ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)
ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)
ಸಿ. ಪಿ. ರವಿಕುಮಾರ್
ಹೀಗೊಂದು ಸುದ್ದಿಯನ್ನು ನನ್ನ ಸ್ನೇಹಿತ ಹಂಚಿಕೊಂಡಿದ್ದಾನೆ - ಒಬ್ಬ ಎನ್ನಾರೈ ಮಹಾಶಯ ಕಾಶೀಯಾತ್ರೆ ಮುಗಿಸಿದ ನಂತರ ಫೇಸ್ ಬುಕ್ ತೊರೆದನಂತೆ.
ಈ ಕಾಶೀಯಾತ್ರೆಯು ಮದುವೆಯ ಸಂದರ್ಭದಲ್ಲಿ ನಡೆಯುವ ಯಾತ್ರೆಯೋ ಅಥವಾ ನಿಜವಾಗಲೂ ಕಾಶೀ ವಿಶ್ವನಾಥನ ದರ್ಶನಕ್ಕಾಗಿ ಮಾಡಿದ ಯಾತ್ರೆಯೋ ಎಂಬುದನ್ನು ಸುದ್ದಿಗಾರ ತಿಳಿಸಿಲ್ಲ. ಮದುವೆಯಲ್ಲಿ ತಾಳಿ ಕಟ್ಟುವ ಮುಂಚೆ ನಡೆಯುವ ಕಾಶೀಯಾತ್ರೆ ನಾವು ಇಂದಿಗೂ ಉಳಿಸಿಕೊಂಡಿರುವ ಒಂದು ಪ್ರಹಸನ. ಇದು ಕನ್ನಡಿಗರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆ ಎಂದೇ ನಾನು ವಾದಿಸುತ್ತೇನೆ. ಮದುವೆಯಾಗಲು ಒಪ್ಪಿಗೆ ಕೊಟ್ಟ ವರನಿಗೆ ಒಮ್ಮೆಲೇ ವರಿ ಉಂಟಾಗಿದೆ. ಅಯ್ಯೋ ನಾನು ಇನ್ನೂ ವಿದ್ಯಾಭ್ಯಾಸ ಮುಗಿಸಿಲ್ಲ! ತಾನು ಕಲಿಯಬೇಕಾದದ್ದು ಇನ್ನೂ ಇದೆ! ಇಂಥ ಸನ್ನಿವೇಶದಲ್ಲಿ ನಾನು ನಿಮ್ಮ ಕು-ವರಿಯನ್ನು ಕಟ್ಟಿಕೊಳ್ಳಲು ಸಾಧ್ಯವೇ ಎಲ್ಲ ಎಂದು ವಧುವಿನ ಬಡಪಾಯಿ ತಂದೆಗೆ ಖಡಕ್ ಮಾತಾಡಿ ಈ ಕಲಿ-ಭೀಮನು ಕಲಿಕೆ ಮತ್ತು ಕನ್ನಿಕೆಯರ ನಡುವಿನ ಮೆಟಾಸ್ಟೇಬಲ್ ಸ್ಥಿತಿಯಿಂದ ಕಲಿಕೆಯತ್ತ ವಾಲುತ್ತಿದ್ದಾನೆ. ಇವನು ಹೀಗೆ ಮಾಡೇ ಮಾಡುತ್ತಾನೆ ಎಂದು ಆ ವಧುವಿಗೆ ನೆನ್ನೆ ಕನಸು ಬಿದ್ದಿದೆ. ಅವಳು ಗೌರಿಗೆ ಮೊರೆ ಹೋಗಿದ್ದಾಳೆ. ಕಾಮನನ್ನು ಕಣ್ಣಿನಿಂದಲೇ ಸುಟ್ಟು ತಪಸ್ಸಿಗೆ ನಿಂತ ಶಿವನನ್ನು ಒಲಿಸಿಕೊಂಡವಳಲ್ಲವೇ ಗೌರಿ! ಅವಳೇ ವರ ಕೊಡಬೇಕು! ಅವಳು ಕೊಟ್ಟ ವರವನ್ನೇ ನಾನು ಮದುವೆಯಾಗಬೇಕು!
