ಪೋಸ್ಟ್‌ಗಳು

ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ

ಇಮೇಜ್
ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ ಮೂಲ: ಕೆನ್ ನೆಸ್ಬಿಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಒಂದು ಕವಿತೆ  ಓದುತ್ತಾ ಇದ್ದೆ ಮೊನ್ನೆ ಕವಿ ಗೀಚಿದ್ದಾನೆ ತೋಚಿದ ಪದಗಳನ್ನೇ ಒಂದು ಬಾಳೆಕಾಯಿ ಪದವೂ ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟೆ ತಲೆಗೆ ಪೆನ್ಸಿಲ್ ಹೋಗದೆ ಒಂದೊಂದು ಜಿಲೇಬಿ ಸಾಲಿನಲ್ಲೂ ಕೂಡಾ ಸೇರಿಸಿದ್ದಾನೆ ಸಾಲಿಗೆ ಸೇರದ ಒಂದು ಪದ ಇಂಥ ಕವಿತೆಯನ್ನು ನಾನು ಬೆಕ್ಕು ಯಾವತ್ತೂ ಕಾಲ್ಚೆಂಡು ಓದಿರಲಿಲ್ಲ ನಿಮ್ಮಲ್ಲೇನು ಗುಟ್ಟು ಯಾವ ಕವಿ ಬರೆದಿರಬಹುದು ಈ ಕವಿತೆ ಮತ್ಸ್ಯ ಈ ಕವಿಗೆ ಚಮಚ ಏನಾದರೂ ಹುಚ್ಚುಗಿಚ್ಚಾ  ಯಾವ ಉಪ್ಪಿನಕಾಯಿ ವ್ಯಕ್ತಿಗೆ ಇಂಥ ಮಿದುಳು ಇದ್ದೀತು ಸೌಟು ಎಂದು ಯೋಚಿಸಿ ಬಂತು ಅಳು  ಓದುತ್ತಾ ಓದುತ್ತಾ ಮಟರ್ ಪನೀರ್ ಅವರೆಕಾಳು  ಹುಚ್ಚು ಹುಚ್ಚಾಗಿತ್ತು ಉಪ್ಪಿಟ್ಟು ಕವಿತೆಯ ಸಾಲು ಇನ್ನಷ್ಟು ಗೋಳಿಬಜೆ ಕೋಡುಬಳೆ ಗೋಜಲು ಆಗುತ್ತಿತ್ತು ಕವ್ವಾಲಿ ಗಜಲ್ ಗುರುರಾಜುಲು  ಕೊನೆಗೂ ಕಬಡ್ಡಿ ಹಂಚಿಕಡ್ಡಿ ಇನ್ವೆಸ್ಟ್ಮೆಂಟ್ ಬಡ್ಡಿ  ಮುಗಿಸಿದೆ ಓದಿ  ಪ್ಯಾರಸಿಟಮಾಲ್  ಆರ್ಗಾನಿಕ್ ಟೆಡ್ಡಿ ಕೊಡಬೇಕು ಅಗ್ಗಿಷ್ಟಿಕೆ ಚುಚ್ಚುಕ ಕೆಂಪು ಹಣಿಗೆ  ಬರೆ ಬುಡಕ್ಕೆ ಬುಡಬುಡಕೆ ಬೀಡಾ ಬರೆದವನಿಗೆ

