ಮೂಡ್ ನಂಬಿಕೆಗಳು





ಮೂಡ್ ನಂಬಿಕೆಗಳು (ಹರಟೆ)

ಸಿ.  ಪಿ. ರವಿಕುಮಾರ್

ನನ್ನ ನಂಬಿಕೆಗಳು ನನ್ನ ಮೂಡ್  ಗೆ ತಕ್ಕಂತೆ ಬದಲಾಯಿಸುತ್ತವೆ  ಎಂದು ನನ್ನ ಹೆಂಡತಿ ಆಗಾಗ ನನ್ನನ್ನು ರೇಗಿಸುತ್ತಾಳೆ.  "ಮೂಡ್ ನಂಬಿಕೆಗಳು" ಎಂಬ ಹೆಸರಿನ ಆವಿಷ್ಕಾರವೂ ಅವಳದ್ದೇ. ಕೊಲೆಸ್ಟರಾಲ್ ಕೊಲ್ಲುತ್ತದೆ, ಎಣ್ಣೆ ಹಾಕದೆ ದೋಸೆ ಮಾಡಲು ಸಾಧ್ಯವಿಲ್ಲವೇ, ನಾನ್ ಸ್ಟಿಕ್ ತವ ಇರುವುದು ಯಾಕೆ ಇತ್ಯಾದಿಯಾಗಿ ನಾನು ಸಿಡುಕಿದಾಗ ಅವಳು ಅದಕ್ಕೆ ಒಗ್ಗರಣೆ ಹಾಕುವುದಿಲ್ಲ. ನನ್ನ ಈ ವಾದವೂ ನಾನ್ ಸ್ಟಿಕ್  ಎಂದು ನನ್ನ ಹೆಂಡತಿಗೆ ಗೊತ್ತಾಗಿಬಿಟ್ಟಿದೆ. "ದೋಸೆಗೆ ಎಣ್ಣೆಯ ಬದಲು ತುಪ್ಪ ಹಾಕಬಹುದೇ?" ಎಂದು ಕೇಳಿ ಮುಗ್ಧತೆ ನಟಿಸುತ್ತಾಳೆ. ಕೊಬ್ಬರಿಯಲ್ಲಿ ಎಷ್ಟೊಂದು ಕೊಬ್ಬಿದೆ, ತೆಂಗಿನಕಾಯಿ ಮನೆಗೆ ತರಲೇಬೇಡ ಎಂದು ಕಟ್ಟುನಿಟ್ಟು ಮಾಡಿದ ದಿವಸವೇ ಕೊಬ್ಬರಿ ಮಿಠಾಯಿ ಮಾಡಿ "ಮಕ್ಕಳಿಗೆ ಅಂತ ಮಾಡಿದೆ, ನಿಮಗೆ ಬೇಡದಿದ್ದರೆ ಹೋಗಲಿ ಬಿಡಿ ಪಾಪ!" ಎನ್ನುತ್ತಾಳೆ ಈ  ಸಿಂಪತಿವ್ರತೆ.

