ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ
ಮೂಲ - ಮಿರ್ಜಾ ಗಾಲಿಬ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ' - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ! ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ ತತ್ತರಿಸಿದೆ ಎದೆ ಗಂಟು ಬಿಡಿಸಲು ಹೋಗಿ ಎಲ್ಲಾ ಗೋಜಲುಗೋಜಲಾಗಿದೆ ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ ಮನಸ್ಸು ತನ್ನ ಆರಾಧಕನ ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ ಧೂಳಿ...