ಸಂದೇಹಗಳು

 ಅವಳ ಥರ್ಮಾಸ್ ಫ್ಲಾಸ್ಕಿನಲ್ಲಿದ್ದ ಸೂಪ್ ಇನ್ನೂ ಬಿಸಿಯಾಗಿತ್ತು

ಆದರೆ ಅವಳೇ ತಣ್ಣಗಾಗಿ ಹೋಗಿದ್ದಳು.

ಡಬ್ಬಿಯಲ್ಲಿ ಕಳಿಸಿದ್ದ ಸ್ಯಾಂಡ್ವಿಚ್ ತಿನ್ನಲು ಅವಳಿಗೆ ಅವಕಾಶವೇ ಸಿಕ್ಕಲಿಲ್ಲ. 

ಚೀಸ್ ಸ್ಯಾಂಡ್ವಿಚ್ ಮಾಡಲು ನಾನು ಬೆಳಗ್ಗೆ ಬೇಗ ಎದ್ದೆ.

ಅವಳಿಗೆ ಇಷ್ಟವಾಗುವಂತೆ ಬ್ರೆಡ್ ಸುತ್ತಲಿನ ಅಂಚನ್ನು ನಾಜೂಕಾಗಿ ಕತ್ತರಿಸಿದ ಸ್ಯಾಂಡ್ವಿಚ್

ಯಾರೂ ತಿನ್ನಲಿಲ್ಲ.

ಮುಂದಿನ ಬುಧವಾರ ಹಲ್ಲಿನ ಡಾಕ್ಟರ್ ಅವಳನ್ನು

ನೋಡಬೇಕಿತ್ತಲ್ಲ, ಕ್ಯಾನ್ಸಲ್ ಮಾಡಲೇ?

ಅಥವಾ ಅವರೇ ತಿಳಿದುಕೊಳ್ಳುತ್ತಾರಾ?


ಅಂದು ರಜೆ ಹಾಕಿದ್ದೇ ಆಗಿದೆ

ಕ್ಕಿನಿಕ್ಕಿಗೆ ಅವಳ ಅಣ್ಣನನ್ನು ಕರೆದುಕೊಂಡು ಹೋಗಲೇ?

ಹಿಂದೆ ಕಾರ್ಲಾಸ್ ಹಲ್ಲಿನಲ್ಲಿ ಕುಳಿಯಾದಾಗ

ಹೇಗನ್ನಿಸುತ್ತೆ ಎಂದು ಅಮೆರಿ  ಅವನನ್ನು ಕೇಳಿದ್ದಳು.

ಹಲ್ಲಿನ ಕುಳಿಯ ಅನುಭವ ಅವಳಿಗೆ ಇನ್ನು ಆಗುವುದಿಲ್ಲ.

ಹಲ್ಲಿನ ಕುಳಿಯನ್ನು ತುಂಬುವ ಅನುಭವವೂ ಆಗುವುದಿಲ್ಲ.

ಅವಳ ದೇಹದಲ್ಲಿ ಈಗಿರುವುದು 

ಗುಂಡಿನ ಕುಳಿಗಳು.

ಅವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ.



ಗನ್ ಹೊತ್ತು ಬಂದವನು ತರಗತಿಯನ್ನು ಹೊಕ್ಕು

ಬಾಗಿಲು ಮುಚ್ಚಿ ಒಳಗಿದ್ದವರನ್ನು ಸುಟ್ಟುಹಾಕುವ

ಒಂದೆರಡು ನಿಮಿಷದ ಮುಂಚೆ

ಅವಳು ಶೌಚಕ್ಕೆ ಹೋಗಲು ಅನುಮತಿ ಕೇಳಿದ್ದಿದ್ದರೆ?


ಸತ್ತವರಲ್ಲಿ ಅವಳ ಸರದಿ ಮುಂಚಿನದಾಗಿತ್ತೋ ಕೊನೆಯದೋ ?

ಇದಕ್ಕೆಲ್ಲಾ ಯಾರಲ್ಲಿ ಉತ್ತರ ಕೇಳಲಿ?


ಅವಳ ಗೆಳತಿಯರಲ್ಲಿ ಯಾರು ಸಾಯುವುದನ್ನು ಅವಳು ನೋಡಿದಳೋ?

ಹಾನಾ? ಬೆಟ್ಟಿ? ಇಬ್ಬರೂ?

ಅವರ ರಕ್ತ ಚಿಮ್ಮಿ ಅವಳ ಸ್ಕೌಟ್ ಸಮವಸ್ತ್ರದ ಮೇಲೆ ಬಿದ್ದಿರಬಹುದಾ?

ಅವಳಿಗೆ ಇತ್ತೀಚೆಗೆ ಅಗ್ನಿಸುರಕ್ಷತೆ ಬ್ಯಾಜ್ ಸಿಕ್ಕಿತ್ತು.

ಅದು ಹಾಳಾಗಿಹೋಯಿತೋ?


ಶಾಲೆಯಲ್ಲಿ ನರಮೇಧದಲ್ಲಿ ಭಾಗವಹಿಸಿದ್ದಕ್ಕೆ

ಯಾವುದೇ ಬ್ಯಾಜ್ ಕೊಡುವುದಿಲ್ಲ ...


ಮೂಲ ಅಮೆರಿಕನ್ ಕವಿತೆ: ಅನಾಮಧೇಯ

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ಟೆಕ್ಸಾಸ್ ರಾಜ್ಯದ ಯುವಾಲ್ಡಿ ಎಂಬ ಪುಟ್ಟ ನಗರದಲ್ಲಿ ಇತ್ತೀಚೆಗೆ ಒಂದು ದುರದಷ್ಟಕರ ಘಟನೆ ನಡೆದುಹೋಯಿತು. ಹದಿನೆಂಟು ವರ್ಷದ ಒಬ್ಬ ಹುಡುಗ ಗನ್ ಹಿಡಿದು ಯುವಾಲ್ಡಿಯ ಒಂದು ಶಾಲೆಗೆ ನುಗ್ಗಿ ಅನೇಕ ಮಕ್ಕಳನ್ನೂ ಇಬ್ಬರು ಶಿಕ್ಷಕಿಯರನ್ನೂ ಬಲಿ ತೆಗೆದುಕೊಂಡ. ಇಂಥ ಘಟನೆಗಳು ಅಮೆರಿಕಾದಲ್ಲಿ ಹೆಚ್ಚಾಗಿವೆ. ಯುವಾಲ್ದಿಯ ಘಟನೆ ಅನೇಕ ಕಲಾವಿದರನ್ನೂ ಬರಹಗಾರರನ್ನೂ ಪ್ರೇರೇಪಿಸಿದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)