ಬೂದು ಸಾರಸ
ಮೂಲ ಕವಿತೆ - ಗಾಲ್ವೇ ಕಿನ್ನೆಲ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ಪ್ರಸ್ತುತ ಕವಿತೆಯಲ್ಲಿ ಒಂದು ಸರಳ ಅನುಭವದಲ್ಲಿ ಅದಕ್ಕಿಂತ ಮೀರಿದ್ದನ್ನೇನೋ ಕಾಣುವ ಪ್ರಯತ್ನವಿದೆ. ಕವಿ ಒಂದು ಬೂದು ಸಾರಸವನ್ನು ನೋಡುತ್ತಾನೆ. ಬಹುಶಃ ಅವನು ಒಂದು ಕೆರೆಯ ಬದಿಯಲ್ಲಿ ಕುಳಿತಿರಬಹುದು. ಒಂದು ಬೂದು ಸಾರಸ ಪಕ್ಷಿ ಅವನ ಕಣ್ಣಿಗೆ ಬೀಳುತ್ತದೆ. ಅದನ್ನು ಕವಿ ಹಿಂಬಾಲಿಸುತ್ತಾನೆ. ಆದರೆ ಸಾರಸವು ಹಠಾತ್ ಮರೆಯಾಗಿ ಅದರ ಸ್ಥಾನದಲ್ಲಿ ಒಂದು ಸರೀಸೃಪ ಅವನ ಕಣ್ಣಿಗೆ ಬೀಳುತ್ತದೆ. ಸರೀಸೃಪ ಕುಟುಂಬಕ್ಕೆ ಸೇರಿದ ಡೈನಾಸಾರ್ ಪ್ರಾಣಿಗಳೇ ಹಕ್ಕಿಗಳಾಗಿ ವಿಕಸನ ಹೊಂದಿದವು ಎನ್ನುವ ಹಿನ್ನೆಲೆಯಲ್ಲಿ ಈ ಪದ್ಯವನ್ನು ಓದಿ. ಕವಿಗೆ ಎದುರಾದ ಸರೀಸೃಪ ಅವನತ್ತ ನೋಡಿ "ಇವನು ಹೋಗುತ್ತಾನೋ ಅಥವಾ ಬೇರಾವುದೋ ಪ್ರಾಣಿಯಾಗಿ ರೂಪಾಂತರಗೊಳ್ಳುತ್ತಾನೋ" ಎಂದು ಯೋಚಿಸುತ್ತಿದೆ! ಬಹಳ ಹಳೆಯದನ್ನು ಡೈನಾಸಾರ್ ಎಂದು ಹಂಗಿಸುವ ಪದ್ಧತಿ ಇದೆ. ಆದರೆ ಈ ಸರೀಸೃಪ ಪಕ್ಷಿ ರೂಪದಲ್ಲಿ ಇನ್ನೂ ಬದುಕಿದೆ. ಮನುಷ್ಯನೋ ತನ್ನ ವಿನಾಶವನ್ನು ತಾನೇ ತಂದುಕೊಂಡಿದ್ದಾನೆ.
ತಲೆ ಅಲ್ಲಾಡಿಸದು ಅತ್ತಿತ್ತ
ತನ್ನ ಕಾಯ ಮತ್ತು ಹಸಿರು
ಕಾಲ್ಗಳು ಒಂದು ಪಕ್ಕದಿಂದ ಇನ್ನೊಂದಕ್ಕೆ
ಓಲಾಡುತ್ತಾ ಸಾಗುವಾಗಲೂ. ಅದು
ನೋಟದಿಂದ ಮರೆಯಾದಾಗ
ನಾನು ಹಿಂಬಾಲಿಸಿದೆನಾದರೂ
ಹಕ್ಕಿ ಇದೆ ಎಂದುಕೊಂಡಿದ್ದ ಸ್ಥಳದಲ್ಲಿ
ನನಗೆ ಕಂಡಿದ್ದಾದರೂ ಏನು
ತನಗೊಪ್ಪದ ಚರ್ಮವನ್ನು ಹೊದ್ದು
ಗೀರುಬಾಯಿಯ ಮೂಲಕ
ಖನಿಜವಿಶ್ವದ ಸಮಚಿತ್ತತೆಯನ್ನು ಸಾರುತ್ತಾ
ತೇಕುತ್ತಿದ್ದ ಮೂರಡಿ ಉದ್ದದ ಸರೀಸೃಪ.
ಅದು ನಿಂತು ಓರೆ ಮಾಡಿದಾಗ
ಉರುಟುಗಲ್ಲಿನಂಥ ತಲೆ
ಅದರಲ್ಲಿ ಸಿಕ್ಕಿಸಿದ್ದ ಕಣ್ಣು ಗಮನಿಸುತ್ತಿತ್ತು
ನಾನು ಹೋಗುತ್ತೇನೋ
ಅಥವಾ ಬೇರಾವುದೋ ರೂಪ ತಾಳುತ್ತೇನೋ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