ಕತ್ತಲ ಹಣತೆ

ಕತ್ತಲ ಹಣತೆ

ಮೂಲ: ಹರಿವಂಶರಾಯ್ ಬಚ್ಚನ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ 

ಆಗಸ್ಟ್ ಹದಿನೈದು ೨೦೨೩



ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ?

ಕಮನೀಯ ಮಂದಿರವನ್ನು ಕಟ್ಟಿದ್ದೆಯಾ ಕಲ್ಪನೆಯ ಕೈಯಿಂದ? ಭಾವನೆಯ ಕೈಯಿಂದ ಅದರೊಳಗೆ ಬಂಧಿಸಿದ್ದೆಯಾ ಸ್ವಚ್ಛಂದ?ಕನಸುಗಳ ಕೈಯಿಂದ ಸಿಂಗರಿಸಿದ್ದೆಯಲ್ಲ ಬಹು ಅಂದ?ಅಲ್ಲಿ ಹರಡಿದ್ದೆಯಾ ಸ್ವರ್ಗದ ಸೌರಭದ ಸಿರಿಗಂಧ?
ಮುರಿದು ಬಿದ್ದಿತೆ ಸೌಧ? ಆಯ್ದು ಇಟ್ಟಿಗೆ ಕಲ್ಲು ಅದರಿಂದ
ಕಟ್ಟಿಕೊಳ್ಳಲು ಕಷ್ಟವೇ ಸರಳ ಶಾಂತಿ ಕುಟೀರವೊಂದ?
ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ?


ನಭನೀಲ ನೀಲಿಮೆಯಿಂದ ಮಾಡಿದ ಮಧುಪಾತ್ರೆಯೋ ಮನಮೋಹಕ
ಮುಗಿಲ ಕಂಬನಿಯಲ್ಲಿ ನೆಂದು ಹೊಳೆಯುತ ಲಕಲಕ
ಮಧುಪಾತ್ರೆಯೊಳು ನವಮೇಘದೊಲು ತುಳುಕುವ ದ್ರಾವಕ
ಉಷೆಯ ಕೋಮಲ ಪ್ರಥಮ ಕಿರಣದ ಬಣ್ಣದ ಸಿಹಿ ಪಾನಕ
ಮುರಿದು ಹೋದರೆ ಪಾತ್ರೆ ಜೋಡಿಸಿ ಎರಡು ಕೈಗಳ ಅಂಜಲಿ
ಒಂದು ನಿರ್ಮಲ ನೀರಧಾರೆಯ ಕುಡಿಯಲು ಯಾವ ನಿರ್ಬಂಧ?
ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ?


ಹಿಂದೆ ಜೀವನದಲ್ಲಿ ಎಂದೂ ಹತ್ತಿರ ಬರಲಿಲ್ಲ ಚಿಂತೆ
ಕತ್ತಲೆಯ ಮಾತಿರಲಿ ಕರಿಛಾಯೆಯೂ ಬೀಳಲಿಲ್ಲ ಎಂಬಂತೆ!
ಕಣ್ಣಲ್ಲಿತ್ತು ಮಾದಕತೆ, ಮಾತುಗಳಲ್ಲಿ ಮೋದದ ಕವಿತೆ
ಗುಡುಗಿನಂತಹ ನಗೆಗೆ ನಾಚುತ್ತಿತ್ತು ಕಾರ್ಮೋಡಗಳ ಸಂತೆ
ಕಳೆದುಕೊಂಡು ಇದೆಲ್ಲ ಉಲ್ಲಾಸವೇ ಕಳೆದುಹೋದಂತೆ, ಆದರೆ
ಅಸ್ಥಿರತೆಯ ಈ ಸಮಯದಲ್ಲಿ ಮುಗುಳುನಗಲು ಯಾರ ನಿರ್ಬಂಧ?
ಇರುಳು ಕತ್ತಲುಮಯವಾದರೆ ಹಣತೆ ಹಚ್ಚಿಡಲು ಯಾರ ನಿರ್ಬಂಧ?

