ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨

ಮೂಲ: ಮಹಾತ್ಮಾ ಗಾಂಧಿ
ಅನುವಾದ - ಡಾ. ಸಿ. ಪಿ. ರವಿಕುಮಾರ್
ಖಾದಿ 
ಖಾದಿ ನನಗೆ ಭಾರತದ ಮಾನವ ಸಮಾಜದ ಐಕ್ಯತೆಯ ಕುರುಹಾಗಿ ಕಾಣುತ್ತದೆ. ಭಾರತದ ಆರ್ಥಿಕ ಸ್ವಾತಂತ್ರ್ಯದ ಕುರುಹಾಗಿ, ಸಮಾನತೆಯ ಕುರುಹಾಗಿ, ಕೊನೆಗೆ ಜವಾಹರಲಾಲ್ ನೆಹರೂ ಅವರ ಕಾವ್ಯಮಯ ಭಾಷೆಯಲ್ಲಿ ಹೇಳುವುದಾದರೆ "ಭಾರತದ ಸ್ವಾತಂತ್ರ್ಯದ ಪೋಷಾಕಿನಂತೆ" ತೋರುತ್ತದೆ. 
ಖಾದಿ ಮನೋಭಾವ ಎಂದರೆ ಆವಶ್ಯಕ ವಸ್ತುಗಳ ತಯಾರಿಕೆ ಮತ್ತು ವಿತರಣೆಗಳನ್ನು ವಿಕೆಂದ್ರೀಕರಿಸುವುದು ಎಂದೇ ಅರ್ಥ. ಪ್ರತಿಯೊಂದು ಹಳ್ಳಿಯೂ ತನಗೆ ಅಗತ್ಯವಾದುದಕ್ಕಿಂತ ಸ್ವಲ್ಪ ಹೆಚ್ಚು ಪರಿಮಾಣದಲ್ಲಿ ನಗರಗಳ ಆವಶ್ಯಕತೆಯ ಪೂರೈಕೆಗಾಗಿ ಪದಾರ್ಥಗಳನ್ನು ತಯಾರಿಸಬೇಕು.

ದೊಡ್ಡ ಕೈಗಾರಿಕೆಗಳನ್ನು ಕೇಂದ್ರೀಕೃತಗೊಳಿಸಿ ರಾಷ್ಟ್ರದ ಮಟ್ಟದಲ್ಲಿ ನಡೆಸಬೇಕು. ಆದರೆ ಯಾವ ರಾಷ್ಟ್ರದ ಬಹುಪಾಲಿನ ಚಟುವಟಿಕೆಗಳು ಹಳ್ಳಿಗಳಲ್ಲಿ ನಡೆಯುತ್ತವೋ ಅಲ್ಲಿ ಈ ದೊಡ್ಡ ಕೈಗಾರಿಕೆಗಳ ಪಾತ್ರ ಗೌಣವೇ ಆಗಿರುತ್ತದೆ. 


ಖಾದಿಯ ತಯಾರಿಕೆ ಎಂದರೆ ಹತ್ತಿಯ ಕೃಷಿ, ಹತ್ತಿಯನ್ನು ಬಿಡಿಸುವುದು, ಹತ್ತಿಯ ಬೀಜಗಳನ್ನು ಬೇರ್ಪಡಿಸುವುದು, ಹತ್ತಿಯನ್ನು ಸ್ವಚ್ಛಗೊಳಿಸುವುದು, ಎಳೆಗಳನ್ನು ಬಿಡಿಸುವುದು, ಎಳೆಗಳ ಆಕಾರದ ಪ್ರಕಾರ ಅವುಗಳನ್ನು ಬೇರೆ ಮಾಡುವುದು, ಬಣ್ಣ ಹಾಕುವುದು, ನೂಲು ತೆಗೆಯುವುದು, ನೇಯ್ಗೆ, ಮತ್ತು ಸಿದ್ಧವಾದ ಅರಿವೆಯನ್ನು ಒಗೆದು ಸ್ವಚ್ಚಮಾಡುವುದು. ಬಣ್ಣ ಹಾಕುವುದನ್ನು ಬಿಟ್ಟರೆ ಈ ಎಲ್ಲಾ ಕಾರ್ಯಗಳೂ ಆವಶ್ಯಕ. ಈ ಎಲ್ಲಾ ಕಾರ್ಯಗಳನ್ನೂ ಹಳ್ಳಿಗಳಲ್ಲಿ ಸಮರ್ಪಕವಾಗಿ ಮಾಡಬಹುದು; ಮಾಡಲಾಗುತ್ತಿದೆ ಕೂಡಾ. ಆದರೆ ಈ ಬಹುಮುಖ್ಯವಾದ ಹಳ್ಳಿ ಕೈಗಾರಿಕೆಯ ಎಗ್ಗಿಲ್ಲದ ನಾಶದಿಂದ ನಮ್ಮ ಹಳ್ಳಿಗಳಿಂದ ಜಾಣತನ ಎನ್ನುವುದು ಮಾಯವಾಗುತ್ತಿದೆ. ಹಳ್ಳಿಗಳು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತಿವೆ. ಸರಿಯಾಗ ನೋಡಿಕೊಳ್ಳದ ಎತ್ತು-ಹಸುಗಳ ದುರ್ದೆಸೆಯನ್ನು ತಲುಪಿವೆ. 
