ಮೊಗ್ಗಿನ ಮನಸ್ಸು

ಮೊಗ್ಗಿನ ಮನಸ್ಸು

ಮೂಲ ಹಿಂದಿ ಕವಿತೆ: ಕೈಫಿ ಆಜ್ಮಿ 

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್


ಏನಾದರೂ ನುಡಿಯಿತೆ ನಿನ್ನ ಹೃದಯ? 
ಇಲ್ಲ, ಏನೂ ಇಲ್ಲ. 
ನನ್ನ ಹೃದಯಕ್ಕೆ ಏನೋ ಕೇಳಿಸಿತಲ್ಲ?
ಇಲ್ಲ, ಏನೂ ಇಲ್ಲವಲ್ಲ!

ಹೀಗೂ ನಡೆಯುತ್ತದೆ ಕೆಲವೊಮ್ಮೆ 
ಕಿವಿಗೆ ಕೇಳದ ಮೌನ ಸಂಭಾಷಣೆ!

ಒಳಗೊಳಗೇ ಮೈಮುರಿಯುವ ಹೃದಯಕ್ಕೆ 
ಯಾರು ಹೇಳುವರು  ತಿಳುವಳಿಕೆ?
ಕಣ್ತೆರೆದು ಮೇಲೆದ್ದು ಸುಪ್ತ ಬಯಕೆ
ದೂಡಿದರೆ  ಪಾಪಕ್ಕೆ ಎಂಬ ಶಂಕೆ!

ಕನಸುಗಳೆಂಬ ಅಪ್ಸರೆಯರು ಮಲಗಿರಲಿ ಹಾಗೇ 
ತಂಪಾಗಿದೆ ಕಣ್ಣ ರೆಪ್ಪೆಗಳ ಹಾಸಿಗೆ!

ಮನಸ್ಸಿಗೆ ಹೇಳುತ್ತದೆ  ಸುಳ್ಳು ಸಮಾಧಾನ
ಹೊರಗಿನ  ಶೃಂಗಾರ ಸಾಧನ
ಮನದೊಳಗೋ  ಮೌನ; ಮಂದ್ರ ಶಿಶಿರಗಾನ
ಜನರಿಗೆ ಭ್ರಮೆಯ ವಸಂತಾಗಮನ!

ನಗೆಮುಗುಳನ್ನು ಎಂದಾದರೂ ಕೇಳುವರೇ ಜನ -
ನಗುತಿಹೆಯೋ ಅಳುತಿಹೆಯೋ ಎಂಬುದನ್ನ?

* * *


ಕೈಫಿ ಆಜ್ಮಿ ಬರೆದಿರುವ ಈ ಕವಿತೆಯನ್ನು ಒಂದು ಹಿಂದಿಚಿತ್ರದಲ್ಲಿ ಗೀತೆಯಾಗಿ ಬಳಸಿಕೊಳ್ಳಲಾಗಿದೆ.  ಲತಾ ಮಂಗೇಶ್ಕರ್ ಹಾಡಿರುವ ಗೀತೆ.

ನಾನು ಓದುತ್ತಿದ್ದಾಗ ರಾತ್ರಿ ಹತ್ತು ಗಂಟೆಗೆ ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಛಾಯಾಗೀತ್ ಎಂಬ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.  ಯಾವುದಾದರೂ ಒಂದು ಭಾವನೆಯ ಅಥವಾ ಸಂದರ್ಭದ ಥೀಮ್ ಉಳ್ಳ ಗೀತೆಗಳನ್ನು ಆರಿಸಿ ಮಧ್ಯೆ ಮಧ್ಯೆ ಒಂದಷ್ಟು ವಿವರಣೆಗಳ ಜೊತೆ ಪ್ರಸಾರ ಮಾಡುತ್ತಿದ್ದರು. ಇಂದಿಗೂ ಈ ಕಾರ್ಯಕ್ರಮ ಇರಬಹುದೇನೋ. ಛಾಯಾಗೀತ್ ಕಾರ್ಯಕ್ರಮದಲ್ಲಿ ಆಗಾಗ ಪ್ರಸಾರವಾಗುತ್ತಿದ್ದ ಈ ಗೀತೆ ಮನಸ್ಸನ್ನು ಕಲಕುವ ಗುಣ ಉಳ್ಳದ್ದು.  ಆಗ ಬೆಂಗಳೂರಿನಲ್ಲಿ  ರಾತ್ರಿ ಹತ್ತು ಗಂಟೆ ಎಂದರೆ ಎಲ್ಲಾ ಕಡೆ ನೀರವತೆಯ ರಾಜ್ಯ! ಇಂಥ ನಿಶ್ಶಬ್ದದಲ್ಲಿ "ಕುಛ್ ದಿಲ್ ನೆ ಕಹಾ ... " ಗೀತೆ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತಿತ್ತು.

ಈ ಗೀತೆಯನ್ನು "ಅನುಪಮಾ" ಚಿತ್ರದಲ್ಲಿ ಬಳಸಲಾಗಿದೆ. ಚಿತ್ರದ ನಾಯಕಿ (ಶರ್ಮಿಳಾ ಟ್ಯಾಗೋರ್) ಹೆಚ್ಚು ಮಾತನಾಡದ ಮೌನಿ. ಇದಕ್ಕೆ ಕಾರಣವಿದೆ - ಅವಳು ಹುಟ್ಟಿದಾಗ ಅವಳ ತಾಯಿ ಸಾಯುತ್ತಾಳೆ; ಹೆಂಡತಿಯಲ್ಲಿ ಅಗಾಧ ಪ್ರೀತಿ ಹೊಂದಿದ್ದ ಅವಳ ತಂದೆ ತನ್ನ ಮಗಳನ್ನು ಕಣ್ಣೆತ್ತಿ ನೋಡುವುದೇ ಇಲ್ಲ. ಹೀಗಾಗಿ ಮಗಳು ಒಂಟಿಯಾಗಿ ಬೆಳೆಯುತ್ತಾಳೆ.  ಮುಂದೆ ಅವಳ ತಂದೆಯ ಸ್ವಾಸ್ಥ್ಯ ಕೆಟ್ಟಾಗ ಮಗಳೇ ಶುಶ್ರೂಷೆಗೆ ನಿಲ್ಲಬೇಕಾಗುತ್ತದೆ. ಅವರಿಬ್ಬರ ನಡುವೆ ವಾತ್ಸಲ್ಯ ಬೆಳೆಯತೊಡಗುತ್ತದೆ. ಆದರೆ ಅಷ್ಟರಲ್ಲಿ ನಾಯಕನ ಪ್ರವೇಶವಾಗುತ್ತದೆ! ನಾಯಕ (ಧರ್ಮೇಂದ್ರ) ಈ ಯುವತಿಯನ್ನು ಮುಂದೆ ಮದುವೆಯಾಗಬೇಕಾದ ಹುಡುಗನ ಗೆಳೆಯ. ನಾಯಕ ಮತ್ತು ನಾಯಕಿಯರ ನಡುವೆ ಪ್ರೇಮ ಉಂಟಾಗುತ್ತದೆ. ಕೊನೆಗೂ ತನ್ನನ್ನು ಸ್ವೀಕರಿಸಿದ ತಂದೆಯನ್ನು ಮತ್ತೆ ಕಳೆದುಕೊಳ್ಳುವ ಭಯ; ತನ್ನ ಸೂಕ್ಷ್ಮ ಸ್ವಭಾವವನ್ನು ಅರಿತ ನಾಯಕನ ಕಡೆ ಆಕರ್ಷಣೆ. ಇವುಗಳ ನಡುವೆ ನಾಯಕಿಯ ಮನಸ್ಸು ಹೊಯ್ದಾಡುತ್ತದೆ.

"ಮೊಗ್ಗಿನ ಮನಸ್ಸು". ನಾಯಕಿಯ ಭಾವನೆಗಳನ್ನು ಬಿಂಬಿಸುವ ಗೀತೆ. ಅವಳ ಮನಸ್ಸು ಅರಳಲು ಬಯಸುವ ಮೊಗ್ಗಿನ ಹಾಗೆ; ಆದರೆ ಅರಳಲು ಈ ಮೊಗ್ಗಿಗೆ ಎಷ್ಟು ಆಸೆಯಿದೆಯೋ ಅಷ್ಟೇ ಭಯವೂ ಇದೆ! ಹದಿವಯಸ್ಸಿನ ಎಲ್ಲಾ ಮಕ್ಕಳೂ ಅನುಭವಿಸುವ ಈ ಸ್ಥಿತಿಯನ್ನು ಕವಿ ಕೈಫಿ ಆಜ್ಮಿ ಸುಂದರವಾಗಿ ಹಿಡಿದಿಟ್ಟಿದ್ದಾರೆ. ತನ್ನ ಮನಸ್ಸಿನಲ್ಲಿ ಏಳುತ್ತಿರುವ ಕಾಮನೆಗಳ ಬಗ್ಗೆ  ಹದಿವಯಸ್ಸಿನ ನಾಯಕಿಗೆ ಭಯವಿದೆ. ಈ ಕನಸುಗಳು ಕಣ್ಣ ರೆಪ್ಪೆಗಳ ತಂಪಾದ ಹಾಸಗೆಯಲ್ಲಿ ಮಲಗೇ ಇರಲಿ ಎಂದು ಅವಳು ಕೇಳಿಕೊಳ್ಳುತ್ತಾಳೆ.  ಆದರೆ ಮರುಕ್ಷಣವೇ ಅವಳಿಗೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ. ತಾನು ಹೊರಗೆ ಲೋಕಕ್ಕೆ ತೋರಲೆಂದು ಮುಖವಾಡ ಹಾಕಿಕೊಂಡಿದ್ದೇನೆ, ತನ್ನ ಮುಖ ನಗುತ್ತಿದ್ದರೂ ಮನಸ್ಸು ದುಃಖಿಸುತ್ತಿದೆ! ಮುಗುಳು (ಮೊಗ್ಗು) ಎಂಬುದನ್ನು "ನಗೆಮುಗುಳು" ಎಂಬ ಸಮಾಸಪದದಲ್ಲಿ ಬಳಸುವುದು ರೂಢಿ. ಕವಿಗೆ ಮೊಗ್ಗು ನಸುನಗುವಂತೆ ತೋರುತ್ತದೆ. ಆದರೆ ಈ ಮೊಗ್ಗು ನಗುತ್ತಿದೆಯೋ ಒಳಗೊಳಗೇ ಅಳುತ್ತಿದೆಯೋ ಎಂದು ಕವಿ ಪ್ರಶ್ನಿಸುತ್ತಾನೆ.

"ಕುಛ್ ದಿಲ್ ನೇ ಕಹಾ" ಹಾಡನ್ನು ನೀವೂ ಕೇಳಿ.


Kannada Translation by C.P. Ravikumar of a Hindi Poem by Kaifi Azmi





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)