ಎವರ್ ಗ್ಲೇಡ್ ದಾರಿಯಲ್ಲಿ
ಮೂಲ: ಗ್ರೇಸ್ ವೈಲೆನ್ಜ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಎಷ್ಟು ಕಾದಿದೆ ಎಂದರೆ ರಸ್ತೆ ನೆಂದಂತೆ ತೋರುತ್ತದೆ
ಮರೀಚಿಕೆಯಂತೆ ಹೊಳೆಯುತ್ತದೆ.
ಸೂರ್ಯ ಕಂತುತ್ತಾ
ಕ್ಷೀಣ ನೀಲ ಬೆಳಕು ಆವರಿಸುತ್ತಿದೆ.
ನಾವು ಒಂದು ಕಡೆ ಪಾರ್ಕ್ ಮಾಡುತ್ತೇವೆ
ಕೆಂಪು ಮಾಂಸದ ತುಂಡುಗಳಂತೆ
ಕಾಣುವ ಟೊಮೆಟೋ ಹಣ್ಣುಗಳು
ಯಾರದೋ ಟ್ರಕ್ ನಿಂದ ಉದುರಿ ಅಪ್ಪಚ್ಚಿಯಾಗಿವೆ.
ಎದುರಿಗೆ ಇರುವ ವಿಶ್ರಾಂತಿ ಗೃಹ
ವಿಮಾನತಲದಷ್ಟು ವಿಶಾಲವಾಗಿದೆ.
ತಟ್ಟೆಗಳಲ್ಲಿ ನಮ್ಮ ಮೇಜುವಾನಿಗೆ
ಬರುತ್ತವೆ ಹುರಿದ ಬೆಂಡೆಕಾಯಿ
ಕಾಲರ್ಡ್ ಎಲೆಗಳ ಕೋಸಂಬರಿ
ಮತ್ತು ಕುಂಬಳದ ಜಾತಿಯ ಕಾಯಿಗಳ ಕಟ್ಲೆಟ್.
ಬಿಲ್ ತೆರಲು ಹೋದಾಗ
ಗಲ್ಲಾಪೆಟ್ಟಿಗೆಯಲ್ಲಿದ್ದಾಕೆ ಕೇಳುತ್ತಾಳೆ
ರಸ್ತೆಯ ಅಂಚಿನ ಉದ್ದಕ್ಕೂ ಮಲಗಿದ್ದ
ನೆರಳುಗಳು ನೋಡಿದಿರಾ?
ಅವು ಏನು ಹೇಳಿ ಮೊಸಳೆಗಳು.
ನಾವು ನೋಡಿದ್ದೆವು.
ಹದಿನೆಂಟು ಚಕ್ರಗಳ ಟ್ರಕ್ ಗಳ
ಟೈರುಗಳು ಸ್ಫೋಟಿಸಿ ಎಗರಿ ಬಿದ್ದಿವೆ
ಎಂದು ಮಾತಾಡಿಕೊಂಡಿದ್ದೆವು.
ಅವಳು ಬೆರಳನ್ನು ಬಾಯೆಂಜಲು ಮಾಡಿ
ಒಂದು ಪುಟ ಹರಿಯುತ್ತಾಳೆ
ನಾವು ತೆತ್ತು ಹೊರಡುತ್ತೇವೆ.
ಅವು ಬಿಸಿಲಿಗೆ ಹಾಕಿದ
ವಂಕಿ ಅಂಚುಗಳ ರಬ್ಬರ್ ತುಂಡುಗಳಂತೆ ತೋರುತ್ತವೆ.
ನಮ್ಮ ಪ್ರಯಾಣ ಮುಂದುವರೆಯುತ್ತದೆ
ಸಂಜೆ ಬೆಳಕಿನಲ್ಲಿ ಎಲ್ಲಾದರೂ
ಕಾಣುವುದೇನೋ ಅರೆಮುಚ್ಚಿದ ಕಣ್ಣು
ಅಥವಾ ತೊಗಲಿನ ಚಿಪ್ಪುಗಳು ಅಥವಾ ಬೆನ್ನು
ಎಂದು ನಾವು ಹುಡುಕುತ್ತೇವೆ.
ಅವು ಬಹುಮೆಲ್ಲಗೆ
ಸ್ತಬ್ಧತೆಯ ವೇಗದಲ್ಲಿ
ಚಲಿಸಿದಂತೆ ಭ್ರಮೆಯಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