ಕಾಡು ಮತ್ತು ಕೊಳಲು (ಖಲೀಲ್ ಗಿಬ್ರಾನ್)

ಮೂಲ - ಖಲೀಲ್ ಗಿಬ್ರಾನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Image result for forest flute
 
ಕೊಟ್ಟು ನನ್ನ ಕೈಗೆ ಕೊಳಲು ಹಾಡು ನೀನು ಗೀತೆ -
ನಿನಗೆ ಗೊತ್ತೇ? ಹಾಡಿನಲ್ಲಿದೆ ಅನಂತತೆ
ನಾವು ನಾಶವಾದ ನಂತರವೂ ಕೊಳಲಿನ ವಿಲಾಪ ಕೇಳುತ್ತದೆ. 

ನನ್ನಂತೆ ಗದ್ದಲದಿಂದ ದೂರವಾಗಿ ಕಾಡುಮೇಡುಗಳಲ್ಲಿ
ಬದುಕಿದ್ದೀಯಾ ಎಂದಾದರೂ? ನಿಂತಿರುವೆಯಾ ಬೆಟ್ಟವನ್ನೇರಿ?
ನದಿಗಳನ್ನು ಹೋಗಿದ್ದೀಯಾ ಹಿಂಬಾಲಿಸಿ?
ಪನ್ನೀರಿನಲ್ಲಿ ಮಿಂದು ಬೆಳಕಿನಿಂದ ಮೈ ಒರೆಸಿ
ಬಾನ ಬಟ್ಟಲಿನಲ್ಲಿ ಮುಂಜಾವನ್ನೇ ಮದಿರೆಯೆಂದು ಹೀರಿ
ಹೊನ್ನ ದೀಪಗಳಂತೆ ತೂಗಿಬಿದ್ದ ಗೊಂಚಲ ಕೆಳಗೆ
ಮಲಗಿದ್ದೀಯಾ ರಾತ್ರಿ ಹುಲ್ಲುಹಾಸಿನ ಮೇಲೆ
ನಭವನ್ನೇ ತೊಟ್ಟು ಮೇಲುಹೊದ್ದಿಗೆಯಾಗಿ?
ಮುಂದಿನ ಯೋಚನೆಗಳೆಲ್ಲಾ ಆವಿಯಾಗಿ
ಹಿಂದೆ ನಡೆದದ್ದೆಲ್ಲಾ ಮರೆತು ಹಾಯಾಗಿ?
ಬಂದಾಗ ಅಂಥದೊಂದು ಸುಮಧುರ ಘಳಿಗೆ
ಹಾಡು, ಕೊಳಲನ್ನು ಕೊಡು ನನ್ನ ಕೈಗಳಿಗೆ.
ಹಾಡಿನಲ್ಲಿ ದೊರೆವುದು ಹೃದಯಕ್ಕೆ ನ್ಯಾಯ
ಅಪರಾಧಿ ಭಾವನೆಗಳೆಲ್ಲ ಆದರೂ ಲಯ
ಮುಗಿಯದು ಕೊಳಲಿನ ವಿಲಾಪನೆ
ಕೊಳಲನ್ನು ಕೊಟ್ಟು ನೀನು ಮಾಡು ಆಲಾಪನೆ
ಮರೆತುಬಿಡು ಮದ್ದು ಮತ್ತು ಬಾಧಿಸುವ ಬೇನೆ

ಜನರು ನೀರಿನ ಮೇಲೆ ಬರೆದ ಗೆರೆಗಳಂತೆ
ಇಲಿಗಳು ಕೊರೆದ ಬಿಲಗಳಂತೆ
ಜೇಡನ ಬಲೆಯ ದಾರಗಳಂತೆ.
ದುರ್ಬಲನಾಗಿ ಬದುಕಿದವನು
ಕ್ಷೀಣಿಸುತ್ತಾನೆ ನಿಧಾನವಾಗಿ.
ಕಾಡು ಜೀವನದ ಸೆಲೆ!
ಒಂದಷ್ಟು ದಿನಗಳು ಕೈಗೂಡಿದರೆ ನನಗೆ
ಚೆಲ್ಲುವೆನು ನಾನವನ್ನು ಕಾಡಲ್ಲೇ.
ಆದರೆ ಕಾಲ ತೆಗೆದುಕೊಳ್ಳುತ್ತದೆ
ನನ್ನಾತ್ಮದ ನಿರ್ಧಾರ
ಕಾಡಿಗಾಗಿ ನಾನು ಹಾತೊರೆದಾಗೆಲ್ಲಾ
ಏನಾದರೂ ತಡೆ ಒಡ್ಡುತ್ತದೆ ಕಾಲ.
ವಿಧಿಯ ಆಟವನ್ನು ಬದಲಿಸುವುದು ಅಶಕ್ಯ
ಗುರಿಯನ್ನು ಸೆಳೆದುಕೊಳ್ಳಲು ಮಾನವ ಅಶಕ್ತ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)