ಇನ್ನಿತರ ಹಳ್ಳಿ ಕೈಗಾರಿಕೆಗಳು 
ನ್ನಿತರ ಹಳ್ಳಿ ಕೈಗಾರಿಕೆಗಳು ಖಾದಿಗಿಂತ ಭಿನ್ನ. ಅವುಗಳಲ್ಲಿ ಕೆಲಸ ಮಾಡಲು ಸಿದ್ಧರಾದವರನ್ನೆಲ್ಲಾ ಕೆಲಸಕ್ಕೆ ಇಟ್ಟುಕೊಳ್ಳುವುದು ಅಸಾಧ್ಯ. ಈ ಪ್ರತಿಯೊಂದೂ ಕೈಗಾರಿಕೆಯಲ್ಲಿ ಕೆಲವರಿಗೆ ಮಾತ್ರ ಉದ್ಯೋಗ. ಈ ಉದ್ಯೂಗಗಳೆಲ್ಲವೂ ಖಾದಿಯ ಸಖಿಯರಂತೆ; ಖಾದಿಯಿಲ್ಲದೆ ಅವು ಸ್ವತಂತ್ರವಾಗಿ ಬದುಕಲಾರವು. ಇವುಗಳಿಲ್ಲದೆ ಖಾದಿಯೂ ತನ್ನ ಗೌರವವನ್ನು ಕಾಪಾಡಿಕೊಳ್ಳಲಾರದು. ಕುಟ್ಟುವುದು, ಬೀಸುವುದು, ಸಾಬೂನು ತಯಾರಿಕೆ, ಕಾಗದ ತಯಾರಿಕೆ, ಬೆಂಕಿಕಡ್ಡಿಯ ತಯಾರಿಕೆ, ಚರ್ಮ ಹದಗೊಳಿಸುವುದು, ಬೀಜಗಳಿಂದ ಎಣ್ಣೆ ತೆಗೆಯುವುದು, ಮೊದಲಾದವುಗಳು ಹಳ್ಳಿಗಳ ಅವಿಭಾಜ್ಯ ಅಂಗಗಳು. ಹಳ್ಳಿಗಳಿಂದ ಬಂದ  ಅಥವಾ ಹಳ್ಳಿಗಳಲ್ಲಿ ನೆಲಸುವ ಕಾಂಗ್ರೆಸಿಗರು ಈ ಕೆಲಸಗಳಲ್ಲಿ ಆಸಕ್ತಿ ತೋರಿಸಬೇಕು. ಈ ಕೈಗಾರಿಕೆಗಳಿಗೆ ಹೊಸ ಜೀವ ತುಂಬಬೇಕು.  ಸಾಧ್ಯವಾದಷ್ಟೂ ಹಳ್ಳಿಗಳಲ್ಲಿ ಸಿಕ್ಕುವ ಪದಾರ್ಥಗಳನ್ನೇ ಉಪಯೋಗಿಸುವುದರಲ್ಲಿ ಇವರು ಹೆಮ್ಮೆ ಪಡಬೇಕು. ನಮ್ಮ ಬೇಡಿಕೆಗಳನ್ನು ನಮ್ಮ ಹಳ್ಳಿಗಳೇ ಪೂರೈಸಬಲ್ಲವು ಎಂಬುದಕ್ಕೆ ಸಂಶಯವಿಲ್ಲ.  ಹಳ್ಳಿಗಳು ನಮ್ಮ ಮನೋಭಿತ್ತಿಯಲ್ಲಿ ಇರುವ ತನಕ ಹೊರದೇಶಗಳಲ್ಲಿ ಯಂತ್ರಗಳನ್ನು ಬಳಸಿ ತಯಾರಾದ ವಸ್ತುಗಳ ನಕಲು ಪದಾರ್ಥಗಳು ನಮಗೆ ರುಚಿಸಲಾರವು.  ಅದರ ಬದಲಿಗೆ ನಾವು ನಮ್ಮದೇ ಆದ ಒಂದು ರಾಷ್ಟ್ರೀಯ ಅಭಿರುಚಿಯನ್ನು ಬೆಳೆಸಿಕೊಂಡು ಬದುಕುತ್ತೇವೆ; ಆ ಬದುಕಿನಲ್ಲಿ ಹತಾಶೆಗೆ, ಹಸಿವೆಗೆ ಮತ್ತು ನಿರುದ್ಯೋಗಕ್ಕೆ ಅವಕಾಶವಿರುವುದಿಲ್ಲ. 
