ಸಂಖ್ಯೆಗಳು

 ಸಂಖ್ಯೆಗಳ ಔದಾರ್ಯ ನನಗೆ ಇಷ್ಟ

ಯಾವುದನ್ನೇ ಯಾರನ್ನೇ ಆಗಲಿ ಎಣಿಸಲು ಬರುತ್ತವೆ

ತಟ್ಟೆಗೆ ಎರಡು ಮಾವಿನಕಾಯಿ, ಕೋಣೆಗೆ ಒಂದು ಬಾಗಿಲು,

ರಂಗದ ಮೇಲೆ ಎಂಟು ನರ್ತಕಿಯರು


ಕೂಡುವ ಲೆಕ್ಕದಲ್ಲಿರುವ ಮನೆವಾರ್ತೆ ನನಗಿಷ್ಟ -

ಎರಡು ಕಪ್ ಸಕ್ಕರೆ ಹಾಕಿ ರುಬ್ಬಿಕೊಳ್ಳಿ -

ಮತ್ತು ಆ ಧಾರಾಳತನ :  ನೆಲದ ಮೇಲೆ ಆರು ಸೇಬು

ಬಿದ್ದಿವೆ, ಮರದಿಂದ ಬೀಳುತ್ತಿವೆ ಮತ್ತೂ ಮೂರು.


ಬೆಳ್ಳಿಯಂತೆ ಥಳಥಳ ಹೊಳೆವ

ಮೀನುಗಳಲ್ಲಿ ಒಂದೊಂದೂ

ಗುಣಾಕಾರದ

ಮರಿಗಳನ್ನು ಹೆರುತ್ತಿವೆ

ದೋಣಿಯ ಕೆಳಗೆ


ಕಳೆಯುವ ಲೆಕ್ಕದಲ್ಲೂ ಎಂದೂ ನಷ್ಟವಿಲ್ಲ

ಬೇರೆಲ್ಲೋ ಹೋಗಿ ಕೂಡಿಕೊಳ್ಳುತ್ತದೆ ಅಷ್ಟೇ

ಐದು ಹಕ್ಕಿಗಳಲ್ಲಿ ಎರಡನ್ನು ಕಳೆದರೆ

ಆ ಎರಡು ಬೇರಾರದೋ ತೋಟದಲ್ಲಿ

ಸೇರಿಕೊಂಡಿವೆ ಮರದ ಪೊಟರೆ.



ದೊಡ್ಡ ಗೊನೆಯಿಂದ ಹಣ್ಣುಗಳನ್ನು

ಎರಡರ ಗುಂಪುಗಳಲ್ಲಿ ತೆಗೆದಿಡುವ

ಭಾಗಾಕಾರದಲ್ಲಿದೆ ಒಂದು ಔನ್ನತ್ಯ.

ಪ್ರತಿಯೊಂದು ಜೊತೆಯೂ 

ಯಾವುದೋ ದೇವರಿಗೆ ನೈವೇದ್ಯ.


ನನ್ನನ್ನು ಪ್ರತಿಸಲವೂ ಆಶ್ಚರ್ಯಕ್ಕೆ ದೂಡುವುದು

ಕೊನೆಯಲ್ಲಿ ಕಾಲು ಅಲ್ಲಾಡಿಸುವ 

ಭಾಗಲಬ್ಧದ ಕಾಣಿಕೆ:

ನಲವತ್ತ ಏಳನ್ನು ಹನ್ನೊಂದರಿಂದ 

ಭಾಗಿಸಿದರೆ ತಲಾ ನಾಲ್ಕಾದರೂ

ಪ್ರತ್ಯೇಕವಾಗಿ ಉಳಿಯುವ ಮೂರು.


ಅಮ್ಮನ ಕರೆಯನ್ನು ಕೇಳದೇ ಹೊರಟ ಇಬ್ಬರು ಹುಡುಗರು

ಎಷ್ಟು ಹುಡುಕಿದರೂ ಸಿಕ್ಕದ ಒಂದು ಮುದ್ದುಗರು.


ಮೇರಿ ಕಾರ್ನಿಷ್

(ಅಮೆರಿಕನ್ ಕವಯಿತ್ರಿ)

ಅನುವಾದ : ಸಿ.ಪಿ. ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)