ಹಿಮ್ಮುಖ ಆಟ
(ಈ ಕವಿತೆಯನ್ನು ಬಂಗಾಳಿಯಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು ನನ್ನ ಪೂರ್ವ ಸಹೋದ್ಯೋಗಿ ಮಿತ್ರ ಪ್ರೊ. ಸುಭಾಷ್ ಚಂದ್ರ ದತ್ತರಾಯ್)
ಮೂಲ ಬಂಗಾಳಿ ಕವಿತೆ - ತಸ್ಲೀಮಾ ನಸ್ರೀನ್
ಇಂಗ್ಲಿಷ್ ಅನುವಾದ : ಸುಭಾಷ್ ಚಂದ್ರ ದತ್ತರಾಯ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ರಾಮ್ನಾದಲ್ಲಿ ಅಂದು ನನ್ನ ಕಣ್ಣಿಗೆ ಬಿತ್ತು
ಒಬ್ಬ ಹುಡುಗಿಯನ್ನು ಒಬ್ಬ ಹುಡುಗ ಕೊಂಡುಕೊಳ್ಳುತ್ತಿರುವ ದೃಶ್ಯ.
ಅಂದಿನಿಂದ ನನಗೂ ಉತ್ಕಟವಾಗಿದೆ
ಐದೋ ಹತ್ತೋ ಕೊಟ್ಟು
ಒಬ್ಬ ಹುಡುಗನನ್ನು ಕೊಳ್ಳುವ ಬಯಕೆ.
ಮುಖ್ಯಬೀದಿಯಲ್ಲೋ ಪಾರ್ಕಿನ ಬೆಂಚ್ ಬದಿಗೋ ನಿಂತ
ದಾಡಿ ಮೀಸೆ ನುಣ್ಣನೆ ಬೋಳಿಸಿದ ಹುಡುಗ,
ಮಡಿಮಾಡಿದ ಶರ್ಟ್ ತೊಟ್ಟು
ಕೂದಲನ್ನು ಹಿಂದಕ್ಕೆ ಬಾಚಿಕೊಂಡವನು.
ಯಾರಿಗೂ ಕ್ಯಾರೇ ಅನ್ನದ ಭಂಗಿಯಲ್ಲಿ ನಿಂತವನು.
ಅವನ ಕಾಲರ್ ಹಿಡಿದೆಳೆದು ಆಟೋರಿಕ್ಷಾದೊಳಗೆ ಕೂಡಿಸಿ
ಅವನ ಹೊಟ್ಟೆಗೆ, ಕುತ್ತಿಗೆಗೆ ಕಚಗುಳಿ ಇಟ್ಟು
ಅವನಲ್ಲಿ ನಗೆಬುಗ್ಗೆ ಚಿಮ್ಮಿಸುವ ಬಯಕೆ.
ನನ್ನ ರೂಮಿಗೆ ಕರೆದು ತಂದು
ನನ್ನ ಹೈ ಹೀಲ್ಡ್ ಚಪ್ಪಲಿಯಿಂದ ಚೆನ್ನಾಗಿ ತದುಕಿ
ಹೊರಕ್ಕೆ ಅಟ್ಟಿಬಿಡಬೇಕು.
ಬೇವಾರ್ಸಿ ತಂದು!
ಇಂಥ ಹುಡುಗರು ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು
ಫುಟ್ ಪಾತ್ ಮೇಲೆ ನಿದ್ದೆ ಹೋದಾಗ
ಕೊಳಕು ಬೀದಿನಾಯಿಗಳು
ಅವರ ತೊಡೆಯಿಂದ ಜಿನುಗುವ
ಹಳದಿ ಕೀವು ನೆಕ್ಕುವುದನ್ನು
ಹುಡುಗಿಯರು ನೋಡಿ
ಎದೆತುಂಬಿ ನಕ್ಕಾಗ
ಅವರ ನಗೆಯಲ್ಲಿ ಕೇಳುತ್ತವೆ ಸಾವಿರ ಬಳೆಗಳು
ನೆಲಕ್ಕೆ ಬಿದ್ದು ಚೂರಾದ ಸದ್ದು.
ನನಗೆ ಹುಡುಗರನ್ನು ಕೊಳ್ಳುವ ಅದಮ್ಯ ಬಯಕೆ,
ಎದೆಯ ತುಂಬ ಕಪ್ಪು ರೋಮವುಳ್ಳ
ಹದಿಹರೆಯದ ಅಮಾಯಕ ಹುಡುಗರನ್ನು
ಬೆಲೆಕೊಟ್ಟು ಖರೀದಿಸಿ ತಲೆಯಿಂದ ಕಾಲಿನವರೆಗೆ
ಅವರನ್ನು ಹಿಸುಕಿ
ಅನಂತರ ಅವರ ಮರ್ಮಸ್ಥಾನಕ್ಕೆ ಬಲವಾಗಿ ಒದ್ದು
ಹೋಗಾಚೆ ಎಂದು ಹೊರಕ್ಕೆ ದಬ್ಬುವ ಬಯಕೆ.
ಬೇವಾರ್ಸಿ ತಂದು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