ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)
ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ) ಸಿ. ಪಿ. ರವಿಕುಮಾರ್ ಹೀ ಗೊಂದು ಸುದ್ದಿಯನ್ನು ನನ್ನ ಸ್ನೇಹಿತ ಹಂಚಿಕೊಂಡಿದ್ದಾನೆ - ಒಬ್ಬ ಎನ್ನಾರೈ ಮಹಾಶಯ ಕಾಶೀಯಾತ್ರೆ ಮುಗಿಸಿದ ನಂತರ ಫೇಸ್ ಬುಕ್ ತೊರೆದನಂತೆ. ಈ ಕಾಶೀಯಾತ್ರೆಯು ಮದುವೆಯ ಸಂದರ್ಭದಲ್ಲಿ ನಡೆಯುವ ಯಾತ್ರೆಯೋ ಅಥವಾ ನಿಜವಾಗಲೂ ಕಾಶೀ ವಿಶ್ವನಾಥನ ದರ್ಶನಕ್ಕಾಗಿ ಮಾಡಿದ ಯಾತ್ರೆಯೋ ಎಂಬುದನ್ನು ಸುದ್ದಿಗಾರ ತಿಳಿಸಿಲ್ಲ. ಮದುವೆಯಲ್ಲಿ ತಾಳಿ ಕಟ್ಟುವ ಮುಂಚೆ ನಡೆಯುವ ಕಾಶೀಯಾತ್ರೆ ನಾವು ಇಂದಿಗೂ ಉಳಿಸಿಕೊಂಡಿರುವ ಒಂದು ಪ್ರಹಸನ. ಇದು ಕನ್ನಡಿಗರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆ ಎಂದೇ ನಾನು ವಾದಿಸುತ್ತೇನೆ. ಮದುವೆಯಾಗಲು ಒಪ್ಪಿಗೆ ಕೊಟ್ಟ ವರನಿಗೆ ಒಮ್ಮೆಲೇ ವರಿ ಉಂಟಾಗಿದೆ. ಅಯ್ಯೋ ನಾನು ಇನ್ನೂ ವಿದ್ಯಾಭ್ಯಾಸ ಮುಗಿಸಿಲ್ಲ! ತಾನು ಕಲಿಯಬೇಕಾದದ್ದು ಇನ್ನೂ ಇದೆ! ಇಂಥ ಸನ್ನಿವೇಶದಲ್ಲಿ ನಾನು ನಿಮ್ಮ ಕು-ವರಿಯನ್ನು ಕಟ್ಟಿಕೊಳ್ಳಲು ಸಾಧ್ಯವೇ ಎಲ್ಲ ಎಂದು ವಧುವಿನ ಬಡಪಾಯಿ ತಂದೆಗೆ ಖಡಕ್ ಮಾತಾಡಿ ಈ ಕಲಿ-ಭೀಮನು ಕಲಿಕೆ ಮತ್ತು ಕನ್ನಿಕೆಯರ ನಡುವಿನ ಮೆಟಾಸ್ಟೇಬಲ್ ಸ್ಥಿತಿಯಿಂದ ಕಲಿಕೆಯತ್ತ ವಾಲುತ್ತಿದ್ದಾನೆ. ಇವನು ಹೀಗೆ ಮಾಡೇ ಮಾಡುತ್ತಾನೆ ಎಂದು ಆ ವಧುವಿಗೆ ನೆನ್ನೆ ಕನಸು ಬಿದ್ದಿದೆ. ಅವಳು ಗೌರಿಗೆ ಮೊರೆ ಹೋಗಿದ್ದಾಳೆ. ಕಾಮನನ್ನು ಕಣ್ಣಿನಿಂದಲೇ ಸುಟ್ಟು...