಎಂದು ಸಾಫ್ಟ್ ವೇರ್ ಅರ್ಥ ಮಾಡಿಕೊಳ್ಳುತ್ತದೆ. ಇಂಥ ಸಾಫ್ಟ್ ವೇರ್ ಅಥವಾ ತಂತ್ರಾಂಶಕ್ಕೆ ಟ್ರಾನ್ಸ್-ಲಿಟರೇಟರ್  ಎಂದು ಹೆಸರು.

2.     ಕನ್ನಡದಲ್ಲಿ ಟೈಪ್ ಮಾಡಲು ಇರುವ ತಂತ್ರಾಂಶಗಳು ಯಾವುವು?

ಬರಹ ಮತ್ತು ನುಡಿ ಇವೆರಡೂ ಸ್ವತಂತ್ರವಾಗಿ ಕನ್ನಡ ಬರವಣಿಗೆಗೆ ಉಪಯೋಗವಾಗುವ ತಂತ್ರಾಂಶಗಳು.  ಮೈರ್ಕೋಸಾಫ್ಟ್ ಆಫೀಸ್ ಮೊದಲಾದ ತಂತ್ರಾಂಶಗಳು ಈಗಾಗಲೇ ನಿಮಗೆ ಲಭ್ಯವಾಗಿದ್ದರೆ ಅವುಗಳನ್ನೇ ಟ್ರಾನ್ಸ್-ಲಿಟರೇಷನ್ ಪ್ರಕ್ರಿಯೆಗೆ ಹೊಂದಿಸಿಕೊಳ್ಳಬಹುದು.

3.     ಯೂನಿಕೋಡ್ ಎಂದರೆ ಏನು?

ಹಿಂದೆ ಇಂಗ್ಲಿಷ್ ಅಕ್ಷರಗಳನ್ನು ಮಾತ್ರ ಟೈಪ್ ಮಾಡುವುದು ಸಾಧ್ಯವಿತ್ತು. ಇದಕ್ಕಾಗಿ ಆಸ್ಕಿ ಕೋಡ್ ಎಂಬುದನ್ನು  ಆವಿಷ್ಕರಿಸಲಾಯಿತು. ಇತ್ತೀಚೆಗೆ ಕನ್ನಡ ಮತ್ತಿತರ ಭಾಷೆಗಳ ಅಕ್ಷರಗಳನ್ನು ಕಡತಗಳಲ್ಲಿ ಸೇರಿಸಲು ಯೂನಿಕೋಡ್ ಎಂಬ ಅಕ್ಷರಮಾಲೆಯನ್ನು ಆವಿಷ್ಕರಿಸಲಾಗಿದೆ. ಇದನ್ನು ಬಹುತೇಕ ಎಲ್ಲಾ ತಂತ್ರಾಂಶಗಳೂ ಅರ್ಥ ಮಾಡಿಕೊಳ್ಳುವುದರಿಂದ ಯೂನಿಕೋಡ್ ಬಳಸಿ ಟೈಪ್ ಮಾಡುವುದು ಒಳಿತು.

4.    ಮೈಕ್ರೋಸಾಫ್ಟ್ ಬಳಕೆದಾರರಿಗೆ ಉಪಯೋಗವಾಗುವ ಒಂದು ಟ್ರಾನ್ಸ್-ಲಿಟರೇಟರ್ ಯಾವುದು?

ಇದಕ್ಕೆ ಮೈಕ್ರೋಸಾಫ್ಟ್ ಕಂಪನಿ ಮುಕ್ತವಾದ ತಂತ್ರಾಂಶ ಲಭ್ಯಗೊಳಿಸಿದೆ - http://www.microsoft.com/kn-in/download/details.aspx?id=20385 ; ಇದು ಯೂನಿಕೋಡ್ ಬಳಸಿ ತಯಾರು ಮಾಡಿದ ತಂತ್ರಾಂಶ.  ಕನ್ನಡ ಫಾಂಟ್ ಮೊದಲಾದ ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಿದ ಮೇಲೆ ನೀವು “ಲಾಂಗ್ವೇಜ್ ಟೂಲ್-ಬಾರ್ ಮೂಲಕ ನಿಮ್ಮ ಭಾಷೆಯನ್ನು ಇಂಗ್ಲಿಷ್/ಕನ್ನಡ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಈಗ ನಾನು ಟೈಪ್ ಮಾಡುತ್ತಿರುವುದು ಮೈಕ್ರೋಸಾಫ್ಟ್ ವರ್ಡ್ ಎಂಬ ತಂತ್ರಾಂಶದಲ್ಲಿ. ಆದರೆ ನಾನು ಭಾಷೆಯನ್ನು “ಕನ್ನಡ” ಎಂದು ಆಯ್ಕೆ ಮಾಡಿಕೊಂಡಿದ್ದೇನೆ. ವರ್ಡ್ ಮಾತ್ರವಲ್ಲ ಪವರ್ ಪಾಯಿಂಟ್ ಮೊದಲಾದ ಎಲ್ಲಾ ತಂತ್ರಾಂಶಗಳಲ್ಲೂ ನಾನು ಕನ್ನಡ ಟೈಪ್ ಮಾಡಬಹುದು.

5.     ಗೂಗಲ್ ಕನ್ನಡ ಟ್ರಾನ್ಸ್-ಲಿಟರೇಟರ್ ಎಲ್ಲಿ ಸಿಕ್ಕುತ್ತದೆ?