ಇವಳ ಗೌರಿ ಪೂಜೆ ನಡೆಯುತ್ತಿದ್ದಾಗ ಅತ್ತ ಅವಳ ತಂದೆ ವರನನ್ನು ಒಲಿಸಲು ಶತಪ್ರಯತ್ನ ನಡೆಸುತ್ತಿದ್ದಾನೆ - ಬರೀ ಪೂಜೆ ಮಾಡಿದರೆ ದೇವರು "ವರ" ಕೊಡುವುದಿಲ್ಲ ಎಂಬುದನ್ನು ಅನುಭವದಿಂದ ಅವನು ಬಲ್ಲ. "ಸ್ವಾಮೀ, ದಯವಿಟ್ಟು ಕುಳಿತು ಸುಧಾರಿಸಿಕೊಳ್ಳಿ" ಎಂದು ಮದುವೆ ಚಪ್ಪರದ ನೆರಳಲ್ಲಿ ಚೇರ್ ಹಾಕುತ್ತಾನೆ. ನ್ಯಾಯವಾಗಿ ಬೆಳ್ಗೊಡೆಯನ್ನು ಹಿಡಿಯಬೇಕಾದರೂ ಸುಲಭವಾಗಿ ಸಿಕ್ಕುವ ಕರಿಗೊಡೆಯನ್ನೇ ಹಿಡಿಯುತ್ತಾನೆ. ಈ ಸಂದರ್ಭಕ್ಕೆಂದೇ ಸಿದ್ಧವಾಗಿದ್ದ ಅಂದದ ಬೀಸಣಿಗೆಯಿಂದ ಗಾಳಿ ಹಾಕುತ್ತಾನೆ. (ಹಾಗೆ ಬೀಸುವಾಗ ವರನ ತಲೆಗೆ ಒಂದೆರಡು ಏಟು ಹಾಕುವ ಹಂಬಲವನ್ನು ಹಲ್ಲುಕಚ್ಚಿ ಹಿಡಿಯುತ್ತಾನೆ.) ನ್ಯಾಯವಾಗಿ ತಂಪಾದ ತೆಂಗಿನಕಾಯಿ ಎಳನೀರು ಕೊಡಬೇಕಾಗಿತ್ತು, ಆದರೆ ಜಾಣನಾದ ಮಾವ ನವಿರುಬಟ್ಟೆ ನಕ್ಕಿ ಇತ್ಯಾದಿಗಳಿಂದ ಅಲಂಕರಿಸಿದ ಕಾಯನ್ನು ಕೈಗೆ ಕೊಟ್ಟು "ನೋಡಿ, ನನ್ನ ಮಗಳು ಎಷ್ಟು ನಿಪುಣೆ! ಈ ಕುಸುರಿ ಕೆಲಸವನ್ನೆಲ್ಲಾ ಅವಳೇ ಮಾಡಿದಳು!" ಎಂದು ಕ್ಯಾಶುಯಲ್ ಆಗಿ ತನ್ನ ಮಗಳ ನೆನಪನ್ನು ವರನ ಮನಸ್ಸಿನಲ್ಲಿ ಬಿತ್ತುತ್ತಾನೆ. "ದಯವಿಟ್ಟು ನನ್ನ ಸ್ಥಿತಿಯನ್ನಾದರೂ ಗಮನಿಸಿ ನನ್ನ ಕನ್ಯಾಸೆರೆಯನ್ನು ಬಿಡಿಸು! ನನ್ನ ಕನ್ಯೆಯ ಪಾಣಿಗ್ರಹಣ ಮಾಡು!" ಎಂದು ಕಣ್ಣಿನಲ್ಲಿ ಒಂದೆರಡು ಹನಿ ಪಾಣಿ ಉದುರಿಸುತ್ತಾನೆ. (ಮದುವೆಗೆ ಒಪ್ಪಿ ಈಗ ಡಬಲ್ ಕ್ರಾಸ್ ಮಾಡಲು ಹೊರಟವನ ಹಲ್ಲನ್ನು ಉದುರಿಸುವ ಕೋಪವನ್ನು ಕಷ್ಟ ಪಟ್ಟು ತಡೆದುಕೊಳ್ಳುತ್ತಾನೆ.) ಫಳಫಳ ಹೊಳೆವ ನಕ್ಕಿಯನ್ನು ನೋಡುತ್ತಾ ವರನಿಗೆ ತನಗಾಗಿ ಗೌರಿಪೂಜೆ ಮಾಡುತ್ತಾ ಇಂಥದೇ ಮುತ್ತುಗಳನ್ನು ಉದುರಿಸುತ್ತಿರುವ ಕನ್ಯೆಯ ನೆನಪಾಗುತ್ತದೆ. ಹಾ! ತಾನೆಂಥ ಪಾಪಿ! ಎಂಬ ಅರಿವು ಮೂಡುತ್ತಲೇ ಅವನು ಮೇಲೆದ್ದು ಒಪ್ಪಿಗೆ ಸೂಚಿಸುತ್ತಾನೆ. ವಾಲಗದವರು ಈ ಹರ್ಷಾತಿರೇಕದ ಕ್ಷಣದಿಂದ ಪ್ರೇರಿತರಾಗಿ "ಕರೆದರೂ ಬರಬಾರದೇ!" ಊದುತ್ತಾರೆ. ವರ ಈಗ ಕರೆಯದಿದ್ದರೂ ಮದುವೆ ಮಂಟಪಕ್ಕೆ ಧಾವಿಸುವ ಸ್ಥಿತಿ ತಲುಪಿದ್ದಾನೆ. ಅಲ್ಲಿ ಅಂತರ್ಪಟ ಎಂಬ ಸೀನ್ ಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಜನ ಕಾದಿದ್ದಾರೆ!
