ಗೋಸುಂಬೆಯ ಸಮಸ್ಯೆ

 



ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ.


ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು. 


ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ.


ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು.


ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು.


ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ. 


ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ. 


ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು.


ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು. 


ಏನೋ ಬಹಳ ವಿಚಿತ್ರವಾಗಿದೆಯಲ್ಲ ನಿನ್ನ ಮಾತು!


ನೋಡು, ದೇವರು ನಮಗೆ ಬಣ್ಣ ಬದಲಾಯಿಸುವ ಶಕ್ತಿ ಕೊಟ್ಟಿದ್ದ. ಆದರೆ ಅದನ್ನು ಟಿವಿ ಲಾಯರುಗಳು, ರಾಜಕಾರಣಿಗಳು,  ರಿಪೋರ್ಟರ್, ಸಾಹಿತಿಗಳು,  ಹೀಗೆ ಒಬ್ಬೊಬ್ಬರಾಗಿ ನಮ್ಮಿಂದ ಕದ್ದುಬಿಟ್ಟರು.  ನಾವು ಹೇಗೆ ಯಾವ ಕಲ್ಲಿನ ಮೇಲೆ ಕೂತರೆ ಆ ಬಣ್ಣಕ್ಕೆ ತಿರುಗುವ ಶಕ್ತಿ ಹೊಂದಿದ್ದೆವೋ ಈಗ ಇವರೆಲ್ಲ ಹಾಗೇ ಯಾವ ವೇದಿಕೆಯ ಮೇಲೆ ಇದ್ದಾರೋ ಅದೇ ಬಣ್ಣಕ್ಕೆ ಬದಲಾಯಿಸುವ ಶಕ್ತಿ ಹೊಂದಿದ್ದಾರೆ.  ನಮ್ಮಿಂದ ಕದ್ದ ವಿದ್ಯೆಯಲ್ಲಿ ನಮ್ಮನ್ನೇ ಮೀರಿಸಿದ್ದಾರೆ. ನಾವು ಏನೋ ಅಲ್ಪ ಸ್ವಲ್ಪ ಬಣ್ಣ ಬದಲಾಯಿಸುತ್ತಿದೆವು. ಇವರು ಕಪ್ಪಿನಿಂದ ಬಿಳಿ, ಕೆಂಪಿನಿಂದ ಕೇಸರಿ, ಹೀಗೆ ಒಮ್ಮೆಲೇ ಬಣ್ಣ ಬದಲಾಯಿಸುವ ಕಲೆಯಲ್ಲಿ ನಮ್ಮನ್ನೇ ಹಿಂದಿಕ್ಕಿದ್ದಾರೆ. ಬಣ್ಣ ಬದಲಾಯಿಸುವ ಕಲೆ ಮರೆತ ಮೇಲೆ ನಮ್ಮ ಜೀವನ ಬಹಳ ಕಷ್ಟವಾಗಿದೆ. ಜನ ಕಲ್ಲು ಹೊಡೆದು ನಮ್ಮನ್ನು ಬೇಟೆ ಆಡುತ್ತಿದ್ದಾರೆ. 


ಪಾಪ, ಗೋಸುಂಬೆಯ ಕಥೆ ಕೇಳಿ ನನಗೂ ಬೇಸರವಾಯಿತು.


ನೋಡು ಈಗ ಫೇರ್ ಅಂಡ್ ಲವ್ಲಿ,  ಅನ್ಫೇರ್ ಅಂಡ್ ಲೋಲೀ ಇಂಥದ್ದೆಲ್ಲಾ ನೂರಾರು ಬಂದಿದೆ. ಕಪ್ಪಾಗಿದ್ದವರು ಬೆಳ್ಳಗೆ, ಬೆಳ್ಳಗಿದ್ದವರು ಕೆಂಪು, ಹಸಿರು, ಹಳದಿ ಏನು ಬೇಕಾದರೂ ಆಗಬಹುದು. ತೊಗೋ ಈ ಕಾರ್ಡು. ಸಂಪರ್ಕ ಸಂಖ್ಯೆಗೆ ಫೋನ್ ಮಾಡು, ಎಂದೆ.


ಗೋಸುಂಬೆ ಕಾರ್ಡ್ ಕಡೆಗೆ ನೋಡುತ್ತಾ ಮತ್ತೊಮ್ಮೆ ಧ್ಯಾನಕ್ಕೆ ಜಾರಿತು.


....

ಸಿ ಪಿ ರವಿಕುಮಾರ್


Nand Sarswat Swadeshi ಅವರ ಒಂದು ಕವಿತೆಯಿಂದ ಪ್ರಭಾವಿತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