ಬೆಕ್ಕಿನ ನಂಬಿಕೆ


ಮೂಡ್ ನಂಬಿಕೆಯ ವಿಷಯ ಯಾತಕ್ಕೆ ಬಂತು ಅಂತ ಕೇಳಿ. ನಮ್ಮ ಸರಕಾರಕ್ಕೆ ಅದು ಯಾಕೋ ಮೂಡ್ ಕೆಟ್ಟು ಹೋಗಿ  ಮೂಢ ನಂಬಿಕೆಯ ವಿರುದ್ಧ ಒಂದು ಕಾನೂನನ್ನೇ ಮಾಡುತ್ತಿದೆಯಂತೆ.  ಬೆಕ್ಕು ಎಡದಿಂದ ಬಲಕ್ಕೆ ಹಾದು ಹೋದರೆ ಕೆಲಸ ಕೆಡುತ್ತದೆ ಎಂದು ಕೆಲವರು ನಂಬುತ್ತಾರೆ.  ಹಾಲನ್ನು ಕುಡಿಯಲು ಬಂದ ಬೆಕ್ಕಿನ ಮುಂದೆ  ಮನುಷ್ಯಪ್ರಾಣಿ  ಯಾವುದೇ ದಿಕ್ಕಿನಲ್ಲಿ ಹಾದು ಹೋದರೂ ಬೆಕ್ಕಿನ ಕೆಲಸ ಖಂಡಿತ ಕೆಡುತ್ತದೆ. ಇಷ್ಟಾದರೂ "ಎಲೆ ಬೆಕ್ಕೇ, ನೀನು ಹೀಗೆಲ್ಲಾ ಮೂಢ ನಂಬಿಕೆ ಇಟ್ಟುಕೊಳ್ಳಬಾರದು!" ಎಂದು ಹೆದರಿಸುವುದು ನ್ಯಾಯವೇ?

ಮನೆಯ ವಾಸ್ತು ಸರಿಯಿಲ್ಲ ಎಂಬ ವಿಷಯಕ್ಕಾಗಿ ಅದೆಷ್ಟು ಜನ ತಮ್ಮ ಮನೆಯಲ್ಲಿ ಏನಾದರೂ ಬದಲಾವಣೆ ಮಾಡುತ್ತಲೇ ಇರುತ್ತಾರೆ.  ಕೆಲವರಂತೂ ವಾಸ್ತುಶಾಂತಿಗಾಗಿ ಅದೆಷ್ಟೋ ವಸ್ತುವಿಶೇಷಗಳನ್ನು ತಂದು ಜೋಡಿಸಿ ಮನೆಯನ್ನು ವಾಸ್ತುಸಂಗ್ರಹಾಲಯವನ್ನಾಗಿ  ಬದಲಾಯಿಸಿದ್ದಾರೆ.  ಬೆಳಗ್ಗೆ ಯೋಗ, ಮಧ್ಯಾಹ್ನ ಫೆಂಗ್ ಶೂಯೀ, ಸಂಜೆ ಲಾಫ್ಟರ್ ಕ್ಲಬ್ ಇತ್ಯಾದಿಗಳಲ್ಲಿ ಶಾಂತಿಯನ್ನು ಅರಸುತ್ತಿದ್ದಾರೆ. ಇವರ ನಂಬಿಕೆಯನ್ನು ಹಾಗೆ ಅಲ್ಲಾಡಿಸಬಹುದೆ?  ಒಮ್ಮೆ ನನ್ನ ಹೆಂಡತಿ ವಾಸ್ತು ಬಗ್ಗೆ ಹೊಸದಾಗಿ ತಿಳಿದುಕೊಂಡು ನನಗೆ ಉತ್ಸಾಹದಿಂದ ಹೇಳಿದಾಗ  "ಇರಬಹುದು! ಅಡುಗೆಮನೆ ವರುಣನ ದಿಕ್ಕಿನಲ್ಲಿ  ಇರುವುದರಿಂದಲೇ  ನಿನ್ನ ಸಾರು ನೀರಾಗುತ್ತಿರಬಹುದು!"  ಎಂದು ನಾನು ಹಾಸ್ಯ ಮಾಡಿದ್ದಕ್ಕೆ ಅಗ್ನಿಯ ಅವತರಣವಾಗಿ "ಸರಿ, ಮೊದಲು  ಅಡಿಗೆ ಮನೆಯನ್ನು ರೀಮಾಡೆಲ್ ಮಾಡೋಣ! ಇಲ್ಲದಿದ್ದರೆ ನಿಮಗೆ ನೀರು ಸಾರೇ!" ಎಂದು ಸಾರಿದಳು ನನ್ನ ನೀರೆ!  ನಗರದ ವಾಸ್ತು ಸರಿಯಿಲ್ಲದಿರುವುದರಿಂದ ತಮ್ಮ ರಾಜಕೀಯ ಜೀವನದಲ್ಲಿ ಏರುಪೇರಾಗುತ್ತಿದೆ ಎಂದು ಒಬ್ಬ ಮುಖ್ಯಮಂತ್ರಿ ಬೆಂಗಳೂರನ್ನು ಏರುಪೇರು ಮಾಡಲು ಹೊರಟಿದ್ದರು. ಈಗ ಇನ್ನೊಬ್ಬ ಮುಖ್ಯಮಂತ್ರಿಗಳು "ವಾಸ್ತುವನ್ನೇ ನಂಬಬೇಡಿ!" ಎಂದು ಹೇಳುತ್ತಾ ಜ್ಯೋತಿಷ್ಯ ಶಾಸ್ತ್ರಿಗಳಿಗೆ ಶನಿದೆಸೆಯ ಪ್ರಾರಂಭವನ್ನು ಸೂಚಿಸುತ್ತಿದ್ದಾರೆ ಮತ್ತು  ಮೇಸ್ತ್ರಿಗಳ ಜೀವನದ ಅಡಿಪಾಯವನ್ನೇ ಅಲುಗಿಸುತ್ತಿದ್ದಾರೆ.