ಕಾಶೀಯಾತ್ರೆಗೆ ಹೋದವರು ಏನಾದರೂ ಬಿಡುವ ಸಂಪ್ರದಾಯ ಯಾವಾಗ ಹುಟ್ಟಿತೋ! ಮದುವೆಯ ಕಾಶೀಯಾತ್ರೆಯಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಕೈ ಹಿಡಿಯುವುದಕ್ಕೇ ಅಲ್ಲಿ ಪ್ರಾಮುಖ್ಯ. ವರನು ತನ್ನ ವಿದ್ಯಾಭ್ಯಾಸವನ್ನು ಬಿಡಲಿಲ್ಲವೇ ಎಂದು ನೀವು ಕೇಳಬಹುದು. ಹಾಗೆ ಕೇಳಿದರೆ ನಿಮಗೆ ಮದುವೆ ಆಗಿಲ್ಲ ಎಂದೇ ಲೆಕ್ಕ! ಮದುವೆ ಎಂಥ ವಿದ್ಯಾಭ್ಯಾಸ ಎಂಬುದನ್ನು ಮದುವೆ ಆದವರೇ ಬಲ್ಲರು! ನಿಮಗೆ ಅಡುಗೆ ಮಾಡಲು ಬರುವುದಿಲ್ಲವೇ? ಮದುವೆ ನಿಮಗೆ ಅದನ್ನು ಕಲಿಸುತ್ತದೆ! ಮಕ್ಕಳನ್ನು ಆಡಿಸಲು ಬರುವುದಿಲ್ಲವೇ? ಕಲಿಯುತ್ತೀರಿ, ಬಿಡಿ! ಅದಕ್ಕೇ ಇರಬೇಕು, ಮದುವೆ ಎಂಬುದಕ್ಕೆ ಗೃಹಸ್ಥಾಶ್ರಮ ಎಂಬ ಹೆಸರಿದೆ.
ಕಾಶಿಗೆ ಹೋದಾಗ ಅಲ್ಲಿಯ ಪಾಂಡಾಗಳು ಇದ್ದಬದ್ದದ್ದನ್ನೆಲ್ಲಾ ದೋಚಿ ಕಳಿಸುತ್ತಾರೆ. ಅದಕ್ಕೇ ಹಿಂದೆ ಕಾಶಿಗೆ ಹೋಗಿ ಹಿಂತಿರುಗಿದವರನ್ನು "ನೀವು ಹಾಕಿಕೊಂಡು ಹೋಗಿದ್ದ ಒಡವೆ ಏನಾಯಿತು?" ಇತ್ಯಾದಿ ಪ್ರಶ್ನೆ ಕೇಳಿದಾಗ ಮರ್ಯಾದೆ ಹೋದೀತೆಂದು "ಅಯ್ಯೋ, ಅದನ್ನು ಬಿಟ್ಟು ಬಂದೆವು" ಎಂದು ಹೇಳುವ ಸಂಪ್ರದಾಯ ಪ್ರಾರಂಭವಾಗಿರಬಹುದು. ಬರಬರುತ್ತ ಕಾಶಿಗೆ ಹೋದವರು ಏನಾದರೂ ಬಿಟ್ಟು ಬರಲೇ ಬೇಕು ಎಂದು ಜನ ನಂಬತೊಡಗಿದರೇನೋ! ಒಡವೆ ವಸ್ತುಗಳನ್ನು ಬಿಡಲು ಮನಸ್ಸಿಲ್ಲದವರು ತಿಂಡಿ-ತೀರ್ಥಗಳನ್ನು ಬಿಟ್ಟು ಬರತೊಡಗಿದರು! ಇದಕ್ಕೆ ಯಾರೋ ಒಂದು ಫಿಲಾಸಫಿ ಕೂಡಾ ಜೋಡಿಸಿದರು - "ಕಾಶಿಗೆ ಹೋಗಿ ನಿಮಗೆ ಇಷ್ಟವಾದದ್ದನ್ನು ಬಿಟ್ಟು ಬರಬೇಕು. ತ್ಯಾಗವೇ ಭಕ್ತಿಯ ಇನ್ನೊಂದು ರೂಪ. ಆಗಲೇ ಕಾಶಿ ವಿಶ್ವನಾಥನಿಗೆ ತೃಪ್ತಿ." ಸರಿ, ನಮ್ಮ ಜನ ಮೊದಲೇ ತ್ಯಾಗ-ಗಂಧ-ತರುಗಳ ನಾಡಿನವರು! ಒಬ್ಬರು ತಮಗೆ ಇಷ್ಟವಾದದ್ದೆಂದು ಸೀತಾಫಲದ ಹಣ್ಣನ್ನು ಬಿಟ್ಟು ಪಾಪ ಸೇಬು, ದ್ರಾಕ್ಷಿ ದಾಳಿಂಬೆಗಳನ್ನು ಮಾತ್ರ ತಿಂದರು. ಇನ್ನೊಬ್ಬರು ರಾಜಾಸ್ಥಾನದಲ್ಲಿ ಚೈತ್ರ ಮಾಸದಲ್ಲಿ ಮಾಡುವ ಘೇವರ್ ತಮಗೆ ಆಪ್ಯಾಯಮಾನವೆಂದು ಅದನ್ನು ಬಿಟ್ಟು ಕೇವಲ ಲಾಡು, ಗುಲಾಬ್ ಜಾಮೂನ್, ರಸಗುಲ್ಲಾ, ರಾಜಭೋಗ್ ಗಳಲ್ಲೇ ತೃಪ್ತಿ ಪಟ್ಟರು.
ಇನ್ನು ಎನ್ನಾರೈ ಮಹಾಶಯನ ವಿಷಯಕ್ಕೆ ಬರೋಣ. ಇವನಿಗೆ ಫೇಸ್ ಬುಕ್ ನಲ್ಲೆ. ಅರ್ಥಾತ್ ದಿನವಿಡೀ ಇವನಿಗೆ ಕಂಪನಿಯ ಕೆಲಸ ಕೊಡುತ್ತಿದ್ದದ್ದು ಫೇಸ್ ಬುಕ್ ಒಂದೇ. ಫೇಸ್ ಬುಕ್ ಮಿತ್ರರು ಇರಲಿಲ್ಲವೆಂದಲ್ಲ. ಭಾರತವಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಇವನಿಗೆ ಮೈತ್ರೇಯಿಯರು ಯಥೇಚ್ಛವಾಗಿದ್ದರು. ಇವನು ಕಳಿಸುತ್ತಿದ್ದ ನಾನಾ ಬಗೆಯ ಚಿತ್ರವೈಚಿತ್ರ್ಯಗಳನ್ನು ನೋಡಿ ಕ್ಷಣಾರ್ಧದಲ್ಲಿ ಲೈಕ್ ಒತ್ತುತ್ತಿದ್ದರು. ನಿಮಿಷಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಈ ಅಭೂತಪೂರ್ವ ಪ್ರತಿಕ್ರಿಯೆ ನೋಡುತ್ತಾ ಇವನಿಗೆ ಅಪಾರ ಧೈರ್ಯಉಕ್ಕಿ ಎಂದಾದರೂ ಮೆಸೇಜ್ ಕಳಿಸಿದರೆ ಮಾತ್ರ ಆ ಮೈತ್ರೇಯಿಯರಿಂದ ಉತ್ತರ ಬಂದಿದ್ದರೆ ಕೇಳಿ! ಏನೋ ನೆಪ ಹೇಳಿ ಜಾರಿಕೊಂಡುಬಿಡುತ್ತಿದ್ದರು. ಕೆಲವರಂತೂ ತಕ್ಷಣ ಇವನೊಂದಿಗೆ ಸಂಪರ್ಕವನ್ನೇ ಕಡಿದುಕೊಂಡು ಬಿಡುತ್ತಿದ್ದರು. ಕೊನೆಗೆ ಇವನಿಗೆ ನಿಜವಾದ ನಲ್ಲೆ ಸಿಕ್ಕಿದ್ದು ಫೇಸ್ ಬುಕ್ ನಲ್ಲೆ! ಅದೊಂದು ದೊಡ್ಡ ಕಥೆ.
