ಹಿತವಚನ (ಅತಿಸಣ್ಣ ಕತೆ)
ಸಿ. ಪಿ. ರವಿಕುಮಾರ್ ಎಡತುದಿಯಲ್ಲಿ ಕುಳಿತವನೊಬ್ಬ ತಾನು ಕುಳಿತ ರೆಂಬೆಯನ್ನು ಕೊಡಲಿಯಿಂದ ಕಡಿಯುತ್ತಿದ್ದ. ಇನ್ನಿಬ್ಬರು ಬಲತುದಿಯಲ್ಲಿ ಕುಳಿತು ಪುಟ್ಟ ಚಾಕುವಿನಿಂದ ರೆಂಬೆಯನ್ನು ಕೆತ್ತುತ್ತಿದ್ದರು. ಎಡತುದಿಯಲ್ಲಿ ಕುಳಿತವನಿಗೂ ಬಲತುದಿಯಲ್ಲಿ ಕುಳಿತವರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಹಿರಿಯನೊಬ್ಬ ಬಲತುದಿಯಲ್ಲಿ ಕುಳಿತಿದ್ದ ಇಬ್ಬರಿಗೆ ಬುದ್ಧಿ ಹೇಳಲು ಹೋದ. "ನಮಗೆ ಯಾಕೆ ಹೇಳುತ್ತೀ? ಅಲ್ಲಿ ನೋಡು, ಕೊಡಲಿಯಿಂದ ಕೊಚ್ಚುವವನಿಗೆ ಹೋಗಿ ಹೇಳು" ಎಂದು ಅವರು ಗದರಿದರು. ಹಿರಿಯ ಅವರಿಗೆ ಹೇಳಲು ಹೋದಾಗ "ವಾಹ್! ಅವರು ಇಬ್ಬರು ಸೇರಿ ಕೆತ್ತುತಾ ಇದ್ದಾರೆ, ನೀನು ನನಗೆ ಹೇಳೋಕೆ ಬರ್ತೀಯಲ್ಲ!" ಅಂತ ಬೈಸಿಕೊಂಡ. ರೆಂಬೆ ಇದನ್ನೆಲ್ಲಾ ಕೇಳಿಸಿಕೊಂಡು ದುಃಖ ತಾಳಲಾರದೇ ಧೊಪ್ ಎಂದು ನೆಲ ಕಚ್ಚಿತು. #ಅತಿಸಣ್ಣಕತೆ