ಪಾರ್ಕರ್ ಪೆನ್

ಕೊನೆಗೂ ನಾನು ಧೈರ್ಯ ಮಾಡಿ ಮೇಜಿನ ಸೆಳೆಖಾನೆಯನ್ನು ಧೈರ್ಯ ಮಾಡಿ ಎಳೆದೆ. ಪಾರ್ಕರ್ ಪೆನ್ ತೊಟ್ಟಿಲಲ್ಲಿ ಮಲಗಿದ ಮುಗ್ಧ ಮಗು ನನ್ನನ್ನು ಎತ್ತಿಕೋ ಎಂದು ಕೇಳಿಕೊಳ್ಳುವಂತೆ ನಕ್ಕಿತು.


ಮ್ಮ ತಂದೆಯ ಹತ್ತಿರ ಒಂದು ಪಾರ್ಕರ್ ಪೆನ್ ಇತ್ತು. ಅದರ ನಿಬ್ ಚಿನ್ನದಿಂದ ಮಾಡಿದ್ದಾರೆಂದು ನಮ್ಮ ತಾಯಿ ನಮಗೆ ಆಗಾಗ ಹೇಳುತ್ತಿದ್ದರು. ಆಗ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ ಎಂದು ನೆನಪು. ಆಗೆಲ್ಲ ಮನೆಯಲ್ಲಿ ಒಬ್ಬರಿಗೆ ಒಂದರಂತೆ ಪೆನ್ ಇರುತ್ತಿತ್ತು. ಬಾಲ್ ಪಾಯಿಂಟ್ ಪೆನ್ ಇನ್ನೂ ಅಷ್ಟೊಂದು ರೂಢಿಗೆ ಬಂದಿರಲಿಲ್ಲ. ಇಂಕ್ ತುಂಬಿಸಿ ಬರೆಯುವ ಪೆನ್. ಅದರಲ್ಲಿ ಶಾಯಿ ತುಂಬಿಸುವುದೊಂದು ಫಜೀತಿ. ಅದಕ್ಕೆ ಇಂಕ್ ಫಿಲ್ಲರ್ ಎಂಬ ಸಲಕರಣೆ ಸಿಕ್ಕುತ್ತಿತ್ತು. ಬಹಳ ಜನ ಇಂಕ್ ಪಿಲ್ಲರ್ ಎನ್ನುತ್ತಿದ್ದರು. ಕೆಲವೊಮ್ಮೆ ಈ ಇಂಕ್ ಫಿಲ್ಲರ್ ಕೂಡಾ ಕೈಕೊಟ್ಟು ಇಂಕ್ ಕೈಗೆಲ್ಲಾ ಮೆತ್ತಿಕೊಳ್ಳುತ್ತಿತ್ತು. ಬೆರಳಲ್ಲಿ ಇಂಕ್ ಕಲೆ ಇಲ್ಲದ ಹುಡುಗರು ಕಂಡರೆ ಅವರು ಓದಿ ಬರೆಯದ ಸೋಮಾರಿಗಳೆಂದು ಹೇಳಬಹುದಾಗಿತ್ತು. ನನ್ನ ತಂದೆಯ ಪಾರ್ಕರ್ ಪೆನ್ ಕೂಡಾ ಇಂಥ ಇಂಕ್ ತುಂಬಿಸಿ ಬರೆಯುವ ಪೆನ್ನೇ ಆಗಿತ್ತು. ಕಪ್ಪು ಬಣ್ಣದ, ಸ್ವಲ್ಪ ಡುಮ್ಮ ಎನ್ನಬಹುದಾದ ಮೈಕಟ್ಟು. ಪೆನ್ ಸಿಕ್ಕಿಸಿಕೊಳ್ಳಲು ಚಿನ್ನದ ಬಣ್ಣದ ಪಿನ್ ಜೋಡಿಸಿದ್ದರು.