ತೆಗೆದೆಸೆಯಿರಿ ಅಲಾರಂ ಗಡಿಯಾರ

ಇಮೇಜ್
 ತೆಗೆದೆಸೆಯಿರಿ ಅಲಾರಂ ಗಡಿಯಾರ ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್  ನನ್ನ ಅಪ್ಪನದು ಯಾವಾಗಲೂ ಒಂದೇ ಹಾಡು "ಯಾರು ಬೇಗ ಮಲಗಿ ಬೇಗ ಏಳುವರೋ ಅವರು ಆರೋಗ್ಯ ಹೊಂದುವರು, ಸಂಪತ್ತು ಗಳಿಸುವರು, ಜಾಣರಾಗುವರು." ರಾತ್ರಿ ಎಂಟಕ್ಕೆಲ್ಲ ದೀಪ ನಂದಿಸಿಬಿಡುತ್ತಿದ್ದರು  ನಮ್ಮ ಮನೆಯಲ್ಲಿ ಯಾವತ್ತೂ ಬೆಳಗ್ಗೆ ಎದ್ದಾಗ ಕಾಫಿ-ಉಪಾಹಾರದ  ಘಮಘಮ ಹರಡಿರುತ್ತಿತ್ತು.  ಈ ನಿಯಮವನ್ನು ಉದ್ದಕ್ಕೂ ಪಾಲಿಸುತ್ತಿದ್ದ ಅಪ್ಪ ಸತ್ತಾಗ ಅವನಿಗಿನ್ನೂ ಚಿಕ್ಕ ವಯಸ್ಸು, ಹಣ ಆಸ್ತಿ ಏನಿಲ್ಲ,ತುಸ್ಸು, ಮತ್ತು ಜಾಣ್ಮೆಯ ಲೆಕ್ಕಾಚಾರದಲ್ಲೂ ಕಮ್ಮಿ ಮಾರ್ಕ್ಸು. ಹೀಗಾಗಿ ನಾನು ಅವನ ಸಲಹೆಯನ್ನು ನಿರ್ಲಕ್ಷಿಸಿದ್ದೇನೆ. ತಡವಾಗಿ ಮಲಗಿ ತಡವಾಗಿ ಏಳುತ್ತೇನೆ. ಹಾಗೆಂದು ನಾನೇನೂ ಜಗತ್ತನ್ನೇ ಗೆದ್ದುಬಿಟ್ಟಿಲ್ಲ, ಆದರೆ ಪಾರಾಗಿರುವೆ ಅದೆಷ್ಟೋ ಟ್ರಾಫಿಕ್ ದಟ್ಟಣೆಗಳಿಂದ ಮತ್ತು ಸಾಧಾರಣವಾಗಿ ಜನರು ಜಾರಿ ಬೀಳುವ ಸಂದರ್ಭಗಳಿಂದ. ಹಾಗೂ ಪರಿಚಯ ಮಾಡಿಕೊಂಡಿದ್ದೇನೆ ಎಷ್ಟೋ ಜನ ವಿಚಿತ್ರ ಮತ್ತು ವಿಸ್ಮಯಕಾರಿ ವ್ಯಕ್ತಿಗಳನ್ನು. ಅವರಲ್ಲಿ ಒಬ್ಬ  ನಾನು. ನನ್ನ ಅಪ್ಪ ಎಂದೂ ಭೇಟಿಯಾಗದವನು.

ಕಷ್ಟವೆನ್ನಿಸಿದರೂ ಬೀಳ್ಕೊಡು

ಇಮೇಜ್
ಕಷ್ಟವೆನ್ನಿಸಿದರೂ ಬೀಳ್ಕೊಡು  ಮೂಲ: ಕ್ರಿಸ್ಟಿನಾ ರೊಸೆಟ್ಟಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನ್ನ ದಾರಿಯ ಕೊನೆಗೆ ತಲುಪಿದಾಗ ನಾನು ಮುಳುಗಿದಾಗ ನನ್ನ ಬಾಳಿನ ಮೇಲೆ ಭಾನು ದುಗುಡ ತುಂಬಿದ ಕೋಣೆಯಲ್ಲಿ ಸಲ್ಲಿಸದಿರಾವ ವಿಧಿವಿಧಾನ ಆತ್ಮವೊಂದು ಮುಕ್ತವಾಗಿದ್ದಕ್ಕೆ ಏತಕ್ಕೆ ರೋದನ? ನಿನ್ನ ಅನುಭವಕ್ಕೆ ಬರಲಿ ನನ್ನ ಅನುಪಸ್ಥಿತಿ, ಆದರೆ ಸ್ವಲ್ಪ ದಿನ ಮಾತ್ರ, ಅದೂ ಹಾಕದೇ ಅಳುಮೋರೆ. ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ನೆನೆದು ಕಷ್ಟವೆನ್ನಿಸಿದರೂ ನನ್ನನ್ನು ಬೀಳ್ಕೊಡು  ಏಕೆಂದರೆ ಇದು ಎಲ್ಲರೂ ಕೈಗೊಳ್ಳಲೇಬೇಕಾದ ಪಯಣ ಮತ್ತು ಎಲ್ಲರೂ ಒಬ್ಬಂಟಿಯಾಗೇ ಕೈಗೊಳ್ಳಬೇಕು ಇದನ್ನ ಇದೆಲ್ಲವೂ ಪೂರ್ವಯೋಜನೆಯ ಒಂದು ಅಂಗ ಮನೆಯತ್ತ ಮತ್ತೊಂದು ಹೆಜ್ಜೆ ಹಾಕುವ ಪ್ರಸಂಗ ತಾಳಿಕೊಳ್ಳಲಾರದಷ್ಟು ಹೃದಯವಾದರೆ ಭಾರ ತೆಗೆದುಕೋ ನಮ್ಮ ಸ್ನೇಹಿತರ ಆಧಾರ ನಮ್ಮ ಹುಚ್ಚುತನವನ್ನೆಲ್ಲಾ ನೆನೆದು ನಕ್ಕು ಕಷ್ಟವೆನ್ನಿಸಿದರೂ ಬಿಡಿಸು ಬಂಧನದ ಸಿಕ್ಕು.