ಎನ್ನಾರೈಗೆ "ಬಿಳೀ ಹೆಂಡ್ತಿ" ಚಿತ್ರದಲ್ಲಿದ್ದ ಲೀಲಾವತಿಯಂಥ ತಾಯಿ ಮತ್ತು ಲೋಕನಾಥ್ ನಂಥ ತಂದೆ ಇದ್ದರು. ಪಕ್ಕದ ಮನೆಯಲ್ಲೇ ಆರತಿಯಂಥ ಒಬ್ಬ ಹುಡುಗಿ ಇದ್ದಳು. ಲೀಲಾವತಿಗೆ ತನ್ನ ಸೊಸೆಯಾಗಿ ಆರತಿಯೇ ಬರಲಿ ಎಂದು ಕನಸು. ಒಂದು ದಿನ ಆಕೆ ತನ್ನ ಸಂಕಟವನ್ನು ಆರತಿಗೆ ಹೇಳಿಕೊಂಡರು. ಆರತಿ ಈ ಶತಮಾನದ ಮಾದರಿ ಹೆಣ್ಣು! ಫೇಸ್ ಬುಕ್ ಮೇಲೆ ಅಕೌಂಟ್ ತೆರೆದು ಎನ್ನಾರೈಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸೇ ಬಿಟ್ಟಳು. ಎನ್ನಾರೈಗೆ ಹೀಗೆ ಯಾವ ಹೆಣ್ಣೂ ತಾನಾಗಿ ಫ್ರೆಂಡ್ ಮೈತ್ರಿ ಬಯಸಿ ಬಂದಿರಲಿಲ್ಲ! ಅವನು ಕೂಡಲೇ ಆಕೆಯ ಪ್ರೊಫೈಲ್ ನೋಡಿದ. ತನ್ನ ಸ್ನೇಹಿತರು ಯಾರಾದರೂ ತನಗೆ ಏಪ್ರಿಲ್ ಫೂಲ್ ಮಾಡಲು ಈ ಕೆಲಸ ಮಾಡುತ್ತಿದ್ದಾರೇನೋ ಎಂದು ಅವನಿಗೆ ಅನುಮಾನ! ಆದರೆ ಆರತಿ ನಿಜವಾದ ಮೂರುತಿ ಎಂದು ಗೊತ್ತಾದಾಗ ಅವನಿಗೆ ಕಕ್ಕಾಬಿಕ್ಕಿಯಾಯಿತು.
ಬಹಳ ಬೇಗ ಆರತಿ ಇವನ ಪರಮಪ್ರಿಯ ಸ್ನೇಹಿತಳಾದಳು - ಇವನು ಕಳಿಸಿದ ಚಿತ್ರಗಳನ್ನೆಲ್ಲಾ ಆರತಿ ಲೈಕ್ ಮಾಡುವಳು, ವಂಡರ್ಫುಲ್ ಎಂದು ಕಾಮೆಂಟ್ ಮಾಡಿ ಶೇರ್ ಮಾಡುವಳು. ಇವನ ಇತರ ಮಿತ್ರ-ಮೈತ್ರೇಯಿಯರು ಯಾರಪ್ಪಾ ಈ ಶೇರ್-ನೀ ಎಂದು ಚುಡಾಯಿಸಿದರು. ಕೊನೆಗೂ ಎನ್ನಾರೈಗೆ ಪ್ರೇಮಾಂಕುರವಾಗಿ ವ್ಯಾಲೆಂಟೈನ್ ದಿನದ ಸುಮುಹೂರ್ತದಲ್ಲಿ ಪ್ರೇಮನಿವೇದನೆ ಮಾಡಿಕೊಂಡೇ ಬಿಟ್ಟ.
ಇಲ್ಲ, ಉತ್ತರ ಬರಲಿಲ್ಲ! ಅಯ್ಯೋ! ಇವಳೂ ಹೀಗೇ! ಈ ಹುಡುಗಿಯರೇ ಹೀಗೆ! ಎಂದು ನಮ್ಮ ಎನ್ನಾರೈ ಗಡ್ಡ ಬಿಟ್ಟ. (ಫೇಸ್ ಬುಕ್ ಬಿಡಲಿಲ್ಲ.)