ಈ ಪೆನ್ನನ್ನು ನಮ್ಮ ತಂದೆ ತಮ್ಮ ಮೇಜಿನ ಡ್ರಾನಲ್ಲಿ ಇಟ್ಟುಕೊಂಡಿರುತ್ತಿದ್ದರು. ಡ್ರಾವರಿಗೆ ಬೀಗ ಇದ್ದರೂ ಅವರು ಅದನ್ನು ಹಾಕುತ್ತಿರಲಿಲ್ಲ. ಬೇಸಿಗೆ ರಜದಲ್ಲಿ, ಅದೂ ದೆಹಲಿಯ ಬೇಸಿಗೆಯಲ್ಲಿ, ಮಕ್ಕಳಿಗೆ ಮನೆಯಲ್ಲಿ ಕಾಲ ಕಳೆಯುವುದು ಸುಲಭವಾಗಿರಲಿಲ್ಲ. ಆಗ ಟಿವಿ ಎಲ್ಲರ ಮನೆಗಳಲ್ಲೂ ಇರುತ್ತಿರಲಿಲ್ಲ. ಇದ್ದರೂ ಸಂಜೆ ಮಾತ್ರ ಒಂದೆರಡು ತಾಸು ಕಾರ್ಯಕ್ರಮಗಳು ಇರುತ್ತಿದ್ದವು.

ಇಂಥ ಸುಡುಬೇಸಗೆಯ ದಿನಗಳಲ್ಲಿ ಒಂದು ದಿನ ...

ಆ ದಿನಗಳಲ್ಲಿ ನನಗೆ ಬರೆಯುವ ಹವ್ಯಾಸ ಮೂಡುತ್ತಿತ್ತು. ಮನೆಯಲ್ಲಿ ನಮ್ಮ ತಾಯಿ ಏನೋ ಕೆಲಸದಲ್ಲಿದ್ದರು. ನನ್ನ ಅಣ್ಣ ಕೂಡಾ ಏನೋ ಮಾಡಿಕೊಳ್ಳುತ್ತಿದ್ದ. ನನಗೆ ಏನೋ ಬರೆಯಬೇಕೆನ್ನುವ ಆಸೆ. ನನ್ನದೇ ಪೆನ್ ಇತ್ತಾದರೂ ಅದು ಲೀಕ್ ಆಗುತ್ತಿದ್ದುದರಿಂದ ನನಗೆ ಅದನ್ನು ಬಳಸಲು ಬೇಸರ. ನಮ್ಮ ತಾಯಿಯನ್ನು ನೀವು ಕೇಳಿದರೆ ಅವರು ಬೇರೆಯೇ ಕಥೆ ಹೇಳಬಹುದು. "ಇವನಿಗೆ ಎಷ್ಟು ಪೆನ್ ಕೊಡಿಸಿದರೂ ಇನ್ನೊಂದು ಬೇಕು ಅನ್ನುತ್ತಿದ್ದ" ಎಂದು ನಗಬಹುದು. ಇರಲಿ.

ನನ್ನ ಮನಸ್ಸಿನಲ್ಲಿ ಒಂದು ಧೈರ್ಯ ಹುಟ್ಟಿಯೇ ಬಿಟ್ಟಿತು. ನಮ್ಮ ತಂದೆಯ ಪಾರ್ಕರ್ ಪೆನ್ನನ್ನು ಬಳಸಬಾರದೇಕೆ ಎಂದು ನನ್ನ ಮನಸ್ಸು ಹೊಯ್ದಾಡಿತು. ಕೊನೆಗೂ ನಾನು ಧೈರ್ಯ ಮಾಡಿ ಮೇಜಿನ ಸೆಳೆಖಾನೆಯನ್ನು ಧೈರ್ಯ ಮಾಡಿ ಎಳೆದೆ. ಪಾರ್ಕರ್ ಪೆನ್ ತೊಟ್ಟಿಲಲ್ಲಿ ಮಲಗಿದ ಮುಗ್ಧ ಮಗು ನನ್ನನ್ನು ಎತ್ತಿಕೋ ಎಂದು ಕೇಳಿಕೊಳ್ಳುವಂತೆ ನಕ್ಕಿತು. ಮಕ್ಕಳನ್ನು ಎತ್ತಿಕೊಳ್ಳದೆ ಹೋಗುವುದು ಸಾಧ್ಯವೇ!