ಶುಭಮಂಗಳ ಸುಮುಹೂರ್ತ

ದೀಪಾವಳಿಯ ರಾಕೆಟ್ ಹಾರಿಸಿದ ಮರುದಿವಸವೇ ಮಂಗಳಕ್ಕೆ ರಾಕೆಟ್ ಹಾರಿಸಿದ ರಾಧಾಕೃಷ್ಣನ್ ಈಗ ಸುದ್ದಿಯಲ್ಲಿದ್ದಾರೆ. ಮಂಗಳಯಾನಕ್ಕೆ ಹಿಂದಿನ ದಿವಸ ಅವರು ಯಂತ್ರದ ಮಾದರಿಯನ್ನು ಹೊತ್ತು ತಿರುಪತಿಯ ಬೆಟ್ಟ ಹತ್ತಿ "ಮಂಗಳದ ಈ ಸುದಿನ ಮಧುರವಾಗಲಿ" ಎಂದು ತಿಮ್ಮಪ್ಪನನ್ನು ಬೇಡಿಕೊಂಡು ಬಂದರು. ಮಂಗಳನ ಮೇಲಿನ ಹೊಟ್ಟೆಕಿಚ್ಚಿಗೆ ಗುರು ತನ್ನ ಗುರುತ್ವಾಕರ್ಷಣೆಯನ್ನು ಹೆಚ್ಚಿಸಿ ರಾಕೆಟ್ ಹಾರದೇ ಠುಸ್ ಪಟಾಕಿಯಾಗಿದ್ದರೆ!  ಇಂಥ ಹೆದರಿಕೆ ಯಾರಿಗಾದರೂ ಇರುತ್ತದೆ.  ಇಷ್ಟಾಗಿ ಯಂತ್ರಗಳಿಗೆ ಪೂಜೆ ಮಾಡುವುದು ಹೊಸದೇನಲ್ಲ! ಆಯುಧಪೂಜೆಯ ದಿನ ಭೂಮಿಯ ಮೇಲೆ ಓಡಾಡುವ ವಾಹನಗಳಿಗೂ ಪೂಜೆಯಾಗುತ್ತದೆ. ಇನ್ನು ಮಂಗಳದ ಮೇಲೆ ಓಡಾಡುವ ಯಂತ್ರಕ್ಕೆ ಪೂಜೆ ಮಾಡದೆ ಕಳಿಸಬಹುದೇ?

