ಒಂದೇ ಒಂದು ಪೌಂಡ್ (ಹೀಗೇ ಸುಮ್ಮನೆ)
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ?
ನಕ್ಕು ನುಡಿಯಿತು ಬೆಕ್ಕು, "ಲಂಡನ್ ನಗರಕ್ಕೆ!"
ಬೆಕ್ಕಸ ಬೆರಗಾಗಿ ಕೇಳಿದಳು ಅಕ್ಕ, "ಅಲ್ಲಿಗೆ ಯಾತಕ್ಕೆ?"
"ರೊಕ್ಕ ಬೇಡಲು ಹೋಗಿದ್ದೆ ರಾಣಿ ಅರಮನೆಗೆ!"
"ಸಿಕ್ಕಿರಬಹುದು ಕೈತುಂಬಾ! ರಾಣಿ ಬಲು ಉದಾರಿ!"
"ಅಕ್ಕಾ! ಅಲ್ಲಿ ಗಂಭೀರವಾಗಿದೆ ಪರಿಸ್ಥಿತಿ!
ಬೊಕ್ಕಸವು ಬರಿದಾಗಿದೆಯಂತೆ ಹೆಚ್ಚೂಕಮ್ಮಿ!
(ಬಿಕ್ಕಿ) ಬರಬಾರದಕ್ಕಾ ಯಾರಿಗೂ ಇಂಥ ಗತಿ!
"ಲೆಕ್ಕ ಹಾಕುತ್ತಿದ್ದಾರೆ ಮನೆಮಂದಿಯೆಲ್ಲಾ
ಮಿಕ್ಕಿದೆಯಂತೆ ಕೇವಲ ಒಂದು ದಶಲಕ್ಷ!
ಬಕ್ಕಿಂಗ್ ಹ್ಯಾಮ್ ಅರಮನೆಗೆ (ಮತ್ತೆ ಬಿಕ್ಕುತ್ತ)
ಅಕ್ಕಾ ರಿಪೇರಿಗೂ ರೊಕ್ಕ ಇಲ್ಲವಂತಲ್ಲ!
"ನಿಕ್ಕಾಹ್ ಮಾಡಿದರಲ್ಲ ಮೊಮ್ಮಗನಿಗೆ
ಸಿಕ್ಕಾಪಟ್ಟೆ ಖರ್ಚಾಯಿತು ಬಟ್ಟೆಬರೆಗೆ
ಸಕ್ಕರೆ ಹಂಚಿದರಂತೆ ಮನೆಮನೆಗೆ! ಅರಸರ
ಮಕ್ಕಳ ಮದುವೆ ಎಂದರೆ ಸುಮ್ಮನೇನೇ!
"ಚಿಕ್ಕ ಮಗು ಬೇರೆ ಹುಟ್ಟಿತಲ್ಲ ವಿಲ್-ಗೆ
ಚೆಕ್ಕು ಬರೆದರು ರಾಣಿ ಪ್ರತಿಯೊಂದು ಬಿಲ್-ಗೆ
ಲಕ್ಷವೇನು ಲೆಕ್ಕ ಅರಸರಿಗೆ ಅಕ್ಕಾ?
ಖರ್ಚಾದೀತು ಅಷ್ಟು ಕುಲಾವಿ ಮಕಮಲ್ ಗೆ
"ಹೇಗಿತ್ತು ಇಂಗ್ಲೆಂಡ್ ರಾಣಿಯರ ಜರ್ಬು!
ಬಾಗುತ್ತಿತ್ತು ಕೈಮುಗಿದು ಇಡೀ ಜಗತ್ತು!
ಆಗಸದಲ್ಲಿ ಮುಳುಗುತ್ತಲೇ ಇರಲಿಲ್ಲ ಸೂರ್ಯ
ಸಾಗುತ್ತಿತ್ತು ನಿರಾತಂಕ ಕಲೆಕ್ಷನ್ ಕಾರ್ಯ
"ನೆರೆರಾಷ್ಟ್ರ ಫ್ರಾನ್ಸಿನಲ್ಲಿ ಶುರುವಾಯ್ತು ತೊಂದರೆ
ದೊರೆರಾಣಿಯ ಬಳಿ ಬ್ರೆಡ್ ಇಲ್ಲಮ್ಮಾ ಅಂದ್ರೆ
ಸರಿಯಪ್ಪ ಕೇಕ್ ತನ್ರಿ, ಒಂಚೂರು ನೀವೂ ತಿನ್ರಿ,
ಚೆರಿ ಮಾತ್ರ ನನಗಿರಲಿ ಅಂದ ಮಾತ್ರಕ್ಕೆ
"ಶುರುವಾಗಿ ಬಿಡ್ತು ಅಲ್ಲಿ ಮಕರ ಸಂಕ್ರಾಂತಿ!
ಅರಸರಿಗೆ ಬಂತು ಕುತ್ತಿಗೆಗೆ ಗಿಲೊಟಿನ್ ಕತ್ತಿ!
ತರತರದ ಮಾತಾಡುವರು ಇಂದು ಇಂಟರ್ ನೆಟ್ ಜನ
ಹರಾಜಾಗುತ್ತಿದೆ ಅರಸುಕುಲದ ಮಾನ!
"ದೊರೆ ಯಾಕೆ ಹಿಡಿಯಬಾರದು ನೌಕರಿ ಎನ್ನುವರು!
ಸರಿಯೇ ಅಕ್ಕಾ ಇವರಾಡುವ ಮಾತು?
ದರಿದ್ರತೆ ರೇಖೆಯ ಬಗ್ಗೆ ನೂರೆಂಟು ಚರ್ಚೆ!
ನಿರುಪಮಾನರಿಗೂ ದರಿದ್ರರಿಗೂ ಒಂದೆಯೇ ರೇಖೆ?
"ಹತ್ತು ಲಕ್ಷ ಪೌಂಡ್ ಮಾತ್ರ ಉಳಿದಿದೆಯಂತೆ -
ಪ್ರತಿಯೊಬ್ಬರೂ ಒಂದು ಪೌಂಡ್ ಕೊಡಬಾರದೇಕೆ?
ವರ್ತಕ ಶೈಲಾಕ್ ಬೇಡಿದ್ದು ಕೂಡಾ ಇಷ್ಟೇ -
ತುರ್ತಾಗಿ ಕಳಿಸಿ ರಾಣೀವಿಳಾಸಕ್ಕೆ"
Totally a different post...!!!
ಪ್ರತ್ಯುತ್ತರಅಳಿಸಿHi Veena, thanks for your comment. Haage swalpa tamashe ...
ಪ್ರತ್ಯುತ್ತರಅಳಿಸಿ