ನಾನು ಮೇಜಿನ ಮುಂದಿದ್ದ ಕುರ್ಚಿಯ ಮೇಲೆ ಕೂತೆ. ಈಗಿನಂತೆ ಅದೇನೂ ರಿವಾಲ್ವಿಂಗ್ ಚೇರ್ ಅಲ್ಲ. ನಾಲ್ಕು ಕಾಲುಗಳ ಸ್ಟೂಲ್. ಒರಗಲು ಬೆನ್ನು ಕೂಡಾ ಇರಲಿಲ್ಲ. ನಮ್ಮ ತಂದೆ ತಮ್ಮ ಎಲ್ಲ ಸಾಹಿತ್ಯಕೃಷಿಯನ್ನೂ ಇದೇ ಸ್ಟೂಲ್ ಮೇಲೆ ಕುಳಿತೇ ಮಾಡಿದರು. ಆಗೆಲ್ಲ ಎರ್ಗಾನಮಿಕ್ಸ್ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಬೆನ್ನು ನೋವೆಂದು ಮಲಗುತ್ತಿದ್ದರು. ತಂದೆ ಇಂಗ್ಲಿಷ್ ಹೆಚ್ಚು ಬರೆಯುತ್ತಿದ್ದುದರಿಂದ ಟೈಪ್ ರೈಟರ್ ಬಳಸುತ್ತಿದ್ದರು. ಕನ್ನಡದಲ್ಲಿ ಬರೆಯಬೇಕಾದಾಗ ಲೇಖನಿ ಇಟ್ಟುಕೊಂಡು ಬರೆಯುತ್ತಿದ್ದರು.

ನನ್ನ ಕೈಗೆ ಬಂದ ಪಾರ್ಕರ್ ಪೆನ್ನನ್ನು ನಾನು ಎಳೆಯ ಮಗುವನ್ನು ನೋಡುವಂತೆ ನೋಡಿದೆ. ಅದಕ್ಕೆ ಹೊಸ ಉಡುಗೆಯನ್ನು ತೊಡಿಸುವಷ್ಟೇ ಜಾಗರೂಕತೆಯಿಂದ ಅದರ ಕ್ಯಾಪ್ ಬಿಚ್ಚಿದೆ.

ಅನಾಹುತಗಳು ಮಕ್ಕಳ ಮತ್ತು ಮನೆಗೆಲಸದವರ ಕೈಗೆ ಏನಾದರೂ ಬೆಲೆ ಬಾಳುವ ವಸ್ತುಗಳು ಬರುವುದನ್ನೇ ಕಾಯುತ್ತಿರುತ್ತವೆ. ಪಾರ್ಕರ್ ಪೆನ್ ಅದು ಯಾವಾಗ ಜಾರಿತೋ ನನಗೆ ತಿಳಿಯಲಿಲ್ಲ. ಮಗುವನ್ನು ಬೀಳಿಸಿದಷ್ಟೇ ಭೀತಿಯಿಂದ ನಾನು ಒಂದೆರಡು ಕ್ಷಣ ಸ್ತಂಭೀಭೂತನಾದೆ. ಪುಣ್ಯವಶಾತ್ ಚೀರಲಿಲ್ಲ. ನಂತರ ಮೆಲ್ಲನೆ ಆಚೀಚೆ ನೋಡಿದೆ. ಅಮ್ಮ ಅಡಿಗೆಮನೆಯಲ್ಲಿದ್ದರು. ಅಣ್ಣನ ಗಮನ ಓದಿನಲ್ಲಿತ್ತು.

