ಇಡ್ಲಿಗೆ ಡೂಡಲ್


ಎಲೆ ಇಡ್ಲಿ ಎಲೆಯ ಮೇಲಿಂದ ಯಾವಾಗ ಹಾರಿ

ಕಲೆಯಾಗಿಹೋದೆ ಗೂಗಲ್ ಡೂಡಲ್ ಸೇರಿ

ಬಿಳಿಯನ್ನೇ ಉಟ್ಟು ಸರಳವಾಗಿದ್ದೆ  ನೆನ್ನೆಯವರೆಗೆ

ತಲೆಯೇ ನಿಲ್ಲುತ್ತಿಲ್ಲವಲ್ಲ ಉತ್ತರವೇ ಇಲ್ಲ ಕರೆಗೆ!

ದೋಸೆಗೆ ತಡೆಯಲಾಗುತ್ತಿಲ್ಲ ಈ ಆಘಾತ! ಅವಾರ್ಡು

ಮೋಸದಿಂದ ಗೆದ್ದುಕೊಂಡದ್ದೆಂದು ಬಯಸುತ್ತಿದೆ ಸೇಡು

ಇನ್ನು ಉಪ್ಪಿಟ್ಟಿಗಂತೂ ಡಿಪ್ರೆಶನ್ ಆಗುವುದು ಬಾಕಿ

ಸುಮ್ಮನೆ ಹಾರಿಸುವರು ಎಲ್ಲ ಉಪಮಾತೀತ ಚಟಾಕಿ

ಎಷ್ಟೇ ಬಗೆಯಲ್ಲಿ ರೂಪ ತಾಳಿ ಬಂದರೂ ಉಪ್ಪಿಟ್ಟು

ಅಷ್ಟೇಕೆ ಎಲ್ಲರಿಗೂ ಅದರ ಮೇಲೆ ತಾತ್ಸಾರ ಸಿಟ್ಟು!

ಇನ್ನು ಅವಲಕ್ಕಿಗೆ ಬೇಕಾಗಿಲ್ಲ ಈ ಯಾವ ಊಹಾ-ಪೋಹ

ಕೃಷ್ಣನೇ ನನ್ನನ್ನು ಮೆಚ್ಚಿದನೆಂದು ಕಣ್ಮುಚ್ಚಿದೆ ಆಹಾ!

ಕೋಪಿಸಿಕೊಂಡು ಕುದಿಯುತ್ತಿವೆ ಚಟ್ನಿ ಸಾಂಬಾರು

ಸಪ್ಪೆ ಇಡ್ಲಿಗೆ ರುಚಿ ನಮ್ಮಿಂದಲೇ ಎಂದು ತಕರಾರು.


ಸಿ ಪಿ ರವಿಕುಮಾರ್




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