ಒಂದುದಿನ ಇವನ ಮೊಬೈಲ್ ಫೋನ್ ರಿಂಗಾಯಿತು. ಲೀಲಾವತಿ "ಯಾಕೋ ನಾನು ಕಳಿಸಿದ ಈಮೇಲ್ ಗೆ ಉತ್ತರವೇ ಇಲ್ಲ!" ಎಂದು ದಬಾಯಿಸಿದರು. "ಅಮ್ಮಾ ಈ ಮೇಲ್ ಯಾರು ನೋಡ್ತಾರೆ? ಇದು ಫೇಸ್ ಬುಕ್ ಕಾಲ. ಇನ್ಸ್ಟಂಟ್ ಮೆಸೇಜ್ ಕಾಲ!" ಎಂದು ಎನ್ನಾರೈ ಹಾರಿಸಿದ. ಹಾಗೆ ಹೇಳುತ್ತಲೇ ಇನ್ ಬಾಕ್ಸ್ ತೆರೆದು ನೋಡಿದ. ಲೀಲಾವತಿಯಿಂದ ಬಂದಿದ್ದ ಅಟ್ಯಾಚ್ ಮೆಂಟ್ ನಲ್ಲಿ ಆರತಿಯ ಫೋಟೋಗಳು! ಹಾ! ಇವಳು ನನ್ನ ಫೇಸ್ ಬುಕ್ ಮಿತ್ರಳಲ್ಲವೇ ಎಂದು ಇವನು ಬಾಯಿ ಬಿಟ್ಟುಕೊಂಡು ನೋಡೇ ನೋಡಿದ. ಲೀಲಾವತಿ "ನಿನಗೆ ಒಪ್ಪಿಗೆ ತಾನೇ?" ಎಂದು ಕೇಳುತ್ತಿದ್ದರು. ಇವನು ಉತ್ತರಿಸಲು ಪದಗಳನ್ನು ಹುಡುಕುತ್ತಿದ್ದಾಗ ಫೋನ್ ನಲ್ಲಿ ಆರತಿಯೇ ಮಾತಾಡಿದಳು! "ಯಾಕ್ರೀ, ನಿಮಗೆ ಬಿಳೀ ಹೆಂಡ್ತಿ ಯಾರಾದರೂ ಇದಾರಾ?" ಇವನು ಕಷ್ಟ ಪಟ್ಟು ಉಗುಳು ನುಂಗಿ "ಇಲ್ಲ" ಎಂದ.
ಎನ್ನಾರೈ ವಿವಾಹ ಎಂದರೆ ಅದೂ ಫೇಸ್ ಬುಕ್ ವೇಗದಲ್ಲೇ ಆಗಬೇಕು. ಮುಂದಿನ ವಾರವೇ ನಿಶ್ಚಿತಾರ್ಥ, ಮರು ತಿಂಗಳಲ್ಲೇ ಮದುವೆ! ನಿಶ್ಚಿತಾರ್ಥಕ್ಕೆ ಇವನು ಅಲ್ಲಿ, ಆರತಿ ಇಲ್ಲಿ. ಪುರೋಹಿತರು ಫೇಸ್ ಬುಕ್ ನಲ್ಲೇ ನಿಶ್ಚಿತಾರ್ಥದ ವಿಷಯವನ್ನು ಪೋಸ್ಟ್ ಮಾಡಿದರು. ಆಹ್ವಾನಿತ ಮಿತ್ರರು ತಮ್ಮ ತಮ್ಮ ಲ್ಯಾಪ್ ಟಾಪ್ ಯಾ ಟ್ಯಾಬ್ಲೆಟ್ ಗಳಲ್ಲಿ ಲೈಕ್ ಒತ್ತಿದರು. ಆರತಿ ಇವನ ಚಿತ್ರಕ್ಕೆ ಕ್ಲಿಕ್ ಮಾಡಿದಾಗ ಸ್ಲೋ ಮೋಷನ್ ನಲ್ಲಿ ಇವನ ಚಿತ್ರಕ್ಕೆ ಮಲ್ಲಿಗೆಯ ಹಾರ ಬಂತು. ಇವನೂ ಈ-ಹಾರ ಹಾಕಿ ಒಪ್ಪಿಗೆ ಸೂಚಿಸಿದ. ಆಹಾರವನ್ನು ಅವರವರು ಅವರವರ ಮನೆಯಲ್ಲಿ ಆನಂದಿಸಿದರು.