ಗೊಬ್ಬರ 

ಮ್ಮ ಜನರೆಲ್ಲರೂ ಸಹಕರಿಸಿದರೆ ನಾವು ಈ ದೇಶದಿಂದ ಆಹಾರದ ಅಭಾವವನ್ನು ಹೊಡೆದೋಡಿಸಬಹುದು; ಅಷ್ಟೇ ಯಾಕೆ, ನಮಗೆ ಬೇಕಾದುದಕ್ಕಿಂತ ಹೆಚ್ಚಿಗೆ ಬೆಳೆಯಬಹುದು. ಸಾವಯವ ಗೊಬ್ಬರವು ಮಣ್ಣನ್ನು ಶ್ರೀಮಂತಗೊಳಿಸುತ್ತದೆಯೇ ವಿನಃ ಅದನ್ನು ಎಂದೂ ದುರ್ಬಲಗೊಳಿಸುವುದಿಲ್ಲ. ಪ್ರತಿದಿನ ನಾವು ಹೊರಕ್ಕೆಸೆಯುವ ಕಸವನ್ನು ಶ್ರದ್ಧೆಯಿಂದ ಗೊಬ್ಬರ ತಯಾರಿಸುವುದಕ್ಕೆ ಬಳಸಿಕೊಂಡರೆ ಉತ್ಪತ್ತಿಯಾಗುವ ಸಾವಯವ ಗೊಬ್ಬರವು ನಮಗೆ ಗೊಬ್ಬರಕ್ಕೆ ನಾವು ತೆರಬೇಕಾಗುವ ಲಕ್ಷಾಂತರ ರೂಪಾಯಿಗಳನ್ನು ಉಳಿಸುತ್ತದೆ; ಬೆಳೆಯ ಇಳುವರಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊರಕ್ಕೆಸೆಯುವ ಕಸದ ವಿಲೇವಾರಿಗೆ ತಕ್ಕ ವ್ಯವಸ್ಥೆಯಾಗಿ ನಮ್ಮ ವಾತಾವರಣ ಶುಚಿಯಾಗುತ್ತದೆ. ಶುಚಿತ್ವವು ದೈವತ್ವಕ್ಕೆ ಸಮೇಪವಾದುದು ಅಷ್ಟೇ ಅಲ್ಲ ಶುಚಿತ್ವದಿಂದ ಆರೋಗ್ಯವೂ ವೃದ್ಧಿಸುತ್ತದೆ. 