"ವಿಜ್ಞಾನಿಗಳಿಗೆ ಏಕೆ ಈ ಮೂಢ ನಂಬಿಕೆ?" ಎಂದು ಕೆಲವರು ಮಂಗಳಕ್ಕೆ ಹೊರಟ ರಾಕೆಟ್ ನಂತೆ  ಹಾರಾಡುತ್ತಿದ್ದಾರೆ. ಮೀಡಿಯಾ ಮಂದಿಗೆ ಮಂಗಳಯಾನಕ್ಕಿಂತ ಇದು ಹೆಚ್ಚು ಗುರುತರವಾದ ವಿಷಯವಾಗಿ ಆಟಂಬಾಂಬ್ ಮತ್ತಿತರ ಪಟಾಕಿಗಳೆಲ್ಲಾ ಒಮ್ಮಲೇ ಸ್ಫೋಟಿಸಿದಂತೆ ವಾಗ್ವಾದಗಳು ನಡೆಯುತ್ತಿವೆ.  ವಾಗ್ವಾದಿಗಳು ಪರಸ್ಪರರ ಮಂಗಳಾರತಿ ಎತ್ತುತ್ತಿದ್ದಾರೆ.  ಇದನ್ನು ನೋಡುತ್ತಾ ನೋಡುತ್ತಾ ನನಗೆ ಅನ್ನಿಸಿತು. ಇದೇ ಚಾನೆಲ್ ನಲ್ಲಿ ಪ್ರತಿದಿನ ಬೆಳಗ್ಗೆ ಜ್ಯೋತಿಷಿಗಳು "ನೀವು ಲಕ್ಕಿಯಾಗಬೇಕಿದ್ದರೆ ಅವಲಕ್ಕಿ ತಿನ್ನಿ," "ನೀಲಿ ಬಣ್ಣದ ಕುರ್ತಾ ಹಾಕಿಕೊಂಡರೆ ಖಾಲಿ ಜೋಬು ತುಂಬುತ್ತದೆ," ಇತ್ಯಾದಿ ಬ್ರೇಕಿಂಗ್ ನ್ಯೂಸ್ ಕೊಡುತ್ತಿರುತ್ತಾರಲ್ಲಾ!  ಅದನ್ನು ಮೂಢ ನಂಬಿಕೆ ಎಂದು ಹೇಗೆ ಕರೆಯುವುದು? ನನ್ನ ಸ್ವಂತ ಅನುಭವವನ್ನೇ ಕೇಳಿ.  ನೀಲಿ ಬಣ್ಣದ  ಕುರ್ತಾ ಹಾಕಿಕೊಂಡು ಬೆಳಗಿನ ತಿಂಡಿ ತಿನ್ನಲು ಸಮಯವಿಲ್ಲದೆ ಹಾಗೇ ಹೊರಟಾಗ ನನ್ನ ಹೆಂಡತಿ ಅವಲಕ್ಕಿಯನ್ನು ಪೊಟ್ಟಣ ಕಟ್ಟಿ ಜೋಬಿಗೆ ಹಾಕಿದ್ದು ಕಾಕತಾಳೀಯ ಎಂದು ಹೇಗೆ ನಂಬುವುದು?

