ಲಾಕ್ ಡೌನ್ ಇಲ್ಲದ ಹಕ್ಕಿಗಳು

Gray Small Bird on Green Leaves
ಹೊರಗಡೆ ಮರದಲಿ ಅಮ್ಮಾ ನೋಡು
ಹಕ್ಕಿಯೊಂದು ಕಟ್ಟಿದೆ ಹೊಸ ಗೂಡು
ಬಿಡದೆ ಹಾಡುವುದು ಯಾವುದೋ ಹಾಡು
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ಹೊರಗಡೆ ಮರದಲಿ ಅಮ್ಮಾ ನೋಡು
ಎಲೆಗಿಂತಲೂ ಹೆಚ್ಚಾಗಿದೆ ಹೂವು
ದಟ್ಟಹಳದಿ, ನೀಲಿ, ತಿಳಿಗೆಂಪು
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ನೋಡು ಹಕ್ಕಿಗಳು ಬಡಿಯುತ ರೆಕ್ಕೆ
ಪಟಪಟ ಹಾರುತ್ತವೆ ಮೇಲಕ್ಕೆ
ಲಾಕ್ ಡೌನ್ ಇಲ್ಲವೇ ಇಲ್ಲ ಇವಕ್ಕೆ!
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ಬಂದಿರುವಾಗ ಸಕ್ಕರೆ ನಿದ್ದೆ
ಕನಸೊಳು ಕಾರ್ಟೂನ್ ನೋಡುತ್ತಿದ್ದೆ
ಇವುಗಳ ಕಲಕಲ ಕೇಳುತ ಎದ್ದೆ
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ಯಾಕಮ್ಮಾ ಹಕ್ಕಿಗಳಿವು ಹೀಗೆ
ಕೂಡದೆ ಸುಮ್ಮನೆ ಒಂದೇ ಕಡೆಗೆ
ಹಾರುತ್ತಿರುವುವು ದಿನಾ ಬೆಳಗ್ಗೆ
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ನಿನ್ನ ಹಾಗೆ ಹಕ್ಕಿಗಳೂ ಪುಟ್ಟ
ಬರುವೆಯಲ್ಲ ತಿಂಡಿಯ ಹುಡುಕುತ್ತ
ಹಾಗೇ ಹುಡುಕುತ್ತವೆ ಹುಳು ಹುಪ್ಟ
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

ತಿಂಡಿ ಎಂದ ಕೂಡಲೇ ನೆನಪಾಯ್ತು
ಏನೋ ಘಮಘಮ ಬರ್ತಾ ಇತ್ತು
ಮೈಸೂರ್ ಪಾಕೇನಮ್ಮ ಇವತ್ತು?
ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ!

- ಸಿ.ಪಿ. ರವಿಕುಮಾರ್, ಏಪ್ರಿಲ್ ೨೫, ೨೦೨೦


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)