-ಹರಿಜನ್ ೨೮-೧೨-೪೭ 
ಚರ್ಮ ಹದ ಮಾಡುವುದು 

ಭಾರತದಷ್ಟೇ ಪ್ರಾಚೀನವಾದುದು ನಮ್ಮ ಹಳ್ಳಿಗಳಲ್ಲಿ ಚರ್ಮ ಹದ ಮಾಡುವ ಕಲೆ. ಚರ್ಮದ ಕೆಲಸವನ್ನು ಹಿಂದೆಂದೂ ನಿಕೃಷ್ಟವಾಗಿ ನೋಡುತ್ತಿರಲಿಲ್ಲ. ಆದರೆ ಇಂದು ಇಷ್ಟೊಂದು ಉಪಯುಕ್ತವಾದ ಹಾಗೂ ಆವಶ್ಯಕವಾದ  ಕೈಗಾರಿಕೆಯು ಲಕ್ಷಾಂತರ ಮಂದಿಯನ್ನು  ವಂಶ ಪಾರಂಪರಿಕ ಅಸ್ಪೃಶ್ಯತೆಗೆ ತಳ್ಳಿದೆ.  ಈ ದುಃಖಿ ದೇಶದಲ್ಲಿ ಯಾವತ್ತು ಶ್ರಮಗಾರಿಕೆಯನ್ನು ಉಪೇಕ್ಷಿಸಲು ಪ್ರಾರಂಭಿಸಿದರೋ ಅಂದು ಕೆಡುಕು ಈ ದೇಶವನ್ನು ಪ್ರವೇಶಿಸಿತು. ಯಾರ ಮೇಲೆ ಈ ದೇಶವು ಅವಲಂಬಿಸಿತ್ತೋ, ಯಾರ ಬೆವರಿನ ಉಪ್ಪಿನ ಋಣದಲ್ಲಿ ಈ ದೇಶದ ಜನರು ಬದುಕಿದ್ದರೋ ಅಂತಹ  ಲಕ್ಷಾಂತರ ಮಂದಿಯನ್ನು ಏಕಾಏಕಿ ನಾವು ನೀಚ ಜಾತಿ ಎಂದು ಪರಿಗಣಿಸತೊಡಗಿದೆವು; ಶ್ರಮದ ಕೆಲಸ ಮಾಡದ ಕೆಲವೇ ಬೆರಳೆಣಿಕೆಯಷ್ಟು ಮಂದಿ ಮೇಲುಜಾತಿಯವರೆಂದು ಪರಿಗಣಿತರಾದರು. ಇದರ ದುರಂತ ಪರಿಣಾಮವೆಂದರೆ ನಮ್ಮ ದೇಶವು ನೈತಿಕವಾಗಿ ಮತ್ತು ಆರ್ಥಿಕವಾಗಿ ಕುಸಿತವನ್ನು ಅನುಭವಿಸಿತು. ಇವುಗಳಲ್ಲಿ ಯಾವುದು ಹೆಚ್ಚಿನ ನಷ್ಟ ಎಂಬುದನ್ನು ನಿರ್ಧರಿಸುವುದು ಅಸಾಧ್ಯ. ರೈತರ ಮತ್ತು ಕೆಲಸಗಾರರ ದುರ್ಲಕ್ಷ್ಯದಿಂದ ನಾವು ದಾರಿದ್ರ್ಯ, ತೇಜೋಹೀನತೆ ಮತ್ತು ಸ್ವಭಾವತಃ ಆಲಸ್ಯವನ್ನು ವರವಾಗಿ ಪಡೆದಿದ್ದೇವೆ.  ಭಾರತಕ್ಕೆ ನಿಸರ್ಗವು ಕೊಟ್ಟಿರುವ ಅಮೋಘವಾದ ಹವಾಮಾನ, ಮಹೋನ್ನತ ಪರ್ವತರಾಶಿ, ಮಹಾನ್ ನದಿಗಳು, ಕರಾವಳಿ, ಈ ಎಲ್ಲಾ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಹಳ್ಳಿಗಳಲ್ಲಿ ದಾರಿದ್ರ್ಯ ಮತ್ತು ರೋಗಗಳ ಸುಳಿವೂ ಇರಕೂಡದು.  ಆದರೆ ದೈಹಿಕ ಕೆಲಸ ಮತ್ತು ಮಾನಸಿಕ ಕೆಲಸಗಳ ವಿಚ್ಚೇದನದಿಂದ ನಮ್ಮ ಆಯುರಾರೋಗ್ಯಗಳು ಕುಂದಿ ನಾವು ನಿರ್ಗತಿಕರೂ ಹಾಗೂ ಜಗತ್ತಿನಲ್ಲೇ ಅತ್ಯಂತ ಶೋಷಿತವೂ ಆದ ದೇಶವಾಗಿದ್ದೇವೆ. ಚರ್ಮದ ಕೈಗಾರಿಕೆಯು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ. 

