ವಸುಧೈವ ಕುಟುಂಬಕಮ್
ಮೂಲ: ಮಾಯಾ ಏಂಜೆಲೋ (ಅಮೇರಿಕನ್ ಕವಯಿತ್ರಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ (ಕವಿತೆ ಓದುವ ಮುನ್ನ: ನೀವು ಓದಲಿರುವುದು ಕಪ್ಪು ಅಮೆರಿಕನ್ ಕವಯಿತ್ರಿ ಮಾಯಾ ಏಂಜೆಲೋ ಅವರ ಪ್ರಸಿದ್ಧ ಕವಿತೆ 'ಹ್ಯೂಮನ್ ಫ್ಯಾಮಿಲಿ'ಯ ಅನುವಾದ. ಕವಿತೆಯ ಸಾಲುಗಳು ಹೀಗೆ ನೇರವಾಗಿ ನಮ್ಮ ಎದೆಗೆ ಬಂದು ನಾಟುತ್ತವೆ ಎಂಬುದನ್ನು ಗಮನಿಸಿ. ಇದು ಮಾಯಾ ಏಂಜೆಲೋ ಅವರ ಕವಿತೆಗಳ ವೈಶಿಷ್ಟ್ಯ ಕೂಡಾ. ಇದೇ ಕವಯಿತ್ರಿಯ ಇನ್ನೂ ಕೆಲವು ಕವಿತೆಗಳ ಅನುವಾದವನ್ನು ನನ್ನ ಬ್ಲಾಗಿನಲ್ಲಿ ನೀವು ಓದಬಹುದು.) ಗಮನಿಸುತ್ತೇನೆ ಮಾನವ ಕುಟುಂಬದಲ್ಲಿ ಹಲಕೆಲವು ಸ್ವಯಂವೇದ್ಯ ವ್ಯತ್ಯಾಸ. ಕೆಲವರ ಮುಖದಲ್ಲಿ ಶ್ರೀಮದ್ಗಾಂಭೀರ್ಯ ಇನ್ನು ಕೆಲವರಿಗಿಷ್ಟ ನಗೆ, ಸುಹಾಸ ಪ್ರಯತ್ನಿಸಿ ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಾರೆ ಕೆಲವರು ಗಹನತೆ ನಾವು ಬದುಕುವುದೇ ನಿಜಜೀವನ ಎಂದು ಹೇಳಿಕೊಳ್ಳುತ್ತದೆ ಉಳಿದ ಜನತೆ ನಮ್ಮ ಮೈಚರ್ಮದ ವರ್ಣವೈವಿಧ್ಯ ತರುತ್ತದೆ ನಮಗೆ ಗೊಂದಲ, ಸಂತೋಷ, ಬೆಪ್ಪು. ಕಂದು, ಗುಲಾಬಿ, ಪೇಲವ, ನೇರಳೆಗಪ್ಪು ಮೇಘವರ್ಣ, ಹಳದಿ, ಮತ್ತು ಬಿಳುಪು. ದಾಟಿದ್ದೇನೆ ನಾನು ಸಪ್ತಸಮುದ್ರ ಮೆಟ್ಟಿದ್ದೇನೆ ಪ್ರತಿಯೊಂದು ನೆಲವ. ಕಂಡಿರುವೆ ಜಗದ ಅದ್ಭುತಗಳನ್ನು ಕಂಡಿಲ್ಲ ಒಬ್ಬನೂ ಸಾಧಾರಣ ಮಾನವ. ಜೇನ್ ಮತ್ತು ಮೇರಿ ಜೇನ್ ನಾಮಾಂಕಿತ ಮಹಿಳೆಯರು ಹತ್ತು ಸಾವಿರವಾದರೂ ಪರಿಚಿತರು ನನಗೆ. ಇವಳು ಎಲ್ಲವೂ ಅವಳ ಹಾಗೇ ಇದ್ದಾಳ...