ವಸುಧೈವ ಕುಟುಂಬಕಮ್


Color Pencil Set
ಮೂಲ: ಮಾಯಾ ಏಂಜೆಲೋ (ಅಮೇರಿಕನ್ ಕವಯಿತ್ರಿ)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

(ಕವಿತೆ ಓದುವ ಮುನ್ನ: ನೀವು ಓದಲಿರುವುದು ಕಪ್ಪು ಅಮೆರಿಕನ್ ಕವಯಿತ್ರಿ ಮಾಯಾ ಏಂಜೆಲೋ ಅವರ ಪ್ರಸಿದ್ಧ ಕವಿತೆ 'ಹ್ಯೂಮನ್ ಫ್ಯಾಮಿಲಿ'ಯ ಅನುವಾದ.  ಕವಿತೆಯ ಸಾಲುಗಳು ಹೀಗೆ ನೇರವಾಗಿ ನಮ್ಮ ಎದೆಗೆ ಬಂದು ನಾಟುತ್ತವೆ ಎಂಬುದನ್ನು ಗಮನಿಸಿ. ಇದು ಮಾಯಾ ಏಂಜೆಲೋ ಅವರ ಕವಿತೆಗಳ ವೈಶಿಷ್ಟ್ಯ ಕೂಡಾ. ಇದೇ ಕವಯಿತ್ರಿಯ ಇನ್ನೂ ಕೆಲವು ಕವಿತೆಗಳ ಅನುವಾದವನ್ನು ನನ್ನ ಬ್ಲಾಗಿನಲ್ಲಿ ನೀವು ಓದಬಹುದು.)     

ಗಮನಿಸುತ್ತೇನೆ ಮಾನವ ಕುಟುಂಬದಲ್ಲಿ 
ಹಲಕೆಲವು ಸ್ವಯಂವೇದ್ಯ ವ್ಯತ್ಯಾಸ.
ಕೆಲವರ ಮುಖದಲ್ಲಿ ಶ್ರೀಮದ್ಗಾಂಭೀರ್ಯ 
ಇನ್ನು ಕೆಲವರಿಗಿಷ್ಟ ನಗೆ, ಸುಹಾಸ

ಪ್ರಯತ್ನಿಸಿ ತಮ್ಮ ಜೀವನದಲ್ಲಿ
ಕಂಡುಕೊಳ್ಳುತ್ತಾರೆ ಕೆಲವರು ಗಹನತೆ
ನಾವು ಬದುಕುವುದೇ ನಿಜಜೀವನ
ಎಂದು ಹೇಳಿಕೊಳ್ಳುತ್ತದೆ ಉಳಿದ ಜನತೆ

ನಮ್ಮ ಮೈಚರ್ಮದ ವರ್ಣವೈವಿಧ್ಯ
ತರುತ್ತದೆ ನಮಗೆ ಗೊಂದಲ, ಸಂತೋಷ, ಬೆಪ್ಪು.
ಕಂದು, ಗುಲಾಬಿ, ಪೇಲವ, ನೇರಳೆಗಪ್ಪು
ಮೇಘವರ್ಣ, ಹಳದಿ, ಮತ್ತು ಬಿಳುಪು.

ದಾಟಿದ್ದೇನೆ ನಾನು ಸಪ್ತಸಮುದ್ರ
ಮೆಟ್ಟಿದ್ದೇನೆ ಪ್ರತಿಯೊಂದು ನೆಲವ.
ಕಂಡಿರುವೆ ಜಗದ ಅದ್ಭುತಗಳನ್ನು
ಕಂಡಿಲ್ಲ ಒಬ್ಬನೂ ಸಾಧಾರಣ ಮಾನವ.

ಜೇನ್ ಮತ್ತು ಮೇರಿ ಜೇನ್ ನಾಮಾಂಕಿತ ಮಹಿಳೆಯರು
ಹತ್ತು ಸಾವಿರವಾದರೂ ಪರಿಚಿತರು ನನಗೆ.
ಇವಳು ಎಲ್ಲವೂ ಅವಳ ಹಾಗೇ ಇದ್ದಾಳೆ
ಎಂಬ ಇಬ್ಬರು ಯಾರೂ ಬಿದ್ದಿಲ್ಲ ಕಣ್ಣಿಗೆ.

ತದ್ರೂಪು ಹೊಂದಿದ್ದರೂ ಅವಳಿ-ಜವಳಿ
ಒಬ್ಬರಿಗಿಂತ ಇನ್ನೊಬ್ಬರು ಭಿನ್ನ.
ಪಕ್ಕದಲ್ಲೇ ಮಲಗಿದ್ದ ಪ್ರೇಮಿಗಳು ಕೂಡಾ
ಯೋಚಿಸುತ್ತಾರೆ ಬೇರೆಯದನ್ನ.

ನಾವು ಚೈನಾದಲ್ಲಿ ಪ್ರೇಮಿಸಿ ಸೋಲುತ್ತೇವೆ,
ಅಳುತ್ತೇವೆ ಇಂಗ್ಲೆಂಡಿನ ಘಟ್ಟಗಳಲ್ಲಿ
ಗಿನಿಯಲ್ಲಿ ನಕ್ಕು ನರಳುತ್ತೇವೆ,
ಅರಳುತ್ತೇವೆ ಸ್ಪೇನ್ ದಡದಲ್ಲಿ.

ಫಿನ್ಲೆಂಡಿನಲ್ಲಿ ಅರಸುತ್ತೇವೆ ವಿಜಯ
ಮೇನ್‌ನಲ್ಲಿ ಹುಟ್ಟಿ ಪಡೆಯುತ್ತೇವೆ  ಸಾವು
ಅಲ್ಪವಷ್ಟೇ ನಮ್ಮ ನಡುವಣ ವ್ಯತ್ಯಾಸ
ಉಳಿದೆಲ್ಲ ಬಹುಮಟ್ಟಿಗೆ ಒಂದೇ ಥರ ನಾವು.

ಕಣ್ಣಿಗೆ ಕಾಣುವ ವ್ಯತ್ಯಾಸಗಳ ನಾನೂ 
ಗಮನಿಸುತ್ತೇನೆ ಜನಗಣಗಳ ನಡುವೆ.
ನಾವೆಷ್ಟು ಭಿನ್ನರೋ ಗೆಳೆಯರೇ, ಸಾಮ್ಯಗಳು 
ನಮ್ಮಗಳ ನಡುವೆ ಇನ್ನೂ ಹೆಚ್ಚಾಗಿವೆ.


ನಾವೆಷ್ಟು ಭಿನ್ನರೋ ಗೆಳೆಯರೇ, ಸಾಮ್ಯಗಳು 
ನಮ್ಮಗಳ ನಡುವೆ ಇನ್ನೂ ಹೆಚ್ಚಾಗಿವೆ.


ನಾವೆಷ್ಟು ಭಿನ್ನರೋ ಗೆಳೆಯರೇ, ಸಾಮ್ಯಗಳು 
ನಮ್ಮಗಳ ನಡುವೆ ಇನ್ನೂ ಹೆಚ್ಚಾಗಿವೆ.


(c) ಸಿ. ಪಿ. ರವಿಕುಮಾರ್, ೨೦೧೮ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)