ನಾನು ಬಗ್ಗಿ ನಡುಗುವ ಕೈಗಳಿಂದ ಪೆನ್ ಕೈಗೆತ್ತಿಕೊಂಡೆ. ಅಯ್ಯೋ! ಪಾರ್ಕರ್ ಪೆನ್ನಿನ ನಿಬ್ಬು! ಅದರ ತುದಿ ಯಾಕೆ ಹಾಗೆ ಬಗ್ಗಿದೆ! ಮುಂದೆ ನಾನು ಇಂಜಿನಿಯರಿಂಗ್ ಓದುತ್ತೇನೆಂದು ನನಗಿನ್ನೂ ಗೊತ್ತಿರಲಿಲ್ಲ. ಹಾಗಾಗಿ ಧೈರ್ಯದಿಂದ ನಿಬ್ಬನ್ನು ರಿಪೇರಿ ಮಾಡಲು ಅದನ್ನು ವಿರುದ್ಧ ದಿಕ್ಕಿನಲ್ಲಿ ಬಗ್ಗಿಸಲು ಪ್ರಯತ್ನಿಸಿದೆ. ನಿಬ್ಬಿನಲ್ಲಿ ಚಿನ್ನ ಇತ್ತೋ ಇಲ್ಲವೋ, ಅದು ತುಂಬಾ ಗಟ್ಟಿಯಾಗಿದ್ದುದೇನೋ ನಿಜ. ನೂರಾಎಂಬತ್ತು ಡಿಗ್ರಿಯಲ್ಲಿ ಹಾಯಾಗಿದ್ದ ನಿಬ್ ತುದಿ ಈಗ ಅಕ್ಯೂಟ್ ಆಂಗಲ್ ಎಂದರೇನು ಎಂಬುದನ್ನು ನಿದರ್ಶಿಸಲು ಸೂಕ್ತವಾಗಿತ್ತು. ನಿಜಕ್ಕೂ ನನ್ನ ಹೃದಯದಲ್ಲಿ ಅಕ್ಯೂಟ್ ಭಯದ ಅಲೆ ಎದ್ದಿತು. ಈ ಭಯದ ಅಲೆಯೇ ನನಗೆ ಮುಂದಿನ ಮಾರ್ಗವನ್ನು ತೋರಿಸಿತು.

ನಮ್ಮ ತಂದೆ ಪ್ರತಿದಿನ ಪಾರ್ಕರ್ ಪೆನ್ ಬಳಸುತ್ತಿರಲಿಲ್ಲ. ಹೀಗಾಗಿ ಅವರಿಗೆ ಅನಾಹುತದ ಅರಿವೇ ಆಗಿರಲಿಲ್ಲ. ಆದರೆ ಮುಂದೊಂದು ದಿನ ...

ಪತ್ರಗಳನ್ನು ಬರೆಯಲು ಕೂಡಾ ನಮ್ಮ ತಂದೆ ಟೈಪ್ ರೈಟರ್ ಬಳಸುತ್ತಿದ್ದರು. ಹತ್ತು ಪೈಸೆಯ ಪೋಸ್ಟ್ ಕಾರ್ಡ್ ಮತ್ತು ಹದಿನೈದು ಪೈಸೆಯ ಇನ್ ಲ್ಯಾನ್ಡ್ ಲೆಟರ್ (ಕೆಲವರು ಇದನ್ನು ಇಂಗ್ಲೆಂಡ್ ಲೆಟರ್ ಎನ್ನುತ್ತಿದ್ದರು) ಇವನ್ನು ಟೈಪ್ ರೈಟರಿನಲ್ಲೂ ಸೇರಿಸಿ ಟೈಪ್ ಮಾಡಬಹುದಾಗಿತ್ತು. ಆದರೆ ಸಹಿ ಹಾಕಲು ಪೆನ್ ಬೇಕೇ ಬೇಕಲ್ಲ. ನಮ್ಮ ತಂದೆ ಮೇಜಿನಿಂದ ತಮ್ಮ ಪಾರ್ಕರ್ ಪೆನ್ ತೆರೆದರು.