ಉನ್ಮಾದದ ಅಲೆಗಳಲ್ಲಿ ಕೇಳಿಸುತ್ತಿತ್ತು ರಾಗ, ತಾನ
ವೈಭವಗಳ ಕಡೆಗಣಿಸಿ ಬೇಡಿದೆ ಗಾಯನದ ವರದಾನ 
ಒಂದು ಚರಣದ ನಂತರ ಇನ್ನೊಂದು ಹುಟ್ಟಿ ನಿರಂತರ
ಭೂಮಿ ಆಕಾಶಗಳ ತುಂಬಾ ಗಾಯನದ ಸ್ವರ, ಪ್ರತಿಸ್ವರ
ಬತ್ತಿತೇ ಸಂಗೀತದೊರತೆ? ನೆನಪಿರುವ ಅರೆಪಂಕ್ತಿಯೊಂದ
ಹಾಡಿಕೊಳ್ಳಲು ಮೌನದಲ್ಲಿ ಇದೆಯೆ ಯಾರದಾದರೂ ನಿರ್ಬಂಧ?
ಇರುಳು ಕತ್ತಲುಮಯವಾದರೆ ಹಣತೆ ಹಚ್ಚಲು ಯಾರ ನಿರ್ಬಂಧ?

ಚುಂಬಕವು ಸೆಳೆದಂತೆ ಲೋಹವ ಸೆಳೆದು ಬಂದರು ಮಿತ್ರರು
ಸನಿಹ ಬಂದರೆ? ಹೃದಯದಲ್ಲೇ ಹೂಡಿ ನೆಲೆಯನು ನಿಂತರು
ಹೇಗೆ ಕಳೆದವು ದಿನಗಳೆಂದರೆ ಹೃದಯವೀಣೆಯ ತಂತಿ ಯಾರೋ
ಮೀಟಿ ಹಾಡಿದ ಹಾಗೆ ಸುರಿಸುತ ಗಾನಮೇಳದ ತುಂತುರು
ಹೊರಟು ಹೋದರು ಅವರು, ಮರಳಲಾರರು ಇನ್ನೆಂದೂ 
ಮತ್ತೊಬ್ಬ ಮಾನಸ ಮಿತ್ರನನ್ನು ಹುಡುಕಿಕೊಳ್ಳಲು ಯಾರ ನಿರ್ಬಂಧ?
ಇರುಳು ಕತ್ತಲು ನಿಜ, ಹಣತೆ ಹಚ್ಚಿಡಲು ಯಾರ ನಿರ್ಬಂಧ? 

ಎಂಥದದು ಬಿರುಗಾಳಿ, ಪ್ರೇಮದ ಗೂಡು ಆಯಿತು ನೆಲಸಮ!
ಕೆಲಸಕಾವುದು ಬಾರದಾಯಿತು ನಿನ್ನ  ರೋದನ ಆಕ್ರಂದನ
ವಿನಾಶಗೊಳಿಸುವ ಶಕ್ತಿಗಳ ತಡೆಯಲಾರು ಸಶಕ್ತರು?
ನಿರ್ಮಾಣ ಕಾರ್ಯದ ಪ್ರತಿನಿಧಿ! ಈ ಪ್ರಶ್ನೆಗೆ ಉತ್ತರ ಕೊಡು:
ನೆಲೆಯಾಗಿ ನಿಂತವರೆಲ್ಲ ನೆಲಸಮ, ಇದು ನಿಸರ್ಗದ ನೇಮ,
ಕೆಳಗೆ ಬಿದ್ದವರನ್ನು ಮೇಲೆತ್ತಿ ನಿಲ್ಲಿಸಲು ಯಾರ ನಿರ್ಬಂಧ?
ಇರುಳು ಕತ್ತಲೆಯಾದರೂ ಹಣತೆ ಹಚ್ಚಿಡಲು ಯಾರ ನಿರ್ಬಂಧ?



ಕಾಮೆಂಟ್‌ಗಳು

  1. ನಿಸರ್ಗದ ನಿಯಮ ಕಟ್ಟುವುದೋ ಕೆಡಹುವುದೋ ಅಂತೂ ಕಡೆಯಲ್ಲಿ ನಿರ್ನಾಮವೇ ಹೌದು, ಇರಲಿ ಇದ್ದಷ್ಟು ದಿನಗಳಲ್ಲಿ ನೀ ಬೆಳಗಲು ಬೇಕಾದ್ದನ್ನು ಮಾಡು ಎಂಬುದನ್ನು "ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ?" ಎಂಬ ಸ್ವಗತದಲ್ಲಿ ಕವಿ ಪ್ರಶ್ನಿಸುತ್ತಿದ್ದಾನೆ. ಪ್ರಾಸಬದ್ಧ ಚರಣಗಳ ಮೂಲಕ ಅನುವಾದ ಚೆನ್ನಾಗಿ ಬಂದಿದೆ. ಲೇಖಕರಿಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀ ರಾಮಚಂದ್ರ ಅವರೇ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)