ಗೂಗಲ್ ಸಂಸ್ಥೆಯ ಟ್ರಾನ್ಸ್-ಲಿಟರೇಟರ್ ಇಲ್ಲಿ ಉಪಯೋಗಿಸಿ - http://www.google.com/intl/kn/inputtools/try/  ಈ ವೆಬ್-ತಾಣಕ್ಕೆ ಹೋಗಿ ನೀವು ಇಂಗ್ಲಿಷ್ ಕೀ-ಬೋರ್ಡಿನಲ್ಲಿ ka ಎಂದು ಟೈಪ್ ಮಾಡಿದರೆ ತೆರೆಯ ಮೇಲೆ ಮೂಡುತ್ತದೆ.  ಈ ತಂತ್ರಾಂಶ ಕೂಡಾ ಯೂನಿಕೋಡ್ ಬಳಸಿ ಸಿದ್ಧಗೊಳಿಸಲಾಗಿದೆ.

6.     ಟ್ರಾನ್ಸ್-ಲಿಟರೇಟರ್ ಬಳಸಬೇಕಾದಾಗ ಏನು ಎಚ್ಚರಿಕೆ ವಹಿಸಬೇಕು?

ಟ್ರಾನ್ಸ್-ಲಿಟರೇಟರ್ ನೀವು ಏನು ಹೇಳಲು ಬಯಸುತ್ತಿದ್ದೀರಿ ಎನ್ನುವುದನ್ನು  ಊಹಿಸಲು ಪ್ರಯತ್ನಿಸುತ್ತದೆ. kamala ಎನ್ನುವುದನ್ನು ನಾವು ಕಮಲ, ಕಾಮಲ, ಕಮಾಲ, ಕಮಲಾ, ಕಮಳ ಇತ್ಯಾದಿಯಾಗಿ ಓದಿಕೊಳ್ಳಬಹುದು! ಇಂದಿನ ಟ್ರಾನ್ಸ್-ಲಿಟರೇಟರ್ ತಂತ್ರಾಂಶಗಳು ನಿಮಗೆ ಮೆನು ಮೂಲಕ ಹಲವು ಸಾಧ್ಯತೆಗಳನ್ನು ತೋರಿಸಿ ನಿಮ್ಮ ಆಯ್ಕೆಗಾಗಿ ಕಾಯುತ್ತವೆ. ದ ಮತ್ತು ದ, ಲ ಮತ್ತು ಳ, ದ ಮತ್ತು ಧ, ... ಇದನ್ನೆಲ್ಲಾ ಟೈಪ್ ಮಾಡಲು ಸ್ವಲ್ಪ ಜಾಗರೂಕತೆ ವಹಿಸಬೇಕು.  ಢ ಎಂಬುದಕ್ಕೆ Dha ಎಂದು ಟೈಪ್ ಮಾಡಬೇಕು.  ಹೃಸ್ವ ಮತ್ತು ದೀರ್ಘ, ಅಲ್ಪಪ್ರಾಣ-ಮಹಾಪ್ರಾಣ –ಇವುಗಳನ್ನು ಬರೆಯುವಾಗ ಜಾಗ್ರತೆ ವಹಿಸಿ. karu ಇಂದಾಗ ಕರು ಎಂದೂ karU ಎಂದು ಬರೆದಾಗ ಕರೂ ಎಂದೂ ತಂತ್ರಾಂಶ ಅರ್ಥ ಮಾಡಿಕೊಳ್ಳುತ್ತದೆ. ತೆರೆಯ ಮೇಲೆ ಏನು ಮೂಡುತ್ತಿದೆ ಅನ್ನುವುದನ್ನು ನೋಡಿದರೆ ಒಳಿತು. ಸ್ವಲ್ಪ ಹೊತ್ತು ಟೈಪಿಂಗ್ ಪ್ರಯತ್ನಿಸಿದರೆ ನಿಮಗೆ ರೂಢಿಯಾಗುತ್ತದೆ. ಕನ್ನಡ ಟ್ರಾನ್ಸ್-ಲಿಟರೇಟರ್ ತಂತ್ರಾಂಶಗಳಲ್ಲಿ ಇನ್ನೂ ತುಂಬಾ ಸುಧಾರಣೆ ನಡೆಯಬೇಕಾಗಿದೆ. ಆದರೆ ಈಗ ಇರುವ ತಂತ್ರಾಂಶಗಳನ್ನು ಜಾಗರೂಕತೆಯಿಂದ ಬಳಸಿದರೆ ಏನೂ ತೊಂದರೆ ಇಲ್ಲದೆ ಟೈಪ್ ಮಾಡಬಹುದು.

7.     ಫೇಸ್ ಬುಕ್ ಮೊದಲಾದ ಕಡೆ ಕನ್ನಡ ಬಳಸುವುದು ಹೇಗೆ?

ನೀವು ಕಂಪ್ಯೂಟರ್ ಬಳಸಿ ಫೇಸ್ ಬುಕ್ ಬಳಸುತ್ತಿದ್ದರೆ ಹೀಗೆ ಮಾಡಬಹುದು. ಮೈಕ್ರೋಸಾಫ್ಟ್ ಲಾಂಗ್ವೇಜ ಟೂಲ್-ಬಾರ್ ಬಳಸಿ ಫೇಸ್ ಬುಕ್ ಮೇಲೆ ನೇರವಾಗಿ ಕನ್ನಡ ಬರೆಯಬಹುದು. ಅಥವಾ ಗೂಗಲ್ ಟ್ರಾನ್ಸ್-ಲಿಟರೇಟರ್ ಮೇಲೆ ಬರೆದದ್ದನ್ನು ಕಟ್-ಪೇಸ್ಟ್ ಮಾಡಬಹುದು.



ಈ ಬರವಣಿಗೆ ನಿಮಗೆ ಉಪಯುಕ್ತವಾಯಿತೆ? ಇಲ್ಲವಾದರೆ ಖಂಡಿತ ಕಾಮೆಂಟ್ ಮೂಲಕ ತಿಳಿಸಿ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)