ಅದೆಷ್ಟು ಪ್ರಕಾಶಮಾನ
ನೀರೆಮ್ಮೆಯ ಭುಜಗಳಷ್ಟೇ ಒಣಕಲಾದ
ಏಪ್ರಿಲ್ ತಿಂಗಳ ಶುಷ್ಕ ಗಾಳಿ.
ಮಿಡತೆಗಳು ಧೂಳು ಕೆರೆಯುತ್ತವೆ
ರೆಕ್ಕೆಗಳಿಗೆ ಒರೆಸಿಕೊಳ್ಳುತ್ತವೆ ತೆಳ್ಳನೆಯ ಕಾಲುಗಳನ್ನು.
ಸೈನಿಕರ ಮುಂದೆ ಹಾರಾಡುತ್ತವೆ.
ತಗ್ಗಿನ ವಕ್ರಾಕಾರದ ಪಥಗಳಲ್ಲಿ
ಪಟಪಟ ಬಡಿಯುವ ರೆಕ್ಕೆಗಳು
ಕಂಡೂ ಕಾಣದಂತೆ ಮಸುಕು ಮಸುಕು.
ಸೈನಿಕರು ಇಂದು ಇದನ್ನೆಲ್ಲ ಗಮನಿಸುತ್ತಿಲ್ಲ
ಅವರ ಕಣ್ತುಂಬ ತುಂಬಿಕೊಂಡಿದೆ
ರಸ್ತೆಯ ಮೇಲಿನ ಭಗ್ನಾವಶೇಷ,
ವಸ್ತ್ರಗಳನ್ನು ಹೊದ್ದಿಸಿದ ದೇಹಗಳು,
ಮತ್ತು ಮೇಲೆ ಉರಿಯುವ ಸೂರ್ಯ,
ಅದೆಷ್ಟು ಪ್ರಕಾಶಮಾನ, ಅದೆಷ್ಟು ಕಠೋರ,
ಸಪಾಟ, ಬೆಳ್ಳಗೆ ಬಿಳಿಚಿದ ಸೂರ್ಯ.
ಶವಾಗಾರದ ಕಾರ್ಮಿಕರು ಅದೆಷ್ಟು ಮೊಳೆ ಬಡಿಯಬೇಕೋ
ಈ ಪ್ರಖರ ಬೆಳಕನ್ನು ಮುಚ್ಚಿಡಲು.
ಪ್ರತಿಫಲಿತವಾಗುತ್ತಿದೆ ಪ್ರತಿಯೊಂದೂ ಪದಾರ್ಥದಿಂದ,
ಸತ್ತವರ ಊದಿಕೊಂಡ ಕಾಲುಗಳಿಂದ,
ಮೂಳೆಮೂಳೆ ಕೈಗಳಿಂದ,
ತಣ್ಣಗೆ ಕೊರೆಯುತ್ತಿದ್ದರೂ
ಬೆಳ್ಳಗೆ ಹೊಳೆಯುವ ಹಣೆಗಳಿಂದ
ಪ್ರಕಾಶಮಾನ ಬೆಳಕು.
ಮೂಲ ಅಮೆರಿಕನ್ ಕವಿತೆ: ಬ್ರಯಾನ್ ಟರ್ನರ್
ಅನುವಾದ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