ಪ್ರತಿವರ್ಷ ಒಂಬತ್ತು ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಚರ್ಮವನ್ನು ದೇಶದಿಂದ ರಫ್ತು ಮಾಡಲಾಗುತ್ತಿದೆ; ಈ ಚರ್ಮವು ಸಿದ್ಧಗೊಳಿಸಿದ ಪದಾರ್ಥಗಳ ರೂಪದಲ್ಲಿ ನಮ್ಮ ದೇಶವನ್ನು ಮರುಪ್ರವೇಶಿಸುತ್ತದೆ.  ಹೀಗೆ ನಾವು ನಮ್ಮ ಪದಾರ್ಥವನ್ನಷ್ಟೇ ಅಲ್ಲ, ನಮ್ಮ ಬೌದ್ಧಿಕತೆಯನ್ನೂ ಕಳೆದುಕೊಳ್ಳುತ್ತಿದ್ದೇವೆ. ಚರ್ಮವನ್ನು ಹದ ಮಾಡುವ ಕೆಲಸವನ್ನು ಕಲಿತು ಅದರಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಅವಕಾಶದಿಂದ ವಂಚಿತರಾಗುತ್ತಿದ್ದೇವೆ.

ನೂರಕ್ಕೆ ನೂರರಷ್ಟು ಸ್ವದೇಶಿ ವಸ್ತುಗಳನ್ನು ಬಯಸುವವರಿಗೆ, ನಮ್ಮ ಬುದ್ಧಿಜೀವಿಗಳಿಗೆ ಇದೊಂದು ಸವಾಲು. ಈ ಕೆಲಸದಿಂದ ಹರಿಜನರ ಸೇವೆಯಾಗುತ್ತದೆ. ಹಳ್ಳಿಗಳಿಗೆ ಉಪಕಾರವಾಗುತ್ತದೆ; ಮಧ್ಯಮವರ್ಗದ ಎಷ್ಟೋ ಮಂದಿಗೆ ಅವರು ಬಯಸುತ್ತಿರುವ ಉದ್ಯೋಗಾವಕಾಶ ಸಿಕ್ಕುತ್ತದೆ.  ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಬುದ್ಧಿಜೀವಿಗಳಿಗೆ ನೇರವಾಗಿ ಹಳ್ಳಿಜನರೊಂದಿಗೆ ಬೆರೆಯುವ ಅವಕಾಶ ದೊರಕುತ್ತದೆ.

ಕೆಲಸ ಪ್ರಾರಂಭಿಸುವ ಬಗೆ 
ಷ್ಟೋ ಮಂದಿ ನನಗೆ ಪತ್ರ ಬರೆದು ಅಥವಾ ಮುಖತಃ ಭೇಟಿಯಾಗಿ ಹಳ್ಳಿ ಕೈಗಾರಿಕೆಗಳಲ್ಲಿ ಕೆಲಸ ಪ್ರಾರಂಭಿಸುವುದು ಹೇಗೆ ಎಂದು ಕೇಳುತ್ತಾರೆ. ಇವರಿಗೆ ಕೊಡಬಹುದಾದ ಸರಳ  ಉತ್ತರ "ನಿಮ್ಮಿಂದಲೇ ಪ್ರಾರಂಭಿಸಿ; ನಿಮಗೆ ಯಾವುದು ಅತ್ಯಂತ ಸುಲಭ ಎನ್ನಿಸುತ್ತದದೋ ಅದರಿಂದ ಶುರು ಮಾಡಿ" ಎಂಬುದು. ಆದರೆ ಬಹುಜನರಿಗೆ ಈ ಸರಳ ಉತ್ತರದಿಂದ ಸಮಾಧಾನವಾಗದು. ಹೀಗಾಗಿ ನಾನು ಇನ್ನಷ್ಟು ಸ್ಪಷ್ಟವಾದ ಉತ್ತರವನ್ನು ಕೊಡಲು ಪ್ರಯತ್ನಿಸುತ್ತೇನೆ. 