ನನ್ನೊಳಗೇ

ಇಮೇಜ್
   ಮೂಲ: ಆಲ್ಬರ್ಟ್ ಕಾಮು ಅನುವಾದ: ಸಿ ಪಿ ರವಿಕುಮಾರ್ ದ್ವೇಷದ ನಡುವೆ ಕಂಡುಕೊಂಡೆನು ನಾನು ಇರುವುದು ಅಪರಾಜಿತ ಪ್ರೀತಿ ನನ್ನೊಳಗೆ ಕಂಬನಿಯ ನಡುವೆ ಕಂಡುಕೊಂಡೆನು ನಾನು ನನ್ನೊಳಗಿದೆ ಸೋಲೊಪ್ಪದ ಮುಗುಳ್ನಗೆ  ಗೊಂದಲದ ನಡುವೆ ಕಂಡುಕೊಂಡೆನು ನಾನು ಸೋಲಿಲ್ಲದ ಶಾಂತಿ ನನ್ನೊಳಗಿರುವುದನ್ನು ನನಗಿದು ಸಂತೋಷದ ವಿಷಯ, ಏಕೆಂದರೆ ಜಗತ್ತು ಎಷ್ಟೇ ಬಲವಾಗಿ ನೂಕಿದರೂ ನನ್ನನ್ನು ನನ್ನೊಳಗೇ ಇದೆ ಅದಕ್ಕಿಂತಲೂ ಬಲಶಾಲಿ, ಅದಕ್ಕಿಂತಲೂ ಸಮರ್ಥವಾದ ಎದುರಾಳಿ.

ನನ್ನ ಬದುಕಿದೆಯಲ್ಲ

ಇಮೇಜ್
ನನ್ನ ಬದುಕಿದೆಯಲ್ಲ ಮೂಲ.: ಲಿಯೋ ಮಾರ್ಕ್ಸ್ಅ ನುವಾದ: ಸಿ ಪಿ ರವಿಕುಮಾರ್ ನನ್ನ ಈ ಬದುಕಿದೆಯಲ್ಲ ಅದೊಂದೇ ನನ್ನದೆಂಬುದು, ಮತ್ತು ಆ ಬದುಕು ನಿನ್ನದು. ಈ ಬದುಕಿನ ಬಗ್ಗೆ ನನಗಿರುವ ಆಸೆ ನಿನ್ನದು, ನಿನ್ನದು ನಿನ್ನದು! ನಾನು ನಿದ್ರಿಸಬಹುದು ನಾನು ವಿರಮಿಸಬಹುದು ಸಾವು ಕೂಡಾ ಒಂದು ಮಧ್ಯಂತರ ವಿರಾಮ. ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ  ಬೆರೆತ ನನ್ನ ಮನಃಶಾಂತಿ ನಿನ್ನದು, ನಿನ್ನದು, ನಿನ್ನದು!