ಬಾಳಿಗೊಂದು ನಂಬಿಕೆ

ಇನ್ನು ಪತ್ರಿಕೆಗಳೇನು ನಂಬಿಕೆಗಳನ್ನು ಹಂಚುವುದರಲ್ಲಿ ಹಿಂದೆ ಬಿದ್ದಿವೆಯೇ? ಪ್ರತಿದಿನ ಒಂದಲ್ಲ ಹತ್ತು ಹೊಸ ಶೋಧನೆಗಳನ್ನು ನಮಗೆ ತಿಳಿಸುತ್ತಲೇ ಇರುತ್ತವೆ. ಧನತೇರಸ್ ಹಬ್ಬಕ್ಕೆ ಚಿನ್ನ ಕೊಂಡರೆ ಅದು ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಿಮಗೆ ಗೊತ್ತಿತ್ತೆ?  ಅದನ್ನು ಮೂಢ ನಂಬಿಕೆ ಎಂದು ಯಾವ ಪತಿ ತನ್ನ ಪತ್ನಿಗೆ ಧೈರ್ಯವಾಗಿ ಹೇಳಬಲ್ಲ? ಮೂವತ್ತು ಕಪ್ ಕಾಫಿಯನ್ನು ಸತತವಾಗಿ ಕುಡಿದರೆ ನೀವು ನೇರವಾಗಿ  ಸ್ವರ್ಗಕ್ಕೆ ಹೋಗುತ್ತೀರೆಂದು ನಿಮ್ಮನ್ನು ಎಚ್ಚರಿಸಿದವರು ಯಾರು? ಸಿಗರೆಟ್ ಸೇವನೆಯಿಂದ ಅರ್ಬುದದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಏಳೂವರೆ ಫಾಂಟ್  ಅಕ್ಷರಗಳಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದವರು ಯಾರು?  ಮದ್ಯಪಾನದಿಂದ ಅನೇಕ ಒಳ್ಳೆಯ ಪರಿಣಾಮಗಳೂ ಇವೆ ಎಂಬ ಸಂಶೋಧನೆಯನ್ನು ಆಗಾಗ  ಪ್ರಕಟಿಸಿ "ಮದ್ಯಪಾನ್ ಮತ್ ಕರೋ" ಎಂಬ ಘೋಷಣಾವಾಕ್ಯಗಳೇ ಕೇಳುತ್ತಿದ್ದ ದಿನಗಳಲ್ಲಿ  "ಮದ್ಯ ಪಾನಮತ್ತ ರಹೋ" ಎಂಬ ಸೂಚನೆಯನ್ನು ಕೊಟ್ಟವರು ಯಾರು?

ಮೂಢನಂಬಿಕೆ ಕಾನೂನು ಬಂದೇ ಬಿಟ್ಟರೆ ಎಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಆಲೋಚನೆ ನನ್ನನ್ನು ನಂಬ್ ಸ್ಥಿತಿಗೆ ತಳ್ಳಿತು.  ಆಶ್ವಾಸನೆಗಳನ್ನು ನಂಬುತ್ತಲೇ ಓಟು ಹಾಕುತ್ತಿರುವ ನಮ್ಮನ್ನೆಲ್ಲಾ ಈ ಕಾನೂನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿಬಿಡಬಹುದು. "ನಂಬಿ ಕೆಟ್ಟವರಿಲ್ಲವೋ" ಎಂದು ಪುರಂದರದಾಸರು ಧೈರ್ಯ ಹೇಳಿದ್ದಾರೆ. ಮಾನ್ಯ ಮಂತ್ರಿಗಳ ಮೂಡ್ ಬದಲಾದಾಗ ಈ ಕಾನೂನನ್ನು ಮತ್ತೆ ಪರಿಶೀಲಿಸಬಹುದು ಎಂದು ನಂಬಿದ್ದೇನೆ.  ಸರಿ, ಒಂದು ಚೌಪದಿಯನ್ನು ಹೇಳಿ ಈ ಹರಟೆಯನ್ನು ಮುಗಿಸುತ್ತೇನೆ.


ಗೆಲಿಲಿಯೋ "ಗ್ರಹಚಾರ"

ಸುತ್ತುವನು ಸೂರ್ಯ ಭೂಮಿಯ ಸುತ್ತಾ
ಗಟ್ಟಿಯಾಗಿ ನಿಂತಿದೆ ನಡುವೆ ನೆಲ, ಗೊತ್ತಾ?
ಗೆಲಿಲಿಯೋ ನಿನ್ನ ಮೂಢ ನಂಬಿಕೆ ಬಿಡು
ಚಲನೆಯ ವಿಷಯಕ್ಕೇಕೆ ಇಷ್ಟೆಲ್ಲಾ Ado?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)