ಪ್ರತಿಯೊಬ್ಬರೂ ತಾವು ಬಳಸುವ ಎಲ್ಲಾ ಆಹಾರ ಪದಾರ್ಥಗಳನ್ನೂ, ಉಡುಪುಗಳನ್ನೂ ಮತ್ತಿತರ ವಸ್ತುಗಳನ್ನೂ ನಿಗಾ ಇಟ್ಟು ನೋಡಲಿ. ಅವುಗಳಲ್ಲಿ ವಿದೇಶಿ ವಸ್ತುಗಳನ್ನುಮತ್ತು ನಗರಗಳಲ್ಲಿ ತಯಾರಾದ ವಸ್ತುಗಳನ್ನು ತ್ಯಜಿಸಿ ಆ ಸ್ಥಾನದಲ್ಲಿ ನಮ್ಮ ಹಳ್ಳಿಗಳಲ್ಲಿ  ಗ್ರಾಮೀಣರು ಸುಲಭ ಪರಿಕರಣಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ತಯಾರಿಸಿದ  ದೇಸಿ ವಸ್ತುಗಳನ್ನು ಬಳಸಲಿ. ಮುಂದಿನ ದಾರಿ ಸ್ವಯಂ ಗೋಚರಿಸುತ್ತದೆ. ಉದಾಹರಣೆಗೆ ಮುಂಬೈ ನಗರದ ಫ್ಯಾಕ್ಟರಿಯಲ್ಲಿ ತಯಾರಾದ ಹಲ್ಲಿನ ಬ್ರಷ್ ಉಪಯೋಗಿಸುವವರು ಅದಕ್ಕೆ ಬದಲಾಗಿ ಬಬೂಲ್ ಮರದ ಕಡ್ಡಿಯನ್ನು ಬಳಸಬಹುದು. ವ್ಯಕ್ತಿಯು ದುರ್ಬಲನಾಗಿದ್ದರೆ ಅಥವಾ ಹಲ್ಲುಗಳಿಲ್ಲದೆ ಇದ್ದರೆ ಕಡ್ಡಿಯನ್ನು ಒಂದು ಗುಂಡುಕಲ್ಲಿನಿಂದಲೋ ಸುತ್ತಿಗೆಯಿಂದಲೋ ಜಜ್ಜಿಕೊಳ್ಳಬಹುದು. ಅದರ ಇನ್ನೊಂದು ತುದಿಯನ್ನು ಒಂದು ಚಾಕುವಿನಿಂದ ಸೀಳಿಕೊಂಡು ನಾಲಗೆ ಶುದ್ಧೀಕರಣಕ್ಕೆ ಬಳಸಬಹುದು. ನಗರದ ಅನಾರೋಗ್ಯಕರ ಬ್ರಷ್ ಗಿಂತ ಇದು ಉತ್ತಮವಾದುದೆಂದು ಬಳಸಿದವರಿಗೆ ತಿಳಿಯುತ್ತದೆ. ನಗರದಲ್ಲಿ ತಯಾರಾದ ಹಲ್ಲುಪುಡಿಯ ಬದಲು ಸಮಪ್ರಮಾಣದಲ್ಲಿ ಬೆರೆಸಿದ ಶುದ್ಧವಾದ ಇದ್ದಲುಪುಡಿ  ಮತ್ತು ಉಪ್ಪುಗಳ ಮಿಶ್ರಣವನ್ನು ಬಳಸಬಹುದು. ಮಿಲ್ ಬಟ್ಟೆಯ ಬದಲು ಹಳ್ಳಿಯಲ್ಲಿ ತಯಾರಾದ ಖಾದಿ ಉಪಯೋಗಿಸಬೇಕು. ಮಿಲ್ ನಲ್ಲಿ ಹೊಟ್ಟು ಬಿಡಿಸಿದ ಅಕ್ಕಿಯ ಬದಲು ಕೈಯಿಂದ ಹೊಟ್ಟು ಬಿಡಿಸಿದ, ಪಾಲಿಶ್ ಹಾಕದ ಅಕ್ಕಿಯನ್ನು ಉಪಯೋಗಿಸಬೇಕು. ಬಿಳಿ ಸಕ್ಕರೆ ಬದಲು ಹಳ್ಳಿಯಲ್ಲಿ ತಯಾರಾದ ಬೆಲ್ಲ ಬಳಸಬೇಕು. ಈ ಉದಾಹರಣೆಗಳನ್ನು ನಾನು ಈಗಾಗಲೇ ಬರೆದ ಲೇಖನಗಳಿಂದ ಆಯ್ದುಕೊಂಡಿದ್ದೇನೆ. ನನ್ನನ್ನು ಪ್ರಶ್ನಿಸುವ ಜನರಿಗೆ ಉತ್ತರಿಸಲು ಈ ಉದಾಹರಣೆಗಳನ್ನು ಕೊಟ್ಟಿದ್ದೇನೆ.

(Translation of writings on village industry by Mahatma Gandhi - read online books related to Gandhi at http://www.mkgandhi.org/main.htm)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)