ಫೋನ್ - ಅಂದು, ಇಂದು
ನಾನು ಮೊದಲ ಸಲ ಅಮೆರಿಕಾಗೆ ಹೋದಾಗ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಆಗ ಫೋನ್ ಕನೆಕ್ಷನ್ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ನಾಲ್ಕೈದು ಬೀದಿಗಳಲ್ಲಿ ಹುಡುಕಿದರೆ ಒಬ್ಬರ ಮನೆಯಲ್ಲಿ ಫೋನ್ ಇದ್ದರೆ ಹೆಚ್ಚು. ನಾನು ನ್ಯೂಯಾರ್ಕ್ ತಲುಪಿದ್ದು ಸಂಜೆ. ನಮ್ಮನ್ನು ಕರೆದೊಯ್ಯಲು ಬಂದಿದ್ದ ದಿನೇಶ್ ನಮ್ಮನ್ನು ನೇರವಾಗಿ ಊಟಕ್ಕೆ ಕರೆದುಕೊಂಡು ಹೋಗಿ ನಂತರ ನಾವು ತಂಗಬೇಕಾಗಿದ್ದ ಹೋಟೆಲಿಗೆ ಕರೆದುಕೊಂಡು ಹೋಗಿ ಬಿಟ್ಟರು. ಆಗಲೇ ಕತ್ತಲಾಗಿತ್ತು. ಆಯಾಸವಾದರೂ ನಿದ್ದೆ ಸರಿಯಾಗಿ ಬರಲಿಲ್ಲ. ಹೊರಗೆ ಹಿಮಪಾತವಾಗುತ್ತಿತ್ತು. ಅದನ್ನು ಕಿಟಕಿಯ ಮೂಲಕ ನೋಡುತ್ತಾ ನಿಲ್ಲುವುದೇ ಒಂದು ಅಪೂರ್ವ ಅನುಭವ. ಮರುದಿನ ಬೆಳಗ್ಗೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋಗಿ ಕ್ಷೇಮವಾಗಿ ತಲುಪಿದೆವೆಂದು ಟೆಲಿಗ್ರಾಮ್ ಕೊಟ್ಟು ಬಂದೆವು. ಮುಂದೆ ಅಪಾರ್ಟ್ಮೆಂಟಿನಲ್ಲಿ ವಾಸ ಪ್ರಾರಂಭವಾದ ನಂತರ ಮನೆಗೆ ಪತ್ರ ಬರೆಯುವ ಸಂಪ್ರದಾಯ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಫೋನ್ ಇತ್ತು. ಬಹುಶಃ ಅದು ಅವರ ಆಫೀಸ್ ನೀಡಿದ ಫೋನ್. ಅವರ ಬಾಡಿಗೆ ಮನೆ ಬಹಳ ಚಿಕ್ಕದು. 30x30 ಸೈಟಿನಲ್ಲಿ ಮಾಲೀಕ ಎರಡು ಮನೆ ಕಟ್ಟಿಸಿ ಬಾಡಿಗೆ ಕೊಟ್ಟಿದ್ದ. ಮನೆಯಲ್ಲಿ ಒಂದು ಅಡುಗೆ ಮನೆ, ಒಂದು ಕೋಣೆ ಮತ್ತು ಹಾಲ್ ಎಂದು ಕರೆಸಿಕೊಳ್ಳುವ...