ಅಮೇರಿಕನ್ ಗಿಣ್ಣು
ಮೂಲ : ಜಿಮ್ ಡ್ಯಾನಿಯೆಲ್ಸ್ (ಅಮೆರಿಕಾ ಸಂಸ್ಥಾನ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಕವಿತೆ ಓದುವ ಮುನ್ನ: ಬಾಲ್ಯದಲ್ಲಿ ಬಡತನದ ದಿನಗಳನ್ನು ಕಂಡ ಕವಿ ಈಗ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಶ್ರೀಮಂತಿಕೆಯ ನಾಜೂಕು ವೈಭವಗಳನ್ನು ಅನುಭವಿಸುವ ಸಾಮರ್ಥ್ಯ ಈಗ ಅವನಿಗಿದೆ. ಆದರೂ ಅದೇಕೋ ಬಾಲ್ಯದಲ್ಲಿ ತಾನು ನಿರ್ವಾಹವಿಲ್ಲದೇ ತಿನ್ನಬೇಕಾಗಿದ್ದ ಅಗ್ಗದ ಚೀಸ್ ಇಷ್ಟವಾಗುತ್ತದೆ! ಹೊರಗೆ ಅವನು ಹೇಗಾದರೂ ಇರಲಿ, ಮನೆಗೆ ಬಂದಾಗ ಹಾತೊರೆದು ತಿನ್ನುವುದು ಬಾಲ್ಯದ ನೆನಪುಗಳ ಉಪ್ಪು ಬೆರೆತ ಅಗ್ಗದ ಚೀಸ್! ಇಟಲಿ, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳಿಂದ ಬರುವ ಬೆಲೆಬಾಳುವ ಗಿಣ್ಣುಗಳಿಗಿಂತಲೂ ಅಮೆರಿಕನ್ ಸಿಂಗಲ್ಸ್ ಎಂಬ ಚೀಸ್ ಬಯಸುವೆ ಎನ್ನುವಾಗ ಕವಿ ಸ್ವದೇಶಪ್ರೇಮವನ್ನೂ ಮೆರೆಯುತ್ತಿರಬಹುದೇ ಎಂಬ ಅನುಮಾನವೂ ನಿಮಗೆ ಬರಬಹುದು. ಬಾಲ್ಯದಲ್ಲಿ ತಾಯಿ ಬಡಿಸುತ್ತಿದ್ದ ಏಕಪ್ರಕಾರದ ಅಡುಗೆಯನ್ನು ಬೈದುಕೊಂಡೇ ತಿಂದಿರಬಹುದಾದ ಕವಿಗೆ ಅಪರಾಧಿ ಭಾವವೂ ಕಾಡುತ್ತಿರಬಹುದು.
ಡಿಪಾರ್ಟ್ಮೆಂಟ್ ಪಾರ್ಟಿಗಳಲ್ಲಿ ನಾನು ಸೇವಿಸುವ ಚೀಸ್‍ಗಳ
ಹೆಸರನ್ನೂ ನನ್ನ ತಂದೆತಾಯಿ ಕೇಳಿರಲಾರರು -
ಮೆತ್ತಗಿನ, ತೆಳ್ಳನೆಯ ಗಿಣ್ಣುಗಳು
ಮಾತಾಡುತ್ತವೆ ನಾನು ಕೇಳರಿಯದ ಭಾಷೆ.
ಕಷ್ಟಪಟ್ಟು ನಾನು ಸಾಧಿಸಿದ್ದೇನೆ
ಇವುಗಳನ್ನು ಇಷ್ಟಪಡುವುದನ್ನು.
ಅದಕ್ಕೆ ಕಾರಣವೂ ಇಲ್ಲದೇ ಇಲ್ಲ.
ನಾನು ಬೆಳೆದ ಮನೆಯಲ್ಲಿ ದಿನವಿಡೀ ಕೇಳುತ್ತಿತ್ತು
ಫ್ಯಾಕ್ಟರಿಯ ಸದ್ದುಗದ್ದಲ.
ಅರವತ್ತನಾಲ್ಕು ಅಮೆರಿಕನ್ ಸಿಂಗಲ್ಸ್ ಚೀಸ್ ಹಲ್ಲೆಗಳ ಹಾಗೆ
ಚೌಕಾಕಾರದಲ್ಲಿ ಕಟ್ಟಿದ ಮನೆ.
ಫ್ಯಾಕ್ಟರಿಗೆ ಹೋಗಿ ದಿನವಿಡೀ ದುಡಿಯುತ್ತಿದ್ದ
ಹಸಿದ ಗಂಡನಿಗಾಗಿ, ಹಸಿದ ಐದು ಮಕ್ಕಳಿಗಾಗಿ
ನನ್ನ ತಾಯಿ ತಯಾರಿಸುತ್ತಿದ್ದ ಊಟದಲ್ಲಿ
ಇರುತ್ತಿತ್ತು ಅಮೆರಿಕನ್ ಸಿಂಗಲ್ಸ್,
ಹಳದಿ ಮಸ್ಟರ್ಡ್ ಮತ್ತು ಒಂದು ದಿನ ಹಳತಾದ ವಂಡರ್ ಬ್ರೆಡ್.
ನಿಗೂಢ ತೂತುಗಳಿರುವ ಸ್ವಿಸ್ ಚೀಸ್ ಕೂಡಾ ಅಲ್ಲ.
ನಾವು ಸ್ಪಾರೋ ಅಥವಾ ಸ್ಟಾರ್‍ಲಿಂಗ್ ಹಕ್ಕಿಗಳಂತಿದ್ದೆವು
ನಮ್ಮ ಮೊಟ್ಟೆಗಳನ್ನು ಬ್ಲೂ ಜೇ ಹಕ್ಕಿ ಹೇಗೆ ಕದ್ದುಬಿಟ್ಟಿತು
(ನಮ್ಮ ಹೂಡಿಕೆಯ ಮೊಟ್ಟೆಗಳು)
ಎಂದು ಇನ್ನೂ ಕಲಿಯುತ್ತಿದ್ದೆವು.
ವ್ಯಾಕ್ಸ್ ಪೇಪರಿನಲ್ಲಿ ಸುತ್ತಿದ್ದ
ಅರವತ್ತನಾಲ್ಕು ಚೀಸ್ ಹಲ್ಲೆಗಳು.
ಉಗುರಿನಿಂದ ಬಿಡಿಸಬೇಕು ಒಂದೊಂದನ್ನೂ.
ನಾನು ಮನೆಗೆ ಬಂದಾಗ ಫ್ರಿಜ್‍ನಿಂದ ಹಾತೊರೆದು ತಿನ್ನುವುದು ಇವನ್ನೇ.
ಮನೆಯಲ್ಲಿ ಮಾಡಿದ ಬೇರಾವುದೇ ತಿಂಡಿಯನ್ನಲ್ಲ.
ಹಲ್ಲೆಯನ್ನು ಅರ್ಧದಲ್ಲಿ ಮಡಿಸಿ ಬಾಯೊಳಗೆ ಇಟ್ಟುಕೊಂಡು ಮೆಲ್ಲುತ್ತೇನೆ.
ನನ್ನ ತಾಯಿಗೆ ಇದು ಅರ್ಥವಾಗದು.
ಬಾಲ್ಯದಲ್ಲಿ ನಾನೆಂದೂ ಹೀಗೆ ಬರೀ ಚೀಸ್ ತಿಂದಿದ್ದು
ಅವಳಿಗೆ ನೆನಪಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