"ಇದೇನು ನಿಬ್ ಹೀಗಾಗಿದೆ!" ಎಂದು ಅವರು ಉದ್ಗರಿಸಿದಾಗ ನನ್ನ ಕಿವಿ ತೊಂಬತ್ತು ಡಿಗ್ರಿಯಲ್ಲಿ ನಿಂತಿತು. ಆದರೂ ತಲೆ ಬಗ್ಗಿಸಿ ನನ್ನ ಓದಿನ ಮೇಲೆ ನಿಗಾ ವಹಿಸಿದಂತೆ ನಟಿಸಿದೆ. ನನ್ನ ತಂದೆ ಮೊದಲು ನನ್ನ ತಾಯಿಯನ್ನು ಏನಾಯಿತೆಂದು ಕೇಳಿದರು. ನನ್ನ ತಾಯಿಗೆ ಚಿನ್ನದ ನಿಬ್ ಹಾಳಾಗಿದ್ದು ಕೇಳಿ ಆಘಾತವಾಯಿತು. ಅದು ಯಾಕೋ ನನ್ನ ತಂದೆ ಅವರ ಮೇಲೆ ಅನುಮಾನ ಪಡಲೇ ಇಲ್ಲ. ಇನ್ನು ಉಳಿದವರು ನಾವಿಬ್ಬರೇ. ನಾನು ಮತ್ತು ಅಣ್ಣ.

ಅವಮಾನ ಆದಾಗ ನನ್ನ ಕಿವಿಗಳು ಕೆಂಪಾಗಿಬಿಡುವುದು ನನ್ನದೊಂದು ದೋಷ. ಕುಂಬಳಕಾಯಿ ಕದ್ದವನನ್ನು ಅವನ ಹೆಗಲು ಹೇಗೆ ಲೆಟ್ ಡೌನ್ ಮಾಡಿತೋ ನನ್ನ ಕಿವಿಗಳು ನನ್ನನ್ನು ಲೆಟ್ ಡೌನ್ ಮಾಡಿದವು. ತಂದೆಯವರು ಹೇಗೆ ರಿಯಾಕ್ಟ್ ಮಾಡುತ್ತಾರೋ ಎಂದು ನನ್ನ ಎದೆ ಹೊಡೆದುಕೊಂಡಿತು.

ಆಶ್ಚರ್ಯ! ಅವರಿಗೆ ನಗೆ ತಡೆಯಲಾಗುತ್ತಿಲ್ಲ. "ನೋಡು, ಕಿಲಾಡಿ, ಏನೂ ಆಗದೆ ಇರೋ ಹಾಗೆ ವಾಪಸ್
ಇಟ್ಟುಬಿಟ್ಟಿರೋದು!" ಎಂದು ಜೋರಾಗಿ ನಗುತ್ತಿದ್ದಾರೆ! ನನ್ನ ಅಣ್ಣನಿಗೆ ಮತ್ತು ತಾಯಿಗೆ ಹೀಗೆ ನಕ್ಕು ನನ್ನನ್ನು ಕ್ಷಮಿಸಿಬಿಡುವುದು ಸರಿಯೋ ಇಲ್ಲವೋ ಎಂದು ಖಂಡಿತಾ ಅನುಮಾನ ಬಂದಿರಬಹುದು. ಆದರೆ ನಾನಂತೂ ಬಚಾವಾದೆ. ತಂದೆಯ ಪ್ರೀತಿ ನನ್ನನ್ನು ಕ್ಷಮಿಸಿತು. ಆದರೆ ನನ್ನ ತುಂಟತನದ ಕಥೆಯನ್ನು ಎಲ್ಲರಿಗೂ ಹೇಳುವುದನ್ನು ತಡೆಯಲಾಗಲಿಲ್ಲ. ಆಗಾಗ ಈ ಘಟನೆಯನ್ನು ನೆನೆಸಿಕೊಳ್ಳುತ್ತಿದ್ದರು. ಮುಂದೊಮ್ಮೆ ನಾನು ಅವರಿಗೆ ಒಂದು ಎಲೆಕ್ಟ್ರಾನಿಕ್ ಟೈಪ್ ರೈಟರ್ ತಂದುಕೊಟ್ಟಾಗ ಕೂಡಾ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)