ಹೀಗೆ ಎಲ್ಲವೂ ಸುಖಾಂತದಲ್ಲಿ ಮುಕ್ತಾಯವಾಗಲು ಇದೇನು ಬಾಲಿವುಡ್ ಚಿತ್ರವೇ! ನಮ್ಮ ಎನ್ನಾರೈ ನಾಯಕನಿಗೆ ಆಘಾತ ಕಾದಿತ್ತು. ಮರುದಿನ ಆರತಿ ಹೀಗೆ ಮೆಸೇಜ್ ಮಾಡಿದ್ದಳು -
ಪಾಪ, ಫೇಸ್ ಬುಕ್ ಗೆ "ಟೂ" ಹೇಳುವುದು ಅಷ್ಟು ಸುಲಭವೇ! ಕೊನೆಗೆ ಬಹಳ ಯೋಚಿಸಿ ಎನ್ನಾರೈ ಒಂದು ಮೆಸೇಜ್ ಕಳಿಸಿದ.
ಮದುವೆಯ ದಿನವೂ ಬಂತು. ಕಾಶೀಯಾತ್ರೆಯ ತಯಾರಿ ಜೋರಾಗಿತ್ತು. ಚಪ್ಪರದ ನೆರಳಲ್ಲಿ ಲೋಕನಾಥ್ ಚೇರ್ ಹಾಕಿದರು. ಗಾಳಿ ಬೀಸಿದರು. ಒಂದು ಕೈಗೆ ನಕ್ಕಿ ಅಲಂಕಾರದ ತೆಂಗಿನಕಾಯಿ ಕೊಟ್ಟರು. ಇನ್ನೊಂದು ಕೈಗೆ ಒಂದು ಟ್ಯಾಬ್ಲೆಟ್ ಕೊಟ್ಟರು. ಅದರಲ್ಲಿ "ಫೇರ್ ವೆಲ್ ಟು ಫೇಸ್ ಬುಕ್" ಎಂಬ ಬರಹ ರಾರಾಜಿಸುತ್ತಿತ್ತು. ಫೇಸ್ ಬುಕ್ ಪೇಜ್ ನೋಡಿದ ಕೂಡಲೇ ಎನ್ನಾರೈ ಲಾಗಿನ್ ಮಾಡಿದ. ಅಲ್ಲಿದ್ದ ಮೆಸೇಜ್ ನೋಡುತ್ತಾ ಮೈಮರೆತ! ಅಯ್ಯೋ ಇವನು ಎಲ್ಲಿ ತನ್ನ ಮನಸ್ಸು ಬದಲಾಯಿಸಿ ಬಿಡುತ್ತಾನೋ ಎಂದು ಎಲ್ಲರಿಗೂ ಗಾಬರಿಯಾಯಿತು! ಆಗ ಅಲ್ಲಿ ತೇಲಿ ಬಂತು ಒಂದು ಚಿತ್ರ! ಇವನು ನೋಡೇ ನೋಡಿದ! ಆರತಿ ಗೌರಿ ಪೂಜೆ ಮಾಡುತ್ತಿದ್ದ ಚಿತ್ರವನ್ನು ಯಾರೋ ಇನ್ಸ್ಟಂಟ್ ಮೆಸೇಜ್ ಮಾಡಿದ್ದರು!
ಎಲ್ಲರೂ ಇವನ ಕಡೆ ನೋಡುತ್ತಿದ್ದಾರೆ. ವಾಲಗದವರು ಸಸ್ಪೆನ್ಸ್ ಮ್ಯೂಸಿಕ್ ಊದುತ್ತಿದ್ದಾರೆ. ಕೊನೆಗೂ ಇವನು ತನ್ನ ಫೇಸ್ ಬುಕ್ ಅಕೌಂಟ್ ಹೊಡೆದು ಹಾಕಲು ಓಕೆ ಬಟನ್ ಒತ್ತಿಯೇ ಬಿಟ್ಟ. ಕ್ಯಾಮೆರಾಗಳು ಮಿಂಚಿದವು! ವಾಲಗದವರು ಬಾಜಿಸಿದರು - ಸುಲಗ್ನಾ ಸಾವಧಾನ!
(ಈ ಹರಟೆಗೆ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಲು ನೀವು ಲಾಗಿನ್ ಮಾಡಬೇಕಾಗಿಲ್ಲ.)
Kashi Yatre mattu Face Book (c) C.P. Ravikumar, 2014

"ನನ್ನನ್ನು ಮದುವೆಯಾಗಬೇಕೆಂದರೆ ಒಂದೇ ಷರತ್ತು.
