ಬಾಯಿಪಾಠವಾಯ್ತು
ಸಂತ ರವಿದಾಸ (ಅಥವಾ ರೈದಾಸ) ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಭಕ್ತಿಕವಿ. ಈತನ ಜನ್ಮ ಕಾಶಿಯ ಹತ್ತಿರದ ಒಂದು ಗ್ರಾಮದಲ್ಲಿ ಆಯಿತು (೧೩೯೮). ಇವನ ತಂದೆತಾಯಿ ಚಮ್ಮಾರವೃತ್ತಿ ಮಾಡುತ್ತಿದ್ದವರು. ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿತ್ತು. ರವಿದಾಸನೂ ಮೊದಲು ಚಮ್ಮಾರವೃತ್ತಿಯಲ್ಲಿ ತೊಡಗಿಕೊಂಡರೂ ಮುಂದೆ ಭಕ್ತಿಮಾರ್ಗದಿಂದ ಆಕರ್ಷಿತನಾದ. ಪ್ರಸಿದ್ಧ ಸಂತ ರಾಮಾನಂದರು ಅವನನ್ನು ಶಿಷ್ಯನೆಂದು ಸ್ವೀಕರಿಸಿದರು. ತನ್ನ ಜೀವನದ ಬಹುಭಾಗವನ್ನು ರವಿದಾಸನು ಹಿಂದು ಸಂತರು-ಸಾಧುಗಳ ಸಾಂಗತ್ಯದಲ್ಲಿ ಕಳೆದ. ಈತನ ಭಕ್ತಿ ರಚನೆಗಳಲ್ಲಿ ಹಲವಾರನ್ನು ಸಿಕ್ಖರ ಆಧಿಗ್ರಂಥದಲ್ಲಿ (ಗುರು ಗ್ರಂಥ್ ಸಾಹಿಬ್) ಸೇರಿಸಿಕೊಳ್ಳಲಾಗಿದೆ. ದೇವರನ್ನು ನಿರ್ಗುಣನೆಂದು ಭಾವಿಸಿದ ರವಿದಾಸನು ದೈವದಲ್ಲಿ ಅಪಾರ ಭಕ್ತಿಯನ್ನು ಹೊಂದಿದ್ದವನು. ಈತನ ಮೃತ್ಯು ೧೫೪೦ರಲ್ಲಿ ಆಯಿತೆಂದು ನಂಬುತ್ತಾರೆ. ಅವನ ಹೆಸರಿನಲ್ಲಿ ಒಂದು ಧರ್ಮವೇ ಇದೆ. ಈ ಧರ್ಮವನ್ನು ಪಾಲಿಸುವವರು ತಮ್ಮನ್ನು "ರವಿದಾಸಿಯಾ" ಎಂದು ಕರೆದುಕೊಳ್ಳುತ್ತಾರೆ. ಈತನ ಹೆಸರಿನಲ್ಲಿ ಲಂಡನ್ ನಗರದಲ್ಲಿ ದೇವಸ್ಥಾನವಿದೆ. ಪ್ರಸ್ತುತ ಗೀತೆಯಲ್ಲಿ ರವಿದಾಸ ತನ್ನ ಭಕ್ತಿಯ ಸ್ವರೂಪವನ್ನು ತಿಳಿಸಿದ್ದಾನೆ. ದೈವದೊಂದಿಗೆ ತನ್ನ ಸಂಬಂಧ ಎಂಥದು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದ್ದಾನೆ. "ಅಬ್ ಕೈಸೆ ಛೂಟೆ, ನಾಮ್ ರಟ್ ಲಾಗಿ" ಎಂಬ ಈ ಗೀತೆಯನ್ನು ಅನೇಕ ಕಲಾವಿದರು ಹಾಡಿದ್ದಾರೆ. ವಾಣಿ ಜಯರಾಂ ಅವರು ಸುಶ್ರಾವ್ಯವಾಗಿ ಹಾಡಿದ ಈ ಗೀತೆಯನ್ನು ನೀವು ಯೂಟ್ಯೂಬಿನಲ್ಲಿ ಹುಡುಕಿದರೆ ಸಿಕ್ಕುತ್ತದೆ.

ಮೂಲ - ಸಂತ ರವಿದಾಸ
ಬಾಯಿಪಾಠವಾಯ್ತು, ಬಿಡುವುದೇನು ನಾಮ |
ಪ್ರಭುವೇ ಶ್ರೀಗಂಧವು ಜಲ ನಾನು, ಸೇರಿ ಕೊಳ್ಳುವೆ ಕಣಕಣವನ್ನೂ||

ಮೂಲ - ಸಂತ ರವಿದಾಸ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಬಾಯಿಪಾಠವಾಯ್ತು, ಬಿಡುವುದೇನು ನಾಮ |
ಪ್ರಭುವೇ ಶ್ರೀಗಂಧವು ಜಲ ನಾನು, ಸೇರಿ ಕೊಳ್ಳುವೆ ಕಣಕಣವನ್ನೂ||
ಪ್ರಭುವೇ ಘನವನ ನಾ ಬಾನಾಡಿ, ಚಕ್ರವಾಕದ ಚಂದ್ರನ ಜೋಡಿ||
ಪ್ರಭುವೇ ಪ್ರಣತಿಯು ತೈಲವು ನಾನು, ಜ್ಯೋತಿ ಹಗಲೇನು ಇರುಳೇನು ||
ಪ್ರಭುವೇ ಮುಕ್ತಾಫಲ ನಾ ದಾರ, ಪುಟವಿಟ್ಟಂತಿದೆ ಸ್ವರ್ಣಕಕಾರ ||
ಪ್ರಭುವೇ ಸ್ವಾಮಿಯು ನಾನೋ ದಾಸ, ಭಕ್ತಿ ಇಂಥಹುದೋ ರೈದಾಸ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