ಒಬ್ಬಂಟಿ

ಇಮೇಜ್
 ಒಬ್ಬಂಟಿ ಮೂಲ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ ತರಲಿಲ್ಲ ನಾನು ನನ್ನ ಭಾವಬಂಧ ಸಾರ್ವಜನಿಕ ಸರೋವರದಿಂದ  ನನ್ನ ದುಃಖಗಳ ಮೂಲ ಹುಡುಕಿದರೆ ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ ಎಲ್ಲರ ಮನಕ್ಕೂ ಮುದ ತರುವ ಇಂಚರ ನನ್ನೆದೆಯಲ್ಲಿ ತರದು ಯಾವುದೇ ಸಂಚಾರ ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ. ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ: ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ, ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ ಅಲ್ಲೊಂದು ಕಾರ್ಮೋಡ  ಉರುಳುತ್ತ ಬಂದು ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.

ಐಸ್ ಕ್ರೀಂ ಅಂಗಡಿಯಲ್ಲಿ

ಇಮೇಜ್
ಐಸ್ ಕ್ರೀಂ ಅಂಗಡಿಯಲ್ಲಿ  ಮೂಲ: ಬ್ರಯಾನ್ ಬಿಲ್ಸ್ಟನ್  ಅನುವಾದ: ಸಿಪಿ ರವಿಕುಮಾರ್ ಅವನೆಂದೂ ಸೇವಿಸದಿದ್ದರೂ ಅಜ್ಜನ ಬಳಿ ಇದ್ದೇ ಇರುತ್ತಿತ್ತು ಜೋಬಿನಲ್ಲಿ ಭದ್ರವಾಗಿ ತಂಬಾಕಿನ ಡಬ್ಬಿಯೊಂದು ಸದಾ ಅಲ್ಲಿ ಏನಿಟ್ಟುಕೊಂಡಿರುತ್ತೀಯಾ ಎಂದು ಅಣ್ಣ ಮತ್ತು ನಾನು ಕೇಳಿದಾಗ ಒಂದಿಷ್ಟು ಮರಳಿದೆ ಎಂದು ಉತ್ತರಿಸಿದ. ತಂಬಾಕಿನ ಡಬ್ಬಿಯಲ್ಲಿ ಯಾಕೆ ಮರಳು ಇಟ್ಟುಕೊಳ್ಳುತ್ತೀ ಎಂದು ಕೇಳಿದರೆ ಇನ್ನೆಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸಿದ. ಹಾಗಲ್ಲ, ಮರಳನ್ನು ಯಾಕೆ ಇಟ್ಟುಕೊಳ್ಳುತ್ತೀ ಎಂದಾಗ  ಅದು ವಿಶೇಷ, ತಂದಿದ್ದೇನೆ ದೂರದ ಫ್ರಾನ್ಸ್ ದೇಶದಿಂದ. ನಾವು ಡಬ್ಬಿಯಲ್ಲಿ ಇಣುಕಿ ಎಷ್ಟು ದುರುಗುಟ್ಟಿ ನೋಡಿ ಏನೂ ವಿಶೇಷ ಅನ್ನಿಸಲಿಲ್ಲ ಫ್ರಾನ್ಸ್ ದೇಶದ ಮರಳು. ಅವನನ್ನೇ ಏನು ಇದರ ವಿಶೇಷವೆಂದು ಕೇಳಿದರೆ ಒಂದೊಂದು ಕಣವೂ ಒಬ್ಬ ಸ್ನೇಹಿತನ ಕುರುಹು. ಅಜ್ಜನಿಗೆ ಬಹಳ ಜನ ಇರಬಹುದು ಎಳೆತನದ ಸ್ನೇಹಿತರು, ಬಾಲ್ಯದಲ್ಲಿ ಅವರ ಜೊತೆ ಸಮುದ್ರಕ್ಕೆ ಹೋಗಿದ್ದೆಯಾ? ಹಾಗೇ ಅಂದುಕೊಳ್ಳಿ ಎಂದು ಅಜ್ಜ ಐಸ್ ಕ್ರೀಂ ಕೇಳಿದ ಒಂದು ಸಾದಾ, ಇನ್ನೆರಡರ ಮೇಲೆ ಕೆಂಪು ಸಕ್ಕರೆ ಪಾಕ.