ಫೇಸ್ ಬುಕ್ ನಮ್ಮ ವಿವಾಹ ಜೀವನಕ್ಕೆ ಆಪತ್ತು.
ನಿನಗೆ ಇರುವ ಆಫ್ಶನ್ ಒನ್ ಆರ್ ಟೂ.
ನಾನು ಬೇಕಾದರೆ ಒನ್ ಒತ್ತು, ಫೇಸ್ ಬುಕ್ ಬೇಕಾದರೆ ಟೂ ಒತ್ತು."
ಪಾಪ, ಫೇಸ್ ಬುಕ್ ಗೆ "ಟೂ" ಹೇಳುವುದು ಅಷ್ಟು ಸುಲಭವೇ! ಕೊನೆಗೆ ಬಹಳ ಯೋಚಿಸಿ ಎನ್ನಾರೈ ಒಂದು ಮೆಸೇಜ್ ಕಳಿಸಿದ.
ಮದುವೆಯ ದಿನವೂ ಬಂತು. ಕಾಶೀಯಾತ್ರೆಯ ತಯಾರಿ ಜೋರಾಗಿತ್ತು. ಚಪ್ಪರದ ನೆರಳಲ್ಲಿ ಲೋಕನಾಥ್ ಚೇರ್ ಹಾಕಿದರು. ಗಾಳಿ ಬೀಸಿದರು. ಒಂದು ಕೈಗೆ ನಕ್ಕಿ ಅಲಂಕಾರದ ತೆಂಗಿನಕಾಯಿ ಕೊಟ್ಟರು. ಇನ್ನೊಂದು ಕೈಗೆ ಒಂದು ಟ್ಯಾಬ್ಲೆಟ್ ಕೊಟ್ಟರು. ಅದರಲ್ಲಿ "ಫೇರ್ ವೆಲ್ ಟು ಫೇಸ್ ಬುಕ್" ಎಂಬ ಬರಹ ರಾರಾಜಿಸುತ್ತಿತ್ತು. ಫೇಸ್ ಬುಕ್ ಪೇಜ್ ನೋಡಿದ ಕೂಡಲೇ ಎನ್ನಾರೈ ಲಾಗಿನ್ ಮಾಡಿದ. ಅಲ್ಲಿದ್ದ ಮೆಸೇಜ್ ನೋಡುತ್ತಾ ಮೈಮರೆತ! ಅಯ್ಯೋ ಇವನು ಎಲ್ಲಿ ತನ್ನ ಮನಸ್ಸು ಬದಲಾಯಿಸಿ ಬಿಡುತ್ತಾನೋ ಎಂದು ಎಲ್ಲರಿಗೂ ಗಾಬರಿಯಾಯಿತು! ಆಗ ಅಲ್ಲಿ ತೇಲಿ ಬಂತು ಒಂದು ಚಿತ್ರ! ಇವನು ನೋಡೇ ನೋಡಿದ! ಆರತಿ ಗೌರಿ ಪೂಜೆ ಮಾಡುತ್ತಿದ್ದ ಚಿತ್ರವನ್ನು ಯಾರೋ ಇನ್ಸ್ಟಂಟ್ ಮೆಸೇಜ್ ಮಾಡಿದ್ದರು!
ಎಲ್ಲರೂ ಇವನ ಕಡೆ ನೋಡುತ್ತಿದ್ದಾರೆ. ವಾಲಗದವರು ಸಸ್ಪೆನ್ಸ್ ಮ್ಯೂಸಿಕ್ ಊದುತ್ತಿದ್ದಾರೆ. ಕೊನೆಗೂ ಇವನು ತನ್ನ ಫೇಸ್ ಬುಕ್ ಅಕೌಂಟ್ ಹೊಡೆದು ಹಾಕಲು ಓಕೆ ಬಟನ್ ಒತ್ತಿಯೇ ಬಿಟ್ಟ. ಕ್ಯಾಮೆರಾಗಳು ಮಿಂಚಿದವು! ವಾಲಗದವರು ಬಾಜಿಸಿದರು - ಸುಲಗ್ನಾ ಸಾವಧಾನ!
(ಈ ಹರಟೆಗೆ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಲು ನೀವು ಲಾಗಿನ್ ಮಾಡಬೇಕಾಗಿಲ್ಲ.)
Kashi Yatre mattu Face Book (c) C.P. Ravikumar, 2014
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